ಒಬ್ಬ ವ್ಯಕ್ತಿ ಸುಮ್ಮನೆ ನಾಯಕನಾಗಿ ಗುರುತಿಸಲ್ಪಡುವುದಿಲ್ಲ. ನಾಯಕನಾಗಿ ಕಾಣಿಸಿಕೊಳ್ಳಬೇಕಾದರೆ ಮೂಲತಃ ಆತನಲ್ಲಿ ನಾಯಕತ್ವದ ಗುಣಗಳಿರಬೇಕು. ಅದನ್ನು ಪೋಷಿಸಿ ಬೆಳಕಿಗೆ ತರುವ ವಾತಾವರಣ ಇರಬೇಕು. ಜೊತೆಗೆ ಸದಾ ಪ್ರಯತ್ನಶೀಲತೆ, ದೃಢ ಸಂಕಲ್ಪ, ಛಲ, ಸವಾಲುಗಳನ್ನು ಎದುರಿಸಿ ಅದನ್ನು ಮೀರಿ ನಿಲ್ಲುವ ತಾಕತ್ತು, ಆಕರ್ಷಕ ವ್ಯಕ್ತಿತ್ವ, ನಿಷ್ಕಲ್ಮಶ ಭಾವಶುದ್ಧಿ, ನೇರ ನಡೆ ನುಡಿ, ಯೋಜನೆ ಯೋಚನೆಯ ಬಗ್ಗೆ ಖಚಿತತೆ ಇವೆಲ್ಲವೂ ಮೇಳೈಸಿದಾಗ ಒಬ್ಬ ಸಾಮಾನ್ಯ ಅಸಾಮಾನ್ಯನಾಗುತ್ತಾನೆ. ನಾಯಕನಾಗುತ್ತಾನೆ. ಮಹಾ ನಾಯಕನಾಗುತ್ತಾನೆ. ಇಂತಹ ಒಬ್ಬ ಮಹಾನಾಯಕ ನಮ್ಮೊಂದಿಗಿದ್ದಾರೆ. ಅವರೇ ಜಾಗತಿಕ ಬಂಟರ ಸಂಘಗಳ ಒಕ್ಕೂಟವೆಂಬ ಹೊನ್ನಿನ ತೇರನ್ನೇರಿ ಅದನ್ನು ಯಶಸ್ಸಿನ ಶಿಖರಾಗ್ರಕ್ಕೆ ಸಾಗಿಸುತ್ತಿರುವ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ‘ಐಕಳದ ಮುತ್ತು ಬಂಟರ ಗತ್ತು ಹರೀಶ್ ಶೆಟ್ಟಿ ಎನ್ನುವ ಸೊತ್ತು’. ವಿಶ್ವದಾದ್ಯಂತ ವಿವಿದೆಡೆ ಸ್ಥಾಪಿಸಲ್ಪಟ್ಟ ಸುಮಾರು 150ಕ್ಕೂ ಹೆಚ್ಚು ಬಂಟರ ಸಂಘಗಳು ಒಂದಾಗಿ ಸೇರಿ ನಿರ್ಮಾಣಗೊಂಡ ತುಳುವ ನಾಡಿನ ಹೆಮ್ಮೆಯ ಬಂಟ ಸಮುದಾಯದ ಏಕೈಕ ಕೇಂದ್ರೀಯ ಪ್ರಧಾನ ಸಂಸ್ಥೆ ಅದು ಜಾಗತಿಕ ಬಂಟರ ಸಂಘಗಳ ಒಕ್ಕೂಟ. ಐಕಳ ಶ್ರೀ ಹರೀಶ್ ಶೆಟ್ಟಿಯವರ ಬಗ್ಗೆ ಹೇಳುವುದಾದರೆ, ಹುಟ್ಟಿದ್ದು ತುಳುನಾಡಿನ ದಕ್ಷಿಣ ಕನ್ನಡ ಜಿಲ್ಲೆಯ ಐಕಳ ಎಂಬ ಊರಿನಲ್ಲಿ ವಾಮನ ತ್ರಿವಿಕ್ರಮನಾಗಿ ಬೆಳೆದಂತೆ ತಮ್ಮ ಸಂಘಟನಾ ಚತುರತೆಯಿಂದ ಮುಂಬೈ ಮಹಾನಗರಿಯಲ್ಲಿ ಖ್ಯಾತಿ ಗಳಿಸಿ ರಾಷ್ಟ್ರ ಅಂತರಾಷ್ಟ್ರೀಯ ಮಟ್ಟದಲ್ಲಿ ಕೀರ್ತಿ ಸಂಪಾದಿಸಿ ಸೇವೆಯೆಂಬ ಯಜ್ಞದಲ್ಲಿ ತನಗೆ ತಾನೇ ಸಮರ್ಪಿಸಿಕೊಂಡ ಸೇವೆ.

2018 ರಲ್ಲಿ ಜಾಗತಿಕ ಬಂಟರ ಸಂಘದ ಸಾರಥಿಯಾಗಿ ಸಾರಥ್ಯ ವಹಿಸಿಕೊಳ್ಳುವ ಪೂರ್ವದಲ್ಲಿ 3 ವರ್ಷಗಳ ಅವಧಿಗೆ ಮುಂಬೈ ಬಂಟರ ಸಂಘದ ಗುರಿಕಾರನಾಗಿ ಯಶಸ್ಸಿನ ಗುರಿಯೆಡೆಗೆ ಸಾಗಿಸಿ ಪ್ರಸ್ತುತದಲ್ಲೂ ಅಲ್ಲಿಯ ಗೌರವಾನ್ವಿತ ಟ್ರಸ್ಟಿಯೂ, ಸದಸ್ಯರಾಗಿಯೂ ಮುಂದುವರಿಯುತ್ತಿರುವ ಐಕಳರು ಅಪಾರ ಪರಿಶ್ರಮಿ. ಕಠಿಣ ನಿರ್ಧಾರ, ಕಷ್ಟಗಳಿಗೆ ಮಂಜಿನಂತೆ ಕರಗಿ ನೀರಾಗುವ ಮನಸ್ಸು, ಆರ್ತರಿಗೆ ಆಪದ್ಭಾಂದವ, ಬಡವರಿಗೆ ಬಂಧು, ಜೊತೆಗಿರುವವರಿಗೆ ಆಪ್ತ ಸ್ನೇಹಿತ, ಸಾಧಿಸುವ ಛಲವುಳ್ಳವರಿಗೆ ಆದರ್ಶ ಸಾಧಕ, ಬಹಳಷ್ಟು ಯುವ ಸಮುದಾಯಕ್ಕೆ ರೋಲ್ ಮಾಡೆಲ್, ಶೈಕ್ಷಣಿಕ, ಸಾಮಾಜಿಕ, ಧಾರ್ಮಿಕ, ಸಾಂಸ್ಕ್ರತಿಕ ರಂಗಗಳಲ್ಲಿ ಕೈಯಾಡಿಸಿ ಗೆದ್ದ ಸಾಹಸಿ. ಒಂದು ಕಾಲವಿತ್ತು ಆಗ ಬಂಟರ ಸಂಘ ಅಂದರೆ ಅದು ಉಳ್ಳವರಿಗೆ, ಬಲಾಡ್ಯರಿಗೆ, ಅಂದರೆ ಶ್ರೀಮಂತರಿಗಷ್ಟೇ ಸೀಮಿತವಾಗಿತ್ತು, ಇದನ್ನು ಮನಗಂಡ ಐಕಳರು ಮುಂಬೈ ಗ್ರಾಮಾಂತರ ಪ್ರದೇಶದಲ್ಲೂ ಏಳು ಪ್ರಾದೇಶಿಕ ಸಂಸ್ಥೆಗಳನ್ನು ಸ್ಥಾಪಿಸಿ, ಬಡವರ ಮನೆ ಬಾಗಿಲಿಗೆ ಸಂಘ ತಲುಪುವಂತೆ ಮಾಡಿ ಬಡವನಿಗೂ ಬಲ್ಲಿದನಿಗೂ ಸಂಘವು ಸ್ವಂತ ಮನೆಯಂತೆ ಇಲ್ಲಿ ಎಲ್ಲರೂ ಒಂದೇ ಅನ್ನುವ ಭಾವನೆ ಗಟ್ಟಿಯಾಗುವಂತೆ ಮಾಡಿದರು. ಅದರ ಫಲಶ್ರುತಿ ಪ್ರಸ್ತುತ ಒಂಬತ್ತು ಪ್ರಾದೇಶಿಕ ಸಂಸ್ಥೆಗಳು ಕಾರ್ಯಚರಿಸುತ್ತಿವೆ. ಇನ್ನೊಂದು ಗಮನಾರ್ಹ ಸಂಗತಿಯೇನೆಂದರೆ, ಮುಂಬೈ ಬಂಟರ ಸಂಘದ ಅಧ್ಯಕ್ಷರಾಗಿದ್ದ ಐಕಳ ಹರೀಶ್ ಶೆಟ್ಟಿಯವರ ಸಾಧನೆಯ ಒಂದು ಸಣ್ಣ ಝಲಕ್ 23 ಕೋಟಿ ಹಣವನ್ನು ಒಟ್ಟು ಮಾಡಿ ಸಮಾಜ ಸೇವೆಗಾಗಿ ಒಂದು ಕಟ್ಟಡವನ್ನು ಶ್ರೀಮತಿ ರಂಜನಿ ಸುಧಾಕರ್ ಹೆಗ್ಡೆ ಹೆಸರಿನಲ್ಲಿ ನಿರ್ಮಿಸಿ, ಅದರಲ್ಲಿ ಹಾಲ್ ರೂಂಗಳನ್ನು ಮಾಡಿ ಅದರಿಂದ ಬಂದ 6೦ಲಕ್ಷ ಆದಾಯವನ್ನು ಆರ್ಥಿಕವಾಗಿ ತೀರಾ ಹಿಂದುಳಿದವರಿಗಾಗಿ ವಿನಿಯೋಗಿಸುವ ಸೇವಾ ಸಂಕಲ್ಪ. ಇದೇನು ಸಾಮಾನ್ಯ ವಿಚಾರವೇ?.
ಐಕಳ ಹರೀಶ್ ಶೆಟ್ಟಿಯವರು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಚುಕ್ಕಾಣಿ ಹಿಡಿದ ಬಳಿಕ ಹಿಂತಿರುಗಿ ನೋಡಿದ ಉದಾಹರಣೆಯೇ ಇಲ್ಲ. ಈ ಸಂಘಟನೆಯ ಬೆನ್ನಿಗೆ ಬೆಂಗಾವಲಾಗಿ ನಿಂತು ಶಕ್ತಿ ತುಂಬಿದ ವಜ್ರದ ಕಂಬಗಳಿವರು ಅಂದರೆ ತಪ್ಪಾಗಲಾರದು ಅವರೇ ದಾನಿ ಮಹಾದಾನಿ ಹೇರಂಬ ಇಂಡಸ್ಟ್ರೀಸ್ ಲಿಮಿಟೆಡ್ ಮುಂಬೈ ಇದರ ಅಧ್ಯಕ್ಷರಾದ ಡಾ| ಕನ್ಯಾನ ಸದಾಶಿವ ಶೆಟ್ಟಿ. ನಾಲ್ಕು ಉಕ್ಕಿನ ಕಂಬಗಳಂತಾ ವಿಶೇಷ ಮಹಾ ನಿರ್ದೇಶಕರಾದ ಆರ್ಗಾನಿಕ್ ಗ್ರೂಪ್ ಅಫ್ ಇಂಡಸ್ಟ್ರೀಸ್ ಮುಂಬೈ ಇದರ ಸಿಎಂಡಿ ತೋನ್ಸೆ ಆನಂದ ಎಂ ಶೆಟ್ಟಿ. ಬಂಟರ ಸಂಘ ಮುಂಬೈಯ ಅಧ್ಯಕ್ಷರಾದ ಪ್ರವೀಣ್ ಭೋಜ ಶೆಟ್ಟಿ. ಎಂ.ಆರ್.ಜಿ ಗ್ರೂಪ್ಸ್ ನ ಬಂಜಾರ ಪ್ರಕಾಶ್ ಶೆಟ್ಟಿ, ಉಡುಪಿ ಟು ಮುಂಬೈ ಗ್ರೂಪ್ ಅಪ್ ಹೊಟೇಲ್ಸ್ ಇದರ ಸಿ.ಎಂ.ಡಿ ಶಿವ್ ಚಂದ್ರ ಶೆಟ್ಟಿ. ಇವರೊಂದಿಗೆ ದ್ವಾದಶ ಸರ್ವ ಸಮರ್ಥ ಸರ್ವ ಶಕ್ತ ಮಹಾ ನಿರ್ದೇಶಕರುಗಳಾದ ವಿ.ಕೆ ಗ್ರೂಪ್ ಅಫ್ ಕಂಪೆನೀಸ್ ನ ಕೆ.ಎಂ ಶೆಟ್ಟಿ, ಬರೋಡಾ ಕೆಟರಿಂಗ್ ನ ಶಶಿಧರ್ ಶೆಟ್ಟಿ, ರಾಕ್ಷಿ ಡೆವಲಪಸ್೯ನ ರಾಜೇಶ್ ಎನ್ ಶೆಟ್ಟಿ, ಅಲಿಯನ್ಸ್ ಇನ್ಫ್ರಾಸ್ಟ್ರಕ್ಚರ್ ನ ಅರವಿಂದ್ ಆನಂದ್ ಶೆಟ್ಟಿ. ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಉಪಾಧ್ಯಕ್ಷರಾದ ಕರ್ನಿರೆ ವಿಶ್ವನಾಥ್ ಶೆಟ್ಟಿ, ಫಾರ್ಚೂನ್ ಗ್ರೂಫ್ಸ್ ಅಫ್ ಹೊಟೇಲ್ಸ್ ನ ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿ, ಮೆರಿಟ್ ಹಾಸ್ಪಿಟಾಲಿಟಿ ಸರ್ವಿಸಸ್ ನ ಬೆಳ್ಳಾಡಿ ಅಶೋಕ್ ಶೆಟ್ಟಿ, ಹೈಟೆಕ್ ಇಲೆಕ್ಟ್ರಿಫಿಕೇಶನ್ ಇಂಜಿನಿಯರ್ಸ್ ಅಂಕಲೇಶ್ವರ್ ನ ರವೀಂದ್ರ ವಿ ಶೆಟ್ಟಿ, ಪಂಜುರ್ಲಿ ಗ್ರೂಪ್ ಅಫ್ ಹೊಟೇಲ್ಸ್ ನ ರಾಜೇಂದ್ರ ವಿ ಶೆಟ್ಟಿ, ಹೊಟೇಲ್ ಡ್ರೀಮ್ ಲ್ಯಾಂಡ್ ನ ರತ್ನಾಕರ್ ಎಂ ಶೆಟ್ಟಿ, ಇಸ್ಸಾರ್ ಫೈನಾನ್ಸಿಯಲ್ ಸರ್ವಿಸಸ್ ನ ಡಾ| ಆರ್ ಕೆ ಶೆಟ್ಟಿ, ಹೊಟೇಲ್ ಕೃಷ್ಣ ಪ್ಯಾಲೇಸ್ ಮುಂಬೈನ ಶ್ರೀಮತಿ ಉಮಾಕೃಷ್ಣ ಶೆಟ್ಟಿ ಜೊತೆಗೆ ಮಿನುಗುವ ನಕ್ಷತ್ರ ಪುಂಜಗಳಂತಿರುವ ಇಪ್ಪತ್ತೊಂದು ನಿರ್ದೇಶಕರುಗಳು, ಒಬ್ಬರು ವಿಶೇಷ ದಾನಿ, ಸಪ್ತ ಸಾಗರದಂತಿರುವ ಸಪ್ತ ಮಹಾ ಪೋಷಕರು, ಮೂವರು ಸ್ಥಾಪಕ ಪೋಷಕರು, ನೂರ ಹತ್ತೊಂಬತ್ತು ಮಂದಿ ಪೋಷಕರು, ಯಾವತ್ತೂ ದಕ್ಷತೆ ಮೆರೆಯುವ ಮೂವತ್ತು ಆಡಳಿತ ಮಂಡಳಿಯ ಗೌರವಾನ್ವಿತ ಸದಸ್ಯರು, ಇವರೊಂದಿಗೆ ಮತ್ತೆ 214 ಸದಸ್ಯರು, ವಿಶೇಷ ಆಹ್ವಾನಿತ 50 ಸದಸ್ಯರು, ಇವರೊಂದಿಗೆ 277 ಆಹ್ವಾನಿತ ಸದಸ್ಯರು. ಇದಿಷ್ಟು ಜಾಗತಿಕ ಬಂಟರ ಸಂಘಗಳ ಒಕ್ಕೂಟ ಎಂಬ ಸಡೃಢ, ಸುಂದರ, ಸುರಕ್ಷಿತ ಮತ್ತು ನೆಮ್ಮದಿಯ ಮನೆ ಎಂದು ಹೇಳಲು ಖುಷಿ, ಸಂತೋಷ ಮತ್ತು ಹೆಮ್ಮೆ.
ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಸ್ಥಾಪಕ ಅಧ್ಯಕ್ಷರು ಪಳ್ಳಿ ಜಯರಾಮ ಶೆಟ್ಟಿಯವರು. ಬಳಿಕ ಕ್ರಮವಾಗಿ ಅಧ್ಯಕ್ಷರುಗಳಾಗಿ ಸೇವೆ ಸಲ್ಲಿಸಿ ಒಕ್ಕೂಟದ ಬಲವರ್ಧನೆಗೆ ಕಾರಣೀಕರ್ತರಾದವರು ಕೆ.ಬಿ ಜಯಪಾಲ ಶೆಟ್ಟಿ, ಕೆ.ಸತೀಶ್ಚಂದ್ರ ಹೆಗ್ಡೆ, ಐ.ಎಂ ಜಯರಾಮ ಶೆಟ್ಟಿ, ಮಾಲಾಡಿ ಕೆ ಅಜಿತ್ ಕುಮಾರ್ ರೈ ಇವರೆಲ್ಲರ ಕಠಿಣ ಪರಿಶ್ರಮ ಅವಿರತ ದುಡಿಮೆ ಪ್ರಾಮಾಣಿಕ ಪ್ರಯತ್ನದ ಫಲ ಇಂದು ಬೃಹತ್ ವೃಕ್ಷವಾಗಿ ಬೆಳೆದಿರುವ ಒಕ್ಕೂಟದ ಬೆಳವಣಿಗೆಯಲ್ಲಿ ನೀರು ಗೊಬ್ಬರಗಳಾಗಿ ಸಹಕಾರಿಯಾಗಿವೆ. ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿಯವರೊಂದಿಗೆ ಉಪಾಧ್ಯಕ್ಷರಾಗಿ ಕರ್ನಿರೆ ವಿಶ್ವನಾಥ ಶೆಟ್ಟಿ, ಕಾರ್ಯದರ್ಶಿಯಾಗಿ ಜಯಕರ ಶೆಟ್ಟಿ ಇಂದ್ರಾಳಿ, ಕೋಶಾಧಿಕಾರಿಯಾಗಿ ಉಳ್ತೂರು ಮೋಹನ್ ದಾಸ್ ಶೆಟ್ಟಿ , ಜೊತೆ ಕಾರ್ಯದರ್ಶಿಯಾಗಿ ಚಂದ್ರಹಾಸ ಡಿ ಶೆಟ್ಟಿ ರಂಗೋಲಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆಯಾಗಿ ಶ್ರೀಮತಿ ಉಮಾ ಕೆ. ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷರಾಗಿ ಗಿರೀಶ್ ಶೆಟ್ಟಿ ತೆಳ್ಳಾರ್, ಸಂಚಾಲಕರಾಗಿ ಕೊಲ್ಲಾಡಿ ಶ್ರೀ ಬಾಲಕ್ರಷ್ಣ ರೈ ಪ್ರಸ್ತುತ ಒಕ್ಕೂಟವನ್ನು ಮುನ್ನಡೆಸುತ್ತಿರುವ ಸಮರ್ಥ ತಂಡ. ಜಾಗತಿಕ ಬಂಟರ ಸಂಘಗಳ ಒಕ್ಕೂಟವು ಕ್ಷಣದಿಂದ ಇದುವರೆಗೆ ಸಾಧನೆಗಳ ಸರಮಾಲೆಯೊಂದಿಗೆ ಕ್ಷಣವೂ ವಿರಮಿಸದೆ ಸೇವೆಯೆಂಬ ಯಜ್ಞದಲ್ಲಿ ಪ್ರಜ್ವಲಿಸುತ್ತಾ ಸಮುದಾಯಕ್ಕೂ ಸಮಾಜಕ್ಕೂ ಭರವಸೆಯ ಬೆಳಕಾಗಿ ಗೋಚರಿಸುತ್ತಾ ಬಂದಿದೆ. ಸಮುದಾಯದ ಸಹೃದಯಿ ದಾನಿಗಳ ಸಹಕಾರದಿಂದ 4000 ಹೆಚ್ಚು ವೈದ್ಯಕೀಯ ಚಿಕಿತ್ಸೆಗೆ ನೆರವು, ವಿದ್ಯಾದಾಹಿಗಳಾದ 7000 ವಿದ್ಯಾರ್ಥಿಗಳಿಗೆ ಸಹಾಯ ಹಸ್ತ, ಕ್ರೀಡಾ ಲೋಕದಲ್ಲಿ ಮಿಂಚಬೇಕೆನ್ನುವ 80 ಕ್ಕೂ ಹೆಚ್ಚು ಕ್ರೀಡಾ ಪ್ರತಿಭೆಗಳಿಗೆ ಪ್ರೋತ್ಸಾಹ, ಸಾವಿರಕ್ಕೂ ಅಧಿಕ ಹೆಣ್ಣು ಮಕ್ಕಳ ಕಂಕಣ ಭಾಗ್ಯಕ್ಕೆ ಸಹಾಯ ಯಾರೂ ಊಹಿಸದ ರೀತಿಯಲ್ಲಿ ಆರ್ಥಿಕವಾಗಿ ಸಂಕಷ್ಟದಲ್ಲಿದ್ದು ಸಹಾಯಕ್ಕಾಗಿ ಕೈ ನೀಡಿದ ಅಸಹಾಯಕರ ಕೈ ಹಿಡಿದು ಸಂತೈಸಿದ ಪರಿ, ವಾಸದ ಮನೆಯಿಲ್ಲದೆ ಅಂಬರವನ್ನೇ ಆಶ್ಯಿಸಿಕೊಂಡಿರುವ ಬಡವರಿಗೆ ಈಗಾಗಲೇ 350 ಕ್ಕೂ ಅಧಿಕ ಮನೆಗಳನ್ನು ನಿರ್ಮಿಸಿಕೊಟ್ಟು ಬಡ ಬಂಧುಗಳ ಮನ ತಣಿಸಿದ್ದು, ಕ್ಯಾನ್ಸರ್, ಕಿಡ್ನಿ ವೈಫಲ್ಯ, ಹೃದಯ ಶಸ್ತ್ರ ಚಿಕಿತ್ಸೆ ಮುಂತಾದ ಗಂಭೀರ ಮತ್ತು ಮಾರಣಾಂತಿಕ ಕಾಯಿಲೆಗಳಿಂದ ಬಳಲುತ್ತಿರುವ ಸುಮಾರು 100 ಫಲಾನುಭವಿಗಳನ್ನು ದತ್ತು ಪಡೆದು ಪ್ರತಿ ತಿಂಗಳು ಅವರ ಖಾತೆಗೆ ಹಣ ಪಾವತಿಸಿ ಮಾನವೀಯತೆ ಮೆರೆದಿರುವುದು. 2018 ರಿಂದ 25 ರ ವರೆಗೆ ಐಕಳ ಹರೀಶ್ ಶೆಟ್ಟಿಯವರು ಮಾಡಿರುವ ಸಹಾಯ 35 ಕೋಟಿಗೂ ಅಧಿಕವಾಗಿದ್ದು, ಸಾಮಾನ್ಯ ವಿಷಯವೇನಲ್ಲ. ಐಕಳ ಹರೀಶ್ ಶೆಟ್ಟಿಯವರು ಮುಂಬೈ ಬಂಟರ ಸಂಘದ ಅಧ್ಯಕ್ಷರಾಗಿದ್ದಾಗ ಆಯೋಜಿಸಿರುವ ಅಂತರಾಷ್ಟ್ರೀಯ ಕ್ರೀಡಾ ಕೂಟ ಹಾಗೂ ಸಾಂಸ್ಕ್ರತಿಕ ಕಾರ್ಯಕ್ರಮ ಬಾಲಿವುಡ್ ನಲ್ಲಿ ಮೆರೆದಾಡಿದ ಬಂಟ ಸಮುದಾಯದ ಶ್ರೇಷ್ಠ ನಟ ಸುನಿಲ್ ಶೆಟ್ಟಿ, ಮೋಹಕ ನಟಿ ಶಿಲ್ಪಾ ಶೆಟ್ಟಿ, ರೋಹಿತ್ ಶೆಟ್ಟಿ ಮತ್ತು ಐಶ್ವರ್ಯ ರೈಯವರಂತ ಘಟಾನುಘಟಿ ತಾರೆಯರನ್ನು ಕರೆ ತಂದು ಇತಿಹಾಸ ನಿರ್ಮಿಸಿರುವುದೂ ಅವಿಸ್ಮರಣೀಯ ವಿಷಯ. ಈ ರೀತಿ ಸಮಾಜದ ಸಮಸ್ಯೆಗಳಿಗೆ ಸ್ಪಂದಿಸುವುದು, ಸಮಾಜ ಸೇವೆಯಲ್ಲಿ ತನ್ನನ್ನು ತೊಡಗಿಸಿಕೊಳ್ಳುವುದು ಐಕಳರಂತಹ ಅಸಾಮಾನ್ಯ ಸಾಧಕರಿಗೆ ಮಾತ್ರ ಸಾಧ್ಯ. ಇದೆಲ್ಲವೂ ಸಾಧನೆಯ ಮೈಲಿಗಲ್ಲುಗಳು.
ಜಾಗತಿಕ ಬಂಟರ ಸಂಘಗಳ ಒಕ್ಕೂಟಕ್ಕೆ ಆದಾಯ ತರುವ ಮೂಲಗಳಾಗಲಿ ಇತರ ವ್ಯವಸ್ಥೆಗಳಾಗಲಿ ಇಲ್ಲದೇ ಇದ್ದರೂ, ಕೇವಲ ಸಮುದಾಯದ ಹಿರಿಯರು, ಗಣ್ಯರು, ಮಹಾದಾನಿಗಳು, ಹಿತೈಷಿಗಳು, ಸ್ನೇಹಿತರು, ಅಭಿಮಾನಿಗಳೆಲ್ಲರ ಸರ್ವ ರೀತಿಯ ಸಹಕಾರದಿಂದ ಸುಂದರ, ಅಲಂಕೃತ, ವೈಭವೋಪೇತ ಒಟ್ಟು ಆರು ವಿಶ್ವ ಬಂಟ ಸಮ್ಮೇಳನಗಳನ್ನು ಆಯೋಜಿಸಿ ಯಶಸ್ಸೆಂಬ ವಿಜಯ ಮಾಲೆಯನ್ನು ಒಲಿಸಿಕೊಂಡಿರುವುದು, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿಯವರ ಸದೃಢ ನಾಯಕತ್ವ ಮತ್ತವರ ಸಮರ್ಥ ತಂಡದ ದಕ್ಷ ಕಾರ್ಯ ಕ್ಷಮತೆಗೆ ಸಾಕ್ಷಿ. ಅದರಲ್ಲೂ ಉಡುಪಿಯಲ್ಲಿ ನಡೆದ ವಿಶ್ವ ಬಂಟರ ಸಮ್ಮೇಳನ ‘ನ ಭೂತೋ’ ಅನ್ನುವಷ್ಟು ವಿಶ್ವದೆಲ್ಲೆಡೆಯ ಬಂಟರನ್ನು ಮುಟ್ಟಿತು ತಟ್ಟಿತು ಗಟ್ಟಿಗೊಳಿಸಿತು. ಈ ಸಮ್ಮೇಳನಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹಮಂತ್ರಿ ಜಿ ಪರಮೇಶ್ವರ್, ವಿಧಾನ ಸಭಾ ಸ್ಪೀಕರ್ ಯು.ಟಿ ಖಾದರ್, ಉಡುಪಿ ಜಿಲ್ಲಾ ಉಸ್ತುವಾರಿ ಮಹಿಳಾ ಮತ್ತು ಶಿಶು ಕಲ್ಯಾಣ ಇಲಾಖಾ ಸಚಿವೆ ಶೀಮತಿ ಲಕ್ಮೀ ಹೆಬ್ಬಾಳ್ಕರ್, ಬಸವರಾಜ್ ಬೊಮ್ಮಾಯಿ, ಮಹಾರಾಷ್ಟ್ರ ಮುಖ್ಯಮಂತ್ರಿ ಸನ್ಮಾನ್ಯ ಶ್ರೀ ದೇವೇಂದ್ರ ಪಡ್ನವೀಸ್, ಮುಂಬೈ ಸಂಸದರಾದ ಶ್ರೀ ಗೋಪಾಲ್ ಶೆಟ್ಟಿ, ಸಂಸದೆ ಕುಮಾರಿ ಶೋಭಾ ಕರಂದ್ಲಾಜೆ, ಶ್ರೀ ನಳಿನ್ ಕುಮಾರ್ ಕಟೀಲ್, ಶ್ರೀ ಕೋಟ ಶ್ರೀನಿವಾಸ ಪೂಜಾರಿ, ಚಲನ ಚಿತ್ರರಂಗದ ತಾರೆಗಳಾದ ರಿಷಬ್ ಶೆಟ್ಟಿ, ರಕ್ಷಿತ್ ಶೆಟ್ಟಿ, ಸುನಿಲ್ ಶೆಟ್ಟಿ, ಎಲ್ಲಾ ವಿಧಾನ ಸಭಾ ಸದಸ್ಯರು, ಖ್ಯಾತ ಪ್ರಖ್ಯಾತ ಕಲಾವಿದರು, ದೇಶದ ಹೆಮ್ಮೆಯ ಕ್ರೀಡಾ ಪಟುಗಳು, ನರ್ತಕರು, ಗಾಯಕರು ಹೀಗೆ ಗಣ್ಯಾತಿ ಗಣ್ಯರು ಬಂದು ಪ್ರಮುಖ ಆಕರ್ಷಣೆಯ ಕೇಂದ್ರವಾಗಿ ಕಂಗೊಳಿಸಿದ, ಸಮ್ಮೇಳನ 75000 ಬಂಟ ಬಂಧುಗಳು ಒಂದೇ ಕಡೆ ಸೇರಿ ಸಾಗರದಂತೆ ಎಲ್ಲಿ ನೋಡಿದರಲ್ಲಿ ಬಂಟರನ್ನು ಕಣ್ತುಂಬಿಕೊಂಡು ಊಹೆಗೂ ಮಿಗಿಲಾಗಿ ಯಶಸ್ವಿಯಾಗಿರುವುದು ಇತಿಹಾಸ. ಕೃಷ್ಣ ನಗರಿ ಕಡಗೋಲು ಕೃಷ್ಣನ ಜಗದೊಡೆಯನ ಊರು ಉಡುಪಿಯ ಹೃದಯ ಭಾಗದಲ್ಲಿ ಯಾರೂ ಕಂಡಿರದ, ಕೇಳಿರದ, ನೋಡಿರದ, ಊಹೆಯನ್ನೂ ಮಾಡದ, ಇದೇನು ಸುಂದರ ಕನಸೇ ಅನ್ನುವಂತೆ ಇಂದ್ರ ನಗರಿಯಂತೆ ಕಂಗೊಳಿಸಿ, ಸ್ವರ್ಗವೇ ಧರೆಗಿಳಿದಂತೆ ಭಾಸವಾದಂತೆ ನಡೆದ ಉಡುಪಿಯ ವಿಶ್ವ ಬಂಟರ ಸಮ್ಮೇಳನ, ಕ್ರೀಡಾಕೂಟಕ್ಕೆ ಪರ್ಯಾಯವಿಲ್ಲ ಎಂದು ಎದೆಯುಬ್ಬಿಸಿ, ಕತ್ತೆತ್ತಿ ಹೇಳಬಹುದಾಗಿದೆ. ಉಡುಪಿಯ ಸಮ್ಮೇಳನದ ಕಂಪನ್ನು ದಶ ದಿಕ್ಕುಗಳಿಗೆ ಪಸರಿಸಿದ್ದು ಬಂಟ ಸಮುದಾಯಕ್ಕೆ ಹೆಮ್ಮೆಯ ಸಂಗತಿ. ಜಾಗತಿಕ ಬಂಟರ ಸಂಘಗಳ ಒಕ್ಕೂಟವು ಕ್ರಮಿಸಿದ ಹಾದಿಯ ಕಿರು ನೋಟವನ್ನಷ್ಟೇ ಇಲ್ಲಿ ಉಲ್ಲೇಖಿಸಿದ್ದು. ಸವಿಸ್ತಾರವಾಗಿ ತಿಳಿಸುವುದಿನ್ನಷ್ಟು ಉಳಿದಿದೆ ಎಂದು ಹೇಳುತ್ತಾ ಸಾಧನೆಗಳ ಸರದಾರ ಐಕಳ ಹರೀಶ್ ಶೆಟ್ಟಿ ಮತ್ತವರ ತಂಡವನ್ನು ಅಭಿಮಾನಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತಾ ವಿರಮಿಸುತ್ತೇನೆ.
ಲೇಖನ : ನೀತಾ ರಾಜೇಶ್ ಶೆಟ್ಟಿ
















































































































