ಮೂಡುಬಿದಿರೆ: ಆಳ್ವಾಸ್ ಫಿಸಿಯೋಥೆರಪಿ ಕಾಲೇಜು ಹಾಗೂ ಸಂಶೋಧನಾ ಕೇಂದ್ರದ ವತಿಯಿಂದ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣ ಫಿಸಿಯೋ ಕನೆಕ್ಟ್ – 2025 ವಿದ್ಯಾಗಿರಿಯ ವಿ. ಎಸ್ ಆಚಾರ್ಯ ಸಭಾಂಗಣದಲ್ಲಿ ಶನಿವಾರ ನಡೆಯಿತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ತೇಜಸ್ವಿನಿ ಆಸ್ಪತ್ರೆಯ ಆರ್ಥೋಸ್ಕೊಪಿ ಹಾಗೂ ಸ್ಪೋರ್ಟ್ಸ್ ಮೆಡಿಸಿನ್ ವಿಭಾಗದ ಮುಖ್ಯಸ್ಥ ಡಾ. ಸುಮಂತ್ ನಾಯಕ್, ಶಸ್ತçಚಿಕಿತ್ಸೆಯು ಆರೋಗ್ಯದ ಸಮಸ್ಯೆಗೆ ಪರಿಹಾರ ನೀಡಬಲ್ಲದು ಆದರೆ ನಿಜವಾದ ಸವಾಲು ರೋಗಿಯ ಚೇತರಿಕೆಯಲ್ಲಿ ಕಂಡುಬರುತ್ತದೆ. ಫಿಸಿಯೋತೆರಪಿಸ್ಟ್ಗಳು ಅಂತಹ ಸವಾಲುಗಳನ್ನು ಬಗೆಹರಿಸುವಲ್ಲಿ ಕಾರ್ಯಪ್ರವೃತ್ತರಾಗಬೇಕು ಎಂದರು. ಅದ್ಯಕ್ಷತೆ ವಹಿಸಿದ್ದ ಆಳ್ವಾಸ್ ಹೆಲ್ತ್ ಸೆಂಟರ್ನ ಪ್ರಸೂತಿ ತಜ್ಞೆ ಡಾ. ಹನಾ ಶೆಟ್ಟಿ ಮಾತನಾಡಿ, ಕಲಿಯುವಿಕೆಯು ಒಂದು ನಿರಂತರ ಪ್ರಕ್ರಿಯೆ.ಈ ವಿಚಾರ ಸಂಕಿರಣದ ಮೂಲಕ ಪ್ರತಿಯೊಬ್ಬರು ಸವಾಲನ್ನು ಅರಿಯುವ ಜೊತೆಗೆ, ಹೊಸ ವಿಷಯಗಳನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡಿ. ಜ್ಞಾನದ ವಿನಿಮಯವಾಗುವುದು ಅಗತ್ಯ ಎಂದರು. ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ನ ಪ್ರಾಧ್ಯಪಕ ಡಾ. ಪ್ರಭು ರಾಜ ಗಾಯಗಳ ಚೇತರಿಕೆಯಲ್ಲಿ ಉಂಟಾಗುವ ತೋರಕೊಲಂಬರ್ ಫಾಸಿಯ ಕುರಿತು ಮಾಹಿತಿ ನೀಡಿದರು. ಆಕ್ಸ್ಫರ್ಡ್ ಫಿಸಿಯೋಥೆರಪಿ ಕಾಲೇಜಿನ ಪ್ರಾಂಶುಪಾಲ ಡಾ. ವಸಂತನ್, ಸ್ಟ್ರೋಕ್ ಉಂಟಾದ ರೋಗಿಗಳಿಗೆ ಕೊಡಮಾಡುವ ಫಿಸಿಯೋಥೆರಪಿ ವ್ಯಾಯಾಮದ ಕುರಿತು ಮಾತನಾಡಿದರು.
ಚೆನ್ನೈನ ಸವಿತ ಫಿಸಿಯೋಥೆರಪಿ ಕಾಲೇಜಿನ ಪ್ರಾಧ್ಯಾಪಕ ಡಾ. ಸರವನ್ಕುಮಾರ್ ಜೆ ಐಸಿಯು ರೋಗಿಗಳ ನಿರ್ವಹಣೆಯಲ್ಲಿ ಫಿಸಿಯೋಥೆರಪಿ ಪಾತ್ರದ ಕುರಿತು ಹಾಗೂ ಡಾ. ಪರ್ತಿಪನ್ ರಾಮಸ್ವಾಮಿ ವ್ಯವಹಾರಿಕ ಉದ್ಯಮವಾಗಿ ಫಿಸಿಯೋಥೆರಪಿ ಎಂಬ ವಿಷಯದ ಕುರಿತು ವಿಚಾರ ಮಂಡಿಸಿದರು. ವಿಚಾರ ಸಂಕಿರಣದಲ್ಲಿ ಭಾರತದ ವಿವಿಧ ಕಾಲೇಜುಗಳಿಂದ 420 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕಾಲೇಜಿನ ಪ್ರಾಂಶುಪಾಲೆ ಪ್ರೊ. ಕ್ಷಮಾ ಶೆಟ್ಟಿ ಉಪಸ್ಥಿತರಿದ್ದರು. ಡಾ. ಉಮ್ಮೆ ಸೌದಾ ಕಾರ್ಯಕ್ರಮ ನಿರೂಪಿಸಿದರು.
