
ಒಮ್ಮೆ ಹನುಮಂತ ನದಿ ತೀರದ ಬಂಡೆ ಮೇಲೆ ಕುಳಿತು ದೊಡ್ಡ ಮಾವಿನ ಹಣ್ಣನ್ನು ಸಂತೋಷದಿಂದ ತಿನ್ನುತ್ತಿದ್ದನು. ಆಗ ಹನುಮಂತನ ಬೆನ್ನ ಹಿಂದೆ ಶನಿದೇವ ನಿಂತಿದ್ದು, ಏ ಹನುಮಾ ನಿನ್ನ ಈ ಸಂತೋಷದ ದಿನಗಳೆಲ್ಲಾ ಇಂದಿಗೆ ಮುಗಿಯಿತು. ಏಕೆಂದರೆ ಇನ್ನು ಸ್ವಲ್ಪ ಸಮಯದಲ್ಲೇ ನಾನು ನಿನ್ನೊಳಗೆ ಪ್ರವೇಶಿಸುವೆ. ಆಗ ಇದೇ ನೋಡು ನಿನಗೆ ಎಂದು ಅಹಂಕಾರದಿಂದ ಹೇಳಿದ. ಹನುಮಂತ ಸ್ವಲ್ಪವೂ ಅಳುಕದೆ, ಏ ಶನಿದೇವ ಕೇಳು ಇದು ನಿನ್ನ ಭ್ರಮೆ ನನ್ನ ದೇಹದಲ್ಲಿ ಪ್ರವೇಶಿಸಲು ನಿನಗೆ ಎಲ್ಲಿಯೂ ಜಾಗವಿಲ್ಲ ಏಕೆಂದರೆ ನನ್ನ ರೋಮ ರೋಮದಲ್ಲೂ ನನ್ನ ಪ್ರಭು ಶ್ರೀರಾಮ ಇದ್ದಾರೆ. ನಿನ್ನಿಂದ ಏನೂ ಮಾಡಲು ಸಾಧ್ಯವಿಲ್ಲ ಎಂದನು. ಶನಿದೇವ ತಾನೇನು ಕಡಿಮೆಯೇ ಎಂಬಂತೆ ಮತ್ತಷ್ಟು ಜಂಬದಿಂದ, ಹನುಮ ನಿನಗಿನ್ನೂ ಗೊತ್ತಿಲ್ಲ ನಾನು ಸಾಡೇಸಾತಿ (ಏಳೂವರೆ ವರ್ಷ) ಯಾಗಿ ಹಿಡಿದರೆ ಎರಡೂವರೆ ವರ್ಷ ಪಾದಗಳಲ್ಲಿ ನೆಲೆಸಿ ಅವನನ್ನು ಭ್ರಷ್ಟನನ್ನಾಗಿ ಮಾಡುತ್ತೇನೆ. ಇನ್ನು ಎರಡುವರೆ ವರ್ಷ ತಲೆಯ ಮೇಲೆ ಕೂತು ಅವನ ಬುದ್ಧಿಯನ್ನು ಕೆಡಿಸಿ ಮಂಕು ಬಡಿಸುತ್ತೇನೆ. ಉಳಿದ ಎರಡೂವರೆ ವರ್ಷ ಅವನ ವ್ಯಕ್ತಿತ್ವಕ್ಕೆ ಮಸಿ ಬಳಿದು ಅವನ ಮಾನ ಮರ್ಯಾದೆಯನ್ನು ತೆಗೆದು ಬಿಡುತ್ತೇನೆ. ನನ್ನ ಸಹವಾಸ ಎಂದರೆ ಹುಡುಗಾಟವಲ್ಲ, ಯೋಚನೆ ಮಾಡಿ ನೋಡು ಹನುಮ ಎನ್ನುತ್ತಲೇ, ಶನಿದೇವ ಕ್ಷಣದಲ್ಲಿ ಹನುಮಂತನ ತಲೆಯ ಮೇಲೆ ಹತ್ತಿ ಕುಳಿತನು.

ತನ್ನ ಪಾಡಿಗೆ ತಾನಿದ್ದ ಹನುಮಂತನ ತಲೆಯ ಮೇಲೆ ಶನಿದೇವ ಕುಳಿತಾಗ,
ತಲೆಯಲ್ಲಿ ಏನೋ ಸಣ್ಣ ಹುಳ ಬಿದ್ದಂತಾಗಿ ಕಚಗುಳಿಯಾಯಿತು. ತಕ್ಷಣ ಹನುಮ ತನ್ನ ಬಾಲದಿಂದ ದೊಡ್ಡ ಬಂಡೆಯನ್ನು ತೆಗೆದು ತಲೆಯ ಮೇಲಿಟ್ಟುಕೊಂಡ. ಆದರೂ ಅವನಿಗೆ ತಲೆಯ ಮೇಲಿನ ಕಿರಿ ಕಿರಿ ಕಡಿಮೆಯಾಗಲಿಲ್ಲ. ಮತ್ತೊಂದು ಬಂಡೆ ಇಟ್ಟನು. ಅದು ಸಾಲದೆ ಮತ್ತೆರಡು ದೊಡ್ಡ ದೊಡ್ಡ ಬಂಡೆಗಳನ್ನು ತನ್ನ ತಲೆಯ ಮೇಲಿಟ್ಟುಕೊಂಡ. ಅದಾಗಲೇ ಶನಿ ದೇವನ ಮೈಕೈ ನಜ್ಜುಗುಜ್ಜಾಗಿತ್ತು. ಏನು ಮಾಡುತ್ತಿರುವೆ ಹನುಮ ಎಂದು ಕೂಗಿದ. ನನ್ನ ತಲೆಯಲ್ಲಿ ಕರ ಪರ ಕೆರೆದುಕೊಳ್ಳುವಂತೆ ತುರಿಸುತ್ತಿದೆ. ಅದಕ್ಕೆ ಬಂಡೆ ಇಟ್ಟುಕೊಂಡೆ ಎಂದನು. ಹನುಮಂತನಿಗೆ ಶನಿದೇವನ ಒದ್ದಾಟ ಅರ್ಥವಾಯಿತು. ಮತ್ತಷ್ಟು ಬಂಡೆಗಳನ್ನು ತೆಗೆದು ತಲೆ ಮೇಲಿಟ್ಟುಕೊಂಡ. ಶನಿದೇವ ನೋವನ್ನು ತಾಳಲಾರದೆ, ಹನುಮ ನನ್ನನ್ನು ಕ್ಷಮಿಸು ದಯವಿಟ್ಟು ಬಂಡೆ ಕಲ್ಲನ್ನು ಮೊದಲು ತೆಗೆ ನಾನು ಭಾರದ ನೋವನ್ನು ತಾಳಲಾರೆ ಎಂದು ಕೂಗಿದನು. ಹನುಮ ಹೇಳಿದ ನನ್ನೊಂದಿಗೆ ಹುಡುಗಾಟ ಆಡಬೇಡ. ಬಂಡೆಗಲ್ಲನ್ನು ತೆಗೆಯುತ್ತೇನೆ. ಅದಕ್ಕೂ ಮೊದಲು ನನಗೊಂದು ಮಾತು ಕೊಡು ಎಂದನು. ಮೊದಲೇ ನಿತ್ರಾಣವಾಗಿದ್ದ ಶನಿದೇವ ನೀನು ಏನು ಕೇಳಿದರೂ ಮಾತು ಕೊಡುತ್ತೇನೆ ಮೊದಲು ನಿನ್ನ ತಲೆಯ ಮೇಲಿಟ್ಟ ಬಾರ ಇಳಿಸಿ ಪಾರು ಮಾಡು ಎಂದನು. ಹಾಗಾದರೆ ಕೇಳು, ಇನ್ನು ಮುಂದೆ ನನ್ನ ತಂಟೆಗೆ ಬರಬೇಡ ಹಾಗೂ ನನ್ನ ಭಕ್ತರ ಮೇಲೆ ನಿನ್ನ ದೃಷ್ಟಿ ಎಂದಿಗೂ ಬೀರಬಾರದು ನೆನಪಿರಲಿ ಎಂದನು. ಮೊದಲೇ ಸೋತು ಸುಣ್ಣಾಗಿದ್ದ ಶನಿದೇವ
ಆಯ್ತು ಹನುಮಾ ಇನ್ನೆಂದೂ ನಿನ್ನ ತಂಟೆಗೆ ನಿನ್ನ ಭಕ್ತರ ತಂಟೆಗೆ ಬರುವುದಿಲ್ಲ. ಹಾಗೆ ನೀನು ಹೇಳಿದಂತೆ ನಿನ್ನ ಭಕ್ತರ ಮೇಲೆ ನನ್ನ ದೃಷ್ಟಿಯನ್ನು ಅಪ್ಪಿ ತಪ್ಪಿಯೂ ಬೀರುವುದಿಲ್ಲ ಎಂದನು. ಹನುಮ ಒಂದೊಂದಾಗಿ ಬಂಡೆಗಳನ್ನು ತೆಗೆದು ಅವನನ್ನು ಕಷ್ಟದಿಂದ ಬಿಡುಗಡೆ ಮಾಡಿದ. ಶನಿ ಎದ್ದೆನೋ ಬಿದ್ದೆನೋ ಎಂದು ಹನುಮಂತನಿಗೆ ನಮಸ್ಕರಿಸಿ ಮತ್ತೆ ತಿರುಗಿಯೂ ನೋಡದೆ ಓಡಿಹೋದನು.

ಭಕ್ತಿಯ ಬಲಕ್ಕೆ ದೈವಶಕ್ತಿಯೇ ಬೆಂಬಲವಾಗುತ್ತದೆ. ಶ್ರೀ ರಾಮನ ಅನನ್ಯ ಭಕ್ತನಾದ ಹನುಮಂತನಂತೆ ಯಾರು ಭಗವಂತನನ್ನು ಹೃದಯದಲ್ಲಿ ಧರಿಸಿ ಧರ್ಮಮಾರ್ಗದಲ್ಲಿ ನಡೆಯುತ್ತಾರೋ, ಅವರಿಗೆ ದುರಿತಗಳು ತಟ್ಟಲಾರವು. ಶ್ರದ್ಧೆ, ವಿನಯ ಮತ್ತು ನಿಷ್ಠೆಯು ಇದ್ದರೆ ಗ್ರಹದೋಷಗಳೂ ಶಮನವಾಗುತ್ತದೆ. ಹನುಮಂತನ ಸ್ಮರಣೆ ಮತ್ತು ಭಕ್ತಿ ಭಕ್ತರಿಗೆ ಧೈರ್ಯ, ರಕ್ಷಣೆ ಮತ್ತು ಶುಭಫಲಗಳನ್ನು ನೀಡುತ್ತದೆ.
ಗೋಷ್ಪದೀಕೃತವಾರೀಶಂ
ಮಶಕೀಕೃತರಾಕ್ಷಸಂ |
ರಾಮಾಯಣ ಮಹಾಮಾಲಾರತ್ನಂ
ವಂದೇ ನೀಲಾತ್ಮಜಂ ||






















































































































