ಚೌ ಗ್ರಾಮಗಳ ಪ್ರಧಾನ ಕ್ಷೇತ್ರ ಕಾಟುಕುಕ್ಕೆ ಶ್ರೀ ಸುಬ್ರಾಯ ದೇವಸ್ಥಾನದಲ್ಲಿ ಮೇ 6ರಿಂದ 12ರ ತನಕ ನಡೆಯಲಿರುವ ಬ್ರಹ್ಮಕಲಶೋತ್ಸವದ ಪೂರ್ವಭಾವಿಯಾಗಿ ‘ಪರ್ವ ಸನ್ನಾಹ’ ಎಂಬ ಕಾರ್ಯಕ್ರಮ ಭಾನುವಾರ ಜರಗಿತು. ಈ ಸಂದರ್ಭದಲ್ಲಿ ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರು ನಿಧಿ ಕುಂಭ ಸಂಚಯನಕ್ಕೆ ಮಂತ್ರಾಕ್ಷತೆಯನ್ನಿತ್ತು ಚಾಲನೆ ನೀಡಿದರು. ಬಳಿಕ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ ಎಣ್ಮಕಜೆ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಎಡನೀರು ಸ್ವಾಮೀಜಿಯವರು ವಿಜ್ಞಾಪನಾ ಪತ್ರ ಬಿಡುಗಡೆಗೊಳಿಸಿದರು. ಬ್ರಹ್ಮಕಲಶೋತ್ಸವದ ಲಾಂಛನವನ್ನು ಬ್ರಹ್ಮಶ್ರೀ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳು ಬಿಡುಗಡೆಗೊಳಿಸಿದರು. ಎಣ್ಮಕಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಸೋಮಶೇಖರ್ ಜೆ. ಎಸ್. ಸದಾಶಿವ ಭಟ್ ಹರಿನಿಲಯ, ಗೋಪಾಲ ಮಣಿಯಾಣಿಗುತ್ತು ಸಭೆಯಲ್ಲಿ ಮುಖ್ಯ ಅತಿಥಿಗಳಾಗಿದ್ದರು.
ಮಾಜಿ ಮೊಕ್ತೇಸರಾದ ಸಂಜೀವ ರೈ ಕೆಂಗನಾಜೆ, ಸಚ್ಚಿದಾನಂದ ಖಂಡೇರಿ, ವಿಷ್ಣು ಪ್ರಕಾಶ್ ಪಿಲಿಂಗಲ್ಲು, ಮಂಜೇಶ್ವರ ಬ್ಲಾಕ್ ಪಂಚಾಯತ್ ಸದಸ್ಯ ಬಟ್ಟು ಶೆಟ್ಟಿ, ಎಣ್ಮಕಜೆ ಗ್ರಾಮ ಪಂಚಾಯತ್ ಅಭಿವೃದ್ಧಿ ಸ್ಥಾಯೀ ಸಮಿತಿ ಅಧ್ಯಕ್ಷ ಬಿ. ಎಸ್ ಗಾಂಭೀರ್ ಉಪಸ್ಥಿತರಿದ್ದರು. ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯದರ್ಶಿ ಕಾರ್ತಿಕ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕ್ಷೇತ್ರ ಆಡಳಿತ ಮೊಕ್ತೇಸರ ಪಡ್ಡಂಬೈಲು ತಾರಾನಾಥ ರೈ ಪೆರ್ಲ ಸ್ವಾಗತಿಸಿ, ಸುಧಾಕರ ಕಲ್ಲಗದ್ದೆ ವಂದಿಸಿದರು. ಪದ್ಮನಾಭ ಶೆಟ್ಟಿ ಕಾಟುಕುಕ್ಕೆ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ಅಂಗವಾಗಿ ಕ್ಷೇತ್ರದಲ್ಲು ಶತರುದ್ರಾಭಿಷೇಕ, ರುದ್ರಪಾರಾಯಣ ಬಲಿವಾಡು ಕೂಟ ಜರಗಿತು.
