ಸನಾತನ ಹಿಂದೂ ಧರ್ಮ ನಿರಂತರವಾಗಿದೆ. ಎಷ್ಟೇ ಅಡೆ ತಡೆ ಬಂದರೂ ಯಾವುದೇ ರೀತಿಯಲ್ಲೂ ನಿಲ್ಲದು. ಇದು ಶಾಶ್ವತ ಧರ್ಮ ಎಂಬುದನ್ನು ಜಗತ್ತು ತಿಳಿದುಕೊಳ್ಳಬೇಕು. ನಮ್ಮ ಸನಾತನ ಹಿಂದೂ ಧರ್ಮದ ಜ್ಞಾನ ಭಂಡಾರವನ್ನು ಎಷ್ಟು ಅರಿತು ಕೊಂಡರೂ ಕಡಿಮೆಯೇ. ಅದರೆ ಹಿಂದೂ ಜ್ಞಾನವನ್ನು ಪಡೆಯುವುದು ಇಂದಿನ ಕಾಲಕ್ಕೆ ಬಹು ಮುಖ್ಯ. ನಮ್ಮಹಿಂದೂಗಳ ಜಾತಿಯನ್ನು ಬದಿಗಿಟ್ಟು ಧರ್ಮವನ್ನು ಅಪ್ಪಿಕೊಳ್ಳಿ. ಇದರಿಂದ ಮಾತ್ರ ಧರ್ಮ ಜಾಗೃತಿಯಾಗಲು ಸಾದ್ಯ. ಜಾತಿ ಮನೆಯ ಒಳಗಿರಲಿ, ಆದರೆ ದೇಶಕ್ಕಾಗಿ ಸನಾತನ ಧರ್ಮಕ್ಕಾಗಿ ಹಿಂದೂವಾಗಿ ಸಮಾಜದಲ್ಲಿ ಗುರುತಿಸಿಕೊಳ್ಳಬೇಕು. ನಾವೆಲ್ಲಾ ಹಿಂದೂ ನಾವೆಲ್ಲಾ ಒಂದು ಎಂಬ ಭಾವನೆ ನಮ್ಮಲ್ಲಿರಲಿ. ಧರ್ಮ ಜಾಗೃತಿ ಮನೆ ಮನೆಯಲ್ಲೂ ಬೆಳಗಬೇಕು. ಮನೆ ಮನೆಯಲ್ಲೂ ಹಿಂದೂ ಧರ್ಮ ಜಾಗೃತಿಯೊಂದಿಗೆ ಮಗು ಹುಟ್ಟಿ ಬರಬೇಕು. ಆವಾಗ ಮಾತ್ರ ಸಂಘಟಿತ ಬಲ ಬರಲು ಸಾಧ್ಯ. ಮಕ್ಕಳಿಗೆ ಧರ್ಮ ಭೋಧನೆ ಪ್ರತಿ ಮನೆಯಲ್ಲೂ ಅಗಬೇಕು. ಹಿಂದೂವಾಗಿ ಜನಿಸಿ, ಬದುಕಿ, ಹಿಂದೂ ನನ್ನ ಜನ್ಮ ಸಿದ್ದ ಹಕ್ಕು ಎಂಬಂತೆ ದೇಶಕ್ಕಾಗಿ ಬದುಕಿ ತೋರಿಸಬೇಕು. ಹಿಂದೂ ಸನಾತನಿಗಳು ಸಂಘಟಿತರಾಗಿ ಬಂದಾಗ ಜಗತ್ತೇ ಬದಲಾಗಬಹುದು ಮತ್ತು ನಮ್ಮ ಕಡೆ ತಿರುಗಿ ನೋಡಬಹುದು ಎಂದು ಬೆಂಗಳೂರಿನ ಖ್ಯಾತ ವಾಗ್ಮಿ ಹಾರಿಕ ಮಂಜುನಾಥ್ ಧರ್ಮ ಮತ್ತು ಸಂಸ್ಕ್ರತಿಯ ಬಗ್ಗೆ ದಿಕ್ಸೂಚಿ ಬಾಷಣ ನೀಡಿದರು .ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಮಂಡಲ ನೆಹರೂ ನಗರ ಪಿಂಪ್ರಿ ಇಲ್ಲಿ ಶ್ರೀ ಅಯ್ಯಪ್ಪ ಸ್ವಾಮಿ ದೇವರ ಪುನಃ ಪ್ರತಿಷ್ಠಾ ಮಹೋತ್ಸವವು ಮಾರ್ಚ್ 8 ಮತ್ತು 9ರಂದು ಜರುಗಿದ್ದು, ಇದರ ಅಂಗವಾಗಿ ಮಾರ್ಚ್ 9 ರಂದು ಧಾರ್ಮಿಕ ಸಭಾ ಕಾರ್ಯಕ್ರಮವು ಶ್ರೀ ಅಯ್ಯಪ್ಪ ಸೇವಾ ಮಂಡಲದ ಅಧ್ಯಕ್ಷರಾದ ಶ್ರೀಧರ್ ಶೆಟ್ಟಿಯವರ ಸಭಾಧ್ಯಕ್ಷತೆಯಲ್ಲಿ ಜರಗಿತು. ಸಮಾರಂಭದ ಮುಖ್ಯ ಅತಿಥಿಗಳಾದ ಪಿಂಪ್ರಿ ಚಿಂಚ್ವಾಡ್ ಬಂಟರ ಸಂಘದ ಮಾಜಿ ಅಧ್ಯಕ್ಷರಾದ ಸೀತಾರಾಮ್ ಶೆಟ್ಟಿ, ದಿಕ್ಸೂಚಿ ಭಾಷಣ ನೀಡಿದ ಬೆಂಗಳೂರಿನ ಖ್ಯಾತ ಯುವ ವಾಗ್ಮಿ ಕುಮಾರಿ ಹಾರಿಕ ಮಂಜುನಾಥ್, ಶ್ರೀ ಅಯ್ಯಪ್ಪ ಮಂದಿರದ ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷರಾದ ಜಯಾನಂದ ಶೆಟ್ಟಿ, ಗೌರವ ಅತಿಥಿಗಳಾದ ಪಿಂಪ್ರಿ ಚಿಂಚ್ವಾಡ್ ಬಂಟರ ಸಂಘದ ನಿಕಟ ಪೂರ್ವ ಅಧ್ಯಕ್ಷ ರಾಕೇಶ್ ಶೆಟ್ಟಿ ಬೆಳ್ಳಾರೆ, ಪುಣೆ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿಯ ಅಧ್ಯಕ್ಷ ಪ್ರವೀಣ್ ಶೆಟ್ಟಿ ಪುತ್ತೂರು, ಪಿಂಪ್ರಿ ಚಿಂಚ್ವಾಡ್ ತುಳು ಸಂಘದ ಅಧ್ಯಕ್ಷ ಹರೀಶ್ ಶೆಟ್ಟಿ ಕುರ್ಕಾಲ್, ಪುಣೆ ಕಾತ್ರಜ್ ಶ್ರೀ ಅಯ್ಯಪ್ಪ ಸೇವಾ ಸಂಘದ ಅಧ್ಯಕ್ಷ ಸುಭಾಶ್ ಶೆಟ್ಟಿ, ಪಿಂಪ್ರಿ ಚಿಂಚ್ವಾಡ್ ಕುಲಾಲ ಸಂಘದ ಅಧ್ಯಕ್ಷ ರವಿ ಮೂಲ್ಯ, ಪುಣೆ ರಾಜಾಪುರ ಸಾರಸ್ವತ ಸಂಘದ ಮಾಜಿ ಅಧ್ಯಕ್ಷ ಸದಾನಂದ ನಾಯಕ್ ಉಪಸ್ಥಿತರಿದ್ದರು.
ವೇದಿಕೆಯಲ್ಲಿದ್ದ ಗಣ್ಯರು ದೀಪ ಜ್ಯೋತಿ ಬೆಳಗಿಸಿ ಧಾರ್ಮಿಕ ಕಾರ್ಯಕ್ರಮದ ಸಭೆಗೆ ಚಾಲನೆ ನೀಡಿದರು. ವೇದಮೂರ್ತಿ ಹರೀಶ್ ಐತಾಳ್ ದೇವರ ಶ್ಲೋಕದೊಂದಿಗೆ ಪ್ರಾರ್ಥನೆಗೈದರು. ಮಂಡಲದ ಮಾಜಿ ಅಧ್ಯಕ್ಷ ಜೀವನ್ ಶೆಟ್ಟಿ ಸ್ವಾಗತಿಸಿದರು. ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷ ಜಯಾನಂದ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಯುವ ವಾಗ್ಮಿ ಹಾರಿಕಾ ಮಂಜುನಾಥ್ ಮತ್ತು ಅವರ ತಂದೆ ಮಂಜುನಾಥ್ ರವರನ್ನು ಮಂಡಲದ ಪದಾಧಿಕಾರಿಗಳು ಶಾಲು, ಪುಷ್ಪಗುಚ್ಛ, ಸ್ಮರಣಿಕೆ ನೀಡಿ ಸತ್ಕರಿಸಿದರು. ಸೌಜನ್ಯ ಶೆಟ್ಟಿ ಇವರ ಪರಿಚಯಗೈದರು. ಮುಖ್ಯ ಅತಿಥಿ ಸೀತಾರಾಮ ಶೆಟ್ಟಿಯವರನ್ನು ಸತ್ಕಕರಿಸಲಾಯಿತು. ಶೋಭಾ ಜೆ ಶೆಟ್ಟಿ ಇವರ ಪರಿಚಯಗೈದರು. ಈ ಸಂದರ್ಭದಲ್ಲಿ ಮಂಡಲದ ಅಧ್ಯಕ್ಷ ಶ್ರೀಧರ್ ಶೆಟ್ಟಿ ದಂಪತಿಗಳು, ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷ ಜಯಾನಂದ ಶೆಟ್ಟಿ ದಂಪತಿಗಳು ಹಾಗೂ ಮಂದಿರದ ನಿರ್ಮಾಣ ಮಾಡಿದ ವಿವಿಧ ಕೆಲಸಗಳ ಕಾಂಟ್ರಾಕ್ಟ್ ದಾರರನ್ನು ಗೌರವಿಸಲಾಯಿತು. ಸಭೆಯಲ್ಲಿ ಉಪಸ್ಥಿತರಿದ್ದ ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರುಗಳನ್ನು ಗೌರವಿಸಲಾಯಿತು. ಹಾರಿಕಾ ಮಂಜುನಾಥ್ ರವರ ಧರ್ಮ ಮತ್ತು ಸಂಸ್ಕ್ರತಿಯ ಬಗ್ಗೆ ದಿಕ್ಸೂಚಿ ಬಾಷಣವು ಸೇರಿದ್ದ ಸಾವಿರಾರು ಸಂಖ್ಯೆಯ ಭಕ್ತರನ್ನು ತಲ್ಲಣಗೊಳಿಸಿತು. ವೇದಿಕೆಯಲ್ಲಿದ್ದ ಗಣ್ಯರು ಶ್ರೀ ಅಯ್ಯಪ್ಪ ಮಂದಿರದ ಪುನಃ ಪ್ರತಿಷ್ಟಾ ಮಹೋತ್ಸವಕ್ಕೆ ಶುಭ ಕೋರಿ ಮಾತಾನಾಡಿದರು. ತಾರಾನಾಥ್ ಶೆಟ್ಟಿ ಮಡಂತ್ಯಾರ್ ಕಾರ್ಯಕ್ರಮ ನಿರೂಪಿಸಿದರು. ಸುಮನ ಶಶಿಧರ್ ಶೆಟ್ಟಿ ಧನ್ಯವಾದಗೈದರು. ಶ್ರೀ ಅಯ್ಯಪ್ಪ ಸ್ವಾಮಿ ದೇವರ ನೂತನ ಮಂದಿರದ ಪ್ರತಿಷ್ಠಾ ಮಹೋತ್ಸವ ಜರಗಿ, ಮಹಾಪೂಜೆ ಮಹಾ ಮಂಗಳಾರತಿ ಜರಗಿದ ನಂತರ ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ಜರಗಿತು. ಶ್ರೀ ಅಯ್ಯಪ್ಪ ಸೇವಾ ಮಂಡಲದ ಪದಾಧಿಕಾರಿಗಳು, ಮಹಿಳಾ ಪದಾಧಿಕಾರಿಗಳು, ಸದಸ್ಯರು, ಭಕ್ತರು ಸಹಕರಿಸಿದರು.

ವರದಿ: ಹರೀಶ್ ಮೂಡಬಿದಿರೆ, ಪುಣೆ