ಸಾವಿರದ ಸನಿಹ ರಂಗ ಪ್ರದರ್ಶನದೊಂದಿಗೆ ಖ್ಯಾತಿಗಳಿಸಿದ ‘ಶಿವದೂತೆ ಗುಳಿಗೆ’ ಯಶಸ್ಸಿನ ಪಥದಲ್ಲಿ ಮಿಂಚುತ್ತಿರುವಾಗಲೇ ಸ್ಟಾರ್ ನಿರ್ದೇಶಕ ವಿಜಯಕುಮಾರ್ ಕೊಡಿಯಲ್ ಬೈಲ್ ಅವರ ವಿನೂತನ ಪರಿಕಲ್ಪನೆಯ ತುಳು ಚಾರಿತ್ರಿಕ ನಾಟಕ ‘ಛತ್ರಪತಿ ಶಿವಾಜಿ’ ಅದ್ಭುತ ರಂಗವಿನ್ಯಾಸ- ವಸ್ತ್ರ ವಿನ್ಯಾಸದೊಂದಿಗೆ ಮಾರ್ಚ್ 6ರಂದು ರಾತ್ರಿ 7 ಗಂಟೆಗೆ ಕಲಾಮಾತೆ ಕಟೀಲು ಭ್ರಮರಾಂಬಿಕೆಯ ದಿವ್ಯ ಅಂಗಣದಲ್ಲಿ ರಂಗ ಪ್ರವೇಶ ಮಾಡಲಿದೆ.

ಶಶಿರಾಜ್ ಕಾವೂರು ಅವರ ಅಧ್ಯಯನಾತ್ಮಕ ಕಥೆ ಆಧರಿಸಿ ಮರಾಠಿ ವಾತಾವರಣದ ಕಥೆಯನ್ನು ತುಳು ಭಾಷೆಯಲ್ಲಿ ಸಿನಿಮಾ ಶೈಲಿಯ ಡಬ್ಬಿಂಗ್ ಸಿನಿಮಾ ಗ್ರಾಫಿ, ರಂಗ ವಿನ್ಯಾಸ ಬಳಸಿ ಚಾರಿತ್ರಿಕ ನಾಟಕ ರೂಪುಗೊಳಿಸುವಲ್ಲಿ ಕೊಡಿಯಾಲ್ ಬೈಲ್ ರ ಜಾಣ್ಮೆ ಪರಿಶ್ರಮ ರಂಗದ ಮೇಲೆ ಗೋಚರವಾಗಲಿದೆ.
ಎರಡೂ ಕಾಲು ಗಂಟೆಯ ನಾಟಕ 11 ದೃಶ್ಯಗಳಲ್ಲಿ ಸಂಯೋಜನೆಗೊಂಡಿದ್ದು, 15 ಪ್ರಬುದ್ಧ ಕಲಾವಿದರು ಕಥೆಗೆ ಜೀವ ತುಂಬಿದ್ದಾರೆ. ಪ್ರಮೋದ್ ಮರವಂತೆ ಹಾಡುಗಳು, ಎ.ಕೆ. ವಿಜಯ್ ಕೋಕಿಲ ಮತ್ತು ಮಣಿಕಾಂತ್ ಕದ್ರಿ ಅವರ ಸಂಗೀತ ನಿರ್ದೇಶನದಲ್ಲಿ ವಿಶೇಷ ಆಕರ್ಷಣೆಯಾಗಿ ಬಾಲಿವುಡ್ ಗಾಯಕ ಕೈಲಾಸ್ ಖೇರ್, ಯಕ್ಷದ್ರುವ ಪಟ್ಲ ಸತೀಶ್ ಶೆಟ್ಟಿ, ತೆಲಿಕೆದ ಬೊಳ್ಳಿ ದೇವದಾಸ್ ಕಾಪಿಕಾಡ್ ಹಾಗೂ ಇತರ ಸ್ಥಳೀಯ ಗಾಯಕರ ಗಾನ ಮಾಧುರ್ಯವಿದೆ.
ಮಾರಾಠಿ ವಸ್ತು ವಿಷಯಾಧರಿತ ತುಳು ನಾಟಕದ ಮಧ್ಯೆ ಕನ್ನಡ ಹಾಡೊಂದು ಗಮನ ಸೆಳೆಯಲಿದೆ. ನಾಟಕದ ಹಿರಿಮೆ ಹೆಚ್ಚಿಸುವ ವಸ್ತ್ರಾಭರಣ ವಿನ್ಯಾಸ (ಕಾಸ್ಟ್ಯೂಮ್ ಡಿಸೈನ್) ಹೊಚ್ಚ ಹೊಸದಾಗಿದ್ದು ಸಿನಿಮಾ ಶೈಲಿಯ ಸಂಪೂರ್ಣ ಧ್ವನಿಮುದ್ರಿತ (ಡಬ್ಬಿಂಗ್) ನಾಟಕದಲ್ಲಿ ಗೋಪಿನಾಥ್ ಭಟ್, ಚೇತನ್ ರೈ ಮಾಣಿ, ಚಂದ್ರಹಾಸ್ ಉಳ್ಳಾಲ್, ನಾಗರಾಜ ವರ್ಕಾಡಿ, ಸುನಿಲ್ ಪಲ್ಲಮಜಲು, ಉಷಾ ಭಂಡಾರಿ ಅವರು ಪ್ರಮುಖ ಪಾತ್ರಗಳಿಗೆ ಸ್ವರ ನೀಡಿದ್ದಾರೆ.