ರಾಮಾಯಣದ ಅಡಿ ಚೆಂದ, ಭಾಗವತದ ಮುಡಿ ಚೆಂದ, ಮಹಾಭಾರತದ ನಡು ಚೆಂದ. ಯಕ್ಷಗಾನ ಪ್ರಸಂಗವಾಗಿ ಆಡಿ ತೋರಿಸುವ ಕೃಷ್ಣಸಂಧಾನವು ದೇಶ ವಿದೇಶಗಳಲ್ಲೂ ಮತ್ತು ಎಲ್ಲ ಕಾಲಕ್ಕೂ ಪ್ರಸ್ತುತ. ಅದು ಎಲ್ಲಾ ಸಮುದಾಯಗಳೂ ಆನಂದಿಸಬಹುದಾದ ಒಂದು ಪ್ರಸಂಗ. ಅದರಲ್ಲಿ ರಾಜಕೀಯ, ಆರ್ಥಿಕ ಹಾಗೂ ಸಾಂಸಾರಿಕ ಆಯಾಮಗಳಿವೆ. ಅಲ್ಲದೇ ಜಗಳವನ್ನು ಶಮನಗೊಳಿಸಬೇಕೆಂಬ ಸಾರ್ವತ್ರಿಕ ಸಂದೇಶವಿದೆ. ಮೂಲ ಭಾರತದಲ್ಲಿ ಸಂಧಾನ ಆಗಬೇಕೆಂದು ಕೃಷ್ಣನು ಹಾರ್ಧಿಕವಾಗಿ ಬಯಸಿದ್ದಾನೆ. ಅವನು ನರರಿಗೆ ಸಾರಥಿಯಾಗ ಬಯಸುವನು. ವ್ಯಾಸರ ಕೃಷ್ಣ ಸಂಧಿಪ್ರಿಯನಾದರೆ ಪ್ರಸಂಗದ ಕೃಷ್ಣ ಯುದ್ಧಪ್ರಿಯ. ದುರ್ಯೋಧನ ಛಲದೊಳ್ ಅಲ್ಲ; ಹಠದೊಳ್ ಕೌರವ. ಕೃಷ್ಣ ಸಂಧಾನ ಪ್ರಸಂಗವು ಬಹಳ ಆಸಕ್ತಿಕರವಾದುದು. ಹಾಗಾಗಿ ಶಾಶ್ವತವಾಗಿ ಉಳಿದಿದೆ ಎಂದು ವಿಶ್ರಾಂತ ಪ್ರಾಚಾರ್ಯ, ಹಿರಿಯ ಯಕ್ಷಗಾನ ಅರ್ಥಧಾರಿ, ಸಂಶೋಧಕ ಮತ್ತು ವಿದ್ವಾಂಸ ಡಾ. ಎಂ. ಪ್ರಭಾಕರ ಜೋಶಿ ನುಡಿದರು. ಆಗಸ್ಟ್ 12ರಂದು ಮಂಗಳವಾರ ಕಲೀನಾ ಕ್ಯಾಂಪಸ್ ನ ಜೆ. ಪಿ. ನಾಯಕ್ ಭವನದಲ್ಲಿ ಮುಂಬೈ ವಿಶ್ವವಿದ್ಯಾಲಯ ಕನ್ನಡ ವಿಭಾಗ ಆಯೋಜಿಸಿದ್ದ ಸದಾನಂದ ಸುವರ್ಣ ಪ್ರಾಯೋಜಿತ ದತ್ತಿ ಉಪನ್ಯಾಸ ಮಾಲಿಕೆ -2025ರ ಕಾರ್ಯಕ್ರಮದಲ್ಲಿ ‘ಯಕ್ಷಗಾನ- ಕೃಷ್ಣ ಸಂಧಾನ ‘ ವಿಷಯದ ಕುರಿತು ಉಪನ್ಯಾಸ ನೀಡಿದ ಅವರು ಸುಮಾರು ಐದು ಸಾವಿರ ಪ್ರಸಂಗಗಳ ಕರ್ತೃ ದೇವಿದಾಸ ಕವಿಯ ಪದ್ಯಗಳನ್ನು ಉದ್ಧರಿಸುತ್ತಾ ತಮ್ಮ ವಿಷಯವನ್ನು ಮಂಡಿಸಿದರು. ಯಾವ ಕಲೆಗೆ ಪ್ರಾದೇಶಿಕ ತಳಹದಿ ಗಟ್ಟಿ ಇರುತ್ತದೋ ಅಂತಹ ಕಲೆ ಮಾತ್ರ ಶಾಶ್ವತವಾಗಿ ಉಳಿಯಲು ಸಾಧ್ಯ. ಯಕ್ಷಗಾನ ಕಲೆಯು ಇಂದು ಎತ್ತರಕ್ಕೆ ಏರಿದೆ ಎಂದರೆ ಅದು ತನ್ನ ಸಾಮರ್ಥ್ಯದಿಂದ. ಯಾವುದೇ ಕಲೆ ಶಕ್ತಿ ಗಳಿಸಬೇಕಾದರೆ ಕಲಾವಿದರು ಬೇಕು. ಕಲ್ಲು ಮುಟ್ಟಿ ಚಿನ್ನ ಮಾಡುವ ಶಕ್ತಿ ಕಲಾವಿದನಿಗೆ ಬೇಕು. ಕಾರಂತರು ಶತಮಾನದ ಕನ್ನಡ ಬೆಳಕು. ಕಾರಂತರು ಮಾಡದ ಕೆಲಸವೇ ಇಲ್ಲ. ಕಾರಂತರ ಕೀರ್ತಿಗೆ ಯಕ್ಷಗಾನ ಬೇಡ. ಯಕ್ಷಗಾನಕ್ಕೆ ಕಾರಂತರು ಬೇಕು. ಕೀರ್ತಿಶೇಷ ಸದಾನಂದ ಸುವರ್ಣರು ಪುಣ್ಯ ಪುರುಷರು ಎಂದು ಅವರು ಈ ಸಂದರ್ಭದಲ್ಲಿ ಅಗಲಿದ ಹಿರಿಯರನ್ನು ನೆನಪಿಸಿಕೊಂಡರು.

ಕಾರ್ಯಕ್ರಮಕ್ಕೆ ಪ್ರಸ್ತಾವನೆಗೈದ ಕನ್ನಡ ವಿಭಾಗದ ಮುಖ್ಯಸ್ಥರು, ಪ್ರಾಧ್ಯಾಪಕರೂ ಆದ ಪ್ರೊ. ಜಿ. ಎನ್. ಉಪಾಧ್ಯ ಅವರು ಮಾತನಾಡುತ್ತಾ, ಮುಂಬೈ ವಿಶ್ವವಿದ್ಯಾಲಯದ ಕನ್ನಡ ವಿಭಾಗವು ಕಳೆದ ನಾಲ್ಕೂವರೆ ದಶಕಗಳಿಂದ ಶೈಕ್ಷಣಿಕ, ಸಾಹಿತ್ಯಕ, ಸಾಂಸ್ಕೃತಿಕ ಕೈಂಕರ್ಯಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದೆ. ಇಲ್ಲಿ ಕನ್ನಡ ವಿಭಾಗವನ್ನು ಉದ್ಘಾಟಿಸಿದವರು ಶಿವರಾಮ ಕಾರಂತರು. ವಿಭಾಗವು ಸಾಂಸ್ಕೃತಿಕ ಕೇಂದ್ರವಾಗಬೇಕು, ಸಂಶೋಧನ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು, ಕನ್ನಡ ಪ್ರಸಾರ, ಪ್ರಚಾರದಲ್ಲಿ ನಿರತವಾಗಬೇಕು ಎಂಬ ಆಶಯ ಅವರದ್ದಾಗಿತ್ತು. ಇಂದು ಕನ್ನಡ ವಿಭಾಗವು ಸಾಂಸ್ಕೃತಿಕ ಶಕ್ತಿ ಕೇಂದ್ರವಾಗಿ ಬೆಳೆದಿದೆ. ಸಿದ್ಧಾಂತಗಳ ರಾದ್ಧಾಂತ ಬಿಟ್ಟು ಕನ್ನಡ ಕೆಲಸಗಳನ್ನು ಅದು ಮಾಡುತ್ತಿದೆ ಎಂದು ಅಭಿಮಾನ ವ್ಯಕ್ತಪಡಿಸಿದರು. ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಹಾಗೂ ತುಳು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ, ಕರ್ನಾಟಕ ಕಲಾವಿದರ ಪರಿಷತ್ ಮಹಾರಾಷ್ಟ್ರ ಘಟಕದ ಅಧ್ಯಕ್ಷ ಡಾ.ಸುರೇಂದ್ರ ಕುಮಾರ್ ಹೆಗ್ಡೆ ಮತ್ತು ಅಜೆಕಾರು ಕಲಾಭಿಮಾನಿ ಬಳಗದ ಸಂಚಾಲಕ ಅಜೆಕಾರು ಬಾಲಕೃಷ್ಣ ಶೆಟ್ಟಿ ಮುಖ್ಯ ಅತಿಥಿಗಳಾಗಿದ್ದರು.ಅಜೆಕಾರು ಕಲಾಭಿಮಾನಿ ಬಳಗದ 24ನೇ ತಾಳಮದ್ದಳೆ ಸರಣಿಗಾಗಿ ಆಗಮಿಸಿದ ಊರಿನ ಪ್ರಸಿದ್ಧ ಕಲಾವಿದರಾದ ಡಾ. ಎಂ.ಪ್ರಭಾಕರ ಜೋಶಿ, ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ, ಜಯಪ್ರಕಾಶ್ ಶೆಟ್ಟಿ ಪೆರ್ಮುದೆ, ದಿನೇಶ್ ಶೆಟ್ಟಿ ಕಾವಳಕಟ್ಟೆ, ಸದಾಶಿವ ಆಳ್ವ ತಲಪಾಡಿ, ದೇವಿಪ್ರಸಾದ್ ಆಳ್ವ ತಲಪಾಡಿ, ದೇಲಂತಮಜಲು ಸುಬ್ರಹ್ಮಣ್ಯ ಭಟ್, ಪ್ರಶಾಂತ್ ಶೆಟ್ಟಿ ವಗೆನಾಡು ಮೊದಲಾದವರಿಗೆ ಮುಂಬೈ ವಿ.ವಿ.ವತಿಯಿಂದ ಕೃತಿ ನೀಡಿ, ಶಾಲು ಹೊದಿಸಿ ಗೌರವಿಸಲಾಯಿತು. ಅದೇ ದಿನ ಮುಂಬೈ ವಿಶ್ವವಿದ್ಯಾಲಯ ಕನ್ನಡ ವಿಭಾಗ ಮತ್ತು ಅಜೆಕಾರು ಕಲಾಭಿಮಾನಿ ಬಳಗ ಇವರ ಸಂಯುಕ್ತ ಆಶ್ರಯದಲ್ಲಿ ಡಾ. ವೈ. ವಿ. ಮಧುಸೂದನ ರಾವ್ ಅವರ ಮಹಾಪ್ರಬಂಧ ‘ಮುಂಬೈ ಯಕ್ಷಗಾನ ರಂಗಭೂಮಿ’ ಕೃತಿಯನ್ನು ಯಕ್ಷಗಾನ ವಿದ್ವಾಂಸ, ಅರ್ಥಧಾರಿ ಡಾ. ಎಂ. ಪ್ರಭಾಕರ ಜೋಶಿ ಲೋಕಾರ್ಪಣೆ ಮಾಡಿದರು. ಈ ಕೃತಿಯು ಕನ್ನಡ ವಿಭಾಗದ 111ನೆಯ ಪ್ರಕಟಣೆಯಾಗಿದೆ. ಇದೇ ಸಂದರ್ಭದಲ್ಲಿ ವಿದ್ಯಾರ್ಥಿ ವಿದ್ಯಾ ರಾಮಕೃಷ್ಣ ಅವರು ‘ಪ್ರಬಂಧಕಾರರಾಗಿ ಕಾರಂತರು’ ಎಂಬ ತಮ್ಮ ಎಂ.ಎ. ಸಂಪ್ರಬಂಧವನ್ನು, ಕನ್ನಡ ವಿಭಾಗದ ಪ್ರಕಾಶನದಡಿಯಲ್ಲಿ ಕೃತಿ ರೂಪದಲ್ಲಿ ಪ್ರಕಟಿಸಿ, ವಿಶ್ವವಿದ್ಯಾಲಯಕ್ಕೆ ಸಮರ್ಪಿಸಿದರು. ಸಮಾರಂಭದಲ್ಲಿ ಡಾ. ಸುರೇಂದ್ರ ಕುಮಾರ್ ಹೆಗ್ಡೆಯವರ ಸಂಪಾದಕತ್ವದಲ್ಲಿ ಕರ್ನಾಟಕ ಕಲಾವಿದರ ಪರಿಷತ್ ಪ್ರಕಟಿಸಿದ ‘ಕನ್ನಡ ಕಲಾವಿದರ ಮಾಹಿತಿ ಗ್ರಂಥ’ವನ್ನು ಡಾ. ಜಿ.ಎನ್ ಉಪಾಧ್ಯ ಬಿಡುಗಡೆಗೊಳಿಸಿದರು.
ಸಂಶೋಧನ ವಿದ್ಯಾರ್ಥಿ ಕಲಾ ಭಾಗ್ವತ್ ಸ್ವಾಗತ ಗೀತೆಯನ್ನು ಹಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಹ ಪ್ರಾಧ್ಯಾಪಕರಾದ ಡಾ. ಪೂರ್ಣಿಮಾ ಎಸ್. ಶೆಟ್ಟಿ ಕೃತಿ ಪರಿಚಯ ನೀಡಿದರು. ನಳಿನಾ ಅವರು ನಿರೂಪಿಸಿ, ವಂದಿಸಿದರು. ಕಾರ್ಯಕ್ರಮದಲ್ಲಿ ಕಲಾವಿದರು, ಕಲಾಭಿಮಾನಿಗಳು, ಸಾಹಿತ್ಯಾಸಕ್ತರು ಮತ್ತು ವಿಭಾಗದ ವಿದ್ಯಾರ್ಥಿಗಳು ಹಾಜರಿದ್ದರು.