ಬ್ರಹ್ಮಾವರ ಜಿ ಎಮ್ ವಿದ್ಯಾನಿಕೇತನ್ ಪಬ್ಲಿಕ್ ಸ್ಕೂಲ್ ನಲ್ಲಿ ಡಿಸೆಂಬರ್ 16 ರಂದು ಡಾ. ಚಂದ್ರಶೇಖರ ಕಂಬಾರ ಅವರು ಬರೆದ ಕಥೆಗಳನ್ನಾಧರಿಸಿದ ಕೆ. ಜಿ. ಕೃಷ್ಣಮೂರ್ತಿ, ಸಜಿ ಆರ್. ತುಮರಿ ಅರುಣ ಎನ್, ಕಿನ್ನರಿ ಮೇಳದವರು ನಿರ್ದೇಶಿಸಿರುವ ‘ಮರವೇ ಮರ್ಮರ’ವೇ ಮಕ್ಕಳ ನಾಟಕದ ರಂಗಪ್ರದರ್ಶನ ಏರ್ಪಡಿಸಲಾಗಿತ್ತು. ಜಾನಪದ ಕಥೆಗಳನ್ನಾಧರಿಸಿದ ರಂಗ ಪ್ರಸ್ತುತಿಯಲ್ಲಿ ಕಾಡು ಮತ್ತು ನಾಡಿಗೆ ತಾಯಿ ಮಕ್ಕಳ ಸಂಬಂಧವಿದೆ. ಆದರೆ ಪ್ರಕೃತಿ ಕೊಟ್ಟ ವರಗಳನ್ನು ಮನುಷ್ಯ ತನ್ನ ದುರಾಸೆಯಿಂದಾಗಿ ಶಾಪವಾಗಿ ಪರಿವರ್ತಿಸಿಕೊಳ್ಳುತ್ತಿದ್ದಾನೆಂಬ ಅಂಶವನ್ನು ಪ್ರದರ್ಶನದ ಮೂಲಕ ಬೆಳಕಿಗೆ ತಂದರು.

ಇದ್ದಿಲು ಮಹಾರಾಜ, ಬಿದಿರಿನ ಚೆಲುವೆ ಮತ್ತು ಆತ್ಮಹತ್ಯೆ ಎಂಬ ಮೂರು ಕಥೆಗಳ ಆಯ್ಕೆಯ ಮೂಲಕ ರಂಗ ಪ್ರಸ್ತುತಿ ಏರ್ಪಡಿಸಿದ್ದರು. ವಿದ್ಯಾರ್ಥಿಗಳು ಕಾಡು ಮತ್ತು ನಾಡಿಗಿರುವ ತಾಯಿಯ ಸಂಬಂಧ ಮತ್ತು ಮರದ ರಕ್ಷಣೆಯ ಕುರಿತು ಮನುಷ್ಯರಿಗಿರುವ ಜವಾಬ್ದಾರಿಗಳನ್ನು ಅರಿತುಕೊಂಡರು. ವಿದ್ಯಾರ್ಥಿಗಳಿಗೆ ಕಾಡು ಬೆಳೆಸಿ ನಾಡು ಉಳಿಸಿ ಎಂಬ ಸಂದೇಶವನ್ನು ನೀಡಿದರು. ಸಂಸ್ಥೆಯ ಪ್ರಾಂಶುಪಾಲರಾದ ಜಾರ್ಜ್ ಕುರಿಯನ್ರವರು ರಂಗ ಪ್ರದರ್ಶನದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. ರಂಗಪ್ರದರ್ಶನದ ಕಾರ್ಯಕ್ರಮದಲ್ಲಿ ಜಿ ಎಮ್ ವಿದ್ಯಾನಿಕೇತನ್ ಹಾಗೂ ಜಿ ಎಮ್ ಗ್ಲೋಬಲ್ ಸ್ಕೂಲ್ನ ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
















































































































