ಮುಂಬಯಿಯ ಜಾತಿ ಸಂಘಟನೆಗಳಲ್ಲಿ ಮುಂಚೂಣಿಯಲ್ಲಿರುವ ಬೋಂಬೆ ಬಂಟ್ಸ್ ಅಸೋಸಿಯೇಶನ್ ತನ್ನ 42ನೇ ವಾರ್ಷಿಕ ಮಹಾಸಭೆಯನ್ನು ನವಿ ಮುಂಬಯಿ ಜೂಹಿನಗರದ ಬಂಟ್ಸ್ ಸೆಂಟರಿನ ಸೌಮ್ಯಲತಾ ಸದಾನಂದ ಶೆಟ್ಚಿ ಸಭಾಗೃಹದಲ್ಲಿ ನವೆಂಬರ್ 16 ರಂದು ಬೆಳಿಗ್ಗೆ 10.30 ಗಂಟೆಗೆ ಸರಿಯಾಗಿ ನಡೆಸಿ ಅದೇ ದಿನ ಬಹಿರಂಗ ಅಧಿವೇಶನ, ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಬೋಂಬೆ ಬಂಟ್ಸ್ ಅಸೋಸಿಯೇಶನ್ ತನ್ನ 42ನೇ ವಾರ್ಷಿಕ ಮಹಾಸಭೆಯನ್ನು 21ನೆಯ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿರುವ ನ್ಯಾ. ಡಿ.ಕೆ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಮತ್ತು ಉಪಾಧ್ಯಕ್ಷ ಐಕಳ ಕಿಶೋರ್ ಕೆ ಶೆಟ್ಟಿ, ಗೌ. ಪ್ರ ಕಾರ್ಯದರ್ಶಿ ನ್ಯಾ. ಶೇಖರ ಆರ್ ಶೆಟ್ಟಿ, ಗೌ. ಕೋಶಾಧಿಕಾರಿ ಸಿ.ಎ. ವಿಶ್ವನಾಥ ಎಸ್ ಶೆಟ್ಟಿ ಹಾಗೂ ಇನ್ನುಳಿದವರ ಸಮಕ್ಷತೆಯಲ್ಲಿ ಜರಗಿತು.

ಆರಂಭಿಕವಾಗಿ ಅಧ್ಯಕ್ಷರ ಸ್ವಾಗತ ಭಾಷಣದಿಂದ ಪ್ರಾರಂಭಗೊಂಡು, ಗೌ. ಪ್ರ. ಕಾರ್ಯದರ್ಶಿ ನ್ಯಾ. ಶೇಖರ ಆರ್. ಶೆಟ್ಟಿಯವರು 09-03-2025 ರಂದು ನಡೆದ 41ನೇ ವಾರ್ಷಿಕ ಮಹಾಸಭೆಯ ವರದಿ ಮತ್ತು ಗತವರ್ಷದ 2024- 2025ರ ವಾರ್ಷಿಕ ವರದಿಯನ್ನು ಮಂಡನೆ ಮಾಡಿದರೆ, 2024-2025ರ ಸಾಲಿನ ವಾರ್ಷಿಕ ಅಯ- ವ್ಯಯಗಳ ಪಟ್ಟಿ (Balance sheet) ಮತ್ತು ಲೆಕ್ಕಪತ್ರವನ್ನು (Income & Expenditure Ac) ಗೌ. ಕೋಶಾಧಿಕಾರಿ, ಸಿ.ಎ. ವಿಶ್ವನಾಥ ಎಸ್ ಶೆಟ್ಟಿಯವರು ಮಂಡಿಸಿದರು. ಆನಂತರ ಮುಂದಿನ ವರ್ಷದ ಶಾಸನಬದ್ದ (Statutory) ಲೆಕ್ಕ ಪರಿಶೋಧಕರ ಮತ್ತು ಅಂತರ್ (internal) ಲೆಕ್ಕ ಪರಿಶೋಧಕರ ನೇಮಕವನ್ನು ಈ ಮೊದಲು ನಡೆಸುತ್ತಿದ್ದವರನ್ನೇ ಸದಸ್ಯರ ಸರ್ವಾನುಮತದಿಂದ ಮರು ನೇಮಿಸಲಾಯಿತು. ತದನಂತರ, ಸದಸ್ಯರಿಂದ ಮಾತು ಎಂಬುದಾಗಿ, ಸಂಸ್ಥೆಯ ಮಾಜಿ ಅಧ್ಯಕ್ಷ ಹಾಗೂ ಉನ್ನತ ಶಿಕ್ಷಣದ ಕಾರ್ಯಾಧ್ಯಕ್ಷರಾದ ಶ್ರೀಯುತ ರತ್ನಾಕರ ವಿ ಶೆಟ್ಟಿ, ಸದಸ್ಯರೋರ್ವರಾದ ಶ್ರೀಯುತ ಟಿ.ಆರ್ ಶೆಟ್ಟಿ ಮತ್ತು ನಿಕಟಪೂರ್ವ ಅಧ್ಯಕ್ಷ ಸಿ.ಎ ಸುರೇಂದ್ರ ಕೆ ಶೆಟ್ಚಿಯವರು ಸಂಧರ್ಬೊಚಿತವಾಗಿ ಮಾತನಾಡಿದರು
ಅಧ್ಯಕ್ಷರು ತಮ್ಮ ಅಧ್ಯಕ್ಷ ಭಾಷಣದಲ್ಲಿ, ಅಸೋಸಿಯೇಶನ್ ನ ಮುಖ್ಯ ಧ್ಯೇಯಗಳಾದ ಸ್ವಜಾತಿ ಬಾಂಧವರನ್ನು ಒಗ್ಗೂಡಿಸಿ, ಮೈತ್ರಿ ಒಗ್ಗಟ್ಟನ್ನು ಬೆಳೆಸಿ ಆರ್ಥಿಕವಾಗಿ ಹಿಂದುಳಿದವರಿಗೆ ಯಥೋಚಿತ ಸಹಾಯ ನೀಡಬೇಕು ಎಂಬ ಮುಖ್ಯ ಉದ್ದೇಶದಿಂದಲೇ ನಾವು ಒಗ್ಗಟ್ಟಾಗಿ ಶೈಕ್ಷಣಿಕ, ಧಾರ್ಮಿಕ, ವೈದಕೀಯ, ಸಮಾಜ ಕಲ್ಯಾಣ, ಸಾಂಸ್ಕೃತಿಕ ಇನ್ನಿತರ ಚಟುವಟಿಕೆಗಳನ್ನು ನಿರ್ವಹಿಸುತ್ತಾ ಬಂದಿದ್ದೇವೆ ಎಂದು ಹೇಳುತ್ತಾ, ಸಂಸ್ಥೆಯ ಮುಖ್ಯ ದಾನಿಗಳಾದ ಆಲ್ ಕಾರ್ಗೋ ಲೋಜಿಸ್ಟಿಕ್ ಲಿಮಿಟೆಡ್ ಇದರ ಸಿ.ಎಮ್.ಡಿ ಡಾ| ಶಶಿಕಿರಣ್ ಶೆಟ್ಟಿ, ಶ್ರೀ ಶಶಿಧರ ಶೆಟ್ಟಿ ಬರೋಡ ಹಾಗೂ ಇನ್ನುಳಿದ ಎಲ್ಲಾ ದಾನಿಗಳನ್ನು ಸ್ಮರಿಸುತ್ತಾ, ಈಗಾಗಲೆ ದೊಡ್ಡ ಮೊತ್ತವನ್ನು ಕೊಟ್ಟು ಸಹಕರಿಸುವ ನಿರ್ಧಾರ ತೆಗೆದುಕೊಂಡ IBPS ಸಂಸ್ಥೆಯ ಆಡಳಿತ ನಿರ್ದೇಶಕರಾದ ಶ್ರೀ ಹರಿದೀಶ್ ಕುಮಾರ್ ಬಿ ಅವರಿಗೆ ಧನ್ಯವಾದಗಳನ್ನು ಅರ್ಪಿಸಿದರೆ, ಕೊನೆಯಲ್ಲಿ ಸಾಂಪ್ರದಾಯಿಕವಾಗಿ ಕಾರ್ಯದರ್ಶಿಯವರು ಧನ್ಯವಾದಗೈದರು. ವಾರ್ಷಿಕ ಮಹಾಸಭೆಯ ಬಳಿಕ ವರ್ಷಂಪ್ರತಿ ನಡೆಯುವ ಬಹಿರಂಗ ಅಧಿವೇಶನ, ಸಾಧಕರಿಗೆ ಸನ್ಮಾನ, ಪ್ರತಿಭಾ ಪುರಸ್ಕಾರ ಸಮಾರಂಭವನ್ನು ನ್ಯಾ. ಡಿ.ಕೆ. ಶೆಟ್ಟಿಯವರ ಅಧ್ಯಕ್ಷತೆಯಲ್ಲಿ, ಶ್ರೀಯುತ ಪದ್ಮನಾಭ ಎಸ್. ಪಯ್ಯಡೆ, ಬಂಟ್ಸ್ ಸಂಘ ಮುಂಬಯಿ ಇದರ ಮಾಜಿ ಅಧ್ಯಕ್ಷ ಹಾಗೂ ಸಂಪೂರ್ಣ ಹೋಟೇಲ್ಸ್ ನ ಆಡಳಿತ ನಿರ್ದೇಶಕ ಅವರ ದಿವ್ಯಹಸ್ತದಲ್ಲಿ ದೀಪ ಪ್ರಜ್ವಲಿಸಿ ಚಾಲನೆ ನೀಡಿದರೆ, ಉಪಸಮಿತಿ ಕಾರ್ಯಾಧ್ಯಕ್ಷ ಶ್ರೀ ಗಜೇಂದ್ರ ಶೆಟ್ಟಿಯವರ ಪ್ರಾರ್ಥನೆಯೊಂದಿಗೆ, ವೇದಿಕೆಯಲ್ಲಿದ ಮುಖ್ಯ ಅತಿಥಿ ಭವಾನಿ ಶಿಪ್ಪಿಂಗ್ ಸರ್ವಿಸಸ್ ಇದರ ಸಿ.ಎಮ್.ಡಿ ಕುಸುಮೋಧರ ಶೆಟ್ಟಿ ಮತ್ತು ಗೌರವ ಅತಿಥಿಗಳಾದ ಲಯನ್ ಸಂತೋಷ್ ಶೆಟ್ಟಿ, ಡಾ. ಸ್ವರೂಪ್ ಎಸ್. ಹೆಗ್ಡೆ, ಏಳಿಂಜೆ ಅನಿಲ್ ಶೆಟ್ಟಿ, ಗಣೇಶ್ ಶೆಟ್ಟಿ ಹಾಗೂ ವೇದಿಕೆಯಲ್ಲಿದ್ದ ಎಲ್ಲಾ ಪದಾಧಿಕಾರಿಗಳು ದೀಪ ಪ್ರಜ್ವಲನೆಯಲ್ಲಿ ಭಾಗಿಗೊಂಡರು.
ಬಂಟ ಗೀತೆಯೊಂದಿಗೆ ಆರಂಭಗೊಂಡ ಸಭಾ ಕಾರ್ಯಕ್ರಮದಲ್ಲಿ, ಸ್ವಾಗತ ಭಾಷಣವನ್ನು ಉಪಾಧ್ಯಕ್ಷ ಐಕಳ ಕಿಶೋರ್ ಕೆ ಶೆಟ್ಟಿಯವರು ಮಾಡಿದರೆ ಅನುಕ್ರಮವಾಗಿ ಪದ್ಮನಾಭ ಎಸ್. ಪಯ್ಯಡೆ, ಕುಸುಮೋಧರ ಶೆಟ್ಟಿ ಮತ್ತು ಲಯನ್ ಸಂತೋಷ್ ಶೆಟ್ಟಿ, ಡಾ. ಸ್ವರೂಪ್ ಎಸ್. ಹೆಗ್ಡೆ, ಏಳಿಂಜೆ ಅನಿಲ್ ಶೆಟ್ಟಿ, ಗಣೇಶ್ ಶೆಟ್ಟಿ ಅವರುಗಳನ್ನು ಅವರವರ ಕ್ಷೇತ್ರಗಳಲ್ಲಿ ಗೈದ ಸಾಧನೆಗಾಗಿ ಸ್ಮರಣಿಕೆ (memento), ಉಲ್ಲೇಖ ಪತ್ರ (citation) ಹೂಗುಚ್ಛಗಳೊಂದಿಗೆ ಶಾಲು ಹೊದಿಸಿ, ಪರಿಚಯ, ಸಾಧನೆಗಳ ವಿವರಗಳನ್ನೋದಿ ಸನ್ಮಾನಿಸಲಾಯಿತು. ಬಂಟ ಸಮುದಾಯದ ಮುತ್ಸದ್ದಿ, ಮಾಜಿ ಅಧ್ಯಕ್ಷ ಪ್ರವೃತ್ತಿಯಲ್ಲಿ ನ್ಯಾಯವಾದಿಗಳಾದ ಸಮಾಜದ ಹಿರಿಯ ಗಣ್ಯವ್ಯಕ್ತಿ ನ್ಯಾ. ಆರ್.ಸಿ. ಶೆಟ್ಟಿಯವರನ್ನು ಎಲ್ಲರ ಸಮ್ಮುಖದಲ್ಲಿ ಸ್ಮರಣಿಕೆ (memento), ಉಲ್ಲೇಖ ಪತ್ರ (citation) ಹೂಗುಚ್ಛಗಳೊಂದಿಗೆ ಶಾಲು ಹೊದಿಸಿ, ಪರಿಚಯ, ಸಾಧನೆಗಳ ವಿವರಗಳನ್ನು ಓದಿ ಸನ್ಮಾನಿಸಲಾಯಿತು. ಅಲ್ಲದೆ IBPS ಸಂಸ್ಥೆಯ ಆಡಳಿತ ನಿರ್ದೇಶಕರಾದ ಹರಿದೀಶ್ ಕುಮಾರ್ ಬಿ ಆವರನ್ನು ಎಲ್ಲರ ಸಮ್ಮುಖದಲ್ಲಿ ಹೂಗುಚ್ಛಗಳೊಂದಿಗೆ ಶಾಲು ಹೊದಿಸಿ, ಸನ್ಮಾನಿಸಲಾಯಿತು.
ಶಿಕ್ಷಣ ವಿಭಾಗದ ಕಾರ್ಯಾದಕ್ಷರಾದ ಶ್ರೀಧರ ಕೆ. ಶೆಟ್ಟಿಯವರನ್ನು ಸಂಸ್ಧೆಗೆ ಗೈದ ಅವರ ಅವಿರತ ಶ್ರಮಕ್ಕಾಗಿ ಗೌರವಿಸಲಾಯಿತು. ಅಲ್ಲದೆ ಅಧ್ಯಕ್ಷರ ದಕ್ಷ ನಾಯಕತ್ವಕ್ಕೆ ಅವರನ್ನೂ ಗೌರವಿಸಲಾಯಿತು. ಸನ್ಮಾನಕ್ಕೆ ಉತ್ತರಿಸುತ್ತಾ ಮಾತನಾಡಿದ ಅತಿಥಿಗಳು ಮತ್ತು ಸನ್ಮಾನಿತರು ಸನ್ಮಾನಕ್ಕೆ ಕೃತಜ್ಞತೆಯನ್ನು ಸಲ್ಲಿಸುತ್ತಾ ತಮ್ಮ ತಮ್ಮ ಸಾಧನೆ ಹಾಗೂ ಕಾರ್ಯ ಕ್ಷೇತ್ರಗಳಲ್ಲಿ ಮಾಡಿದ ಅಭಿವೃದ್ದಿಗಳ ಬಗ್ಗೆ ಚುಟುಕಾಗಿ ಸಭಿಕರಿಗೆ ಮನಮುಟ್ಟುವಂತೆ ಹೇಳಿ, ಅಸೋಸಿಯೇಷನ್ ಅಧ್ಯಕ್ಷ, ಪದಾಧಿಕಾರಿಗಳು ಮತ್ತು ಕಾರ್ಯಕಾರಿ ಸಮಿತಿಯ ಕಾರ್ಯವೈಖರಿಯನ್ನು ಪ್ರಶಂಸಿದರು. ಬಹಿರಂಗ ಅಧಿವೇಶನದ ಮುಖ್ಯ ಭಾಗಗಳೊಂದಾದ 10 ಮತ್ತು 12ನೇ ತರಗತಿಯಲ್ಲಿ ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾದ ಮಕ್ಕಳಿಗೆ ಸನ್ಮಾನ, ವಿದ್ಯಾರ್ಥಿ ವೇತನ ಮತ್ತು ಪ್ರಮಾಣಪತ್ರ ನೀಡಿ ಹಾಗೂ ಸಿ.ಎ ಪರೀಕ್ಷೆಯಲ್ಲಿ ಉತ್ತೀರ್ಣರಾದ ಮಕ್ಕಳನ್ನೂ ಗೌರವಿಸಲಾಯಿತು. ಕೊನೆಯಲ್ಲಿ, ಕಾರ್ಯದರ್ಶಿಯವರ ಧನ್ಯವಾದ ಸಮರ್ಪಣೆ ಹಾಗೂ ರಾಷ್ಟ್ರಗೀತೆಯೊಂದಿಗೆ ಸಭಾಕಾರ್ಯಕ್ರಮ ಮುಕ್ತಾಯಗೊಂಡಿತು.









































































































