ಅವಿಭಜಿತ ತುಳುನಾಡಿನ ಕಾಸರಗೋಡು ಜಿಲ್ಲೆಯ ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನ ದೇಶದ ಅತೀ ಪುರಾತನ ಐತಿಹಾಸಿಕ ಮತ್ತು ಚಾರಿತ್ರಿಕ ಮಹತ್ವದ ದೇವಾಲಯಗಳಲ್ಲೊಂದು. ಹತ್ತನೇ ಶತಮಾನ ಪೂರ್ವದ, ಅತೀ ವಿಶಿಷ್ಟ ಮತ್ತು ಅಪೂರ್ವವೆಂಬ ಹೆಗ್ಗಳಿಕೆ ಹೊಂದಿರುವ, ಭಾರತದ ಹಿಂದೂ ಬೌದ್ಧ ವಾಸ್ತು ವಿಶೇಷದ ಪ್ರಚ್ಚನ್ನ ಸಾಕ್ಷಿಯಾಗಿರುವ ಗಜಪೃಷ್ಠ ಶೈಲಿಯ ಈ ದೇವಸ್ಥಾನ ಭಾರತದಲ್ಲೇ ಅಪರೂಪದ ದೇವಾಲಯವಾಗಿದೆ. ಇಂತಹ ಮಧೂರು ಮದನಂತೇಶ್ವರ ಸಿದ್ಧಿವಿನಾಯಕ ದೇವಾಲಯ ಸುಮಾರು ಮೂವತ್ತು ಕೋಟಿ ರೂ.ಗಿಂತಲೂ ಅಧಿಕ ವೆಚ್ಚದಲ್ಲಿ ಜೀರ್ಣೋದ್ದಾರಗೊಂಡು ಬ್ರಹ್ಮಕಲಶೋತ್ಸವದ ಸಂಭ್ರಮದಲ್ಲಿದೆ.ಮಾರ್ಚ್ 26 ರಿಂದ ಏಪ್ರಿಲ್ 7 ರ ತನಕ ಬ್ರಹ್ಮಕಲಶೋತ್ಸವವು ನಡೆಯಲಿದ್ದು, ಸಕಲ ವೈಧಿಕ ಧಾರ್ಮಿಕ ವಿಧಿ ವಿಧಾನಗಳ ಮೂಲಕ ಕಲಶಾಭಿಷೇಕಗೊಂಡು ಈ ಮಹಾ ದೇವಾಲಯವು ಸಮಸ್ತ ಭಕ್ತ ಸಮೂಹಕ್ಕೆ ಸಮರ್ಪಣೆಗೆ ಸಿದ್ಧವಾಗಿದೆ. ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದ ಜೀರ್ಣೋದ್ದಾರ ಸಮಿತಿಯ ಗೌರವಾಧ್ಯಕ್ಷರಾದ ಕನ್ಯಾನ ಸದಾಶಿವ ಶೆಟ್ಟಿಯವರ ಗಣ್ಯ ಉಪಸ್ಥಿತಿಯಲ್ಲಿ, ಪುಣೆ ಬಂಟರ ಸಂಘದ ಅಧ್ಯಕ್ಷರಾದ ಸಂತೋಷ್ ಶೆಟ್ಟಿ ಇನ್ನ ಕುರ್ಕಿಲ್ ಬೆಟ್ಟು ಬಾಳಿಕೆಯವರ ಅಧ್ಯಕ್ಷತೆಯಲ್ಲಿ ಪುಣೆ ಸಮಿತಿಯ ಸಭೆ ಹಾಗೂ ಬ್ರಹ್ಮ ಕಲಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭವು ಮಾರ್ಚ್ 11 ಮಂಗಳವಾರದಂದು ಪುಣೆ ಕ್ಯಾಂಪ್ ಪೂನಾ ಕ್ಲಬ್ ನ ಕಾನ್ಫರೆನ್ಸ್ ಹಾಲ್ ನಲ್ಲಿ ಪೂರ್ವಾಹ್ನ 11 ಗಂಟೆಗೆ ನಡೆಯಲಿದೆ. ಬ್ರಹ್ಮ ಕಲಶೋತ್ಸವ ಸಮಿತಿಯ ಗೌರವ ಉಪಾಧ್ಯಕ್ಷರಾದ ಕೆ.ಕೆ ಶೆಟ್ಟಿ ಅಹಮದ್ ನಗರ, ಪುಣೆ ಬಂಟರ ಸಂಘದ ಟ್ರಸ್ಟಿಗಳಾದ ಹಾಗೂ ಮಧೂರು ದೇವಾಲಯ ಜೀರ್ಣೋದ್ದಾರ ದಾನಿಗಳಾದ ಪುಣೆ ಶ್ರೀ ಗುರುದೇವ ಸೇವಾ ಬಳಗದ ಅಧ್ಯಕ್ಷ ಪ್ರಭಾಕರ್ ಶೆಟ್ಟಿ, ಪುಣೆ ಬಂಟ್ಸ್ ಅಸೋಸಿಯೇಷನ್ ನ ಉಪಾಧ್ಯಕ್ಷ ಸತೀಶ್ ರೈ ಕಲ್ಲಂಗಳ ಗುತ್ತು ಉಪಸ್ಥಿತರಿರುವರು.

ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವರ ಭಕ್ತರು, ಧಾರ್ಮಿಕ ಮುಂದಾಳುಗಳು ಇದನ್ನು ವೈಯಕ್ತಿಕ ಆಹ್ವಾನವಾಗಿ ಪರಿಗಣಿಸಿ, ಈ ಸಭೆಯಲ್ಲಿ ಭಾಗವಹಿಸಿ ಸಹಕರಿಸಬೇಕೆಂದು ಪುಣೆ ಸಮಿತಿಯ ಪರವಾಗಿ ಶ್ರೀ ಕೆ.ಕೆ ಶೆಟ್ಟಿ ಅಹಮದ್ ನಗರ್, ಶ್ರೀ ಪ್ರಭಾಕರ್ ಶೆಟ್ಟಿ ಹಾಗೂ ಶ್ರೀ ಸತೀಶ್ ರೈ ಕಲ್ಲಂಗಳ ಗುತ್ತುರವರು ಆದರ ಪೂರ್ವಕವಾಗಿ ವಿನಂತಿಸಿಕೊಂಡಿದ್ದಾರೆ.
ವರದಿ: ಹರೀಶ್ ಮೂಡಬಿದಿರೆ, ಪುಣೆ