ಕರ್ನಾಟಕ ಸಂಘ ಕತಾರ್ (ಕೆಎಸ್ಕ್ಯೂ) 2025 ರ ಆಗಸ್ಟ್ 10 ರಂದು ಬೆಂಗಳೂರಿನ ಬಸವೇಶ್ವರ ನಗರದ ಕರ್ನಾಟಕ ಎಂಜಿನಿಯರ್ಸ್ ಅಕಾಡೆಮಿಯಲ್ಲಿ ಸಂಸ್ಥಾಪಕರಿಗೆ, ರಜತಪಥದ ಹರಿಕಾರರಿಗೆ ಅಭಿವಂದನಾ ಕಾರ್ಯಕ್ರಮವನ್ನು ಆಯೋಜಿಸಿ, ತನ್ನ ಬೆಳ್ಳಿಹಬ್ಬದ ಸಂಭ್ರಮವನ್ನು ತವರು ನೆಲಕ್ಕೆ ತರುವುದರ ಮೂಲಕ ರಜತ ವರ್ಷಕ್ಕೆ ಇನ್ನಷ್ಟು ಮೆರುಗನ್ನು ನೀಡಿತು. ಈ ಸುಸಂಧರ್ಭದಲ್ಲಿ “25 ವರ್ಷ – 25 ನೊಂದ ಮುಖಗಳಲ್ಲಿ ಹರ್ಷ” ಎಂಬ ಧ್ಯೇಯದೊಂದಿಗೆ, ಸದಸ್ಯರು ಮತ್ತು ಹಿತೈಷಿಗಳಿಂದ ಸಂಗ್ರಹಿಸಿದ ನಿಧಿಯ ಮೂಲಕ, ರಾಜ್ಯದ ಬೇರೆ ಬೇರೆ ಕಡೆ ಅನಾಥರಿಗೆ, ವಿಶೇಷ ಚೇತನರಿಗೆ, ಏಡ್ಸ್ ಕ್ಯಾನ್ಸರಿನಂಥಹ ಭೀಕರ ಕಾಯಿಲೆಗಳಿಂದ ಬಳಲುವರಿಗೆ ಆಶ್ರಮಗಳನ್ನು ಸ್ಥಾಪಿಸಿ ನಡೆಸುವ 12 ನಿಸ್ವಾರ್ಥ ಸಮಾಜಸೇವಕರನ್ನು ಬಿರುದಿನೊಂದಿಗೆ ಗೌರವ ಧನವನ್ನು ನೀಡಿ ಸನ್ಮಾನಿಸಲಾಯಿತು.

ಕೊಂಕಣ್ ರೈಲ್ವೆಯಲ್ಲಿ ಕೆಲಸ ಮಾಡುವಾಗ ಅಪಘಾತಕ್ಕೊಳಗಾಗಿ 34 ವರ್ಷಗಳಿಂದ ಹಾಸಿಗೆಯಲ್ಲಿರುವ ಕುಂದಾಪುರದ ಜಯರಾಮ ಶೆಟ್ಟಿಯವರನ್ನು ‘ಮನೋಬಲದ ಜಯವೀರ’ ಬಿರುದಿನೊಂದಿಗೆ ಸ್ಮರಣಿಕೆ, ರಜತ ವರ್ಷದ ವಿಶೇಷ ಶಾಲು, ಗೌರವ ಧನದೊಂದಿಗೆ ಸನ್ಮಾನಿಸಲಾಯಿತು. ಕರ್ನಾಟಕ ಸಂಘ ಕತಾರ್ ಅಧ್ಯಕ್ಷ ಡಾ| ಮೂಡಂಬೈಲ್ ರವಿ ಶೆಟ್ಟಿಯವರ ಜೊತೆ ಈಗ ಉಡುಪಿಯಲ್ಲಿರುವ ದಿವಾಕರ್ ಪೂಜಾರಿ ಹಾಗೂ ಶಂಕರ್ ಶೆಟ್ಟಿಯವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.