
ನಮ್ಮಲ್ಲಿ ಕೋಲ, ಕಂಬಳದ ಆಚರಣೆ, ಮಾರಿ, ಗೆಂಡ ಸೇವೆ ಇವುಗಳೆಲ್ಲವೂ ಇಡೀ ಊರಿನವರು ಒಂದಾಗಿ ಆಚರಿಸುವ ಸಂಪ್ರದಾಯ. ಸಿರಿಬೈಲು ಕೋಲ ಎಂದರೆ ಕೇವಲ ಕಾರ್ಯಕ್ರಮವೆಂದರೂ ತಪ್ಪಲ್ಲ, ಅದು ಊರಿನ ನಂಬಿಕೆಯನ್ನು ಉಳಿಸುವ ಸಂಪ್ರದಾಯ. ಕೆಲವು ವರ್ಷಗಳ ಹಿಂದೆ, ಸುಮಾರು 90ರ ದಶಕದಲ್ಲಿ ಸಿರಿಬೈಲು ಕೋಲಕ್ಕೆ ಹೋಗಬೇಕೆಂದರೆ ಸರಿಯಾದ ಬಸ್ ವ್ಯವಸ್ಥೆಯೇ ಸರಿ ಇರಲಿಲ್ಲ. ನಡೆದುಕೊಂಡೇ ಹೋಗಬೇಕು. ಆಗ ನಮ್ಮೂರಲ್ಲಿ ಕರೆಂಟ್ ಬಂದಿತ್ತಾದರು ಇನ್ನೂ ಕೆಲವು ಕಡೆ ಬಂದಿರಲಿಲ್ಲ. ರಸ್ತೆ ಬದಿಯ ದೀಪಗಳಂತೂ ಕನಸೇ. ಅಭಿವೃದ್ಧಿ ಎಂಬುದು ಅಷ್ಟೊಂದು ಕಾಣಿಸಿಕೊಳ್ಳದ ದಿನಗಳು. ಈಗ ಕಾಲ ಬದಲಾಗಿದೆ. ಆದರೆ ಅಂದಿನ ಕಾಲದ ಸುಖ ಇಂದಿನ ಜೆನ್ ಜಿ ಜನರೆಶನ್ ಗೆ ಅಷ್ಟು ಸುಲಭವಾಗಿ ಅರ್ಥವಾಗುವುದಿಲ್ಲ. ಹೌದೆ ? ಓಹೋ ಎಂದು ಪ್ರಶ್ನಿಸುವ ಕಾಲ. ಆ ದಿನಗಳಲ್ಲಿ ಕೋಲಕ್ಕೆ ಹೋಗುವಾಗ ಗ್ಯಾಸು ಲೈಟ್ ಹಿಡಿದು ಸಾಗುತ್ತಿದ್ದರೆ, ಅವನು ಶ್ರೀಮಂತನೆಂದು ಪರಿಗಣಿಸುವ ಕಾಲ. ಅದರಲ್ಲೂ ಲ್ಯಾಟನ್ ಇದ್ದರೆ, ಮಿಣಿಮಿಣಿ ಮಿಣುಕುತ್ತ ಮಿನುಗುವ ಬೆಳಕು, ಸೀಮೆ ಎಣ್ಣೆ ಲ್ಯಾಟನ್ ಗೆ ಸುರಿದು ಬತ್ತಿ ಹಚ್ಚುವ ದಿನಗಳ ನೆನಪು ಇನ್ನೂ ಹಸಿರು ಹಸಿರಾಗಿಯೇ ಇದೆ.

ಶೇಟ್ ಅಂಗಡಿಗಳು ಬತ್ತಾಸು, ಚರುಮುರಿ ಗ್ಯಾಸು ಲೈಟ್ ಇದ್ದರೆ ಅದಕ್ಕೆ ವಿಶೇಷ ಮಹತ್ವವಿತ್ತು. ಮೆಂಟಲ್ ಹಾಕಿ ಗ್ಯಾಸು ಲೈಟ್ ಉರಿಸಿ ಆ ಬೆಳಕಲ್ಲಿ ತಿಂಡಿ ತೆಗೆದುಕೊಳ್ಳುವ ಖುಷಿ ಮತ್ತೊಮ್ಮೆ ಸಿಗಲ್ಲ. ಕೋಲಕ್ಕೆ ಹೋಗುವ ದಿನಗಳು ನಮಗೆ ತುಂಬಾ ಕಷ್ಟದ ದಿನಗಳು. ರಸ್ತೆ ಬದಿಯಲ್ಲಿ ದಾರಿದೀಪಗಳಿಲ್ಲ. ಮನೆಯಿಂದ ಹೊರಡುವಾಗ ಅಜೆಕಾರಿನ ಸೈಕಲ್ ಅಪ್ಪು ಅಣ್ಣನ ಅಂಗಡಿಯಿಂದ ಹಳೆಯ ಸೈಕಲ್ ಟೈಯರ್ಗಳನ್ನು ತಂದುಕೊಳ್ಳುತ್ತಿದ್ದೆವು. ಕೋಲ ಆಟಗಳಿದ್ದರೆ ಆ ಟೈಯರ್ಗಳೇ ದಾರಿ ಬೆಳಕು ನೀಡುತ್ತಿದ್ದವು. ಅದಕ್ಕೆ ಬೆಂಕಿ ಹಚ್ಚಿಕೊಂಡು ಸಾಗುತ್ತಿದ್ದವರು ಅನೇಕರು. ಟೈಯರ್ ಸಿಗದಿದ್ದರೆ ತೆಂಗಿನ ಗರಿಯೇ ಗತಿ. ಅದಕ್ಕೂ ಬೆಂಕಿ ಹಚ್ಚಿಕೊಂಡು ಒಳ ರಸ್ತೆಗಳ ಮೂಲಕ ಸಿರಿಬೈಲು ಕೋಲ ನೋಡಿ, ಮುಂಜಾನೆ ಮತ್ತೆ ನಡೆದುಕೊಂಡು ಮನೆಗೆ ಬರುವುದು ಸಾಮಾನ್ಯವಾಗಿತ್ತು. ಕೋಲ ಎಂದರೆ ಅಷ್ಟು ಖುಷಿ ಅದರಲ್ಲೂ ಕೆಲವೊಮ್ಮೆ ಟೈಯರ್ ಬೆಂಕಿ ಮುಳಿ ಹುಲ್ಲಿಗೆ ತಾಗಿ ಇಡಿ ತೋಟ ಹಾಡಿ ಬೆಂಗಿಕೆ ಆಹುತಿಯಾಗಿದ್ದು ಕೂಡಾ ಇತ್ತು. ಅಂದಿನ ಕಾಲದಲ್ಲಿ ಅಬ್ಬರದ ಕೋಲಗಳಿರಲಿಲ್ಲ. ಗಗನದಲ್ಲಿ ಸಿಡಿಯುವ ಪಟಾಕಿಗಳು, ಗರ್ನಲ್ಗಳ ಸದ್ದು ಇರಲಿಲ್ಲ. 25 ಪೈಸೆಗೆ ಬೆಲ್ಲ ಕ್ಯಾಂಡಿ, ಒಂದು ರೂಪಾಯಿಗೆ ಸಿಹಿ, ಎರಡು ರೂಪಾಯಿಗೆ ಪೆಪ್ಸಿ ಕ್ಯಾಂಡಿ ಆ ದಿನಗಳ ಖುಷಿಯೇ ಬೇರೆ. ಅಂದಿನ ಐಸ್ಕ್ರೀಂ ರುಚಿ ಇಂದಿನ ಕಾಲಕ್ಕಿಂತ ವಿಭಿನ್ನವಾಗಿತ್ತು. ಆದರೆ ಮಾರಾಟ ಮಾಡುವ ಮುಖಗಳು ಮಾತ್ರ ಇಂದಿನ ಕಾಲದವರೆಗೂ ಬದಲಾಗಿವೆ.
ಕೋಲದ ಎರಡನೆ ದಿನ ಮಾರಿ ಓಡಿಸುವ ಕಾರ್ಯಕ್ರಮಗಳು, ಅದಕ್ಕಾಗಿ ಕಡಿಯುವ ಕೋಳಿಗಳು ಊರಿನಲ್ಲಿ ಯಾವ ಅಪಾಯವೂ ಸಂಭವಿಸಬಾರದೆಂದು ಮಾರಿ ಓಡಿಸುವ ನಂಬಿಕೆ ಇತ್ತು. ಕೊನೆಯ ದಿನದ ಕೋಳಿ ಅಂಕ ಅಂದಿನ ಕಾಲದಲ್ಲಿ ವಿಜೃಂಭಣೆಯಿಂದ ನಡೆಯುತ್ತಿತ್ತು. ಆ ದಿನ ಕಡ್ತಲದ ಇಡೀ ಗ್ರಾಮದಲ್ಲಿ ಪ್ರತೀ ಮನೆಯಲ್ಲೂ ಕೋಳಿ ಊಟದ ವಾಡಿಕೆ. ಅಂದಿನ ಕಾಲ ನಿಜಕ್ಕೂ ಖುಷಿಯ ದಿನಗಳು. ಕೋಲದ ದಿನ ದೊಂದಿ ಬೆಳಕಿನಲ್ಲಿ ಕೋಲ ನಡೆದದ್ದು ಇನ್ನೂ ನೆನಪಿದೆ. ಅಬ್ಬರವಿಲ್ಲದಿದ್ದರೂ ಭಯ ಭಕ್ತಿಗೆ ಹೆಚ್ಚಿನ ಪ್ರಾಶಸ್ತ್ಯ ಇತ್ತು. ವಾರ್ಷಿಕ ಕೋಲಕ್ಕೆ ಒಂದು ತಿಂಗಳ ಮೊದಲೇ ಊರಿನವರು ತೆಂಗಿನ ಗರಿಗಳನ್ನು ತಂದು, ಅವುಗಳನ್ನು ಪೋಣಿಸಿ ಅಲಂಕಾರಿಕ ವಸ್ತುಗಳನ್ನಾಗಿ ಮಾಡುತ್ತಿದ್ದರು. ಶಾಮಿಯಾನಗಳ ಬದಲು ಮಡಲುಗಳ ಬಳಕೆ ಅದು ಅಂದಿನ ಹಳ್ಳಿಗರ ಖುಷಿ. ಇಂದು ಎಲ್ಲವೂ ಬದಲಾಗಿದೆ. ಸಿರಿಬೈಲಿನ ವಾರ್ಷಿಕ ಕೋಲ ಹಾಗೆಯೇ ಇದೆ. ಕೋಲ ಕಟ್ಟುವವರು ಹೊಸಬರು. ಹಳೆಯವರು ಇನ್ನೂ ನೇತೃತ್ವ ವಹಿಸಿದ್ದಾರೆ. ಹೊಸ ತಲೆಮಾರು ಚುರುಕಾಗಿ ತೊಡಗಿಸಿಕೊಂಡಿದೆ. ಕಾರ್ಯಕ್ರಮಗಳ ಅಬ್ಬರ ಹೆಚ್ಚಾಗಿದೆ. ಕಂಬಳದ ಕಟ್ಟು ಇಂದಿಗೂ ಇದೆ. ಆದರೆ ಅಂದಿನ ಹಸಿರು ಇಲ್ಲ. ಆದರೂ ಕಟ್ಟಳೆಗಳನ್ನು ಬಿಡದೆ ಪಾಲಿಸುವ ಸಂಪ್ರದಾಯ ಇನ್ನೂ ಮುಂದುವರೆದಿದೆ. ವರಂಗದ ವಿಠಲ ಪೂಜಾರಿಯವರ ಕೋಣಗಳು ಇಂದಿಗೂ ಕಂಬಳದ ಕ್ರಮದಲ್ಲಿ ಭಾಗಿಯಾಗುತ್ತಿವೆ. ವಾದ್ಯ ತಾಸೆಗಳಲ್ಲಿ ಹೊಸ ಹಾಡುಗಳು ಕೇಳಿಸುತ್ತಿವೆ. ದೊಂದಿ ಬೆಳಕಿನ ಜಾಗದಲ್ಲಿ ಇಂದು ಎಲ್ಇಡಿ ದೀಪಗಳು ಮಿನುಗುತ್ತಿವೆ. ಸಿರಿಬೈಲು ಜಾಗ ಅಭಿವೃದ್ಧಿ ಕಂಡಿದೆ. ಹೊಸ ಮುಖಗಳಿವೆ. ಕೆಲವರ ಮುಖದಲ್ಲಿ ನಗು ಇದ್ದರೆ, ಕೆಲವರ ಕೈಯಲ್ಲಿ ಮೊಬೈಲ್ ನಗುವನ್ನೇ ಕಿತ್ತುಕೊಂಡಿದೆ. ಹೊಸ ಪೀಳಿಗೆ ಅಬ್ಬರದ ನಡುವೆ ಪಟಾಕಿಗಳ ಸದ್ದು ಕೇಳುತ್ತಾ ಖುಷಿ ಅನುಭವಿಸುತ್ತಿದೆ. ರೀಲ್ಸ್ಗಳ ನಡುವೆ ವೈರಲ್ ಆಗುವ ಕನಸು ಕೂಡ ಅಡಗಿದೆ. ಪ್ರತೀ ನದಿಯೂ ತನ್ನದೇ ಸಂಸ್ಕೃತಿಯನ್ನು ರೂಪಿಸುತ್ತದೆ ಎನ್ನುವುದು ತಪ್ಪಲ್ಲ. ತೀರ್ಥೊಟ್ಟು ನದಿಯ ಅತ್ತ ಬದಿಯಲ್ಲಿ ಗೆಂಡ ಹಬ್ಬಕ್ಕೆ ಮಹತ್ವ ಇದ್ದರೆ, ಇತ್ತ ಅಜೆಕಾರಿನ ಕಾರ್ಕಳ ತಾಲೂಕಿನಲ್ಲಿ ಆ ಸಂಪ್ರದಾಯ ಇಲ್ಲ. ಹೀಗೆ ನದಿ ಸಂಸ್ಕೃತಿಯ ಗಡಿಯನ್ನು ಕೂಡಾ ನಿರ್ಧರಿಸುತ್ತದೆ. ಹಳ್ಳಿ ಸೊಗಡು, ಅಂದಿನ ಕಾಲದ ನೆನಪುಗಳು ಮತ್ತು ಇಂದಿನ ಕಾಲದ ಬದಲಾವಣೆಗಳು ಹೊಸ ಹೊಸದಾಗಿ ಕಾಣುತ್ತಿವೆ ಅಲ್ವಾ!!!!.
ಬರಹ : ರಾಂ ಅಜೆಕಾರು ಕಾರ್ಕಳ





















































































































