ಯೋಗವನ್ನು ಜಾಗತಿಕ ವೇದಿಕೆಗೆ ಕೊಂಡೊಯ್ದ ನಮ್ಮ ಪ್ರಧಾನ ಮಂತ್ರಿಗಳ ಪ್ರಯತ್ನದಿಂದ ನ್ಯಾಚುರೋಪತಿ ಹಾಗೂ ಯೋಗ ವೈದ್ಯಕೀಯ ಕ್ಷೇತ್ರಕ್ಕೆ ವಿಶ್ವದಾದ್ಯಂತ ಹೊಸ ಅವಕಾಶಗಳು ಲಭಿಸುತ್ತಿವೆ ಎಂದು ಪುಣೆ ಮೂಲದ ಆತ್ಮನ್ತನ್ ವೆಲ್ನೆಸ್ ಸೆಂಟರ್ನ ವೈದ್ಯಕೀಯ ನಿರ್ದೇಶಕ ಹಾಗೂ ಸಿಇಒ ಡಾ. ಮನೋಜ್ ಕುಟ್ಟೇರಿ ನುಡಿದರು. ಅವರು ಆಳ್ವಾಸ್ ನ್ಯಾಚುರೋಪತಿ ಮತ್ತು ಯೋಗ ವಿಜ್ಞಾನಗಳ ಕಾಲೇಜಿನಲ್ಲಿ ನಡೆದ 2025–26ನೇ ಸಾಲಿನ ಪದವಿ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳ ಆಗಮನ ಕಾರ್ಯಕ್ರಮದಲ್ಲಿ ಮಾತನಾಡಿದರು. ವಿದ್ಯಾರ್ಥಿಗಳು ಪ್ರತಿ ದಿನವೂ ತಮ್ಮ ಜ್ಞಾನ ಮತ್ತು ಕೌಶಲ್ಯವನ್ನು ನವೀಕರಿಸುವ ಅಭ್ಯಾಸ ಬೆಳೆಸಿಕೊಳ್ಳಬೇಕು. ಕಾಲೇಜು ಮಾರ್ಗದರ್ಶನ ನೀಡಬಹುದು, ಆದರೆ ನಿಜವಾದ ಬೆಳವಣಿಗೆ ನಮ್ಮ ಪ್ರಯತ್ನದಲ್ಲಿದೆ. ನ್ಯಾಚುರೋಪತಿ ಸಾಮಾನ್ಯ ವೈದ್ಯಕೀಯ ಶಾಖೆಯಲ್ಲ. ಇದು ಭವಿಷ್ಯದ ಭರವಸೆಯ ವೈದ್ಯಕೀಯ ಶಾಖೆ.

ಹೆಚ್ಚುತ್ತಿರುವ ಸಮಗ್ರ ಆರೋಗ್ಯದ ಪ್ರಾಮುಖ್ಯತೆಯನ್ನು ಉಲ್ಲೇಖಿಸಿದ ಅವರು, ನ್ಯಾಚುರೋಪತಿ ವೈದ್ಯರು ವೈಯಕ್ತಿಕ ಚಿಕಿತ್ಸೆಯತ್ತ ಹೆಚ್ಚು ಗಮನ ಹರಿಸಬೇಕು. ಈ ಕ್ಷೇತ್ರದಲ್ಲಿ ಅನೇಕ ಅವಕಾಶಗಳಿವೆ. ವೈದ್ಯರಾಗಿ, ಆಕ್ಯುಪಂಕ್ಚರಿಸ್ಟ್ ಆಗಿ, ಪೌಷ್ಟಿಕ ತಜ್ಞರಾಗಿ, ಕಾರ್ಪೊರೇಟ್ ವೆಲ್ನೆಸ್ ಕೋಚ್ಗಳಾಗಿ, ಫಿಟ್ನೆಸ್ ತರಬೇತುದಾರರಾಗಿ, ಶೈಕ್ಷಣಿಕ ಕ್ಷೇತ್ರದಲ್ಲಿ ಹಾಗೂ ಡಿಜಿಟಲ್ ವೆಲ್ನೆಸ್ ವೃತ್ತಿಪರರಾಗಿ ಕೆಲಸ ಮಾಡಬಹುದು. ಭಾರತದಲ್ಲೇ ಕೆಲ ಪೌಷ್ಟಿಕ ತಜ್ಞರು ಒಂದೇ ಸಲಹೆಗೆ ರೂ.1.5 ಲಕ್ಷ ವರೆಗೆ ಸಂಪಾದಿಸುತ್ತಿದ್ದಾರೆ. ಇದು ಈ ಕ್ಷೇತ್ರದ ಅಪಾರ ಸಾಧ್ಯತೆಯನ್ನು ತಿಳಿಸುತ್ತದೆ ಎಂದರು. ಕೃತಕ ಬುದ್ಧಿಮತ್ತೆ ಈ ಕ್ಷೇತ್ರದಲ್ಲಿ ಬೆಳೆಯುತ್ತಿದ್ದರೂ, ವೈಯಕ್ತಿಕ ಸ್ಪರ್ಶ, ಮಾನವ ಮನಸ್ಸಿನ ಅರ್ಥೈಸುವಿಕೆ ಮತ್ತು ಸಹಾನುಭೂತಿಯನ್ನು ಎಐ ಬದಲಾಯಿಸಲಾರದು. ಈ ಹಿನ್ನಲೆಯಲ್ಲಿ ನ್ಯಾಚುರೋಪತಿ ವೈದ್ಯರ ಪಾತ್ರ ಯಾವತ್ತೂ ವಿಶಿಷ್ಟವಾಗಿಯೇ ಇರುತ್ತದೆ ಎಂದು ಅಭಿಪ್ರಾಯಪಟ್ಟರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ ಅಧ್ಯಕ್ಷತೆ ವಹಿಸಿದ್ದರು. ಪ್ರಾಂಶುಪಾಲೆ ಡಾ| ವನಿತಾ ಶೆಟ್ಟಿ, ಉಪಪ್ರಾಂಶುಪಾಲೆ ಡಾ| ವಿದ್ಯಾ ಆಶ್ರಿತಾ ಶೆಟ್ಟಿ ಹಾಗೂ ನಿರ್ವಹಣಾ ಅಧಿಕಾರಿ ಡಾ| ಪ್ರಜ್ಞಾ ಆಳ್ವ ಉಪಸ್ಥಿತರಿದ್ದರು. ತೃಷಾ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು.





































































































