ಹುಬ್ಬಳ್ಳಿ ವಿದ್ಯಾನಗರ ಶಿರೂರ ಪಾರ್ಕ್ ಕೊಠಾರಿ ಹೌಸ್ ನಲ್ಲಿ ಬ್ಯಾಂಕ್ ಆಫ್ ಮಹಾರಾಷ್ಟ್ರದ ವಿದ್ಯಾನಗರ ಶಾಖಾ ಕಚೇರಿಯ ಉದ್ಘಾಟನೆ ಗುರುವಾರ ನಡೆಯಿತು. ಬ್ಯಾಂಕಿನಿಂದ ನಗರದಲ್ಲಿ ಆರನೇ ಹಾಗೂ ರಾಜ್ಯದಲ್ಲಿ 95ನೇ ಶಾಖೆ ಇದಾಗಿದೆ. ಹುಬ್ಬಳ್ಳಿ ದಾರವಾಡ ಬಂಟರ ಸಂಘದ ಮಾಜಿ ಅಧ್ಯಕ್ಷ, ಖ್ಯಾತ ಲೆಕ್ಕ ಪರಿಶೋಧಕ ಎಸ್ ಬಿ ಶೆಟ್ಟಿ ಅವರು ಉದ್ಘಾಟನೆ ನೆರವೇರಿಸಿ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಮಾರುಕಟ್ಟೆಯಲ್ಲಿ ಬ್ಯಾಂಕುಗಳು ಸೇವಾ ಮನೋಭಾವದೊಂದಿಗೆ ಗ್ರಾಹಕರನ್ನು ಸೆಳೆಯುವಲ್ಲಿ ಗಮನ ಹರಿಸಬೇಕಾಗಿದೆ. ಗ್ರಾಹಕರ ಅಗತ್ಯಗಳನ್ನು ಮನಗೊಂಡು ಅದಕ್ಕೆ ತಕ್ಕಂತೆ ಸೇವೆಯನ್ನು ಒದಗಿಸಬೇಕು ಎಂದರು.

ಹುಬ್ಬಳ್ಳಿ ಜೆ.ಎಂ.ಎಫ್.ಸಿ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ಯಮನಪ್ಪ ಕರೇಹನುಮಂತಪ್ಪ ಮಾತನಾಡಿ, ದೇಶದ ಆರ್ಥಿಕ ಪ್ರಗತಿಯಲ್ಲಿ ಬ್ಯಾಂಕುಗಳು ದೊಡ್ಡ ಕೊಡುಗೆಯನ್ನು ನೀಡುತ್ತಿವೆ. ಜನರ ಜೀವನ ಸ್ತರವನ್ನು ಸುಧಾರಿಸುವ ಮೂಲಕ ಸಮಾಜದ ಅಭಿವೃದ್ಧಿಯಲ್ಲೂ ಸಹಯೋಗ ಕೊಡುತ್ತಿವೆ. ನಾವೆಲ್ಲರೂ ಒಟ್ಟಾಗಿ ಸದೃಢ ವೈವಿಧ್ಯ ಹಾಗೂ ಆರ್ಥಿಕವಾಗಿ ಸುಧಾರಿತ ಸಮಾಜವನ್ನು ಕಟ್ಟಬೇಕಿದೆ ಎಂದರು. ಬ್ಯಾಂಕಿನ ಹುಬ್ಬಳ್ಳಿ ವಲಯ ವ್ಯವಸ್ಥಾಪಕಿ ಸುಚೇತ ಡಿಸೋಜಾ ಮಾತನಾಡಿ, ಬ್ಯಾಂಕನ್ನು ಜನಸಾಮಾನ್ಯರ ಬಳಿಗೆ ಕೊಂಡೊಯ್ಯುವುದು ಹಾಗೂ ಬ್ಯಾಂಕಿಂಗ್ ಸೇವೆಗಳು ಸರಳ ಮತ್ತು ಸುಲಲಿತವಾಗಿ ಸಿಗುವಂತೆ ಮಾಡುವುದು ನಮ್ಮ ಉದ್ದೇಶವಾಗಿದೆ. ಉತ್ತರ ಕರ್ನಾಟಕ ಭಾಗದಲ್ಲಿ 49 ಶಾಖೆಗಳನ್ನು ತೆರೆಯುವ ಮೂಲಕ ಈ ಭಾಗದ ಆರ್ಥಿಕ ಅಭಿವೃದ್ಧಿಗೆ ಪೂರಕವಾದ ಅವಕಾಶಗಳನ್ನು ಸೃಷ್ಟಿಸಿದ್ದೇವೆ ಎಂದರು.
ಗ್ರಾಹಕರಿಗೆ ಅನುಕೂಲವಾಗುವ ರೀತಿಯಲ್ಲಿ ಡಿಜಿಟಲ್ ಸೇವೆಗಳನ್ನು ಪ್ರಸ್ತುತಪಡಿಸಿದ್ದೇವೆ. ಸುರಕ್ಷಿತ ಮತ್ತು ಭದ್ರತೆಯ ಅತ್ಯುನ್ನತ ಮಾನದಂಡಗಳನ್ನು ಒಳಗೊಂಡ ವಾಟ್ಸಾಪ್ ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್ ಹಾಗೂ ಇಂಟರ್ನೆಟ್ ಬ್ಯಾಂಕಿಂಗ್ ಸೌಲಭ್ಯಗಳನ್ನು ಪರಿಚಯಿಸುತ್ತಿದ್ದೇವೆ ಎಂದು ತಿಳಿಸಿದರು. ಹುಬ್ಬಳ್ಳಿ ಜಿ.ಎಂ.ಎಫ್.ಸಿ ಪ್ರಧಾನ ಸಿವಿಲ್ ನ್ಯಾಯಾಧೀಶ ವಿಶ್ವನಾಥ ಯಮಕನಮರಡಿ ಉಪಸ್ಥಿತರಿದ್ದರು.