ಭಾಷೆಯ ಸಂಘಟನೆ ಏಕೆ ಬೇಕು ಎಂಬುದನ್ನು ನಾವು ಎಲ್ಲರೂ ಅರಿತವರು. ಜಾತಿಗಿಂತ ಮೊದಲಾಗಿ ನಮಗೆ ಭಾಷೆ ಮುಖ್ಯ, ಅದರಲ್ಲೂ ನಮ್ಮ ತುಳು ಭಾಷೆ ನಮ್ಮ ತಾಯಿ ಭಾಷೆ. ಒಂದೇ ತಾಯಿಯ ಮಕ್ಕಳಂತೆ ಸೇರಿಕೊಂಡು ತುಳು ಭಾಷೆ ಮೇಲಿನ ಪ್ರೀತಿಯಿಂದ ಸ್ಥಾಪನೆಗೊಂಡ ತುಳು ಸಂಘ ಪಿಂಪ್ರಿ ಹದಿಮೂರು ವರ್ಷಗಳ ಉಚ್ಚಾಯದಲ್ಲಿದೆ. ತುಳು ಭಾಷೆ ಸದ್ಯದಲ್ಲೇ ನಮ್ಮ ಕರ್ನಾಟಕದ ಎರಡನೇ ರಾಜ್ಯ ಭಾಷೆಯಾಗಿ ಸೇರ್ಪಡೆಗೊಳ್ಳಲಿದೆ. ಇದು ಸೇರ್ಪಡೆಗೊಂಡರೆ ತುಳುವರಿಗೆ ಶೈಕ್ಷಣಿಕವಾಗಿ ಹಲವಾರು ಪ್ರಯೋಜನವಾಗಲಿವೆ. ಅದಕ್ಕಾಗಿ ನಮ್ಮ ತುಳು ಸಂಘಟನೆಗಳು ಭಾಷೆಯ ಅಭಿವೃದ್ದಿಗೆ ಶ್ರಮಿಸಬೇಕು. ಪಿಂಪ್ರಿ ಚಿಂಚ್ವಾಡ್ ತುಳು ಸಂಘ ಈ ನಿಟ್ಟಿನಲ್ಲಿ ತುಳು ಬಾಷೆಗೆ ಒತ್ತು ನೀಡಿ ಶ್ರಮಿಸುತ್ತಿದೆ. ಇಂದು ಇಲ್ಲಿ ಪ್ರದರ್ಶನಗೊಂಡ ನಾಟಕ ತುಳುನಾಡಿನ ದೈವ ಶಕ್ತಿಯ ಮಹಿಮೆಯನ್ನು ಉತ್ತಮ ರೀತಿಯಲ್ಲಿ ಬಿಂಬಿಸಿದೆ. ಇಂತಹ ನಾಟಕಗಳನ್ನು ನಮ್ಮ ಮಕ್ಕಳು ನೋಡಿ ತಿಳಿದುಕೊಳ್ಳುವ ಅವಶ್ಯಕತೆ ಇದೆ. ನಮ್ಮ ಸ್ವಾಭಿಮಾನದ ಸಂಕೇತವಾದ ನಮ್ಮ ತುಳು ಭಾಷೆಯ ಒಲವನ್ನು ನಾವೆಲ್ಲರೂ ಪಡೆಯಬೇಕು. ನಮ್ಮ ಮಕ್ಕಳು ಕೂಡಾ ಒಲವನ್ನು ಪಡೆಯುವಂತೆ ಮಾಡಬೇಕು ಎಂದು ತುಳು ಸಂಘ ಬರೋಡದ ಅಧ್ಯಕ್ಷರಾದ ಶಶಿಧರ್ ಶೆಟ್ಟಿ ಬರೋಡ ನುಡಿದರು.ತುಳು ಸಂಘ ಪಿಂಪ್ರಿ ಚಿಂಚ್ವಾಡ್ ಇದರ 13ನೇ ವಾರ್ಷಿಕೋತ್ಸವವು ಮಾರ್ಚ್ 14 ರಂದು ಚಿಂಚ್ವಾಡ್ ನ ರಾಮಕೃಷ್ಣ ಮೋರೆ ಸಭಾಗೃಹದಲ್ಲಿ ನಾಟಕ ಹಾಗೂ ಸಭಾ ಕಾರ್ಯಕ್ರಮಗಳೊಂದಿಗೆ ಜರಗಿತು. ಮುಖ್ಯ ಅತಿಥಿಯಾಗಿ ಅಗಮಿಸಿದ್ದ ಶಶಿಧರ್ ಶೆಟ್ಟಿಯವರು ಮಾತನಾಡಿ ನಮ್ಮ ಬಾಷೆ ಕಲೆ ಸಂಸ್ಕ್ರತಿಯ ಬೆಳವಣಿಗೆಗೆ ಶ್ರಮಿಸುವ ಪಿಂಪ್ರಿ ತುಳು ಸಂಘದ ಮುಂದಿನ ಯಾವುದೇ ರೀತಿಯ ಕಾರ್ಯ ಯೋಜನೆಗಳು ಇರಲಿ ನನ್ನಿಂದಾದ ಸಹಕಾರವನ್ನು ನೀಡಲು ಸಿದ್ದನಿದ್ದೇನೆ ಎಂದರು.
ಪಿಂಪ್ರಿ ಚಿಂಚ್ವಾಡ್ ತುಳು ಸಂಘದ ಅಧ್ಯಕ್ಷರಾದ ಹರೀಶ್ ಶೆಟ್ಟಿ ಕುರ್ಕಾಲ್ ರವರ ಅಧ್ಯಕ್ಷತೆಯಲ್ಲಿ ಜರಗಿದ ಸಭಾ ವೇದಿಕೆಯಲ್ಲಿ ಗೌರವ ಅತಿಥಿಗಳಾಗಿ ಅಗಮಿಸಿದ್ದ ತುಳುನಾಡ ದೈವಾರಾಧನೆಯ ವಿಮರ್ಶಕ ತಮ್ಮಣ್ಣ ಶೆಟ್ಟಿ. ಪಿಂಪ್ರಿ ಚಿಂಚ್ವಾಡ್ ಬಂಟರ ಸಂಘದ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಪ್ರಭಾ ಎಸ್ ಶೆಟ್ಟಿಯವರು ಉಪಸ್ಥಿತರಿದ್ದರು ಹಾಗೂ ಸಂಘದ ಪ್ರಮುಖರಾದ ಉಪಾಧ್ಯಕ್ಷ ದಿನೇಶ್ ಶೆಟ್ಟಿ ಉಜಿರೆ, ಮಾಜಿ ಅಧ್ಯಕ್ಷ ಶ್ಯಾಮ್ ಸುವರ್ಣ, ಪ್ರಧಾನ ಕಾರ್ಯದರ್ಶಿ ನಿತಿನ್ ಶೆಟ್ಟಿ ನಿಟ್ಟೆ, ಕೋಶಾಧಿಕಾರಿ ರಾಜೇಶ್ ಶೆಟ್ಟಿ ಕುರ್ಕಾಲ್, ಸಾಂಸ್ಕ್ರತಿಕ ವಿಭಾಗದ ಕಾರ್ಯಾಧ್ಯಕ್ಷ ಸಂತೋಷ್ ಶೆಟ್ಟಿ ಪೆರ್ಡೂರು, ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯ ಕಾರ್ಯಾಧ್ಯಕ್ಷೆ ಶ್ರೀಮತಿ ಕುಸುಮ ಸಾಲ್ಯಾನ್, ಕ್ರೀಡಾ ಕಾರ್ಯಾಧ್ಯಕ್ಷ ರತ್ನಾಕರ್ ಶೆಟ್ಟಿಯವರು ಉಪಸ್ಥಿತರಿದ್ದರು.
ತುಳು ಸಂಘದ ವಾರ್ಷಿಕೋತ್ಸವವನ್ನು ಅತಿಥಿ ಗಣ್ಯರು ದೀಪ ಪ್ರಜ್ವಲಿಸಿ, ಕಲ್ಪವೃಕ್ಷ ಹೂ ಅರಳಿಸಿ ಉದ್ಘಾಟಿಸಿದರು. ವೇದಮೂರ್ತಿ ರಾಘವೇಂದ್ರ ಭಟ್ ದೇವರ ಶ್ಲೋಕ ಪಠಿಸಿ, ಭವಂತಿ ಪೂಜಾರಿ ಹಾಗೂ ಅನಿತಾ ಪೂಜಾರಿ ಪ್ರಾರ್ಥನೆಗೈದರು. ಶ್ಯಾಮ್ ಸುವರ್ಣ ಸ್ವಾಗತಿಸಿದರು. ಮುಖ್ಯ ಅತಿಥಿ ಶಶಿಧರ್ ಶೆಟ್ಟಿ, ಗೌರವ ಅತಿಥಿಗಳಾದ ತಮ್ಮಣ್ಣ ಶೆಟ್ಟಿ, ಪ್ರಭಾ ಶೆಟ್ಟಿಯವರನ್ನು ಅಧ್ಯಕ್ಷ ಹರೀಶ್ ಶೆಟ್ಟಿ ಕುರ್ಕಾಲ್ ಮತ್ತು ಪದಾಧಿಕಾರಿಗಳು ಶಾಲು ಫಲಪುಷ್ಪ ಸ್ಮರಣಿಕೆ ನೀಡಿ ಸತ್ಕರಿಸಿದರು. ಇವರ ಪರಿಚಯವನ್ನು ಅರ್ಪಿತ ಶೆಟ್ಟಿ ಮತ್ತು ಸೌಮ್ಯ ಸಂತೋಷ್ ಶೆಟ್ಟಿ ಓದಿದರು. ಈ ಸಂದರ್ಭದಲ್ಲಿ ತುಳು ಸಂಘವನ್ನು ಉತ್ತಮ ರೀತಿಯಲ್ಲಿ ನಡೆಸಿ ಉತ್ತಮ ಕಾರ್ಯಕ್ರಮಗಳನ್ನು ಆಯೋಜಿಸಿದ ಅಧ್ಯಕ್ಷರಾದ ಹರೀಶ್ ಶೆಟ್ಟಿ ಕುರ್ಕಾಲ್ ಜಯಲಕ್ಷ್ಮಿ ಎಚ್ ಶೆಟ್ಟಿ ದಂಪತಿಗಳನ್ನು ತುಳುವರ ಪರವಾಗಿ ಸನ್ಮಾನಿಸಲಾಯಿತು. ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರುಗಳು, ತುಳು ಸಂಘದ ಸಲಹೆಗಾರರು, ದಾನಿಗಳನ್ನು ಗೌರವಿಸಲಾಯಿತು. ಇದರ ವರದಿಯನ್ನು ಉಪಾಧ್ಯಕ್ಷ ದಿನೇಶ್ ಶೆಟ್ಟಿ ಓದಿದರು. ಊರಿನಿಂದ ಆಗಮಿಸಿ ಅರ್ಪಿತಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ಸಾಂಸ್ಕ್ರತಿಕ ವಿಭಾಗದ ಕಾರ್ಯಾಧ್ಯಕ್ಷ ಸಂತೋಷ್ ಶೆಟ್ಟಿ ಪೆರ್ಡೂರುರವರು ಧನ್ಯವಾದಗೈದರು. ಸಾಂಸ್ಕ್ರತಿಕ ಕಾರ್ಯಕ್ರಮದ ಅಂಗವಾಗಿ ಮಂಗಳೂರು ಉರ್ವ ಚಿಲಿಂಬಿ ಸಾಯಿ ಶಕ್ತಿ ಕಲಾ ಬಳಗದ ಲಾವಣ್ಯ ವಿಶ್ವಾಸ್ ದಾಸ್ ನಿರ್ಮಾಣ ನಿರ್ದೇಶನದ ಜೋಡು ಜೀಟಿಗೆ ಎಂಬ ತುಳು ಜಾನಪದ ನಾಟಕ ಕಲಾಭಿಮಾನಿಗಳ ಮನ ಸೂರೆಗೊಂಡಿತು.
ಕಾರ್ಯಕ್ರಮದ ನಂತರ ತುಳುನಾಡ ಶೈಲಿಯ ಪ್ರೀತಿ ಭೋಜನ ನಡೆಯಿತು. ತುಳು ಸಂಘದ ಈ ವಾರ್ಷಿಕೋತ್ಸವಕ್ಕೆ ಪಿಂಪ್ರಿ ಚಿಂಚ್ವಾಡ್ ಪುಣೆಯ ಹೆಚ್ಚಿನ ಸಂಖ್ಯೆಯಲ್ಲಿ ತುಳು ಕನ್ನಡಿಗ ಬಾಂಧವರು ಪಾಲ್ಗೊಂಡರು. ಪಿಂಪ್ರಿ ಚಿಂಚ್ವಾಡ್ ತುಳು ಸಂಘದ ಪ್ರಮುಖರಾದ ಜೊತೆ ಕಾರ್ಯದರ್ಶಿ ರವಿ ಕುಲಾಲ್, ಜೊತೆ ಕೋಶಾಧಿಕಾರಿ ಚೇತನ್ ಕುಮಾರ್, ಕ್ರೀಡಾ ಉಪ ಕಾರ್ಯಾಧ್ಯಕ್ಷ ಗಣೇಶ್ ಶೆಟ್ಟಿ ದೇಹು ರೋಡ್, ಶಿಕ್ಷಣ ಮತ್ತು ಸಮಾಜ ಕಲ್ಯಾಣ ಉಪ ಕಾರ್ಯಾಧ್ಯಕ್ಷ ಸುರೇಶ ಶೆಟ್ಟಿ ಪಣಿಯೂರು, ಸಾಂಸ್ಕ್ರತಿಕ ಉಪ ಕಾರ್ಯಾಧ್ಯಕ್ಷ ರಾಜಾರಾಮ್ ಶೆಟ್ಟಿ ತಲೆಗಾಂವ್, ಜನ ಸಂಪರ್ಕಾಧಿಕಾರಿಗಳಾದ ಶುಭಕರ್ ಶೆಟ್ಟಿ, ಚಂದ್ರಶೇಖರ್ ಪೂಜಾರಿ, ಉದಯ್ ಶೆಟ್ಟಿ ತಲೆಗಾಂವ್ ಮತ್ತು ಸಮಿತಿ ಸದಸ್ಯರು, ತುಳುವರು ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು.

ವರದಿ : ಹರೀಶ್ ಮೂಡಬಿದಿರೆ, ಪುಣೆ