ಮುಂಬಯಿಯ ಪ್ರತಿಷ್ಟಿತ ಸಂಸ್ಥೆಗಳಲ್ಲೊಂದಾದ ಬಾಂಬೆ ಬಂಟ್ಸ್ ಅಸೋಸಿಯೇಷನ್ ಇದರ ಸಾಂಸ್ಕೃತಿಕ ಸಮಿತಿಯ ಆಶ್ರಯದಲ್ಲಿ ಮುಂಬಯಿಯ ಕಲಾ ರಸಿಕರಿಗೆ ಹಾಗೂ ಯುವ ಪೀಳಿಗೆಗೆ ಧರ್ಮ, ಸಂಸ್ಕೃತಿಯ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ವರ್ಷಂಪ್ರತಿ ಹಲವು ಯಕ್ಷಗಾನ ತಾಳಮದ್ದಲೆ, ಯಕ್ಷಗಾನ ಬಯಲಾಟಗಳನ್ನು ನಡೆಸುತ್ತಾ ಬಂದಿದೆ. ಅದೇ ರೀತಿ, ಅಧ್ಯಕ್ಷ ನ್ಯಾಯವಾದಿ ಡಿ.ಕೆ ಶೆಟ್ಟಿಯವರ ಮುಂದಾಳತ್ವದಲ್ಲಿ, ಪ್ರಕಾಶ ಶೆಟ್ಟಿ ಇವರ ಕಲಾಪ್ರಕಾಶ ಪ್ರತಿಷ್ಠಾನ (ರಿ) ಮುಂಬಯಿ ಇದರ ಸಂಯೋಜನೆಯಲ್ಲಿ, ಸೆಪ್ಟೆಂಬರ್ 06 ರಂದು ‘ಭೃಗು ಶಾಪ’ ಎಂಬ ಪೌರಾಣಿಕ ಯಕ್ಷಗಾನ ತಾಳಮದ್ದಲೆ ಕಾರ್ಯಕ್ರಮ ಜರಗಿತು. ಕಾರ್ಯಕ್ರಮವನ್ನು ಬಾಂಬೆ ಬಂಟ್ಸ್ ಅಸೋಸಿಯೇಷನ್ ಅಧ್ಯಕ್ಷ ನ್ಯಾಯವಾದಿ ಡಿ.ಕೆ ಶೆಟ್ಟಿಯವರು ಎಲ್ಲಾ ಪಧಾದಿಕಾರಿಗಳ ಮತ್ತು ಮಾಜಿ ಅಧ್ಯಕ್ಷರ ಉಪಸ್ಥಿತಿಯಲ್ಲಿ ದೀಪ ಪ್ರಜ್ವಲಿಸಿ ಉದ್ಘಾಟಿಸಿದರು.

ಬಾಂಬೆ ಬಂಟ್ಸ್ ಅಸೋಸಿಯೇಷನ್ ನಿರಂತರವಾಗಿ ಮೊದಲಿನಿಂದಲೂ ತಾಳಮದ್ದಲೆ, ಯಕ್ಷಗಾನದಂತಹ ಕಾರ್ಯಕ್ರಮಗಳಿಗೆ ಆಧ್ಯತೆ ನೀಡುತ್ತಾ ಬಂದಿದೆ. ಮುಂದೆಯೂ ಇದೇ ರೀತಿಯಲ್ಲಿ ನಡೆಸುತ್ತಾ ಬರುತ್ತದೆ. ಆದರೆ, ಇದಕ್ಕೆ ಸದಸ್ಯರ ಮತ್ತು ಅಭಿಮಾನಿಗಳ ಪ್ರೋತ್ಸಾಹ, ಸಹಕಾರ ಅಗತ್ಯ ಎಂದು ಹೇಳಿದರು. ಕಾರ್ಯಕ್ರಮಕ್ಕೆ ಬರುವವರು ಬರಲಿಲ್ಲವೆಂದು ತಡವಾಗಿ ಆರಂಭಿಸಿದರೆ ಮುಂದಿನ ದಿನಗಳಲ್ಲಿ ಬರುವವರು ಇನ್ನೂ ತಡವಾಗಿಯೇ ಬರುತ್ತಾರೆ. ಬದಲಾಗಿ ಸಮಯಕ್ಕೆ ಸರಿಯಾಗಿ ಕಾರ್ಯಕ್ರಮವನ್ನು ಆರಂಭಿಸಿದರೆ ಮುಂದಿನ ಬಾರಿ ಅವರು ಸಮಯಕ್ಕೆ ಸರಿಯಾಗಿ ಉಪಸ್ಥಿತರಿರುತ್ತಾರೆ. ಕಾರ್ಯಕ್ರಮ ಸಂಯೋಜಿಸುವಾಗ ಸಮಯಪ್ರಜ್ಞೆ ಅತ್ಯಗತ್ಯ ಎಂದು ಅಧ್ಯಕ್ಷ ನ್ಯಾಯವಾದಿ ಡಿ.ಕೆ ಶೆಟ್ಟಿ ಅವರು ನುಡಿದರು.
ಸಾಂಸ್ಕೃತಿಕ ಸಮಿತಿಯ ಕಾರ್ಯಾಧ್ಯಕ್ಷ ಅದ್ಯಪಾಡಿ ಬಾಲಕೃಷ್ಣ ಶೆಟ್ಟಿ ಅವರು ಊರಿನ ಕಲಾವಿದರನ್ನು ಪರಿಚಯಿಸಿದರು. ಅಧ್ಯಕ್ಷ ನ್ಯಾಯವಾದಿ ಡಿ.ಕೆ ಶೆಟ್ಟಿ, ಉಪಾಧ್ಯಕ್ಷ ಐಕಳ ಕಿಶೋರ್ ಶೆಟ್ಟಿ, ಗೌ ಪ್ರ ಕಾರ್ಯದರ್ಶಿ ನ್ಯಾಯವಾದಿ ಶೇಖರ ಆರ್ ಶೆಟ್ಟಿ, ಖಜಾಂಜಿ ಸಿಎ ವಿಶ್ವನಾಥ ಶೆಟ್ಟಿ ಅವರುಗಳು ಕಲಾವಿದರನ್ನು ಮತ್ತು ಪ್ರಕಾಶ ಶೆಟ್ಟಿ ಅವರನ್ನು ಶಾಲು ಹಾಕಿ ಹೂಗುಚ್ಛಗಳನ್ನಿತ್ತು ಗೌರವಿಸಿದರು. ಅನಂತರ ತವರೂರ ಕಲಾವಿದರಿಂದ ‘ಭೃಗು ಶಾಪ’ ತಾಳಮದ್ದಳೆ ಪ್ರದರ್ಶನಗೊಂಡಿತು. ಒಟ್ಟಿನಲ್ಲಿ ಎಲ್ಲಾ ಕಲಾವಿದರೂ ತಮ್ಮ ಪಾಂಡಿತ್ಯವನ್ನು ಅರ್ಥವೈಖರಿಯಲ್ಲಿ ತೋರಿಸಿ ಕಲಾ ರಸಿಕರನ್ನು ಮಂತ್ರಮುಗ್ಧರನ್ನಾಗಿಸಿ, ಕಾರ್ಯಕ್ರಮದ ಕೊನೆಯವರೆಗೂ ತಟಸ್ಧರಾಗಿ ಕುಳಿತು ಆಲಿಸುವಂತೆ ಮಾಡಿದರು. ಒಟ್ಟಾರೆ ಇದು ಒಂದು ಅತ್ಯುತ್ತಮ ಕಾರ್ಯಕ್ರಮವಾಗಿ ಮೂಡಿಬಂತು. ಈ ಕಾರ್ಯಕ್ರಮದಲ್ಲಿ ಅಧ್ಯಕ್ಷರು, ಎಲ್ಲಾ ಪದಾಧಿಕಾರಿಗಳು, ಮಾಜಿ ಅಧ್ಯಕ್ಷರುಗಳು, ಉಪ ಸಮಿತಿಯ ಕಾರ್ಯಾಧ್ಯಕ್ಷರುಗಳು, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ, ಮಾಜಿ ಮಹಿಳಾ ಕಾರ್ಯಾಧ್ಯಕ್ಷೆಯರ ಹಾಗೂ ಸದಸ್ಯರು ಮತ್ತು ವಿವಿಧ ಗಣ್ಯರು ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಯಾಗುವಂತೆ ಸಹಕರಿಸಿದರು. ಕಾರ್ಯಕ್ರಮವನ್ನು ಅದ್ಯಪಾಡಿ ಬಾಲಕೃಷ್ಣ ಶೆಟ್ಟಿ ನಿರೂಪಿಸಿ ವಂದಿಸಿದರು.