
ತುಳುನಾಡಿನ ತಿಂಡಿ ತಿನಿಸುಗಳಿಗೆ ಫಿದಾ ಆಗದವರೇ ಇಲ್ಲ. ಮಂಗಳೂರು, ಉಡುಪಿಯ ಪಾಕ ಚಂದ್ರಲೋಕದಲ್ಲೂ ಫೇಮಸ್ಸು ಅನ್ನುವಷ್ಟರ ಮಟ್ಟಿಗೆ ಇಲ್ಲಿಯ ತಿಂಡಿ ತಿನಿಸುಗಳ ವೈಶಿಷ್ಟತೆ ಪಡೆದುಕೊಂಡಿದೆ. ವೈವಿದ್ಯಮಯ ತಿಂಡಿ ತಿನಿಸುಗಳು ಕರಾವಳಿ ಮಾತ್ರವಲ್ಲದೇ ರಾಜ್ಯ, ದೇಶ, ವಿದೇಶದಲ್ಲೂ ಫೇಮಸ್. ಕರಾವಳಿಯ ತಿಂಡಿ ತಿನಿಸುಗಳಲ್ಲಿ ವೈವಿಧ್ಯತೆಯಲ್ಲಿ ಸಸ್ಯಹಾರದ್ದೇ ಪಾರಮ್ಯ. ಇಂತಹ ನೂರಾರು ಬಗೆಯ ತಿಂಡಿ ತಿನಿಸುಗಳನ್ನು ಒಂದೇ ವೇದಿಕೆಯಲ್ಲಿ ಪ್ರದರ್ಶನ ನೀಡುವ ಮೂಲಕ ವಿಕ ಕರುನಾಡ ಸ್ವಾದ ಮಾದರಿಯಾಗಿದೆ. ಮಂಗಳೂರಿನ ಸುರತ್ಕಲ್ ಬಂಟರ ಭವನದಲ್ಲಿ ನಡೆದ ವಿಕ ಕರುನಾಡ ಸ್ವಾದ ಸ್ಪರ್ಧೆಯ ವೈವಿಧ್ಯತೆ ಇದು. ವಿಜಯ ಕರ್ನಾಟಕ ಸಾರಥ್ಯದಲ್ಲಿ ಬಂಟರ ಸಂಘ ಸುರತ್ಕಲ್ ಸಹಯೋಗದೊಂದಿಗೆ ಫ್ರೀಡಂ ಹೆಲ್ದಿ ಕುಕಿಂಗ್ ಆಯಿಲ್ ಮತ್ತು ಎಕ್ಸೋ ಪ್ರಾಯೋಜಕತ್ವದಲ್ಲಿ ವಿಕ ಕರುನಾಡ ಸ್ವಾದ ಅಡುಗೆ ಸವಿರುಚಿ ಸ್ಪರ್ಧೆ ಆಯೋಜಿಸಲಾಗಿತ್ತು. ನೂರಾರು ಬಗೆಯ ತಿಂಡಿ ತಿನಿಸುಗಳು ಒಂದೇ ತಿಂಡಿಯಲ್ಲಿ ಹತ್ತಾರು ಬಗೆ, ಹತ್ತಾರು ಬಗೆಯ ಚಟ್ನಿಗಳಿದ್ದವು. ಎಲ್ಲವನ್ನೂ ಒಂದಕ್ಕಿಂತ ಒಂದು ವಿಭಿನ್ನ ವಿನ್ಯಾಸ ಅಲಂಕಾರದೊಂದಿಗೆ ಜೋಡಿಸಿಡಲಾಗಿತ್ತು. ತುಳುನಾಡಿನ ತಿಂಡಿಯ ಜೊತೆ ಕೇರಳ, ಆಂಧ್ರ, ಮಹಾರಾಷ್ಟ್ರದ ಸಾಂಪ್ರದಾಯಿಕ ತಿಂಡಿ ತಿನಿಸುಗಳು ಗಮನ ಸೆಳೆದವು. ಇಡೀ ಸ್ಪರ್ಧೆಯು ಕರಾವಳಿ ತಿಂಡಿ ತಿನಿಸುಗಳ ವೈವಿಧ್ಯತೆಯನ್ನು ತೆರೆದಿಟ್ಟಿತು.




ಸುರತ್ಕಲ್ ಬಂಟರ ಸಂಘದ ನಿಕಟಪೂರ್ವ ಅಧ್ಯಕ್ಷ ಲೋಕಯ್ಯ ಶೆಟ್ಟಿ ಮುಂಚೂರು ಕಾರ್ಯಕ್ರಮ ಉದ್ಘಾಟಿಸಿ, ಮಹಿಳೆಯರಿಗಾಗಿ ನಡೆದಿರುವ ಈ ಸ್ಪರ್ಧೆ ವಿಶಿಷ್ಟವಾಗಿದ್ದು, ಅವಕಾಶ ಕಲ್ಪಿಸಿರುವ ವಿಕ ಮತ್ತು ಫ್ರೀಡಂ ಆಯಿಲ್ ಪ್ರಯೋಗ ಶ್ಲಾಘನೀಯ ಎಂದರು. ಫ್ರೀಡಂ ಹೆಲ್ದಿ ಕುಕಿಂಗ್ ಆಯಿಲ್ ವಿತರಕ ವಾಸುದೇವ ಶೆಣೈ ಮಾತನಾಡಿ, ಫ್ರೀಡಂ ಖಾದ್ಯ ಎಣ್ಣೆಯು ಆರೋಗ್ಯಕರವಾಗಿದ್ದು, ಇದನ್ನು ಬಳಕೆದಾರರು ಸ್ವಯಂ ಪರೀಕ್ಷೆ ಮಾಡಿಕೊಳ್ಳಬಹುದು ಎಂದರು. ಪ್ರಾದೇಶಿಕ ಮಾರಾಟ ಮುಖ್ಯಸ್ಥ ಸಂತೋಷ್ ಕುಮಾರ್ ಮಾತನಾಡಿ, ಫ್ರೀಡಂ ಆಯಿಲ್ ನಲ್ಲಿ ಗುಣಮಟ್ಟವೂ, ಸರಿಯಾದ ತೂಕವೂ ಇದೆ. ಕಡಿಮೆ ಎಣ್ಣೆಯಲ್ಲಿ ಹೆಚ್ಚಿನ ಅಡುಗೆ ಮಾಡಬಹುದು. ನೀವು ಕೊಟ್ಟ ಹಣಕ್ಕೆ ಬೆಲೆ ಸಿಗುತ್ತದೆ. ಅಂಗಡಿಗಳಲ್ಲಿ ಸನ್ ಫ್ಲವರ್ ಫ್ರೀಡಂ ಆಯಿಲ್ ಕೊಡಿ ಎಂದು ಕೇಳಿಯೇ ಪಡೆಯಿರಿ ಎಂದರು. ಮನೆಯಲ್ಲಿ ತಯಾರಿ ಮಾಡಿ ತಂದಂತಹ ತಿಂಡಿ ತಿನಿಸುಗಳನ್ನು ಟೇಬಲ್ ಗಳಲ್ಲಿ ಸಾಲಾಗಿ ಅಂದವಾಗಿ ಜೋಡಿಸಿಡಲಾಗಿತ್ತು. ರೆಫರಿಗಳು ಪ್ರತಿಯೊಂದು ಸ್ಪರ್ಧಿಗಳಲ್ಲಿ ತಿಂಡಿಗಳು, ಅದರ ವಿಶಿಷ್ಟತೆ, ಪಾಕ ತಯಾರಿ ವಿಧಾನ, ಪ್ರದರ್ಶನದ ವೈವಿಧ್ಯತೆ ಸೇರಿದಂತೆ ಪ್ರತಿಯೊಂದು ಸೂಕ್ಷ್ಮತೆ ತಿಳಿದುಕೊಂಡು ನಾನಾ ವಿಭಾಗಗಳಲ್ಲಿ ಅಂಕಗಳನ್ನು ನೀಡಲಾಯಿತು. ಪ್ರಥಮ ಬಹುಮಾನವನ್ನು ಪ್ರವೀಣ ಹರೀಶ್ ಪಡೆದುಕೊಂಡರೆ, ಸುರೇಖಾ ಸೂರಿ ಪ್ರಥಮ ರನ್ನರ್ ಅಪ್ ಹಾಗೂ ವಿನಿತಾ ಸಚಿನ್ ದ್ವಿತೀಯ ರನ್ನರ್ ಅಪ್ ಸ್ಥಾನ ಪಡೆದರು. ಸೌಮ್ಯ ಶೆಟ್ಟಿ, ದೀವಿಕಾ ಶೆಟ್ಟಿ, ಕೇಸರಿ ಎಸ್ ಪೂಂಜ, ಸವಿತಾ ಶೆಟ್ಟಿ, ಕಾಂತಿ, ರೇಖಾ, ನಿರ್ಮಲ ಎಸ್ ಅರಿಗ, ಲತಾ, ಶಿಲಾದೇವಿ, ಎನ್ ರಮಾದೇವಿ ಅವರು ಎಕ್ಸೋ ಆರೋಗ್ಯಕರ ಟಿಫಿನ್ ಸ್ಪರ್ಧೆಯ ವಿಜೇತರಾಗಿ ಆಯ್ಕೆಯಾದರು.




ಸುರತ್ಕಲ್ ಬಂಟರ ಸಂಘದ ಮಹಿಳಾ ವೇದಿಕೆಯ ಉಪಾಧ್ಯಕ್ಷೆ ಜಯಂತಿ ಪಿಟಿ ರೈ, ಪ್ರಧಾನ ಕಾರ್ಯದರ್ಶಿ ರಾಜೇಶ್ವರಿ ಡಿ ಶೆಟ್ಟಿ, ಎಕ್ಸೋ ಜ್ಯೋತಿ ಲ್ಯಾಬೊರೇಟರೀಸ್ ನ ಪ್ರತಿನಿಧಿ ಭರತ್, ವಿಜಯಲಕ್ಷ್ಮಿ ಡೀರ್ ಉದ್ದಿನ ಬೇಳೆಯ ಮಾರುಕಟ್ಟೆ ಅಧಿಕಾರಿ ಪಿ ಬಾಲಸುಬ್ರಹ್ಮಣ್ಯ, ವಿಜಯ ಕರ್ನಾಟಕದ ಬ್ರಾಂಡ್ ಮಾರ್ಕೆಟಿಂಗ್ ಹೆಡ್ ಗುರುಪ್ರಸಾದ್ ಆರ್, ರೆಸ್ಪಾನ್ಸ್ ವಿಭಾಗದ ಸಹಾಯಕ ಮಹಾಪ್ರಬಂಧಕ ರಾಮಕೃಷ್ಣ ಡಿ, ಆರ್.ಎಂ.ಡಿ ವಿಭಾಗದ ವಲಯ ಪ್ರಬಂಧಕ ನಾರಾಯಣ ಉಪಸ್ಥಿತರಿದ್ದರು. ವಿಜಯ ಕರ್ನಾಟಕ ಸ್ಥಾನೀಯ ಸಂಪಾದಕ ಬಿ ರವೀಂದ್ರ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಂಗಳೂರಿನ ನಿಟ್ಟೆ ಇನ್ಸ್ಟಿಟ್ಯೂಟ್ ಆಫ್ ಹಾಸ್ಪಿಟಾಲಿಟಿ ಸರ್ವಿಸಸ್ ಅಸಿಸ್ಟೆಂಟ್ ಪ್ರೊಫೆಸರ್ ರಾಹುಲ್ ಭಟ್ ತೀರ್ಪುಗಾರರಾಗಿ ಸಹಕರಿಸಿದರು. ಮನೀಶ್ ನಿರೂಪಿಸಿದರು.

















































































































