ರಾಷ್ಟ್ರೀಯತೆಯನ್ನೇ ಉಸಿರಾಗಿಸಿಕೊಂಡಿದ್ದ ಡಾ| ಶ್ಯಾಮಪ್ರಸಾದ್ ಮುಖರ್ಜಿ ಜೀವನಾದರ್ಶ, ಬಲಿದಾನದಿಂದ ಬಿಜೆಪಿ ಕಾರ್ಯಕರ್ತರು ಪ್ರೇರಣೆ ಪಡೆಯಬೇಕು. ಡಾ| ಮುಖರ್ಜಿ ಕನಸು ಪ್ರಧಾನಿ ಮೋದಿ ಅವರಿಂದ ನನಸಾಗಿದೆ. ಕಾಟಾಚಾರದ ಬದಲು ಬದ್ಧತೆ ಮತ್ತು ಪ್ರಾಮಾಣಿಕತೆಯಿಂದ ಕೆಲಸ ಮಾಡಿ ಜನ ಸೇವೆ, ಜನ ಜಾಗೃತಿಯಲ್ಲಿ ತೊಡಗಬೇಕು ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ಹೇಳಿದರು. ಅವರು ಬಿಜೆಪಿ ಜಿಲ್ಲಾ ಕಛೇರಿಯಲ್ಲಿ ನಡೆದ ಭಾರತೀಯ ಜನಸಂಘದ ಸಂಸ್ಥಾಪಕ ಡಾ| ಶಾಮಪ್ರಸಾದ್ ಮುಖರ್ಜಿ ‘ಬಲಿದಾನ ದಿವಸ್’ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಡಾ| ಮುಖರ್ಜಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ಮಾತನಾಡಿದರು.

ಡಾ| ಶಾಮಪ್ರಸಾದ್ ಮುಖರ್ಜಿ ಅವರ ತತ್ವಾದರ್ಶಗಳು ಮತ್ತು ಬಲಿದಾನದ ಕುರಿತು ಉಪನ್ಯಾಸ ನೀಡಿದ ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಮಟ್ಟಾರ್ ರತ್ನಾಕರ ಹೆಗ್ಡೆ ಮಾತನಾಡಿ, ಇಂಗ್ಲೆಂಡ್ ನಲ್ಲಿ ಬ್ಯಾರಿಸ್ಟರ್ ಪದವಿ ಪಡೆದು ವಕೀಲಿ ವೃತ್ತಿ ನಡೆಸಿದ ಡಾ| ಮುಖರ್ಜಿ ಅವರು ದೇಶ ವಿಭಜನೆಗೆ ತೀವ್ರ ವಿರೋಧವನ್ನು ವ್ಯಕ್ತಪಡಿಸಿದ್ದರು. ಕಾಂಗ್ರೆಸ್ ಕಾರ್ಯಕರ್ತರಾಗಿದ್ದರೂ ಹಿಂದೂ ಮಹಾಸಭಾದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ನೆಹರೂ ಸಂಪುಟದಲ್ಲಿ ಕೈಗಾರಿಕಾ ಸಚಿವರಾಗಿದ್ದ ಡಾ| ಮುಖರ್ಜಿ ಅವರು ಜಮ್ಮು ಕಾಶ್ಮೀರದ ವಿಚಾರದಲ್ಲಿ ಭಿನ್ನಮತ ಬಂದಾಗ ಸಂಪುಟಕ್ಕೆ ರಾಜೀನಾಮೆ ನೀಡಿದ್ದರು. ಭಾರತೀಯ ಜನಸಂಘದ ಮೂಲಕ ಭಾರತೀಯ ಜನತಾ ಪಾರ್ಟಿಗೂ ಪ್ರೇರಣೆಯನ್ನು ನೀಡಿದ್ದಾರೆ. ‘ಒಂದು ದೇಶದಲ್ಲಿ ಎರಡು ಧ್ವಜ, ಎರಡು ಸಂವಿಧಾನ, ಎರಡು ಪ್ರಧಾನಿ ಸಲ್ಲದು’ ಎಂಬ ಅವರ ಕನಸು ಇಂದು ಪ್ರಧಾನಿ ನರೇಂದ್ರ ಮೋದಿಯವರಿಂದ ಸಂವಿಧಾನದ 370ನೇ ವಿಧಿ ರದ್ದತಿಯ ಮೂಲಕ ನನಸಾಗಿದೆ. ಆದರೆ ಅವರ ಸಾವು ಮಾತ್ರ ಇಂದಿಗೂ ಸಂಶಯಸ್ಪದವಾಗಿಯೇ ಇದೆ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಕಾರ್ಕಳ ಶಾಸಕ ವಿ. ಸುನೀಲ್ ಕುಮಾರ್, ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಕೆ. ಉದಯಕುಮಾರ್ ಶೆಟ್ಟಿ, ಜಿಲ್ಲಾ ಉಪಾಧ್ಯಕ್ಷ ಕಿರಣ್ ಕುಮಾರ್ ಬೈಲೂರು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರೇಶ್ಮಾ ಉದಯ ಶೆಟ್ಟಿ, ಪ್ರಮುಖರಾದ ಸತ್ಯಾನಂದ ನಾಯಕ್, ಶ್ರೀಕಾಂತ್ ನಾಯಕ್, ಗಿರೀಶ್ ಎಮ್ ಅಂಚನ್, ದಿನೇಶ್ ಅಮೀನ್, ಪ್ರಥ್ವೀರಾಜ್ ಶೆಟ್ಟಿ ಬಿಲ್ಲಾಡಿ, ನಳಿನಿ ಪ್ರದೀಪ್ ರಾವ್, ಸಲೀಂ ಅಂಬಾಗಿಲು, ಶಶಾಂಕ್ ಶಿವತ್ತಾಯ, ಅಭಿರಾಜ್ ಸುವರ್ಣ, ವಿಜಯ್ ಭಟ್ ಕಡೆಕಾರ್, ಕಿಶೋರ್ ಕರಂಬಳ್ಳಿ, ಗುರುರಾಜ್, ಶ್ರೀವತ್ಸ, ನಿತಿನ್ ಪೈ, ಅರುಣ್ ಬಾಣ, ಗೋಪಾಲ್ ಕಾಂಚನ್, ಸದಾನಂದ ಪ್ರಭು ಸಹಿತ ವಿವಿಧ ಸ್ತರದ ಪದಾಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.
















































































































