ಸಂಸ್ಕಾರಯುತ ಸಮಾಜ ನಿರ್ಮಾಣಕ್ಕೆ ಗಣೇಶೋತ್ಸವ ಪೂರಕವಾಗಿದ್ದು, ಆಡಂಬರವಿಲ್ಲದೆ ಇಲ್ಲಿ ಕೇವಲ ದೇವರ ಸಂಕೀರ್ತನೆಯ ಭಜನೆಯ ಮೂಲಕ ಗಣಪತಿಯ ಶೋಭಾಯಾತ್ರೆ ಸಾಗುವುದು ಎಲ್ಲರಿಗೂ ಮಾದರಿಯಾಗಿದೆ ಎಂದು ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು. ಅವರು ಮಂಗಳೂರಿನ ಬಂಟ್ಸ್ ಹಾಸ್ಟೆಲ್ ನಲ್ಲಿ ಬಂಟರ ಯಾನೆ ನಾಡವರ ಮಾತೃ ಸಂಘ, ಶ್ರೀ ಸಿದ್ದಿವಿನಾಯಕ ಪ್ರತಿಷ್ಠಾನ ಹಾಗೂ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯಿಂದ ನಡೆಯುತ್ತಿರುವ 19ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಶೋಭಾಯಾತ್ರೆಗೆ ಚಾಲನೆ ನೀಡಿ ಮಾತನಾಡಿದರು. ಶಾಸಕ ವೇದವ್ಯಾಸ ಕಾಮತ್ ಅವರು ಮಾತನಾಡಿ, ಸಮಾಜದ ಎಲ್ಲಾ ಕ್ಷೇತ್ರಗಳಲ್ಲಿ ಗಣನೀಯ ಕೊಡುಗೆ ನೀಡಿದ ಬಂಟ ಸಮಾಜ ಅತ್ಯಂತ ವ್ಯವಸ್ಥಿತವಾಗಿ ಸಂಘಟಿಸುತ್ತಿರುವ ಗಣೇಶೋತ್ಸವದಿಂದ ಎಲ್ಲರಿಗೂ ಒಳಿತಾಗಲಿ ಎಂದು ಹಾರೈಸಿದರು.

ಯುವ ನೇತಾರ ಮಿಥುನ್ ರೈ ಮಾತನಾಡಿ, ಸಮಾಜದ ಒಗ್ಗಟ್ಟಿಗೆ ಗಣೇಶೋತ್ಸವ ಪ್ರೇರಣೆ ನೀಡಲಿ ಎಂದರು. ಉದ್ಯಮಿ ಅರುಣೋದಯ ರೈ ಮುಖ್ಯ ಅತಿಥಿಯಾಗಿದ್ದರು. ಈ ಸಂದರ್ಭದಲ್ಲಿ ಸಾಧಕರಾದ ಬಂಟರ ಮಾತೃ ಸಂಘದ ಮಂಗಳೂರು ತಾಲೂಕು ಸಮಿತಿಯ ಮಾಜಿ ಸಂಚಾಲಕ ಜಯರಾಮ ಸಾಂತ, ಸುಶಾಂತ್ ಶೆಟ್ಟಿ, ಆತ್ಮೀ ಅಡಪ್ಪ ಹಾಗೂ ಸುರಾಗ್ ರೈ ಅವರನ್ನು ಸನ್ಮಾನಿಸಲಾಯಿತು. ವಿವಿಧ ಬಂಟರ ಸಂಘಗಳ ಅಧ್ಯಕ್ಷರುಗಳಾದ ಅಶೋಕ್ ಶೆಟ್ಟಿ, ರತ್ನಾಕರ ಶೆಟ್ಟಿ, ಮಹಾಬಲ ಚೌಟ, ಸತೀಶ್ ಶೆಟ್ಟಿ, ವಿಜಯ ಶೆಟ್ಟಿ, ಜಯರಾಮ್ ಭಂಡಾರಿ ಮತ್ತಿತರರು ಉಪಸ್ಥಿತರಿದ್ದರು.
ಸಿದ್ಧಿ ವಿನಾಯಕ ಪ್ರತಿಷ್ಟಾನದ ಆಡಳಿತ ಟ್ರಸ್ಟಿ ಅಜಿತ್ ಕುಮಾರ್ ರೈ ಮಾಲಾಡಿ ಅಧ್ಯಕ್ಷತೆ ವಹಿಸಿದ್ದರು. ಮಾತೃ ಸಂಘದ ಉಪಾಧ್ಯಕ್ಷ ಹೇಮನಾಥ ಶೆಟ್ಟಿ ಕಾವು ಸ್ವಾಗತಿಸಿದರು. ಸಂಘಟನಾ ಸಮಿತಿಯ ಸಂಚಾಲಕ ದಿವಾಕರ ಸಾಮಾನಿ ಚೇಳ್ಯಾರುಗುತ್ತು ಕಾರ್ಯಕ್ರಮ ನಿರೂಪಿಸಿದರು. ಪ್ರತಿಷ್ಟಾನದ ಟ್ರಸ್ಟಿ ಡಾ. ಆಶಾಜ್ಯೋತಿ ರೈ ವಂದಿಸಿದರು. ಬಳಿಕ ವಿವಿಧೆಡೆಗಳಿಂದ ಆಗಮಿಸಿದ ಒಟ್ಟು 55 ಭಜನಾ ತಂಡಗಳ ಸಹಿತ ಶೋಭಾಯಾತ್ರೆ ನಡೆದು ರಥಬೀದಿಯ ಶ್ರೀ ಮಹಮ್ಮಾಯಿ ದೇವಳದ ಕೆರೆಯಲ್ಲಿ ಶ್ರೀ ಗಣೇಶ ಮೂರ್ತಿಯನ್ನು ವಿಸರ್ಜಿಸಲಾಯಿತು.