ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ (ರಿ) ಮೂಡುಬಿದಿರೆ ಹಾಗೂ ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ವತಿಯಿಂದ ಧನ್ವಂತರಿ ಪೂಜಾ ಮಹೋತ್ಸವ, ಶಿಷ್ಯೋಪನಯನ ಸಂಸ್ಕಾರ, ಆಳ್ವಾಸ್ ಧನ್ವಂತರಿ ಪ್ರಶಸ್ತಿ ಪ್ರದಾನ ಮತ್ತು ಕಾಲೇಜು ವಾರ್ಷಿಕೋತ್ಸವ ಸಮಾರಂಭ ಬುಧವಾರ ಕಾಲೇಜಿನ ಆವರಣದಲ್ಲಿ ನಡೆಯಿತು. ನಾರಾವಿಯ ಪ್ರಸಿದ್ಧ ಆಯುರ್ವೇದ ವೈದ್ಯ ಡಾ. ಎನ್ ಶೀತಲ್ಕುಮಾರ್, ಬೆಂಗಳೂರಿನ ಭಾರತೀಯ ಆಯುರ್ವೇದ ವೈದ್ಯಕೀಯ ಮತ್ತು ಸಂಶೋಧನಾ ಸಂಸ್ಥೆಯ ರಸಶಾಸ್ತ್ರ ಮತ್ತು ಭೈಷಜ್ಯ ಕಲ್ಪನಾ ವಿಭಾಗದ ಪ್ರಾಧ್ಯಾಪಕರು, ವಿಭಾಗ ಮುಖ್ಯಸ್ಥ ಹಾಗೂ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಸೆನೆಟ್ ಸದಸ್ಯ ಡಾ. ಜಗದೀಶ್ ಕೋನರೆಡ್ಡಿ, ಕೇರಳದ ಕೊಟ್ಟಕ್ಕಲ್ ಆರ್ಯ ವೈದ್ಯ ಶಾಲೆಯ ಗುಣಮಟ್ಟ ಭರವಸೆ ವಿಭಾಗದ ವೈದ್ಯಾಧಿಕಾರಿ ಮತ್ತು ವಿಭಾಗ ಮುಖ್ಯಸ್ಥ ಡಾ. ಜಿತೇಶ್ ಎಂಕೆರಿಗೆ ಶಾಲು, ಹಾರ, ಪ್ರಶಸ್ತಿ ಫಲಕ ಹಾಗೂ ನಗದು ಹಣ ಹತ್ತು ಸಾವಿರದೊಂದಿಗೆ ಆಳ್ವಾಸ್ ಧನ್ವಂತರಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಧನ್ವಂತರಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ನಾರಾವಿಯ ಪ್ರಸಿದ್ಧ ಆಯುರ್ವೇದ ವೈದ್ಯ ಡಾ. ಎನ್ ಶೀತಲ್ಕುಮಾರ್, ಆಳ್ವಾಸ್ ಸಂಸ್ಥೆ ರೂಪಿಸಿದ ಸಾಂಸ್ಕೃತಿಕ ಚಳವಳಿಗಳು, ಕಲೆಗಳ ಉತ್ತೇಜನ, ಜನಪದ ಹಾಗೂ ಭಾರತೀಯ ಸಂಸ್ಕೃತಿ ಉಳಿವಿಗೆ ನೀಡಿದ ಕೊಡುಗೆಗಳು ಈ ಕ್ಷೇತ್ರದ ಸಂರಕ್ಷಣೆ ಮತ್ತು ಮೌಲ್ಯವರ್ಧನೆಗೆ ಮಾಡಿದ ಜಾಗೃತ ಪ್ರಯತ್ನವಾಗಿದೆ ಎಂದು ಬಣ್ಣಿಸಿದರು. ಆಯುರ್ವೇದ, ನ್ಯಾಚುರೋಪತಿ, ಹೋಮಿಯೋಪಥಿ ಕ್ಷೇತ್ರಗಳಲ್ಲಿ ಸಂಸ್ಥೆ ಸ್ಥಾಪಿಸಿರುವ ಮಹಾವಿದ್ಯಾಲಯಗಳು ಇಡೀ ದೇಶದಲ್ಲೇ ಮಾದರಿಯಾಗಿವೆ. ಜಾಗತಿಕ ವೇದಿಕೆಯಲ್ಲಿ ಭಾರತೀಯ ವೈದ್ಯಕೀಯ ಪರಂಪರೆಯ ಸ್ಥಾನವನ್ನು ಬಲಪಡಿಸುವಲ್ಲಿ ಇಲ್ಲಿ ನಡೆಯುತ್ತಿರುವ ವಿದ್ಯಾಭ್ಯಾಸ ಮತ್ತು ಸಂಶೋಧನಾ ಚಟುವಟಿಕೆಗಳು ಮಹತ್ತರ ಎಂದರು. ಸಂಶೋಧನೆಯ ಅಗತ್ಯತೆಯನ್ನು ಉಲ್ಲೇಖಿಸಿ ಮಾತನಾಡಿದ ಅವರು “ಇಂದಿನ ವೈದ್ಯಕೀಯ ಕ್ಷೇತ್ರದ ಬೆಳವಣಿಗೆ ಸಂಶೋಧನೆ ಆಧಾರಿತವಾಗಿದೆ. ವಿದ್ಯಾರ್ಥಿಗಳು ಕೇವಲ ಪಾಠಪುಸ್ತಕಕ್ಕೆ ಸೀಮಿತರಾಗದೆ ನವೀಕೃತ ಜ್ಞಾನ, ಕ್ಲಿನಿಕಲ್ ಸ್ಟಡಿ, ಎವಿಡೆನ್ಸ್ ಬೇಸ್ಡ್ ಪ್ರಾಕ್ಟೀಸ್ ಕಡೆ ಗಮನ ಹರಿಸಬೇಕು. ರಾಜೀವ್ ಗಾಂಧಿ ವಿಜ್ಞಾನ ವಿವಿಯು ನೀಡುತ್ತಿರುವ ವಿದ್ಯಾರ್ಥಿ ಸಂಶೋಧನಾ ಅನುದಾನವನ್ನು ಸದುಪಯೋಗಪಡಿಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ ಮೋಹನ್ ಆಳ್ವ, ಆಯುರ್ವೇದ ವಿದ್ಯಾಭ್ಯಾಸವು ಕೇವಲ ಪದವಿಪ್ರಾಪ್ತಿಯ ಮಾರ್ಗವಲ್ಲ. ಮೌಲ್ಯ, ಶಿಸ್ತು, ಸೇವೆಗಳನ್ನು ಅಳವಡಿಸಿಕೊಳ್ಳುವ ಜೀವನ ಪಥವಾಗಿದೆ ಎಂದರು. ಇಂದಿನ ಯುಗದಲ್ಲಿ ಹೊಸ ರೋಗಗಳು, ಜೀವನಶೈಲಿ ಬದಲಾವಣೆಗಳು, ತಂತ್ರಜ್ಞಾನಾಭಿವೃದ್ಧಿ ಹಾಗೂ ವಿಜ್ಞಾನಾಧಾರಿತ ಸಂಶೋಧನೆಗಳು ನಿರಂತರವಾಗಿ ನಡೆಯುತ್ತಿದೆ. ಇಂತಹ ಸಂದರ್ಭದಲ್ಲಿ ಆಯುರ್ವೇದ ವೈದ್ಯರು ಮತ್ತು ವಿದ್ಯಾರ್ಥಿಗಳು ಕೇವಲ ಸಾಂಪ್ರದಾಯಿಕ ಜ್ಞಾನಕ್ಕೆ ಸೀಮಿತರಾಗದೆ, ಅದರ ವೈಜ್ಞಾನಿಕ ದೃಢೀಕರಣ, ಆಧುನಿಕ ದೃಷ್ಟಿಕೋನ ಮತ್ತು ಸಂಶೋಧನಾ ಫಲಿತಾಂಶಗಳೊಂದಿಗೆ ತಮ್ಮ ಜ್ಞಾನವನ್ನು ನವೀಕರಿಸಿಕೊಳ್ಳುವುದು ಮುಖ್ಯ ಎಂದರು. ಅಲಂಗಾರಿನ ಸುಬ್ರಮಣ್ಯ ಭಟ್ರ ನೇತೃತ್ವದಲ್ಲಿ ಧನ್ವಂತರಿ ಪೂಜಾ ಮಹೋತ್ಸವ, ಶಿಷ್ಯೋಪನಯನ ಸಂಸ್ಕಾರ ನೆರವೇರಿತು. ಕಾಲೇಜಿನ ಪ್ರಥಮ ವರ್ಷದ ಸ್ನಾತಕ ಹಾಗೂ ಸ್ನಾತಕೋತ್ತರ ವಿಭಾಗದ 160 ಮಕ್ಕಳಿಗೆ ಶಿಷ್ಯೋಪನಯನ ಸಂಸ್ಕಾರ ನಡೆಯಿತು. ಹಿಮಾಲಯ ವೆಲ್ನೆಸ್ ಕಂಪೆನಿ ವತಿಯಿಂದ 2019-20 ನೇ ಸಾಲಿನಲ್ಲಿ ಜೀವಕಾ ಪ್ರಶಸ್ತಿಯನ್ನು ಡಾ. ಪ್ರಭು ಆರ್ ಹೆಚ್ ಹಾಗೂ ಆಯುರ್ ವಿಶಾರಧಾ ಪ್ರಶಸ್ತಿಯನ್ನು ಡಾ. ಅಮೂಲ್ಯ ಜಿ ಶೆಟ್ಟಿಯವರಿಗೂ, 2020-21ನೇ ಸಾಲಿನಲ್ಲಿ ಜೀವಕಾ ಪ್ರಶಸ್ತಿಯನ್ನು ಡಾ. ಸ್ಪಂದನಾ ಪಟೇಲ್ ಹಾಗೂ ಆಯುರ್ ವಿಶಾರಧಾ ಪ್ರಶಸ್ತಿಯನ್ನು ಡಾ. ಮನೀಷಾರಿಗೆ, ತಲಾ ಹದಿನೈದು ಹಾಗೂ ಹತ್ತು ಸಾವಿರ ನಗದು ಬಹುಮಾನದೊಂದಿಗೆ ನೀಡಿ ಗೌರವಿಸಲಾಯಿತು.
ವಿವಿಧ ಸಾಂಸ್ಕೃತಿಕ ಹಾಗೂ ಕ್ರೀಡಾ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಹಾಗೂ ಕಾಲೇಜಿನ ವಾರ್ಷಿಕೋತ್ಸವದ ಹಿನ್ನಲೆಯಲ್ಲಿ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಸ್ನಾತಕ ವಿಭಾಗದ ಡೀನ್ ಡಾ. ಸ್ವಪ್ನಾ ಕುಮಾರಿ, ಸ್ನಾತಕೋತ್ತರ ವಿಭಾಗದ ಡೀನ್ ಡಾ. ಮಂಜುನಾಥ ಭಟ್ ಇದ್ದರು. ಪ್ರಾಧ್ಯಾಪಕಿ ಡಾ. ಗೀತಾ ಮಾರ್ಕೆಂಡೆ ನಿರೂಪಿಸಿ, ಆಳ್ವಾಸ್ ಆಯುರ್ವೇದ ಕಾಲೇಜಿನ ಪ್ರಾಚಾರ್ಯ ಡಾ. ಸುಶೀಲ್ ಶೆಟ್ಟಿ ಸ್ವಾಗತಿಸಿ, ಸ್ನಾತಕೋತ್ತರ ವಿಭಾಗದ ಡೀನ್ ಡಾ. ಮಂಜುನಾಥ ಭಟ್ ವಂದಿಸಿದರು.

















































































































