ಇಡೀ ಅರ್ಥ ವ್ಯವಸ್ಥೆ ಇವತ್ತು ಡಿಜಿಟಲೀಕರಣ ಆಗಿದೆ. ಬಹುತೇಕ ಜನರ ಹಣಕಾಸಿನ ವ್ಯವಹಾರಗಳು ಮೊಬೈಲ್ನಲ್ಲಿ ನಡೆಯುತ್ತವೆ. ಹೆಚ್ಚಿನ ಎಲ್ಲಾ ರೀತಿಯ ಖರ್ಚುಗಳ ಪೇಮೆಂಟ್ ಡಿಜಿಟಲ್ ಮೂಲಕವೇ ಆಗುತ್ತವೆ. ಬ್ಯಾಂಕಿಂಗ್ ವ್ಯವಹಾರಗಳು, ಷೇರು ವ್ಯವಹಾರಗಳು ಗ್ರಾಹಕನ ಮನೆಯ ಪೋರ್ಟಿಕೋದಲ್ಲೇ ನಡೆಯುತ್ತವೆ. ಕೃಷಿ ಉತ್ಪನ್ನಗಳ ಮಾರಾಟ, ಖರೀದಿ, ಭೂಮಿಯ ದಾಖಲಾತಿಗಳು, ಬೆಳೆ ಸರ್ವೆ, ಟ್ಯಾಕ್ಸ್ ಪೇಮೆಂಟ್, ಆದಾಯ ತೆರಿಗೆ ರಿಟರ್ನ್ಸ್ಗಳೆಲ್ಲಾ ಡಿಜಿಟಲ್ ಮಾರ್ಗದಲ್ಲೇ ಇರುವುದು. ಬಿಸಿನೆಸ್, ಟ್ರಾನ್ಸ್ಪೋರ್ಟ್, ಅಂಚೆ, ವಿಮೆ ವ್ಯವಹಾರಗಳು ಡಿಜಿಟಲ್ ಆಗಿ ಅನೇಕ ವರ್ಷಗಳೇ ಆಗಿವೆ. ಸಿನಿಮಾ ಟಿಕೇಟ್ ಕೂಡ ಈಗ ಪೇಪರ್ ಲೆಸ್ ಆಗಿದೆ. ಊಬರ್ ಬಾಡಿಗೆ ಕಾರಿಗೆ ಅದರ ಪೇಮೆಂಟ್ಗೆ ಬೆರಳು ತುದಿಯಲ್ಲಿ ಮೊಬೈಲ್ ಸ್ಕ್ರೀನ್ ಒತ್ತಿದರೆ ಸಾಕು. ಗೂಗಲ್ ಮ್ಯಾಪ್, ಮನೆ ಮುಂದಿನ ಸಿಸಿ ಕ್ಯಾಮರ, ರೇಡಿಯೋ ಪ್ರಸಾರ, ಟಿವಿ ನ್ಯೂಸ್, ಓಟಿಟಿ ಸಿನಿಮಾ ಎಲ್ಲಾ ಡಿಜಿಟಲ್ ಆಗಿವೆ. ಕೊತ್ತಂಬರಿ ಸೊಪ್ಪಿನ ವ್ಯಾಪಾರದಿಂದ ಹಿಡಿದು ಫಾಸ್ಟ್ ಟ್ಯಾಗ್ ಟೋಲ್ ಪೇಮೆಂಟ್ವರೆಗೆ ಎಲ್ಲರೂ ಡಿಜಿಟಲ್ ವ್ಯವಸ್ಥೆಯನ್ನು ನಂಬಿಯಾಗಿದೆ. ಮನುಷ್ಯನ ಅನಾರೋಗ್ಯಗಳ ಬಗ್ಗೆ ಡಯಾಗನೈಸ್ ಮಾಡುವ ಪ್ರಕ್ರಿಯೆಯನ್ನು ಕೂಡಾ ಡಿಜಿಟಲ್ ತಂತ್ರಜ್ಞಾನ ತನ್ನ ತೆಕ್ಕೆಗೆ ಎಳೆದುಕೊಂಡಿದೆ. ನ್ಯಾಯಾಲಯಗಳು, ಪೋಲೀಸ್ ವ್ಯವಸ್ಥೆಗಳ ವ್ಯವಹಾರವನ್ನು ಡಿಜಿಟಲ್ ಕ್ಲೌಡ್ ಸ್ಟೋರೇಜ್ನಲ್ಲಿ ಇಡಲಾಗುತ್ತಿದೆ. ದೇಶದ ರಕ್ಷಣಾ ವ್ಯವಸ್ಥೆಯೆ ಯುದ್ಧ ವಿಮಾನ, ರಾಡರ್, ಡ್ರೋಣ್ಗಳು ಈಗ ಸ್ವಯಂಚಾಲಿತ ಡಿಜಿಟಲ್ ತಂತ್ರಜ್ಞಾನದಲ್ಲಿ. ದೂರವಾಣಿಯಲ್ಲಿನ ಮಾತು ಮತ್ತು ಅಂತರ್ಜಾಲಗಳು ಫೈವ್ ಜಿ ಜಮಾನಕ್ಕೆ ಬಂದು ಸಿಕ್ಸ್ ಜಿ, ಸೆವೆನ್ ಜಿ ಕಡೆಗೆ ಮುಖ ಮಾಡಿವೆ. ಪ್ರಪಂಚದ ಮುಂದುವರೆದ ರಾಷ್ಟ್ರಗಳ ಬಹುತೇಕ ವ್ಯವಹಾರಗಳೆಲ್ಲಾ ಸಾಫ್ಟ್ವೇರ್ ಮಾಯಾಲೋಕದಲ್ಲಿ ನಿಂತಿವೆ. ಮಾಯಾಲೋಕದಲ್ಲಿ ನಿಂತು ‘ನೆಕ್ಸ್ಟ್ ಲೆವೆಲ್’ನ ‘ಡಿಜಿಟಲ್ ಇಲ್ಯೂಷನ್’ ಎನ್ನುವಂತಿರುವ, ಎನ್ನಬಹುದಾದ ನಭೋ ಮಂಡಲದ ದಿಕ್ಕಿನ ‘ಎಐ’ ಕಡೆಗೆ ಕಣ್ಣು ನೆಟ್ಟಿವೆ!!!

ಆದರೆ…. ದೇಶದಲ್ಲೇ ಸಾಫ್ಟ್ವೇರ್ನ ನಂಬರ್ ಒನ್ ರಾಜ್ಯ ಎಂದು ಕರೆಸಿಕೊಳ್ಳುವ, ಭಾರತದ ಸಿಲಿಕಾನ್ ರಾಜ್ಯವಾಗಿರುವ ಕರ್ನಾಟಕ ಮಾತ್ರ ಮತದಾನದ ಅಡ್ವಾನ್ಸ್ಡ್ ಡಿಜಿಟಲ್ ಇವಿಎಂ ತಂತ್ರಜ್ಞಾನವನ್ನು ಬದಿಗಿರಿಸಿ, ಮೂರುವರೆ ದಶಕಗಳ ಹಿಂದಿನ ಪ್ರಾಚೀನ ಬ್ಯಾಲೆಟ್ ವೋಟ್ ಪದ್ದತಿಯನ್ನು ಮತ್ತೆ ಚಲಾವಣೆಗೆ ತರುತ್ತಿದೆ. ಹೀಗೆ ಪ್ರಾಚೀನ ಬ್ಯಾಲೆಟ್ ವೋಟ್ ಕಡೆಗೆ ಹೋಗುತ್ತಿರುವುದಕ್ಕೆ ಯಾವುದೇ ಗಂಭೀರವಾದ ಕಾರಣಗಳಿಲ್ಲ. ಈಗಿರುವ ಇವಿಎಂ ತಂತ್ರಜ್ಞಾನದಲ್ಲಿ ಯಾವುದೇ ಲೋಪಗಳಿಲ್ಲ. ಮೋಸ ಮಾಡುವ, ಮೋಸ ಹೋಗುವ ಅವಕಾಶಗಳಿಲ್ಲ. ಇವಿಎಂ ತಂತ್ರಜ್ಞಾನದಲ್ಲಿನ ಮತದಾನ ಪದ್ದತಿ ಪಾರದರ್ಶಕವಾಗಿದೆ ನಂಬಲರ್ಹವಾಗಿದೆ ಎಂದು ದೇಶದ ಪರಮೋಚ್ಛ ನ್ಯಾಯಾಲಯವೂ ತಿಳಿಸಿದೆ. ಆದಾಗ್ಯೂ, ಕರ್ನಾಟಕ ಸರಕಾರ ಬ್ಯಾಲೆಟ್ ವೋಟ್ ಪದ್ದತಿಗೆ ಮರಳಿರುವುದು ಆಶ್ಚರ್ಯವಾಗಿದೆ. ಕರ್ನಾಟಕ ಸರಕಾರದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರ ಹೇಳಿಕೆ ಕೂಡ ಬ್ಯಾಲೆಟ್ ವೋಟ್ ಪದ್ದತಿಗೆ ಮರಳುತ್ತಿರುವುದಕ್ಕೆ ಸ್ಪಷ್ಟ ಕಾರಣವಾಗಿ ಕಾಣುತ್ತಿಲ್ಲ.ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರು “ಮತದಾರರ ಪಟ್ಟಿಯಲ್ಲಿ ಬಹು ದೊಡ್ಡ ವ್ಯತ್ಯಾಸ ಹಾಗೂ ದೂರುಗಳು ಬಂದಿವೆ. ಮತಪಟ್ಟಿಯಲ್ಲಿ ಇಲ್ಲದವರ ಸೇರ್ಪಡೆ ಒಳಗೊಂಡು ಮತಗಳವಿನ ಗಂಭೀರ ಆಪಾದನೆಗಳು ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಬಂದಿವೆ. ಈ ಎಲ್ಲಾ ಕಾರಣಕ್ಕೆ ವಿದ್ಯುನ್ಮಾನ ಮತ ಯಂತ್ರಗಳ ಬದಲಿಗೆ ಬ್ಯಾಲೆಟ್ ಪೇಪರ್ ಮೂಲಕ ಪಂಚಾಯತಿ, ಜಿಬಿಎ (ಗ್ರೇಟರ್ ಬೆಂಗಳೂರು ಅಥಾರಿಟಿ) ಮತ್ತು ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ನೆಡೆಸಲು ರಾಜ್ಯ ಚುನಾವಣಾ ಆಯೋಗಕ್ಕೆ ಶಿಫಾರಸ್ಸು ಮಾಡುವ ನಿರ್ಧಾರ ಮಾಡಲಾಗಿದೆ” ಎಂದು ಹೇಳಿಕೆ ಕೊಟ್ಟಿದ್ದಾರೆ. ಮತದಾರರ ಪಟ್ಟಿಯಲ್ಲಿ ಬಹು ದೊಡ್ಡ ವ್ಯತ್ಯಾಸ ಹಾಗೂ ದೂರುಗಳು ಬಂದಿವೆ ಎನ್ಬುವುದಕ್ಕೆ ವಿದ್ಯುನ್ಮಾನ ಮತಯಂತ್ರಗಳ ಬದಲಿಗೆ ಬ್ಯಾಲೆಟ್ ಪೇಪರ್ ಪದ್ದತಿಗೆ ಬದಲಾವಣೆ ಮಾಡಿದರೆ ದೂರು ಬಂದಿರುವ ಮತದಾರರ ಪಟ್ಟಿಯಲ್ಲಿನ ದೋಷ ಸರಿಯಾಗುವುದು ಹೇಗೆ? ಮತಪಟ್ಟಿಯಲ್ಲಿ ಇಲ್ಲದವರ ಸೇರ್ಪಡೆ ಒಳಗೊಂಡು ಮತಗಳ ಗಂಭೀರ ಆಪಾದನೆಗಳು ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಬಂದಿವೆ ಅನ್ನುವುದಕ್ಕೆ ವಿದ್ಯುನ್ಮಾನ ಮತಯಂತ್ರಗಳ ಬದಲಿಗೆ ಬ್ಯಾಲೆಟ್ ಪೇಪರ್ ಪದ್ದತಿಗೆ ಬದಲಾವಣೆ ಮಾಡಿದರೆ, ಆಪಾದನೆಗಳು ಸರಿಯಾಗುವುದು ಹೇಗೆ? ಮತಪಟ್ಟಿಯಲ್ಲಿರುವ ದೋಷಗಳ ಆರೋಪಕ್ಕೆ ವಿದ್ಯುನ್ಮಾನ ಮತಯಂತ್ರ ತೆಗೆದು, ಹಳೆಯ ಪದ್ದತಿ ತಂದರೆ ದೋಷಾರೋಪ ನಿವಾರಣೆಯಾಗುವುದು ಹೇಗೆ? ವಿದ್ಯುನ್ಮಾನ ಮತಯಂತ್ರವನ್ನೇ ಮುಂದುವರೆಸಿದರೂ ಮತಪಟ್ಟಿಯಲ್ಲಿರುವ ದೋಷಗಳ ಆರೋಪ ಹೆಚ್ಚಾಗುವುದೂ ಇಲ್ಲ!!
ಡಿಜಿಟಲ್ ವ್ಯವಹಾರಗಳಲ್ಲಿ ಲೋಪಗಳಿಲ್ವಾ? ಮೋಸ (ಹ್ಯಾಕ್) ಮಾಡುವ ಮೋಸ ಹೋಗುವ ಸಾಧ್ಯತೆಗಳಿಲ್ವಾ? ತಾಂತ್ರಿಕ ತೊಂದರೆಗಳಿಂದ ವ್ಯವಸ್ಥೆಯೇ ಸ್ಥಗಿತಗೊಂಡು ಜಾಮ್ ಆಗುವ ಪರಿಸ್ಥಿತಿ ಇಲ್ಲವಾ? ಅಂತ ಕೇಳಿದರೆ, ಖಂಡಿತವಾಗಿಯೂ ಇದೆ. ಯಾಕೆಂದರೆ ಸಾಫ್ಟ್ವೇರ್ ತಂತ್ರಜ್ಞಾನ ಕಂಡು ಹಿಡಿದಿದ್ದು ದೇವರಲ್ಲ, ಮನುಷ್ಯ!!! ಹಾಗಂತ ವ್ಯಾಲಿಡೇಷನ್ ಮಾಡಿ, ಆಡಿಟ್ ಮಾಡಿ, ಸಾಕಷ್ಟು ಟ್ರಯಲ್ಗಳನ್ನು ಮಾಡಿ ಅನುಷ್ಠಾನಕ್ಕೆ ತಂದಂತಹ ಅಡ್ವಾನ್ಸ್ಡ್ ತಂತ್ರಜ್ಞಾನವನ್ನು ತೆಗೆದು ಹಳೇ ಬ್ಯಾಲೆಟ್ ಪದ್ದತಿಗೆ ಹೋಗುವುದು ಅಸಂಬದ್ದವೇ ಸರಿ. ಒಂದು ವೇಳೆ ವಿದ್ಯುನ್ಮಾನ ಮತಯಂತ್ರದಲ್ಲಿ ದೋಷಗಳಿವೆ, ಮೋಸ ಮಾಡಲು ಸಾಧ್ಯತೆಗಳಿವೆ ಅಂತಾದರೆ, ಅದನ್ನು ಪುನಃ ಪರಿಶೀಲನೆಗೆ ಒಳಪಡಿಸಬೇಕು, ಎ ಟು ಝಡ್ ಪರೀಕ್ಷೆ ಮಾಡಿ, ಲೋಪ ದೋಷಗಳಿದ್ದರೆ ಸರಿ ಪಡಿಸುವ ಪ್ರಯತ್ನ ಆಗಬೇಕು. ಅದು ಬಿಟ್ಟು, ಯಾವುದೇ ಲೋಪ ದೋಪದೋಷಗಳು ಇಲ್ಲದೇ ಇದ್ದರೂ, ಕೇವಲ ಅನುಮಾನ ವ್ಯಕ್ತ ಪಡಿಸುತ್ತಾ, ವಿದ್ಯುನ್ಮಾನ ತಂತ್ರಜ್ಞಾನವನ್ನೇ ಬದಿಗಿಡುವುದು ಸಮಂಜಸ ಅಲ್ಲ. ಅಷ್ಟಕ್ಕೂ ದೇಶದ ಪರಮೋಚ್ಛ ನ್ಯಾಯಾಲಯವೂ ವಿದ್ಯುನ್ಮಾನ ಮತಯಂತ್ರ ಪಾರದರ್ಶಕವಾಗಿದೆ ಎಂದು ಸ್ಪಷ್ಟಪಡಿಸಿದೆ. ಹಳೆಯ ಬ್ಯಾಲೆಟ್ ಪೇಪರ್ ಪದ್ದತಿಯಲ್ಲಿ ಒಂದು ವೇಳೆ ದೋಷಗಳ ಆರೋಪಗಳಿದ್ದರೆ ಸರಕಾರದ ಮುಂದಿನ ಕ್ರಮಗಳೇನು? ಇನ್ನು ವಿದ್ಯುನ್ಮಾನ ಅಥವಾ ಡಿಜಿಟಲ್ ತಂತ್ರಜ್ಞಾನವನ್ನು ಅನುಮಾನಿಸುವುದಾದರೆ, ಈಗಾಗಲೆ ವ್ಯವಸ್ಥೆಯಲ್ಲಿ ಇರುವ ಸಾವಿರಾರು ವಿದ್ಯುನ್ಮಾನ ತಂತ್ರಜ್ಞಾನವನ್ನು ಅನುಮಾನಿಸಬೇಕಾಗುತ್ತದೆ ಅಲ್ಲವಾ? ಸರಕಾರವೇ ತಂದ, ಸರಕಾರದ ವಿದ್ಯುನ್ಮಾನ ತಂತ್ರಜ್ಞಾನವನ್ನು ಸರಕಾರವೇ ಅನುಮಾನಿಸುತ್ತದೆ ಎಂದಾದರೆ, ಸರಕಾರ ತಂದ ಉಳಿದ ವಿದ್ಯುನ್ಮಾನ ತಂತ್ರಜ್ಞಾನವನ್ನು ಸಾರ್ವಜನಿಕರು ಅನುಮಾನಿಸಲು ಅವಕಾಶ ಮಾಡಿದಂತಾಗುವುದಿಲ್ಲವೆ?
ಸರಕಾರದ ವಿದ್ಯುನ್ಮಾನ ತಂತ್ರಜ್ಞಾನ ವ್ಯವಸ್ಥೆ ಎಲ್ಲವುದೂ ಈಗ ಸಾರ್ವಜನಿಕರಲ್ಲಿ ಅನುಮಾನ ಸೃಷ್ಟಿಸುತ್ತವೆ. ಸರಕಾರಿ ಬಸ್ ಪ್ರಯಾಣಕ್ಕೆ ತೆಗೆದುಕೊಂಡ ಡಿಜಿಟಲ್ ಟಿಕೇಟ್ ಹಣ ಸರಕಾರಕ್ಕೇ ಹೋಗುತ್ತಿದೆಯಾ? ಅತಿ ಹೆಚ್ಚು ಶೇಕಡಾ ಟ್ಯಾಕ್ಸ್ ಇರುವ ಮದ್ಯ, ಪೆಟ್ರೋಲ್, ಡೀಸಲ್ ಟ್ಯಾಕ್ಸ್ಗಳು ಸರಕಾರದ ಬೊಕ್ಕಸಕ್ಕೇ ಕ್ರೆಡಿಟ್ ಆಗುತ್ತಿದೆಯಾ? ಮನೆಯ ಪೋರ್ಟಿಕೋದಲ್ಲಿ ಕುಳಿತು ಕಟ್ಟಿದ ಕರೆಂಟ್ ಬಿಲ್ಲು, ಮನೆ ಕಂದಾಯ, ವಾಟರ್ ಚಾರ್ಜ್ ಗಳಲ್ಲಿ ಕೆಲವಷ್ಟು ಮೊತ್ತ ಬೇರೆ ಕಡೆಗೆ ಹೋಗುತ್ತಿರಬಹುದಾ? ವಿದ್ಯುನ್ಮಾನ ತಂತ್ರಜ್ಞಾನದೊಂದಿಗೆ ಮಾಡುತ್ತಿರುವ ಜಾತಿಗಣತಿ ಜಿಯೋಟ್ಯಾಗ್ ಸಮೀಕ್ಷೆ ಕತೆ ಏನು? ವಿದ್ಯುನ್ಮಾನ ತಂತ್ರಜ್ಞಾನದೊಂದಿಗೆ ಸೆಪ್ಟೆಂಬರ್ 22 ರಿಂದ ಮಾಡಲು ಹೊರಟಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಎಲ್ಲಾ ಜನರನ್ನು ತಲುಪಲು ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ವಿದ್ಯುತ್ ಸಂಪರ್ಕ ಆಧರಿಸಿ ಮನೆ ಮನೆ ಸಮೀಕ್ಷೆಗೆ ಸಿದ್ಧತೆ ನಡೆಸಿದೆ. ಸಮೀಕ್ಷೆಗೆ ಪ್ರತೀ ಮನೆಗೆ ಡಿಜಿಟಲ್ ಕ್ಯೂಆರ್ ಕೋಡ್ ಇರುವ ಸ್ಟಿಕ್ಕರ್ ಅಂಟಿಸುವ ಕೆಲಸ ಈಗಾಗಲೆ ಭರದಿಂದ ಸಾಗಿದೆ. ವಿದ್ಯುತ್ ಮೀಟರ್ ಆಧರಿಸಿ, ಜಿಯೋ ಟ್ಯಾಗಿಂಗ್ ಮೂಲಕ ವಿಶೇಷ ಆ್ಯಪ್ ನಲ್ಲಿ ಮನೆಗಳನ್ನು ಗುರುತಿಸಲಾಗಿದ್ದು, ಸ್ಟಿಕ್ಕರ್ ಅಂಟಿಸಲಾಗುತ್ತಿದೆ. ಈ ಅಂಟಿಸಿದ ಸ್ಟಿಕರ್ ಸಹಾಯದೊಂದಿಗೆ, ಜಿಯೋ ಟ್ಯಾಗಿಂಗ್ ಮೂಲಕ ಲೊಕೇಷನ್ ಆಧರಿಸಿ ಸಮೀಕ್ಷಕರು ಮನೆಗಳಿಗೆ ಭೇಟಿ ನೀಡಿ, ನಿವಾಸಿಗಳಿಂದ ದತ್ತಾಂಶಗಳನ್ನು ಸಂಗ್ರಹಿಸಿ, ಸಂಬಂಧಿಸಿದ ಸಾಫ್ಟ್ವೇರ್ಗೆ ದಾಖಲಿಸುತ್ತಾರೆ. ದತ್ತಾಂಶಗಳ ದಾಖಲೆ ಎಂಟ್ರಿ ಆದ ಮೇಲೆ ಎಸ್ಎಮ್ಎಸ್ ಮೂಲಕ ಸರ್ವೆ ಐಡಿ ನಂಬರ್ ಜನರೇಟ್ ಆಗಿ ಸಮೀಕ್ಷಕರಿಗೆ ತಲುಪಿ, ಅದನ್ನು ಈ ಮೊದಲೇ ಮನೆಗಳಲ್ಲಿ ಅಂಟಿಸಿದ ಸ್ಟಿಕರ್ನಲ್ಲಿ ನಮೂದಿಸುತ್ತಾರೆ. ಈಗ ಪ್ರಶ್ನೆ ಇರುವುದು, ಈ ಜಿಯೋ ಟ್ಯಾಗಿಂಗ್ ವಿದ್ಯುನ್ಮಾನ ಸಿಸ್ಟಮ್ ಎಷ್ಟರ ಮಟ್ಟಿಗೆ ಸರಿ ಇದೆ? ವಿದ್ಯುನ್ಮಾನ ಮತ ಯಂತ್ರದಲ್ಲಿ ದೋಷಗಳ ಆರೋಪ ಇದೆ ಅಂತಾದರೆ, ವಿದ್ಯುನ್ಮಾನ ಜಿಯೋ ಟ್ಯಾಗಿಂಗ್ನಲ್ಲೂ ದೋಷಗಳಿರಬಹುದು ಅಲ್ವೇ? ಮೂರುವರೆ ದಶಕದಿಂದ ಜಾರಿಯಲ್ಲಿರುವ ವಿದ್ಯುನ್ಮಾನ ಮತಯಂತ್ರದಲ್ಲಿ ದೋಷ ಇದೆ ಎಂದು ಆರೋಪಿಸಿ ಬದಿಗಿಡುವುದಾದರೆ, ಈಗಷ್ಟೇ ಜನ್ಮ ತಾಳಿದ ವಿದ್ಯುನ್ಮಾನ ಜಿಯೋ ಟ್ಯಾಗಿಂಗ್ ಪರಿ ಪೂರ್ಣವಾಗಿದೆ ಎಂದು ಹೇಗೆ ನಂಬುವುದು?
ಯಾವ ಸರಕಾರ ಡಿಜಿಟಲ್ ಜಿಯೋ ಟ್ಯಾಗಿಂಗ್ ಜಾತಿ ಎಣಿಕೆ ಇರಲಿ ಎನ್ನುತ್ತದೋ ಅದೇ ಸರಕಾರ ಡಿಜಿಟಲ್ ವಿದ್ಯುನ್ಮಾನ ಮತ ಎಣಿಕೆಯ ಇವಿಎಂ ಬೇಡ ಅನ್ನುವುದೇಕೆ? ವಿದ್ಯುನ್ಮಾನ ಮತ ಎಣಿಕೆಯ ಇವಿಎಂನಲ್ಲಿ ದೋಷ ಇದೆ ಎಂಬುದು ತಾಂತ್ರಿಕ ತಜ್ಞರಲ್ಲದ ಕೇವಲ ಜನಪ್ರತಿನಿಧಿಗಳ ರಾಜಕೀಯ ಅಭಿಪ್ರಾಯವಾಗಿ ಮಾತ್ರ ಕಾಣುತ್ತಿದೆ. ಅದಲ್ಲ, ತಾಂತ್ರಿಕ ತಜ್ಞರೇ ಇವಿಎಂನಲ್ಲಿ ದೋಷದ ಆರೋಪ ಮಾಡುತ್ತಾರೆ ಎಂದಾದರೆ, ಅದನ್ನು ಸಾಕ್ಷಿಗಳೊಂದಿಗೆ ಸಾಬೀತುಪಡಿಸಬೇಕಲ್ಲವೆ? ದೋಷ ಇದ್ದು ಸಾಬೀತುಗೊಂಡರೆ, ಅದನ್ನು ಸರಿಪಡಿಸಬೇಕಲ್ಲವೆ? ಏನೂ ಮಾಡದೆ, ಸ್ಪಷ್ಟ ಕಾರಣವೂ ಇಲ್ಲದೆ ವಿದ್ಯುನ್ಮಾನ ಮತ ಎಣಿಕೆಯ ಬದಲಿಗೆ ಬ್ಯಾಲೆಟ್ ವೋಟ್ಗೆ ಬದಲಾಗುವುದು ಅರ್ಥವಿಲ್ಲದ ಅಸಂಬದ್ದ ಪೊಲಿಟಿಕಲ್ ನಡೆಯಾಗಿ ಕಾಣುತ್ತಿದೆ. “ಡಿಜಿಟಲ್ ಜಾತಿ ಎಣಿಕೆ ಇರಲಿ, ಡಿಜಿಟಲ್ ಮತ ಎಣಿಕೆ ಬೇಡ” ಎಂಬುದು ಡಿಜಿಟಲ್ ವ್ಯವಸ್ಥೆಗಳ ವಿಚಾರದಲ್ಲಿ ಸರಕಾರ ದ್ವಂದ್ವ ನಿಲುವನ್ನು ತಳೆದಂತೆ ಕಾಣುತ್ತದೆ ಬಿಟ್ಟರೆ ಬೇರೇನು ಇಲ್ಲ. ಸರಕಾರ ಈ ದ್ವಂದ್ವ ನಿಲುವಿನ ರಾಹುಗ್ರಸ್ತ ಗ್ರಹಣದಿಂದ ಹೊರಬರಲಿ!!!