ವೈದ್ಯರನ್ನು ತಲುಪುವ ಮುನ್ನವೇ ಸೂಕ್ತ ಪ್ರಥಮ ಚಿಕಿತ್ಸೆ ನೀಡುವುದರಿಂದ ವ್ಯಕ್ತಿಯ ಜೀವ ರಕ್ಷಿಸುವುದು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಪ್ರಥಮ ಚಿಕಿತ್ಸೆ ಬಗ್ಗೆ ಪ್ರಾಥಮಿಕ ಜ್ಞಾನ ಹೊಂದುವುದು ಅಗತ್ಯ ಎಂದು ಕೆಐಒಸಿಎಲ್ನ ನಿವೃತ್ತ ವೈದ್ಯಕೀಯ ಅಧಿಕಾರಿ ಡಾ. ಬಿ. ರಾಮಚಂದ್ರ ಭಟ್ ಹೇಳಿದರು. ಭಾರತೀಯ ರೆಡ್ಕ್ರಾಸ್ ಸಂಸ್ಥೆಯ ದಕ್ಷಿಣ ಕನ್ನಡ ಜಿಲ್ಲಾ ಘಟಕದ ವತಿಯಿಂದ ರೆಡ್ಕ್ರಾಸ್ ಶತಮಾನೋತ್ಸವ ಕಟ್ಟಡದ ಪ್ರೇರಣಾ ಸಭಾಂಗಣದಲ್ಲಿ ನಡೆದ ವಿಶ್ವ ಪ್ರಥಮ ಚಿಕಿತ್ಸೆ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು. ಪ್ರಥಮ ಚಿಕಿತ್ಸೆಗೆ ಬಹುತೇಕ ಸಂದರ್ಭ ಯಾವುದೇ ಉಪಕರಣಗಳು ಲಭ್ಯವಿರುವುದಿಲ್ಲ. ವ್ಯಕ್ತಿಯ ಸಮಯ ಪ್ರಜ್ಞೆ ಮತ್ತು ಜ್ಞಾನ ರೋಗಿಯ ಚಿಕಿತ್ಸೆಗೆ ನೆರವಾಗುತ್ತದೆ ಎಂದು ಅವರು ಹೇಳಿದರು. ಮುಖ್ಯ ಅತಿಥಿಯಾಗಿ ರೋಟರಿ ಸಂಸ್ಥೆಯ ಪೂರ್ವ ಅಸಿಸ್ಟೆಂಟ್ ಗವರ್ನರ್ ವಿನೋದ್ ಕುಡ್ವ ಮಾತನಾಡಿ ‘ಪ್ರಥಮ ಚಿಕಿತ್ಸೆಯು ಜೀವ ಉಳಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ ಎಂದರು. ಸಂಪನ್ಮೂಲ ವ್ಯಕ್ತಿಯಾಗಿದ್ದ ಯೇನೆಪೊಯ ನರ್ಸಿಂಗ್ ಕಾಲೇಜಿನ ಉಪನ್ಯಾಸಕ ಜಿತಿನ್ರಾಜ್. ವಿ ಅವರು ಪ್ರಥಮ ಚಿಕಿತ್ಸೆ ಬಗ್ಗೆ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದರು.

ರೆಡ್ಕ್ರಾಸ್ ಸೊಸೈಟಿಯ ದ.ಕ ಜಿಲ್ಲಾ ಘಟಕದ ಚೇರ್ಮನ್ ಸಿಎ ಶಾಂತಾರಾಮ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ರೆಡ್ಕ್ರಾಸ್ ಶತಮಾನೋತ್ಸವ ಕಟ್ಟಡದ ಕಾಮಗಾರಿಯ ಮೇಲ್ವಿಚಾರಣೆಯಲ್ಲಿ ಸಹಕರಿಸಿದ ಎ.ಜೆ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿ ಮೇಘರಾಜ್ ಕೆ ಅವರನ್ನು ಇದೇ ಸಂದರ್ಭ ಸನ್ಮಾನಿಸಲಾಯಿತು. ರೆಡ್ಕ್ರಾಸ್ ಆಡಳಿತ ಮಂಡಳಿ ಖಜಾಂಜಿ ಕೆ ಮೋಹನ್ ಶೆಟ್ಟಿ, ನಿರ್ದೇಶಕರಾದ ಡಾ. ಸುಮನ ಬೋಳಾರ್, ಪಿ.ಬಿ ಹರೀಶ್ ರೈ, ಹಿರಿಯ ಸದಸ್ಯ ಅಬ್ಬಾಸ್ ಉಚ್ಚಿಲ ಉಪಸ್ಥಿತರಿದ್ದರು. ಕಾರ್ಯದರ್ಶಿ ಕಿಶೋರ್ ಚಂದ್ರ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು.
		




































































































