ಅವನ ಹೆಸರು ಹಾಗಲ್ಲ. ಅದ್ಯಾಕೆ ಅವ? ನನಗಿಂತ ನಾಲ್ಕಾರು ವರ್ಷ ಮೊದಲೇ ಜನ್ಮ ಪಡೆದಾತ. ಏಕವಚನ ಏಕೆಂದರೆ, ಅವನ ಒಡ ಹುಟ್ಟಿದ ತಂಗಿಯರು, ಅಳಿಯ ಸೇರಿದಂತೆ ಆತನನ್ನು ಯಾರೂ ಬಹುವಚನದಲ್ಲಿ ಕರೆದುದು ಇಲ್ಲ. ಆ ಹೆಸರಿನ ಅನೇಕರು ಇದ್ದರು ನಮ್ಮೂರಿನಲ್ಲಿ. ಅವರನ್ನು ನಿರ್ದಿಷ್ಟವಾಗಿ ಗುರುತಿಸಲು, ಅವರೆಲ್ಲರ ಹೆಸರಿನ ಮುಂದೆ ಮನೆ ಹೆಸರು ಸೇರಿಸುತ್ತಿದ್ದರು. ಮುಲ್ಲಡ್ಕ ಬೊಗ್ಗು, ಹೊಸವಕ್ಲು ಬೊಗ್ಗು, ಹಾಡಿಮನೆ ಬೊಗ್ಗು, ಕೋಡಿಮನೆ ಬೊಗ್ಗು… ಹೀಗೆ. ಆದರೆ ನಾನು ಹೇಳ ಹೊರಟಿರುವ ಬೊಗ್ಗು, ಮನೆಯ ಹೆಸರಿನಿಂದಾಗಲಿ, ಅಪ್ಪನ ಹೆಸರಿನಿಂದಾಗಲಿ ಗುರುತಿಸಿಕೊಂಡಿಲ್ಲ. ಆತನಿಗೆ ಹೆಸರಿಗೊಂದು ಹೆಸರಿತ್ತಷ್ಟೇ ವಿನಾಃ ತನ್ನದೇ ಆದ ಅಸ್ಮಿತೆ ಇರಲಿಲ್ಲ. ಆ ಹೆಸರಿನಿಂದ ಕರೆದರೆ ಓಗೊಡುತ್ತಿರಲಿಲ್ಲ, ತಿರುಗಿ ನೋಡುತ್ತಿದ್ದ. ಆದರೆ ಆ ಹೆಸರಿನಿಂದ ಹೊರಗಿನವರು ಯಾರೂ ಕರೆದುದಿಲ್ಲ. ತೀರಾ ಅಗತ್ಯ ಬಿದ್ದರೆ, “ಅವ ಮೂಗ” ಎಂದೇ ಜನ ಅವನನ್ನು ಹಿಂದಿನಿಂದ ಕರೆಯುತ್ತಿದ್ದರು. ಆ ಹೆಸರು ಕೇಳಿದಾಗ, ಓದಿದಾಗಲೆಲ್ಲಾ ನನಗೆ ಈ ಬೊಗ್ಗುನ ರೂಪ ಕಣ್ಣೆದುರು ನಿಲ್ಲುತ್ತದೆ. ಆರಡಿಗೂ ಮಿಕ್ಕಿದ ಎತ್ತರದ, ಬಿದಿರಿನಂತೆ ನೆಟ್ಟಗಿನ, ಎಣ್ಣೆಗಪ್ಪು ಬಡಕಲು ಶರೀರ. ಕಪ್ಪು ಪಟ್ಟೆನೂಲಿನ ಉಡಿದಾರ. ಬಡವರು ಮಾನ ಮುಚ್ಚಿಕೊಳ್ಳಲು ಲಂಗೋಟಿ ಧರಿಸುತ್ತಿದ್ದ ಕಾಲ ಅದು. ಲಂಗೋಟಿ ಧಾರಣೆಗೆ ಉಡಿದಾರ ಅವಶ್ಯಕ. ದಪ್ಪದ ಹತ್ತಿನೂಲಿನ ದಾರವನ್ನೇ “ಪಟ್ಟೆನೂಲು” ಅರ್ಥಾತ್ ರೇಷ್ಮೆ ದಾರ ಎನ್ನುವುದು ವಾಡಿಕೆ ಆ ಕಾಲದಲ್ಲಿ ನಮ್ಮ ಕಡೆ. ಹೆಚ್ಚಿನವರ ಸೊಂಟದ ಸುತ್ತ ಬೆಳ್ಳಿ ಸರಿಗೆಯಿಂದ ನೇಯ್ದ “ನೂಲು” ಇರುತ್ತಿತ್ತು. ಉಳ್ಳವರ ಮಕ್ಕಳಲ್ಲಿ ಬಂಗಾರದ ಸೊಂಟದ ನೂಲು ಇರುತ್ತಿತ್ತು. ಆದರೆ ಚಿನ್ನದ ಉಡಿದಾರಕ್ಕೆ ಕೌಪೀನ ಕಟ್ಟಿಕೊಂಡವರನ್ನು ನಾನು ಕಂಡಿಲ್ಲ. ಹನ್ನೆರಡನೆಯ ಶತಮಾನದ ಕೊನೆಯಲ್ಲಿ ಮಲಬಾರಿಗೆ ಭೇಟಿ ನೀಡಿದ್ದ ವೆನಿಸ್ ನಗರದ ಮಾರ್ಕೋ ಪೋಲೊ ಬರೆದಿರುವಂತೆ, ಕರ್ರಗಿನ ಮೈಬಣ್ಣದ ಅಲ್ಲಿನ ರಾಜನ ಮೈಮೇಲೆ ಕಿಲೋಗಟ್ಟಲೆ ಚಿನ್ನ ಇತ್ತಂತೆ. ಆದರೆ ನೂಲು ಅರಿವೆ ಅಂತ ಇದ್ದದ್ದು ಅಂಗೈ ಅಗಲದ ಕೌಪೀನ ಮಾತ್ರವಂತೆ.

ನಮ್ಮ ಬೊಗ್ಗು ಸಹಾ ಕಪ್ಪು ನೂಲಿನ ಉಡಿದಾರಕ್ಕೆ ಕೆಂಪು ಚೌಕುಳಿ ಕೋವಣ ಕಟ್ಟಿ ಕೊಂಡಿದ್ದ. ಮೈಮೇಲೆ ಚೌಕುಳಿ ಕೋರಾ ಬಟ್ಟೆಯಿಂದ ಹೊಲಿದ ಗಿಡ್ಡ ಕೈಯ (mega sleeve), “ಗಂಜಿ ಮರಕ್” (ಬನಿಯನ್). ಒಂದು ಜತೆ ಚೌಕ, ಒಂದು ಗಂಜಿ ಮರಕ್ ಬಿಟ್ಟರೆ, ಒಂದು ಮಂದಿರಿ (ಹೊದಿಕೆ) ಇತ್ತು. ದಿನವಿಡೀ ಮಣ್ಣಿನ ನೆಲದಲ್ಲಿ ಅಂಡು ಊರಿ ಕುಳಿತು, ಮೊಣಗಂಟುಗಳ ಮಧ್ಯೆ ತಲೆ ಹುದುಗಿಸಿ ಏನೋ ಭಾರಿ ಯೋಚನೆಯಲ್ಲಿ ಇರುವಂತೆ ಕಂಡುಬರುತ್ತಿತ್ತು. “ಏಕೆನ್ನ ಈ ರಾಜ್ಯಕ್ಕೆಳೆ ತಂದೆ ಹರಿಯೇ, ಸಾಕಲಾರದೆ ಎನ್ನ ಏಕೆ ಹುಟ್ಟಿಸಿದೆ” ಅಂತ ಏನಾದರೂ ಕೇಳುತ್ತಿದ್ದನೊ ಏನೋ. ಅಷ್ಟು ಯೋಚಿಸುವ ಬುದ್ಧಿಯೇ ಕೊಟ್ಟಿರಲಿಲ್ಲ ಆ ಸರ್ವಶಕ್ತ. “ಮೇಲೆ ಏಳು, ಅತ್ತ ಕೂರು, ಇತ್ತ ಕೂರು” ಇತ್ಯಾದಿ ಅಪ್ಪನ ಅಪ್ಪಣೆಗಳನ್ನು ಪಾಲಿಸುತ್ತಿದ್ದ ಬೊಗ್ಗು. ಕೆಲವೊಮ್ಮೆ ಮನೆಯಿಂದ ದೂರ ಹೋಗಿ ಮೂತ್ರ ಹೊಯ್ಯಿ ಎಂದರೆ ಅದನ್ನು ಕಟ್ಟು ನಿಟ್ಟಾಗಿ ಪಾಲಿಸುತ್ತಿರಲಿಲ್ಲ. ಬಹುಶಃ ಅದನ್ನು ಅರ್ಥೈಸಿಕೊಳ್ಳುವ ಕ್ಷಮತೆ ಇರಲಿಲ್ಲ. ಉದಾಸೀನದಿಂದ ಎಂದು ಹೇಳಲಾಗದು. ಹಾಗೆ ತಮ್ಮ ಮಾತು ಕೇಳದಿದ್ದಾಗ ಅಪ್ಪ ಕೋಣಗಳಿಗೆ ಬಾರಿಸುವ ಕಾಸರಕ್ಕನ ಬಡು (ಕೋಲು)ವಿನಲ್ಲಿ ಬೆನ್ನಿಗೆ ಬಾರಿಸುತ್ತಿದ್ದರು. “ಅಯ್ಯೋ ಅಯ್ಯೋ” ಅಂತ ನೋವಿನಿಂದ ನರಳುತ್ತಿದ್ದ,ಅರಚುತ್ತಿದ್ದ. ಆದರೆ ಅಪ್ಪನಿಗೆ ಎದುರು ನಿಲ್ಲುತ್ತಿರಲಿಲ್ಲ. ಆ ಪೆಟ್ಟುಗಳನ್ನು ತಿಂದು ಇನ್ನಷ್ಟು ಭಯಭೀತನಾದ. ಅಪ್ಪನ ದ್ವನಿ ಕೇಳಿದಾಗ ಬೆಚ್ಚಿ ಬೀಳುತ್ತಿದ್ದ. ಆದರೆ ಯಾಕೆ ಹೊಡೆದರು, ಯಾವ ತಪ್ಪಿಗೆ ಶಿಕ್ಷೆ ಎಂದು ಅರಿತಿರುವ ಸಾಧ್ಯತೆ ಕಡಿಮೆ. ಆತನ ಅಪ್ಪ ಬಹುಶಃ ಆತ ದೇವರು ತಮಗೆ ಕೊಟ್ಟ ಶಿಕ್ಷೆ ಎಂದು ಭಾವಿಸಿ, ಆ ಸಿಟ್ಟನ್ನು ಆತನ ಮೇಲೆ ತೀರಿಸಿದ್ದಿರ ಬೇಕು. ಬೊಗ್ಗು, ಹೌದು ಈಗ ಬೊಗ್ಗುನಂತವರನ್ನು “ವಿಭಿನ್ನ ಸಾಮರ್ಥ್ಯದವರು”, “ದಿವ್ಯಾಂಗರು” ಎಂದು ಹೇಳುತ್ತಾರೆ. ಬೊಗ್ಗುನ ಕಾಲದಲ್ಲಿ “ಸುತ್ತು ಕಡಿಮೆಯವ”, “ಮೂಗ” ಎಂದೆಲ್ಲಾ ಹೀಗಳೆಯುವವರೆ ಎಲ್ಲಾ.
ಹೆತ್ತವ್ವೆಗೆ ತನ್ನ ಕರುಳ ಕುಡಿಯಲ್ಲಿ ಮಮತೆ ಇದ್ದೇ ಇರುತ್ತದೆ, ಮೃಗಗಳು ಸಹಾ ತಮ್ಮ ಹೊಟ್ಟೆಯಲ್ಲಿ ಹುಟ್ಟಿದ ಮರಿಗಳನ್ನು ತಮ್ಮ ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತವೆ. ಹೊಟ್ಟೆಯಿಂದ ಬಂದ ಮರಿಗಳನ್ನು ಮಾತ್ರವಲ್ಲ, ಮೊಟ್ಟೆಯೊಡೆದು ಹೊರಬರುವ ಮರಿಗಳನ್ನು ಹಕ್ಕಿಗಳು ಸಹಾ ಅಷ್ಟೇ ಪ್ರೀತಿಸುತ್ತವೆ. ಜತನದಿಂದ ಕಾಯುತ್ತವೆ. ಜಗಲಿ ಹಾರಲಾಗದ ಹೆಂಟೆ, ಕಾಗೆಯಿಂದ ತನ್ನ ಮರಿಯನ್ನು ಹಿಂಪಡೆಯಲು ನಾಲ್ಕಾಳಿಗೂ ಮಿಕ್ಕಿದ ಎತ್ತರದ ಮರಕ್ಕೆ ಹಾರಿದ್ದನ್ನು ಹಲವು ಬಾರಿ ನೋಡಿದ್ದೇನೆ. ಮನೆಯವರನ್ನು ಬಿಟ್ಟು ಅನ್ಯರು ತನ್ನ ಮರಿಗಳನ್ನು ಮುಟ್ಟಲು ಬಂದರೆ, ಮನುಷ್ಯರ ಮೇಲೆ ಧಾಳಿ ಮಾಡಲೂ ಸಿದ್ಧ. ಹಾಗೆಯೇ ಬೊಗ್ಗುನ ತಾಯಿ ಸೀಲಕ್ಕ, ಮಗನ ಮೇಲೆ ಅಪರಿಮಿತ ಪ್ರೇಮ. ಅವನಿಗಿಂತ ಮೊದಲು ಹುಟ್ಟಿದ ಹಿರಿಯ ಮಗನಿಗಿಂತ, ಅವನ ನಂತರ ಹುಟ್ಟಿದ ಇಬ್ಬರು ಹೆಣ್ಣುಮಕ್ಕಳಿಗಿಂತ ಬೊಗ್ಗುನಲ್ಲಿ ಪ್ರೀತಿ ಜಾಸ್ತಿ. ಬಹುಶಃ ಆತ ಇತರಿಗಿಂತ ಬೇರೆ ಎನ್ನುವ ಕರುಣೆ, ಅನುಕಂಪ, ಮಮತೆಯಾಗಿ ಮಾರ್ಪಟ್ಟಿರಬಹುದು. ಎಷ್ಟೋ ಬಾರಿ ಚಾಪೆಯಲ್ಲೇ ಎಲ್ಲಾ ಮಾಡಿ ಮುಗಿಸುತ್ತಿದ್ದ. ತಾಯಿ ಮಣಮುಣ ಎನ್ನುತ್ತಾ ಚಾಪೆ, ಹೊದಿಕೆ ಒಗೆದು ಹಾಕಿ, ಆತನನ್ನು ಸ್ನಾನ ಮಾಡಿಸುತ್ತಿದ್ದರು. ಯಾವತ್ತೂ ಬೈಯ್ಯುವುದು, ಹೊಡೆಯುವುದು ಮಾಡುತ್ತಿರಲಿಲ್ಲ. ಅದೇ ಬೊಗ್ಗುನ ಅಪ್ಪ ಸ್ವಲ್ಪ ಹೆಡ್ಡು. ಸಾಮಾನ್ಯವಾಗಿ ಅಪ್ಪಂದಿರಿಗೆ ತಮ್ಮ ಮಕ್ಕಳ ಮೇಲಿನ ಪ್ರೇಮ ತೋರಿಸಿ ಕೊಳ್ಳಲು ಗೊತ್ತಿರುವುದಿಲ್ಲ. ಹಾಗಂತ “ಯಾಕೆ ನಮ್ಮ ಹೊಟ್ಟೆಯಲ್ಲಿ ಹುಟ್ಟಿದೆ, ಕಷ್ಟ ನೀಡಲು. ನಿನಗೆ….” ಇಂತಹ ಮಾತನ್ನು ಆಡಿದವರಲ್ಲ. ನನ್ನ ಪ್ರಕಾರ ಬೊಗ್ಗು ಬಾಯಿ ಬಾರದ, ಕಿವಿ ಕೇಳದ ಮೂಗನಲ್ಲ. ಹೆಚ್ಚಿನ ಮೂಕ ಮಕ್ಕಳು ಮಾತನಾಡದೆ ಇರಲು ಕಾರಣ ಅವರ ಶ್ರುತಿ ಪೆಟ್ಟಿಗೆಯಲ್ಲಿನ ದೋಷವಲ್ಲ. ಬದಲಿಗೆ, ಮಗುವಿಗೆ ಕಿವಿ ಕೇಳದಿದ್ದರೆ ಮಾತು ಕಲಿಯುವುದಿಲ್ಲ. ಹಾಗಾಗಿ ಶಬ್ದವೇ ಕೇಳದೆ, ಹೇಗೆ ಮಾತನಾಡಬೇಕು ಎಂದು ತಿಳಿದಿರುವುದಿಲ್ಲ. ಬೊಗ್ಗು ಹಾಗಲ್ಲ, ಆತನಿಗೆ ಕಿವಿ ಕೇಳಿಸುತ್ತಿತ್ತು. ಹೆಸರಿನಿಂದ ಕರೆದರೆ ತಿರುಗಿ ನೋಡುತ್ತಿದ್ದ. ಮನೆಯಲ್ಲಿ ಪದೇ ಪದೇ ಬಳಸುವ ಶಬ್ದಗಳನ್ನು ಗಿಳಿಪಾಠ ಮಾಡುತ್ತಿದ್ದ. “ಅವು ಮುಂಡು ಯಾರ್ನಯೆ (ಆ ಮುಂಡು ಯಾರದ್ದು ಇವರೇ?)” (ಮುಂಡು: ಸ್ವಲ್ಪ ಬೆಳೆದ ಗಂಡುಕರು) ಎಂದು ದನಕರುಗಳನ್ನು ಕಂಡಾಗಲೆಲ್ಲಾ ಹೇಳುತ್ತಿದ್ದ. ಆಗಾಗ ತನ್ನಷ್ಟಕ್ಕೆ ತಾನು ಕಿಟಿ ಕಿಟಿ ನೆಗಾಡುತ್ತಿದ್ದ. ಒಮ್ಮೊಮ್ಮೆ “ಬೊಗ್ಗು ಪಾಪಾ, ಬೊಗ್ಗು ಪಾಪಾ” ಎಂದು ಜೋರಾಗಿ ನಗುತ್ತಿದ್ದ. ಹೌದು, ಮೃದು ಸ್ವಭಾವದ ಮನುಷ್ಯನಾತ. ತಿಂಡಿ ತಿನಿಸುಗಳನ್ನು ನೋಡಿದಾಕ್ಷಣ ಕಣ್ಣರಳಿಸುತ್ತಿದರೆ, ಬಾಯಿಯಿಂದ ಜೊಲ್ಲು ತಾನಾಗಿಯೇ ಸುರಿಯುತ್ತಿತ್ತು. ಪಾಪ, ಲೆಕ್ಕದ ಗಂಜಿ, ಕೆಲವೊಮ್ಮೆ ಅನ್ನ, ಪಲ್ಯ ಬಿಟ್ಟರೆ ಬೇರೇನೂ ಸಿಗುತ್ತಿರಲಿಲ್ಲ ತಿನ್ನಲು. ಹಳ್ಳಿಗಳಲ್ಲಿ ಬಿಸ್ಕತ್ತು, ಚಾಕೊಲೇಟ್ ಗಳನ್ನು ತಿನ್ನುತ್ತಿದ ಕಾಲವಲ್ಲ ಅದು. ನನ್ನನ್ನೂ ಸೇರಿಸಿ ದಿನಕ್ಕೆ ನಾಲ್ಕೈದು ಬಾರಿ ಗಂಜಿ, ಅನ್ನ, ಪದಾರ್ಥ ಇಷ್ಟೆ. ಅಪರೂಪಕ್ಕೆ ಬೆಳಗ್ಗಿನ ತಿಂಡಿಯಾಗಿ ದೋಸೆ, ಇಡ್ಲಿ ಇರುತ್ತಿತ್ತು. ಆದರೆ ಮಾವು, ಹೆಬ್ಬಲಸು ಹಣ್ಣಾಗುವ ಕಾಲದಲ್ಲಿ ಹಳ್ಳಿಗಳಲ್ಲಿ ನಾವು ಮರ ಹತ್ತಿ ಕೊಯ್ದು, ಅಲ್ಲೇ ತಿನ್ನುತ್ತಿದ್ದೇವು. ನೇರಳೆ ಹಣ್ಣು, ಕುಂಟಲ ಹಣ್ಣು, ಕರಂಡೆ ಹಣ್ಣು, ಕೇಪುಳ ಹಣ್ಣು, ಚೂರಿ ಮುಳ್ಳಿನ ಹಣ್ಣು, ಮುರ್ಗಿನ ಹುಳಿ (ಪುನರ್ಪುಳಿ), ಜಾರಿಗೆ ಹಣ್ಣು ಹೀಗೆ ಹತ್ತು ಹಲವು ಹಣ್ಣು ಹಂಪಲುಗಳನ್ನು ಗಿಡಗಳಿಂದ ಕೊಯ್ದು ತಿನ್ನುತ್ತಿದ್ದೇವು. ಬೊಗ್ಗುನಿಗೆ ಯಾರೂ ತಂದು ಕೊಡುತ್ತಿರಲಿಲ್ಲ. ಆತ ಮನೆ ಬಿಟ್ಟು ಹೋಗುತ್ತಲೂ ಇರಲಿಲ್ಲ. ಹೋದರೂ ಆ ಹಣ್ಣುಗಳ ಗುರುತು ಪರಿಚಯ ಆತನಿಗೆ ಇರಲಿಲ್ಲ. ಮರ ಹತ್ತಿ ಕೊಯ್ಯುವ ಸಾಮರ್ಥ್ಯ, ತಿಳುವಳಿಕೆ ಇರಲಿಲ್ಲ. ಇದ್ದುದರಲ್ಲಿ ಹಲಸಿನ ಹಣ್ಣು ಮನೆಯಲ್ಲಿ ತುಂಡರಿಸಿ, ಪಾಲು ಮಾಡಿ ಆತನಿಗೂ ಕೊಡುತ್ತಿದ್ದರು. ಹಾಗಾಗಿ ಬೊಗ್ಗು ಗೆಣಸು, ಹಲಸಿನ ತೊಳೆ, ಬೇಯಿಸಿದ ಹಲಸಿನ ಬೀಜಗಳಿಗೂ ಅತ್ಯಾಸೆ ಪಡುತ್ತಿದ್ದ. ಸಂಬಂಧಿಕರು, ನೆರೆಹೊರೆಯವರು, ಗುರುತು ಪರಿಚಯದವರು ಯಾರೂ ಬೊಗ್ಗುನ ಮೇಲೆ ಕರುಣೆ, ಅನುಕಂಪ ತೋರಿಸುತ್ತಿರಲಿಲ್ಲ. ಕೆಲವರಂತೂ ಹಿಂದಿನಿಂದ “ಹೆತ್ತವರು ಹೋದ ಜನ್ಮದಲ್ಲಿ ಮಾಡಿದ ಕರ್ಮದ ಫಲ ಅನುಭವಿಸುತ್ತಿದ್ದಾರೆ” ಎಂದು ಗೀತಾ ಪಾರಾಯಣ ಮಾಡುತ್ತಿದ್ದರು.
ಬೊಗ್ಗುನ ಒಡ ಹುಟ್ಟಿದವರಿಗೆ ಮದುವೆ ಮುಂಜಿ ಆಯಿತು. ಅಪ್ಪ ತೀರಿಕೊಂಡರು. ವಯಸ್ಸು ಎಲ್ಲರ ಮೇಲೂ ತನ್ನ ಪ್ರಭಾವ ಬೀರುತ್ತದೆ. ಬೊಗ್ಗುನ ತಾಯಿಗೂ ದುಡಿಯುವ ಪ್ರಾಯ ಮೀರಿತು. ತನ್ನ ದಿನಗಳು ಹತ್ತಿರ ಬರುತ್ತಿವೆ ಎಂಬುದನ್ನು ಮನಗಂಡರು. ಅವರಿಗೆ ಸದಾ ಒಂದೇ ಯೋಚನೆ, ತನ್ನ ನಂತರ ಮಗನನ್ನು ನೋಡಿಕೊಳ್ಳುವವರು ಯಾರು? “ಯಾರು ನೋಡಿ ಕೊಳ್ಳುವವರು, ನನ್ಧ ಮತಿಹೀನ ಮಗನನ್ನು? ಯಾರು ಅವನ ಹೊಟ್ಟೆಗೆ ಒಂದು ಸೌಟು ಗಂಜಿ ಹಾಕವರು? ಯಾರಿಗೂ ಬೇಡವಾದ, ಈ ಲೋಕಕ್ಕೆ ಏನೇನು ಉಪಯೋಗವಿಲ್ಲದ ಈ ಮಗುವನ್ನು ಆ ದೇವರು ನನ್ನ ಹೊಟ್ಟೆಯಲ್ಲಿ ಯಾಕೆ ಹುಟ್ಟಿಸಿದರು?” ಈ ಚಿಂತೆಯಲ್ಲೇ ಅವರ ವೃದ್ದಾಪ್ಯ ಉತ್ಕರ್ಷಗೊಂಡಿತು. ಜನ ಹೇಳುವಂತೆ, ಬಹುಶಃ ನಾನು ಕಳೆದ ಜನ್ಮದಲ್ಲಿ ದೊಡ್ಡ ಪಾಪ ಮಾಡಿದ್ದಿರಬೇಕು, ತಾಯಿಯಿಂದ ಮಕ್ಕಳನ್ನು ಬೇರ್ಪಡಿಸಿರ ಬೇಕು. ಯಾರದ್ದೊ ಋಣಭಾರದಲ್ಲಿ ಇದ್ದಿರಬೇಕು…. ಹೀಗೆಲ್ಲಾ ಆಲೋಚನೆ ಬರುತ್ತಿತ್ತು. ಮಗುವಿಗೆ ದೀರ್ಘಾಯುಷ್ಯದ ಆಶೀರ್ವಾದ ಬಯಸಿ, ತಾಯಿಯೊಬ್ಬಳು ಬುದ್ಧನ ಕಾಲ ಬುಡದಲ್ಲಿ ಮಗುವನ್ನು ಇಟ್ಟಳಂತೆ. ಮಗುವನ್ನು ನೋಡಿ, “ನೋಡು ತಾಯೇ, ಈ ಮಗು ಅಲ್ಪಾಯುಷಿ, ಪೂರ್ವಜನ್ಮದಲ್ಲಿ ಈತ ಒಬ್ಬ ವ್ಯಾಪಾರಿ. ನೀನು ಆತನಿಂದ ಪಡೆದಿದ್ದ ಒಂದು ಡಬ್ಬಿ ಹರಳೆಣ್ಣೆಯ ಸಾಲ ತೀರಿಸಿಲ್ಲ. ಅದನ್ನು ಮರಳಿ ಪಡೆಯಲು ನಿಮ್ಮ ಮಗನಾಗಿ ಹುಟ್ಟಿ ಬಂದಿದ್ದಾನೆ. ಒಂದು ಡಬ್ಬಿ ಎಣ್ಣೆ ಮರು ಪಾವತಿಸಿದರೆ, ಮರಳಿ ಹೋಗುತ್ತಾನೆ” ಎಂದನಂತೆ ಬುದ್ಧ. ಬುದ್ಧ ಹೇಳಿದಂತೆ, ಆಕೆ ಒಂದು ಡಬ್ಬಿ ಹರಳೆಣ್ಣೆ ಕೊಂಡು, ದಿನಾ ಅಷ್ಟಿಷ್ಟು ಎಣ್ಣೆ ಮಗುವಿನ ಮೈಗೆ ಪೂಸಿ, ತಿಕ್ಕಿ ಮಾಲೀಸು ಮಾಡಿದಳಂತೆ. ಡಬ್ಬಿಯ ಎಣ್ಣೆ ಎಲ್ಲಾ ಖಾಲಿಯಾದ ಬಳಿಕ ಮಗು ಮೃತ ಪಟ್ಟಿತಂತೆ. ಹಾಗಾಗಿ ನಾವೆಲ್ಲ ಯಾರ್ಯಾರದ್ದೋ ಋಣ ತೀರಿಸಲು ಮಾತ್ರವಲ್ಲ, ಯಾರ್ಯಾರನ್ನೋ ಋಣ ಮುಕ್ತರನ್ನಾಗಿಸಲು ಹುಟ್ಟಿ ಬಂದಿದ್ದೇವೆ. ಬಹುಶಃ ಇಲ್ಲೂ ಬೊಗ್ಗು ಕಳೆದ ಜನ್ಮವಿಡಿ ಸೀಲಕ್ಕನ ಸೇವೆ ಮಾಡಿದ್ದಿರ ಬೇಕು. “ಮುಂದಿನ ಜನ್ಮದಲ್ಲಿ ನಿನ್ನ ತಾಯಿಯಾಗಿ ಸೇವೆ ಸಲ್ಲಿಸಿ ನಿನ್ನ ಋಣ ಸಂದಾಯ ಮಾಡುತ್ತೇನೆ” ಎಂದು ಸೀಲಕ್ಕ ಹೇಳಿರುವರೋ ಏನೋ. ಮಗನ ಚಿಂತೆಯಲ್ಲಿ ಸೀಲಕ್ಕ ಮನೋರೋಗಿಯೇ ಆದರು. ಮನಸ್ಸು, ದೇಹ ಜರ್ಜರಿತವಾಗಿ ಚಾಪೆ ಹಿಡಿಯುವ ಪರಿಸ್ಥಿತಿ ಬಂತು. ಹಲವಾರು ವರ್ಷಗಳ ಚಿಂತೆಯ ಪರಿಹಾರಕ್ಕೆ ಯಾವುದೇ ಮಾರ್ಗ ಕಂಡು ಬರಲಿಲ್ಲ ಸೀಲಕ್ಕನಿಗೆ. ಕಡೆಗೆ ಅವರಿಗೆ ತೋಚಿದ್ದು ಒಂದೇ ದಾರಿ. ಬಹಳ ಕಾಲದಿಂದ ಯೋಚಿಸಿ ಯೋಚಿಸಿ ಹಣ್ಣಾಗಿದ್ದರು. ಒಂದು ದೃಡ ನಿರ್ಧಾರಕ್ಕೆ ಬಂದರು.
ಒಂದು ದಿನ ಬೊಗ್ಗುನಿಗೆ ವಾಂತಿ ಬೇಧಿ ಶುರುವಾಯಿತು. ಮನೆಯಲ್ಲಿ ಇದ್ದ ತಂಗಿ ಔಷಧಿ ತರೋಣ ಅಂದಳು. “ಮದ್ದು ಮಾಯ ಏನು ಬೇಡ” ಅಂತ ಕೆಕ್ಕರಿಸಿ ನೋಡಿದರು ಸೀಲಕ್ಕ. ಎರಡು ದಿನ ಬಿಡದೆ ಕರುಳಿನ ನೀರನ್ನೂ ಸಹಾ ವಾಂತಿ ಮಾಡಿ, ಬೊಗ್ಗು ಚಾಪೆಯಿಂದ ಏಳದಾದ. ಆ ರಾತ್ರಿ ಇಡೀ ತಾಯಿ ಮಗನ ತಲೆಯ ಮೇಲ್ ಭಾಗದಲ್ಲಿ ಕುಳಿತು, ಚಮಚಾದಲ್ಲಿ ಗಂಜಿ ತೆಲಿ ಕೊಡುತ್ತಿದ್ದರು. ಇನ್ನೇನು ಲೋಕ ಬೆಳಗಲು ಕ್ಷಣ ಗಣನೆ ಆರಂಭವಾಗ ಬೇಕು ಎನ್ನುವಾಗ, ಜೊಂಪು ಹತ್ತಿತು ಸೀಲಕ್ಕನಿಗೆ. “ಅಮ್ಮಾ…” ಅಂದ ಕೀರಲು ಸ್ವರ ಕೇಳಿ, ಬೆಚ್ಚಿ ಬಿದ್ದರು. ಮಗನ ಬಾಯಿಯಿಂದ ಹಿಂದೆಂದೂ ಕೇಳದ ಆ “ಅಮ್ಮಾ” ಎಂಬ ಶಬ್ದ ಕೇಳಿ ಪುಳಕಿತರಾದರು. ತಮ್ಮ ಭ್ರಮೆಯೇ ಇರಬೇಕು ಎಂದುಕೊಂಡರು. ಎಣ್ಣೆ ತೀರಿತ್ತು, ದೀಪ ಆರಿತ್ತು. ಹನ್ನೆರಡನೇ ದಿನ ಶುದ್ಧ ಮಾಡಿದರು. ಹದಿಮೂರನೇ ದಿನ “ಬೊಜ್ಜ” ಮಾಡುವಂತಿರಲಿಲ್ಲ, ಹಿರಿಯರಾದ ತಾಯಿ ಜೀವಂತ ಇದ್ದರು ಜೀವಚ್ಛವವಾಗಿ. ಬೊಗ್ಗುನ ಸಾವು ಸುದ್ದಿಯಾಗಲಿಲ್ಲ. ನಿಧಾನಕ್ಕೆ ಸುದ್ದಿ ಸಿಕ್ಕಿದವರು ಬಾಯಿ ಬಿಟ್ಟು ಹೇಳದೇ ಇದ್ದರೂ, “ಒಳ್ಳೆಯದೇ ಆಯಿತು” ಅಂತ ಎಣಿಸಿದರು. ತಾಯಿ ಸೀಲಕ್ಕ ಮಾತ್ರ ಚಾಪೆ ಹಿಡಿದರು. ಕೆಲವೇ ಕೆಲವು ತಿಂಗಳು ಕಳೆದು ಕಣ್ಣು ಮುಚ್ಚುವಾಗ, ಬದುಕಿನುದ್ದಕ್ಕೂ ಹೊತ್ತು ಕೊಂಡಿದ್ದ ದೊಡ್ಡ ಹೊರೆಯೊಂದನ್ನು ಇಳಿಸಿದ ಸಂತೃಪ್ತಿ ಮುಖದಲ್ಲಿ ಮಿಂಚುತ್ತಿತ್ತು. ಒಂದು ಅಧ್ಯಾಯ ಮುಗಿಯಿತು. ಬೊಗ್ಗುನ ಬಗ್ಗೆ ಹೇಳುವುದಾದರೆ, ಅಧ್ಯಾಯ ಆರಂಭವೇ ಆಗಿರಲಿಲ್ಲ. ಯಾವುದೇ ಚರಿತ್ರೆಯ ಪುಸ್ತಕದ, ಯಾವುದೇ ಪುಟದಲ್ಲಿ ಬೊಗ್ಗುನ ಹೆಸರು ಸೇರಲಿಲ್ಲ. ಜನ ಆತ ಜೀವಂತ ಇರುವಾಗಲೇ ಆವನ ಇರವನ್ನು ಗಣಿಸಲಿಲ್ಲ, ಇನ್ನು ಸತ್ತ ಮೇಲೆ ಯಾರು ನೆನಪಿಸಿಕೊಳ್ಳುತ್ತಾರೆ? ತುಳು ಗಾದೆಯಂತೆ “ಮರ ಬಿತ್ತು, ಹಕ್ಕಿ ಹಾರಿತು”. ಮತ್ತೊಬ್ಬ ಬೊಗ್ಗು ನನ್ನ ಆತ್ಮೀಯ ಮಿತ್ರರ ಮೂರನೇ ಮಗ. ಅವರು ತುಂಬಾ ಕಡೆ ತೋರಿಸಿದರು. ಆಯುರ್ವೇದಿಕ್, ಅಲೋಪತಿಕ್ ಎಲ್ಲಾ ತರದ ಔಷಧೋಪಚಾರ ಆಯಿತು. ಏನೂ ಸುಧಾರಣೆ ಇಲ್ಲ. ಒಮ್ಮೊಮ್ಮೆ ಅವನ ನಿತ್ಯಕರ್ಮಗಳನ್ನು ತಾನೇ ಮಾಡಿಕೊಳ್ಳುತ್ತಾನೆ. ಕೆಲವೊಮ್ಮೆ ಎಲ್ಲಾ ಕುಳಿತಲ್ಲೇ. “ಅಪ್ಪ ಅಮ್ಮನ ಬಳಿಕ ಅವನನ್ನು ನೋಡಿಕೊಳ್ಳುವವರು ಯಾರು?” ಎಂದು ತಾಯಿ ನಾನು ಹೋದಾಗಲೆಲ್ಲ ಕಣ್ಣೀರು ಹರಿಸುತ್ತಾರೆ. ಅವನ ನಾಳೆ ಬಗ್ಗೆ ಯೋಚಿಸಿದರೆ, ನನಗೂ ಕರುಳು ಕಿತ್ತು ಬರುತ್ತದೆ. ಒಡ ಹುಟ್ಟಿದ ಅಣ್ಣ ಇದ್ದಾನೆ, ಆದರೆ ಅವಿವಾಹಿತನಾದ ಅವನಿಗೆ ಅವನದ್ದೇ ಆದ ತೊಂದರೆಗಳಿವೆ. ಆರ್ಥಿಕವಾಗಿ ಸದೃಢವಾಗಿಲ್ಲ. ತನ್ನ ತಮ್ಮನನ್ನು ನೋಡಿಕೊಳ್ಳಲೂ ಬಹುದು. ದೇವರೆ ನಿಜಕ್ಕೂ ನೀನಿರುವುದು ಸತ್ಯವೇ ಆದರೆ, ಇಂತಹ ಕಷ್ಟ ನನ್ನ ಕಡು ವೈರಿಗಳಿಗೂ ಕೊಡದಿರು. ಕಳೆದ ಜನ್ಮದಲ್ಲಿ ಪಾಪ ಮಾಡಿದ್ದರೆ, ಆ ಜನ್ಮದಲ್ಲೇ ಗರುಡ ಪುರಾಣದಲ್ಲಿ ಹೇಳಿದ ಶಿಕ್ಷೆಗಳನ್ನು ನೀಡಿ, ಲೆಕ್ಕ ಚುಕ್ತಾ ಮಾಡು ದೇವರೆ. ಹೆತ್ತವರಿಗೆ ಆರೋಗ್ಯವಂತ ಮಕ್ಕಳು ಇರುವುದೇ ದೊಡ್ಡ ಅದೃಷ್ಟ. ಅವರು ಯೋಗ್ಯ ನಾಗರೀಕರಾಗಿ ಬಾಳಿದರೆ, ಅಲ್ಲಿಗೆ ಹೆತ್ತವರ ಜನ್ಮ ಸಾರ್ಥಕ.
ಬರಹ : ಕೌಡೂರು ನಾರಾಯಣ ಶೆಟ್ಟಿ ಇಟೆಲಿ