ಮೂಡುಬಿದಿರೆ: ತಮಿಳುನಾಡಿನ ಕಾರೈಕುಡಿಯ ಅಲಗಪ್ಪ ವಿವಿ ಆಶ್ರಯದಲ್ಲಿ ನಡೆದ ಅಖಿಲ ಭಾರತ ಅಂತರ್ ವಿಶ್ವವಿದ್ಯಾನಿಲಯ ಮಹಿಳಾ ಬಾಲ್ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್ನಲ್ಲಿ ಮಂಗಳೂರು ವಿವಿ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದು, ತಂಡದ 10 ಜನ ಆಟಗಾರ್ತಿಯರ ಪೈಕಿ ನಾಯಕಿ ಸಹನಾ ಎಚ್. ಎಂ ಸೇರಿದಂತೆ 9 ಕ್ರೀಡಾಪಟುಗಳು ಮೂಡಬಿದಿರೆಯ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿಗಳಾಗಿದ್ದರು. ಕ್ವಾಟರ್ಫೈನಲ್ ಪಂದ್ಯಾಟದಲ್ಲಿ ಮಂಗಳೂರು ವಿವಿಯು ತಮಿಳುನಾಡಿನ ಯೂನಿವರ್ಸಿಟಿ ಆಫ್ ಮದ್ರಾಸ್ ತಂಡವನ್ನು 35-23, 35-29 ನೇರ ಸೆಟ್ನಲ್ಲಿ ಸೋಲಿಸಿ 18ನೇ ಬಾರಿಗೆ ಲೀಗ್ ಹಂತಕ್ಕೆ ಆಯ್ಕೆಯಾಗಿತ್ತು.

ಲೀಗ್ ಹಂತದಲ್ಲಿ ತಮಿಳುನಾಡಿನ ಮಧುರೈಯ ಕಾಮರಾಜ್ ವಿವಿ ತಂಡವನ್ನು 35-15, 35-26 ಅಂತರಗಳಿ0ದ, ಮಹಾತ್ಮಾ ಗಾಂಧಿ ವಿವಿಯನ್ನು 35-18, 35-14 ನೇರ ಅಂತರಗಳಿ0ದ ಸೋಲಿಸಿ ಫೈನಲ್ ಪ್ರವೇಶಿಸಿತು. ಅಂತಿಮ ಸುತ್ತಿನಲ್ಲಿ ತಮಿಳುನಾಡಿನ ಅಣ್ಣಾ ವಿವಿಯೊಂದಿಗಿನ ರೋಚಕ ಪಂದ್ಯಾಟದಲ್ಲಿ ರನ್ನರ್ ಅಪ್ ಸ್ಥಾನ ಗಳಿಸುವಲ್ಲಿ ಯಶಸ್ವಿಯಾಯಿತು. ವಿಜೇತ ತಂಡವನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಅಭಿನಂದಿಸಿದ್ದಾರೆ.