ಕ್ಯಾಂಪ್ಕೊ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿರುವ ಎಸ್.ಆರ್ ಸತೀಶ್ಚಂದ್ರರವರಿಗೆ ಪುತ್ತೂರು ಕೋ ಆಪರೇಟಿವ್ ಟೌನ್ ಬ್ಯಾಂಕ್ ವತಿಯಿಂದ ಅಭಿನಂದನಾ ಸಮಾರಂಭವನ್ನು ಬ್ಯಾಂಕಿನ ಸಭಾಂಗಣದಲ್ಲಿ ಗೌರವಪೂರ್ವಕವಾಗಿ ನಡೆಸಲಾಯಿತು. ಕಾರ್ಯಕ್ರಮದಲ್ಲಿ ಬ್ಯಾಂಕಿನ ಅಧ್ಯಕ್ಷರಾದ ಎನ್. ಕಿಶೋರ್ ಕೊಳತ್ತಾಯ ಅವರು ಅಧ್ಯಕ್ಷತೆ ವಹಿಸಿ, ವಿಶೇಷ ಅಭಿನಂದನಾ ಭಾಷಣದ ಮೂಲಕ ಪುತ್ತೂರು ಟೌನ್ ಬ್ಯಾಂಕ್ ಮತ್ತು ಸತೀಶ್ಚಂದ್ರರವರ ನಡುವಿನ ಅವಿನಾಭಾವ ಬಾಂಧವ್ಯವನ್ನು ಸ್ಮರಿಸಿದರು. ಬ್ಯಾಂಕಿನ ಅಭಿವೃದ್ಧಿ ಹಾಗೂ ಪ್ರಗತಿಪರ ಚಟುವಟಿಕೆಗಳಲ್ಲಿ ಅವರು ನೀಡಿರುವ ಮಾರ್ಗದರ್ಶನವನ್ನು ವಿಶೇಷವಾಗಿ ಉಲ್ಲೇಖಿಸಿ, ಬ್ಯಾಂಕಿನ ಪರವಾಗಿ ಹೃತ್ಪೂರ್ವಕ ಅಭಿನಂದನೆಗಳನ್ನು ಅರ್ಪಿಸಿದರು. ಮುಂದುವರೆದು ಮಾತನಾಡಿದ ಅವರು, ನೂತನ ಕ್ಯಾಲೆಂಡರ್ ವರ್ಷದಲ್ಲಿ ಬ್ಯಾಂಕ್ ಹಲವು ವಿನೂತನ ಕಾರ್ಯಕ್ರಮಗಳನ್ನು ಜಾರಿಗೆ ತರುವ ಉದ್ದೇಶವಿದ್ದು, ಬ್ಯಾಂಕಿನ ಡಿಜಿಟಲೀಕರಣಕ್ಕೆ ವಿಶೇಷ ಪ್ರಾಧಾನ್ಯತೆ ನೀಡಲಾಗುತ್ತಿದೆ ಎಂದರು. ಈ ವರ್ಷಾಂತ್ಯದೊಳಗೆ ಬ್ಯಾಂಕಿನ ಸಂಪೂರ್ಣ ಡಿಜಿಟಲೀಕರಣ ಕಾರ್ಯ ಪೂರ್ಣಗೊಳ್ಳುವ ವಿಶ್ವಾಸವನ್ನೂ ವ್ಯಕ್ತಪಡಿಸಿದರು.

ಅಭಿನಂದನೆ ಸ್ವೀಕರಿಸಿದ ಎಸ್.ಆರ್. ಸತೀಶ್ಚಂದ್ರರು, ತಮ್ಮ ಬಾಲ್ಯದಿಂದಲೂ ಪುತ್ತೂರು ಟೌನ್ ಬ್ಯಾಂಕಿನೊಂದಿಗೆ ಹೊಂದಿರುವ ಭಾವನಾತ್ಮಕ ಹಾಗೂ ನಿಕಟವಾದ ಸಂಬಂಧವನ್ನು ನೆನೆದು ಸಂತಸ ವ್ಯಕ್ತಪಡಿಸಿದರು. ಸಹಕಾರಿ ಕ್ಷೇತ್ರದಲ್ಲಿ ಸತ್ಯ, ಧರ್ಮ ಮತ್ತು ಪರಿಶ್ರಮವೇ ಯಶಸ್ಸಿನ ಮೂಲವೆಂದು ತಮ್ಮ ಅನುಭವ ಹಂಚಿಕೊಂಡ ಅವರು, ಸಹಕಾರ ಸಂಸ್ಥೆಗಳ ಪ್ರತಿಯೊಬ್ಬ ಸಿಬ್ಬಂದಿಗಳು ನಿಷ್ಠೆಯಿಂದ ಕಾರ್ಯ ನಿರ್ವಹಿಸಿದರೆ ಅದ್ಭುತ ಸಾಧನೆ ಸಾಧ್ಯವೆಂದು ಸಲಹೆ ನೀಡಿದರು. ಪುತ್ತೂರು ನಗರದ ಅತಿ ಹಿರಿಯ ಹಾಗೂ ವಿಶ್ವಾಸಾರ್ಹ ಸಹಕಾರಿ ಬ್ಯಾಂಕ್ ಆಗಿ ಗುರುತಿಸಿಕೊಂಡಿರುವ ಟೌನ್ ಬ್ಯಾಂಕ್ ತಮ್ಮನ್ನು ಸತ್ಕರಿಸಿದ ಬಗ್ಗೆ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸಿದರು. ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ. ಶೇಖರ ಶೆಟ್ಟಿ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ಹಿರಿಯ ನಿರ್ದೇಶಕ ಚಂದ್ರಶೇಖರ ರಾವ್ ಬಪ್ಪಳಿಗೆ ಅವರು ಸನ್ಮಾನಿತರನ್ನು ಪರಿಚಯಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಬ್ಯಾಂಕಿನ ಉಪಾಧ್ಯಕ್ಷ ಶ್ರೀಧರ ಗೌಡ ಧನ್ಯವಾದಗಳನ್ನು ಸಲ್ಲಿಸಿದರು.
ಸಮಾರಂಭದಲ್ಲಿ ಕ್ಯಾಂಪ್ಕೊ ನಿರ್ದೇಶಕರಾದ ಮುರಳಿಕೃಷ್ಣ ಕೆ.ಎನ್, ಸರಸ್ವತಿ ಸೌಹಾರ್ದ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಸಂತಕುಮಾರ್, ಶಿವರಂಜನ್, ಬ್ಯಾಂಕಿನ ನಿರ್ದೇಶಕರಾದ ಚಂದ್ರಶೇಖರ ರಾವ್ ಬಪ್ಪಳಿಗೆ, ಕಿರಣ್ ಕುಮಾರ್ ರೈ, ರಾಜು ಶೆಟ್ಟಿ, ರಾಮಚಂದ್ರ ಕಾಮತ್, ಮಲ್ಲೇಶ್ ಕುಮಾರ್, ಶ್ರೀಧರ ಪಟ್ಲ, ಶ್ರೀಮತಿ ಸೀಮಾ ಎಮ್ ಎ, ಟೌನ್ ಬ್ಯಾಂಕಿನ ಪುತ್ತೂರು ಶಾಖಾಧಿಕಾರಿ ಚಿದಂಬರ, ಸಿಬ್ಬಂದಿ ವರ್ಗ ಸೇರಿದಂತೆ ಅನೇಕ ಗಣ್ಯರು ಹಾಜರಿದ್ದರು.















































































































