ರೋಟರಿ ಕ್ಲಬ್ ಕಾರ್ಕಳ ಪ್ರಾಯೋಜಿತ ರೋಟರಿ ಸಮುದಾಯ ದಳ ಕಲ್ಲಂಬಾಡಿ ಪದವು ಇದರ ವತಿಯಿಂದ ಕಾರ್ಕಳ ಕಣಂಜಾರು ಹೊಸ ಬೆಳಕು ಆಶ್ರಮಕ್ಕೆ ದೀಪಾವಳಿಯ ಪ್ರಯುಕ್ತ ಆಶ್ರಮ ವಾಸಿಗಳಿಗೆ ಮಧ್ಯಾಹ್ನದ ಊಟ, ತಿಂಡಿ ತಿನಿಸುಗಳು ಹಾಗೂ ಹಣ್ಣನ್ನು ನೀಡಲಾಯಿತು. ರೋಟರಿ ಕ್ಲಬ್ ಕಾರ್ಕಳ ಇದರ ಅಧ್ಯಕ್ಷ ನವೀನ್ ಚಂದ್ರ ಶೆಟ್ಟಿ ಮಾತನಾಡುತ್ತಾ, ಆಶ್ರಮದಲ್ಲಿರುವ ಹಿರಿಯರು ಅನುಭವಿಗಳಾಗಿದ್ದು ಸಮಾಜದ ಮಾರ್ಗದರ್ಶಕರಾಗಿರಬೇಕಾದವರು. ಆದರೆ ಕಾಲನ ಕೈಗೆ ಸಿಲುಕಿ ಇಂದು ಆಶ್ರಮದ ವಾಸಿಗಳಾಗಿದ್ದಾರೆ. ಇವರನ್ನು ನೋಡಿಕೊಳ್ಳುತ್ತಿರುವ, ಆರೈಕೆ ಮಾಡುತ್ತಿರುವ ಆಶ್ರಮದ ಮುಖ್ಯಸ್ಥರು, ಸಿಬ್ಬಂದಿ ವರ್ಗದವರ ಕಾಳಜಿ, ತ್ಯಾಗ, ಸೇವೆಯು ಪ್ರಶಂಸನೀಯ ಎಂದರು.

ರೋಟರಿ ಕ್ಲಬ್ಬಿನ ಕಾರ್ಯದರ್ಶಿ ಚೇತನ್ ನಾಯಕ್, ಆರ್.ಸಿ.ಸಿ ಅಧ್ಯಕ್ಷ ಸುರೇಶ ಆಚಾರ್ಯ, ಕಾರ್ಯದರ್ಶಿ ಜಗದೀಶ್ ನಾಯಕ್ ಹಾಗೂ ಹಿರಿಯ ರೊಟೇರಿಯನ್ ಜಗದೀಶ್ ಟಿ ಎ. ವೇದಿಕೆಯಲ್ಲಿ ಉಪಸ್ಥಿತರಿದ್ದು ಶುಭ ಹಾರೈಸಿದರು. ಆಶ್ರಮವಾಸಿಗಳಿಬ್ಬರು ಆಶ್ರಮದ ದಿನಚರಿಯ ಬಗ್ಗೆ ಮಾಹಿತಿ ನೀಡಿ, ತಮ್ಮ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡು ಮೆಚ್ಚುಗೆಯ ಮಾತುಗಳನ್ನು ಆಡಿದರು. ಕ್ಲಬ್ಬಿನ ಸದಸ್ಯರಾದ ಸುರೇಶ್ ನಾಯಕ್, ವಸಂತ್ ಎಂ, ಸತೀಶ್ ಶೆಟ್ಟಿ, ಬಾಲಕೃಷ್ಣ ದೇವಾಡಿಗ, ಹರ್ಷಿಣಿ ವಿಜಯರಾಜ್, ಗೀತಾ ಕಾಮತ್ ಉಪಸ್ಥಿತರಿದ್ದರು.





































































































