
ಹಿಂದಿನ ಕಾಲ ಕಳೆದೋಯ್ತು. ಅದರ ಬಗ್ಗೆ ಹೇಳುವುದು, ಬರೆಯುವುದು ವ್ಯರ್ಥ. ಅಂದಿಗೆ ಅದೇ ಸುಖ ಇಂದಿಗೆ ಇದೇ ಸುಖ. ಕಳೆದದ್ದು ಕಳೆದಾಯ್ತು ಉಳಿದುದರ ಬಗ್ಗೆ ಮಾತ್ರ ಚಿಂತಿಸೋಣ. ಇದು ಜೀವನ ಆಗಿರಬಹುದು ಅಥವಾ ಉಳಿದ ಆಯುಷ್ಯ ಆಗಿರಬಹುದು. ಆದರೂ ಕೆಲವರಾದರೂ ಈ ಬಗ್ಗೆ ಉತ್ಸಾಹ ತೋರಿದ ಕಾರಣ ಈ ಲೇಖನಕ್ಕೆ ಮುಂದಾದೆ. ಇಂದಿನ ಹದಿಹರೆಯದ ನವ ಯುವಕರು ಹಾದಿ ತಪ್ಪುತ್ತಿರುವ ಆಲೋಚನೆಗಳ ಬಗೆಗೆ ಈ ಒಂದು ಚಿಂತನೆ. ಹೆಚ್ಚುತ್ತಿರುವ ಆಡಂಬರ, ಶೋಕಿಯ ಜೀವನ ಶೈಲಿ ಇದೊಂದು ಸಾಮಾಜಿಕ ಪಿಡುಗಾಗಿ ಮಾರ್ಪಡುತ್ತಿದೆ. ಸಾಲ ಮಾಡಿ ದುಬಾರಿ ಬೆಲೆಯ ಮೊಬೈಲು, ಕುತ್ತಿಗೆಯ ದಪ್ಪ ಚೈನು (ಅಪ್ಪನಲ್ಲೂ ಇರದ) ಕೈಯ್ಯಲ್ಲಿ ಅಬ್ಬರದ ಕಡ, ಮೂರು ನಾಲ್ಕು ಲಕ್ಷದ ಬೈಕು, ಕಾರು ಸಾಲ ಮಾಡಿ ಇವೆಲ್ಲವೂ ಯಾರನ್ನು ಮೆಚ್ಚಿಸುವುದಕ್ಕಾಗಿ? ಸಾಲ ಮಾಡಿ ಹುಟ್ಟುಹಬ್ಬದ ದಿನ ಗೆಳೆಯರಿಗೆ ಭರ್ಜರಿ ಪಾರ್ಟಿ, ಅದ್ದೂರಿಯಾಗಿ ಬ್ಯಾಚುಲರ್ ಪಾರ್ಟಿ, ಸಂಗೀತ್, ಮೆಹಂದಿ, ಮದುವೆ, ರಿಸೆಪ್ಶನ್ ಅಯ್ಯೋ ನಾಲ್ಕು ನಾಲ್ಕು ದಿನದ ಸಂಭ್ರಮಾಚರಣೆ ಇದೆಲ್ಲಾ ಯಾವ ಪುರುಷಾರ್ಥಕ್ಕಾಗಿ? ಯಾರನ್ನು ಮೆಚ್ಚಿಸಲು? ಲಕ್ಷಗಟ್ಟಲೆ ಸಾಲ ಮಾಡಿ ಮದುವೆಯಾಗಿ ಆ ಸಾಲವನ್ನು ಮರು ಪಾವತಿಸಲು ಅದೆಷ್ಟೋ ವರ್ಷಗಳು ಬೇಕು ಅಲ್ವೇ? ನಾಳೆ ಇದೇ ಸಾಲದ ಕಂತು ಕಟ್ಟಬೇಕಾಗಿರುವವರು ನಾವೇ ಎಂಬ ಪ್ರಜ್ಞೆ ನಮಗೆ ಬೇಡವೇ? ಒಂದು ವೇಳೆ ಕಂತು ಕಟ್ಟಲು ಕಷ್ಟವಾದರೆ ಬ್ಯಾಂಕಿನವರು ಮುಟ್ಟುಗೋಲು ಹಾಕುವುದು ನೀವಿರುವ ಮನೆಯೋ ಅಥವಾ ನಿಮ್ಮ ಅಪ್ಪ ಅಮ್ಮ ಕಷ್ಟಪಟ್ಟು ಗಳಿಸಿದ ಆಸ್ತಿಯನ್ನೋ? ಯಾವ ಸಮಾಜದಲ್ಲಿ ತಾನು ಯಾರಿಗೂ ಕಮ್ಮಿ ಇಲ್ಲ ಎಂದು ಇಲ್ಲದ ಬೂಟಾಟಿಕೆ ತೋರಿಸಲು ಆಡಂಬರದಲ್ಲಿ ಮಾಡಿದಂತಹ ಅತೀ ವೈಭವದ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ನಿಮ್ಮವರು (ನೀವು ಭಾವಿಸಿದ) ನೀವು ಆರ್ಥಿಕ ಸಂಕಷ್ಟದಲ್ಲಿ ಸಿಲುಕಿ ಕಂಗಾಲಾದಾಗ ಯಾರೂ ಬರುವುದಿಲ್ಲ ನೆನಪಿರಲಿ. ಎಷ್ಟು ಸಾಧ್ಯವೋ ಅಷ್ಟು ತಿಂದು ಹೋದ ಅದೇ ಮಂದಿ ಮನೆಯಲ್ಲೋ ಫೋನಲ್ಲೋ ಮತ್ತೊಬ್ಬರಲ್ಲೋ ಹೇಳಿಯಾರು. ಅಷ್ಟು ಆಡಂಬರದ ಮದುವೆ ಕಾರ್ಯಕ್ರಮ ಬೇಕಿತ್ತಾ? ಈಗ ಹುಡುಗ ಫುಲ್ ಲಾಸ್ ಅಂತೆ! ಹಾಗಾಗಿ ಅವರ ಉಪಕಾರ ಅಷ್ಟೇ.

ನಮ್ಮ ಯುವ ಜನತೆ ತಮ್ಮ ಆಡಂಬರದ ಜೀವನದ ಪೂರೈಕೆಗಾಗಿ ಅದೆಷ್ಟು ಅಡ್ಡದಾರಿಗಳನ್ನು ಹಿಡಿಯಬೇಕಾಗುತ್ತದೆ. ಈ ಕುರಿತು ದಯವಿಟ್ಟು ಆಲೋಚಿಸಬೇಡವೇ? ಅದೆಷ್ಟೋ ಊರಿನಲ್ಲಿ ಹಿರಿಯರು ಊರಿನ, ಸಮಾಜದ, ಮುಂದಿನ ನಮ್ಮ ಪೀಳಿಗೆಯ ಉತ್ತಮ ಭವಿಷ್ಯಕ್ಕಾಗಿ ಶ್ರೇಷ್ಠ ಧ್ಯೇಯೋದ್ದೇಶಗಳನ್ನಿಟ್ಟು ಉನ್ನತ ಆದರ್ಶವನ್ನಿಟ್ಟು ಕಟ್ಟಿದ ಅದೆಷ್ಟೋ ಸಂಘಟನೆಗಳನ್ನು, ಸಂಘ ಸಂಸ್ಥೆಗಳು ಇಂತಹ ಜನರ ಆಡಂಬರದಿಂದ ಮತ್ತು ರಾಜಕೀಯ ಸ್ವಾರ್ಥದಿಂದ ವಿಂಗಡಣೆಯಾದ ಅಥವಾ ನಿಷ್ಕ್ರಿಯವಾದ ಸಾಕಷ್ಟು ಉದಾಹರಣೆಗಳಿವೆ. ಇದು ಖಂಡನೀಯ ಮತ್ತು ಅಸಹ್ಯ. ಊರಿನ ಒಳಿತಿಗಾಗಿ ಸಾವಿರಾರು ಕಾರ್ಯಕರ್ತರು ತಮ್ಮ ರಕ್ತವನ್ನು ಬೆವರನ್ನಾಗಿಸಿ ಕಟ್ಟಿರುವಂತಹ ಸಂಘಟನೆಗಳನ್ನು ಜಾತಿ, ಪಕ್ಷ, ಪಂಗಡ ಎಂದು ವಿಭಾಗಿಸಿ ಯಾವುದೇ ವಿಧದಲ್ಲೇ ಆದರೂ ಹಣ ಬರುತ್ತದೆ ಎಂದಾದರೆ ಸಂಘ, ಸಂಬಂಧ, ಸದ್ವಿಚಾರ, ಹಿರಿತನ ಎಲ್ಲವನ್ನೂ ಗಾಳಿಗೆ ತೂರಿ ತಮ್ಮ ಬೇಳೆ ಬೇಯಿಸುವ ಊಸರವಳ್ಳಿ ಜನಗಳು ಎಲ್ಲಾ ಊರಿನಲ್ಲೂ ತುಂಬಿದ್ದಾರೆ. ಇಂತವರನ್ನು ಸಾರ್ವತ್ರಿಕವಾಗಿ ವಿರೋಧಿಸಬೇಕಾಗಿದೆ. ಯುವಕರು ಯಾವುದೇ ಸಂಘಟನೆಗೆ ಸೇರುವಾಗ ಅವರಲ್ಲಿ ಯಾವುದೇ ರೀತಿಯ ಪ್ರತಿಫಲದ ಆಮಿಷ, ಅಪೇಕ್ಷೆಗಳಿರಬಾರದು. ತನ್ನಿಂದ ಸಾಧ್ಯವಾದಷ್ಟು ತನು ಮನ ಧನ ಮತ್ತು ತಮ್ಮ ಸಮಯವನ್ನು ಆ ಸಂಘಟನೆಗೆ ಕೊಡಬೇಕೇ ಹೊರತು, ಆ ಸಂಘಟನೆಯಿಂದ ನನಗೇನು ಹೆಸರು, ದುಡ್ಡು, ಲಾಭ ಸಿಗುತ್ತದೆ ಎಂಬ ಸ್ವಾರ್ಥದ ನಿರೀಕ್ಷೆಯಲ್ಲಿ ಇರಬಾರದು. ಈ ಪವಿತ್ರ ಭರತ ಭೂಮಿಯಲ್ಲಿ ಹುಟ್ಟಿರುವ ನಾನು ನನ್ನ ಕೈಯಿಂದ ಆದಷ್ಟು ಈ ದೇಶದ, ಧರ್ಮದ ಸೇವೆ ಮಾಡುತ್ತೇನೆ ಎಂಬ ಮಾನವೀಯ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ಅದಲ್ಲದೇ ಬಹಳಷ್ಟು ಮಂದಿಗೆ ರಾಜಕೀಯ ಕ್ಷೇತ್ರವೆಂಬುದು ವ್ಯವಹಾರ ಮಾಡಬಹುದಾದ ಒಂದು ಸುಲಭದ ದಾರಿ ಎಂಬ ತಪ್ಪು ಕಲ್ಪನೆ ಇದೆ. ಹಲವರು ಅದನ್ನೊಂದು ಉದ್ಯೋಗವನ್ನಾಗಿಯೇ ತೆಗೆದುಕೊಂಡಂತಿದೆ. ಅದು ಸರಿಯಲ್ಲ. ರಾಜಕೀಯ ಕ್ಷೇತ್ರವು ಜನಗಳ ಸೇವೆ ಮಾಡಲು ಇರುವ ಒಂದು ಸುಂದರ ಅವಕಾಶವೇ ಹೊರತು ಅದೇ ವ್ಯವಹಾರವಾಗಬಾರದು. ಜನಗಳಿಂದ ಮತ ಪಡೆದು ಗ್ರಾಮ, ತಾಲೂಕು, ಮಂಡಲ, ರಾಜ್ಯ ಮತ್ತೆ ರಾಷ್ಟ್ರದ ರಾಜಕಾರಣ ಮಾಡಬಹುದು. ಆದರೆ ನೆನಪಿರಲಿ ಆ ವ್ಯಕ್ತಿ ಪ್ರಜೆಗಳ ಪ್ರತಿನಿಧಿಯೇ ಹೊರತು ಆತ ರಾಜ ನಾವು ಸೇವಕರು ಅಲ್ಲ. ಬದಲಿಗೆ ಆತ ಸರಕಾರದಿಂದ ಗೌರವ ಧನ ಪಡೆದು ನಮ್ಮ ಸೇವೆ ಅರ್ಥಾತ್ ಸಮಾಜದ ಸೇವೆ ಮಾಡುವ ಸೇವಕ. ಆದರೆ ಈ ಕರ್ತವ್ಯ ಪ್ರಜ್ಞೆ ಎಷ್ಟು ಮಂದಿ ರಾಜಕಾರಣಿಗಳಿಗೆ ಇದೆ ಎಂಬುದು ಪ್ರಶ್ನಾರ್ಥಕವೇ. ಎಲ್ಲೇ ಆಗಲಿ ಸ್ವಾರ್ಥಿಗಳು ಹೆಚ್ಚಾದಷ್ಟು ಸಂಘಟನೆಗಳು ದುರ್ಬಲವಾಗುತ್ತದೆ. ಒಗ್ಗಟ್ಟು ಒಡೆದು ಹೋಗುತ್ತದೆ. ಯಾವತ್ತೂ ಅಪೇಕ್ಷೆ, ನಿರೀಕ್ಷೆ, ಅತೀ ಆಸೆ ನೋವುಂಟು ಮಾಡುತ್ತದೆ ಎಂಬ ಮಾತಿದೆ ಮತ್ತು ಅದು ಅತೃಪ್ತಿ ಅಸಮಧಾನಕ್ಕೆ ದಾರಿ ಕೂಡಾ. ಆದರೆ ಇದನ್ನು ಕೆಲವರು ತಿಳಿಯುವುದೇ ಇಲ್ಲ. ಒಂದಂತೂ ಸತ್ಯ ‘ಮಾಡಿದ್ದುಣ್ಣೋ ಮಹಾರಾಯ’ ತನ್ನ, ತನ್ನವರ ಶೋಕಿ ಜೀವನಕ್ಕಾಗಿ ಮಾಡಬಾರದ್ದನ್ನು ಮಾಡಿದರೆ ಇಂದಲ್ಲ ನಾಳೆ ಆ ಪಾಪ ಕರ್ಮದ ಫಲವನ್ನೂ ನಾವೇ ಅನುಭವಿಸಬೇಕು. ಇದು ಶತಸಿದ್ಧ. ಹಾಗಾಗಿ ಯಾವತ್ತೂ ಸ್ವಾರ್ಥ ಸಾಧನೆ, ಸ್ವಾ ನಿರೀಕ್ಷೆ ಮಾಡಬೇಡಿ. ಸರಳವಾಗಿ ಬದುಕಿ, ವಿನಮ್ರರಾಗಿರಿ.
ಈ ವಿಚಾರಗಳು ಮನಸ್ಸಿನಲ್ಲಿ ಇರಲಿ : ದೇಶದ ಗಡಿಯಲ್ಲಿ ದಿನದ 24 ಗಂಟೆಗಳನ್ನು ದೇಶದ ಹಿತಕ್ಕಾಗಿ ಮೀಸಲಿಟ್ಟಿರುವ ಸೈನಿಕರು ನಮ್ಮ ಆದರ್ಶವಾಗಿರಲಿ. ನಾವು ನಮ್ಮ ದಿನದ 24 ಗಂಟೆಗಳಲ್ಲಿ ಕನಿಷ್ಠ ಒಂದು ಗಂಟೆಯನ್ನಾದರೂ ದೇಶ ಮತ್ತು ಧರ್ಮದ ಸೇವೆಗಾಗಿ ಮೀಸಲಿಡಲು ನಿರ್ಧರಿಸೋಣ. ಗಂಟೆಗಟ್ಟಲೆ ಯಾವುದೇ ಪ್ರಯೋಜನವಿಲ್ಲದ ಕೇವಲ ಮನೋರಂಜನೆಗಾಗಿ ಮೊಬೈಲ್ ನಲ್ಲಿ ಬರುವ ರೀಲ್ಸ್ ಗಳನ್ನೇ ನೋಡುವುದನ್ನು ಬಿಟ್ಟು ವಿಜ್ಞಾನ, ಮಹಾಪುರುಷರ, ನಮ್ಮ ಧರ್ಮ ಗ್ರಂಥಗಳ ಬಗ್ಗೆ ಕಿಂಚಿತ್ತಾದರೂ ಜ್ಞಾನವನ್ನು ಬೆಳೆಸಿಕೊಳ್ಳೋಣ. ಯಾವ ಸ್ಕೀಮ್ ನ ಹಣವನ್ನು ಎಲ್ಲಿಂದ ಲಪಾಟಾಯಿಸುವುದು ಮತ್ತು ಹೇಗೆ ಎಂಬ ಧೂರ್ತ ಆಲೋಚನೆಯನ್ನು ಬಿಟ್ಟು ಎಲ್ಲವನ್ನೂ ಸರಕಾರದ ಬಿಟ್ಟಿ ಗ್ಯಾರಂಟಿಗಳಿಂದ ನಿರೀಕ್ಷಿಸುವ ಮನಸ್ಥಿತಿಯಿಂದ ಹೊರಬಂದು ದುಡಿದು ತಿನ್ನುತ್ತಾ, ನಾವು ಹುಟ್ಟುವಾಗಲೇ ಭಗವಂತ ಬರೆದ ಪ್ರಾರಬ್ಧ ಕರ್ಮವನ್ನು ಮೀರಲು ಅಸಾಧ್ಯ ಎಂಬ ಸತ್ಯವನ್ನು ಅರಿತು ಮತ್ತೊಬ್ಬರಿಗೆ ವಂಚಿಸದೆ ಧರ್ಮಾತ್ಮರಾಗಿ ಬದುಕಲು ಕಲಿಯೋಣ. ತಂದೆ ತಾಯಿ ಸಂಪಾದಿಸಿದ ಕೋಟಿಗಟ್ಟಲೆ ಹಣ ಸಂಪತ್ತು ಇದ್ದವರು ಮೋಜು ಮಸ್ತಿ ಮಾಡಲಿ ಆದರೆ, ‘ಕೋಣ ಹಾಯ್ದಂತೆ ಆಡು ಹಾಯ್ದರೆ ಕೋಡು ಮುರಿದೀತು’ ಎಂಬುದನ್ನು ಮರೆಯದೆ ಸಾಲ ಮಾಡಿ ಮಜಾ ಉಡಾಯಿಸದೆ ಇದ್ದದ್ದನ್ನು ನೆಮ್ಮದಿಯಿಂದ ಅನುಭವಿಸೋಣ. ಯಾವತ್ತೂ ಭ್ರಮನಿರಸನಗೊಳ್ಳದೆ, ಹೆಚ್ಚಿನದನ್ನು ಪಡೆಯುವ ನೀತಿಯುಕ್ತ ಪ್ರಯತ್ನ ಮಾತ್ರ ನಿರಂತರವಾಗಿರಲಿ. ನನ್ನ ಆತ್ಮೀಯ ಯುವ ಸಂಸ್ಕಾರಿ ಸಜ್ಜನರೊಬ್ಬರ ಆಶಯಕ್ಕಾಗಿ ಈ ಬರಹ.
ಬರಹ : ಶರತ್ ಶೆಟ್ಟಿ ಪಡುಪಳ್ಳಿ























































































































