ಸಂಘ ಸಂಸ್ಥೆಗಳಲ್ಲಿ ಮಹಿಳೆಯರು ಕ್ರಿಯಾಶೀಲರಾದಾಗ ಆ ಸಂಸ್ಥೆ ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಾ ಪ್ರತಿಷ್ಠಿತ ಸಂಸ್ಥೆಯಾಗಿ ಬೆಳೆಯುತ್ತದೆ. ಕನ್ನಡ ವೆಲ್ಫೇರ್ ಸೊಸೈಟಿ ಘಾಟ್ಕೋಪರ್ ಮಹಿಳಾ ವಿಭಾಗವು ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಸದಾ ಕ್ರಿಯಾಶೀಲವಾಗಿದೆ. ಹಳದಿ ಕುಂಕುಮದಂತಹ ನಮ್ಮ ಸಂಸ್ಕೃತಿ ಸಂಸ್ಕಾರವನ್ನು ಬಿಂಬಿಸುವಂತಹ ಕಾರ್ಯಕ್ರಮಗಳು ಸಂಘ ಸಂಸ್ಥೆಗಳಲ್ಲಿ ನಿರಂತರ ನಡೆಯುತ್ತಿರಬೇಕು. ಆಗ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದು ಬಂಟರ ಸಂಘ ಮುಂಬಯಿಯ ಉಪಾಧ್ಯಕ್ಷ ಬಾಬಾಸ್ ಗ್ರೂಪ್ ಆಫ್ ಕಂಪನೀಸ್ ಆಡಳಿತ ನಿರ್ದೇಶಕ ಮಹೇಶ್ ಎಸ್. ಶೆಟ್ಟಿ ತಿಳಿಸಿದರು. ಘಾಟ್ಕೋಪರ್ ಪೂರ್ವದ ಕನ್ನಡ ವೆಲ್ಫೇರ್ ಸೊಸೈಟಿಯ ಮಹಿಳಾ ವಿಭಾಗದ ಆಶ್ರಯದಲ್ಲಿ ಫೆಬ್ರವರಿ 13 ರಂದು ಜರಗಿದ ಅರಶಿನ ಕುಂಕುಮ ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಕನ್ನಡ ವೆಲ್ಫೇರ್ ಅಸೋಸಿಯೇಷನ್ ಘಾಟ್ಕೋಪರ್ ಸಂಸ್ಥೆಯ ಅಧ್ಯಕ್ಷ ನವೀನ್ ಶೆಟ್ಟಿ ಇನ್ನಬಾಳಿಕೆಯವರು ನಾಡು ನುಡಿ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದಾರೆ. ವರ್ಷಪೂರ್ತಿ ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸಿ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ ಎಂದರು.
ಅತಿಥಿಯಾಗಿದ್ದ ಖ್ಯಾತ ಹೃದಯ ರೋಗ ತಜ್ಞ ಡಾ. ಸದಾನಂದ ಶೆಟ್ಟಿ ಮಾತನಾಡಿ, ಭಾರತೀಯ ಜೀವನ ಪದ್ಧತಿಯೊಂದಿಗೆ ಮಿತವಾದ ವ್ಯಾಯಾಮ, ಉತ್ತಮ ಆಹಾರ ಹಾಗೂ ಆಧ್ಯಾತ್ಮಿಕದೊಂದಿಗೆ ಸಂತೃಪ್ತಿಯ ಜೀವನ ನಡೆಸುವುದರಿಂದ ನಮ್ಮ ಆರೋಗ್ಯ ಉತ್ತಮವಾಗಿರುತ್ತದೆ. ಯಾವುದೇ ಮಾನಸಿಕ ಒತ್ತಡಕ್ಕೆ ಒಳಗಾಗದೆ ಸುಸಂಸ್ಕೃತ ಜೀವನ ಪದ್ಧತಿ ಅಳವಡಿಸಿಕೊಳ್ಳಬೇಕು ಎಂದರು.
ಇನ್ನೋರ್ವ ಅತಿಥಿ ಬಾಂಬೆ ಬಂಟ್ಸ್ ಅಸೋಸಿಯೇಷನ್ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ತೇಜಾಕ್ಷಿ ಶೆಟ್ಟಿ ಮಾತನಾಡಿ, ಭಾರತೀಯ ಸಂಸ್ಕೃತಿಯಲ್ಲಿ ಅರಸಿನ ಕುಂಕುಮಕ್ಕೆ ಹೆಚ್ಚಿನ ಮಹತ್ವವಿದೆ. ಮಹಿಳೆಯರ ಹಣೆಯಲ್ಲಿ ಕುಂಕುಮವಿದ್ದರೆ ಅದಕ್ಕಿಂತ ದೊಡ್ಡ ಲಕ್ಷಣ ಇನ್ನೊಂದಿಲ್ಲ. ಕುಂಕುಮ ನಮ್ಮ ಸೌಭಾಗ್ಯದ ಜೊತೆಗೆ ಸುಸಂಸ್ಕೃತ ಸಂಸ್ಕೃತಿಯಾಗಿದೆ. ಇದನ್ನು ಉಳಿಸಿ ಬೆಳೆಸುವಲ್ಲಿ ಮಹಿಳೆಯರು ಮುಖ್ಯವಾದ ಪಾತ್ರ ವಹಿಸಬೇಕು ಎಂದರು.
ಕನ್ನಡ ವೆಲ್ಫೇರ್ ಅಸೋಸಿಯೇಷನ್ ಘಾಟ್ಕೋಪರ್ ಸಂಸ್ಥೆಯ ಅಧ್ಯಕ್ಷ ನವೀನ್ ಶೆಟ್ಟಿ ಇನ್ನಬಾಳಿಕೆ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದ ಪ್ರಾರಂಭದಲ್ಲಿ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುಜಲ ಅಜಿತ್ ಶೆಟ್ಟಿ ಪ್ರಾಸ್ತಾವಿಸಿ, ಸ್ವಾಗತಿಸಿದರು. ಕಾರ್ಯದರ್ಶಿ ಮಲ್ಲಿಕಾ ಆರ್. ಶೆಟ್ಟಿ, ತಾರಾ ಕೆ. ರೈ ಪ್ರಾರ್ಥನೆಯೊಂದಿಗೆ ಗಣ್ಯರು ದೀಪ ಪ್ರಜ್ವಲಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಪ್ರವೀಳಾ ಶೆಟ್ಟಿ ಹಾಗೂ ವೀಣಾ ಶೆಟ್ಟಿ ಅತಿಥಿಗಳನ್ನು ಪರಿಚಯಿಸಿದರು. ಮಹಿಳಾ ವಿಭಾಗದ ಹಿರಿಯ ಸದಸ್ಯ ಚಂದ್ರಾವತಿ ದೇವಾಡಿಗ ಅವರನ್ನು ಅತಿಥಿ-ಗಣ್ಯರು ಸನ್ಮಾನಿಸಿದರು.
ಮಹಿಳಾ ವಿಭಾಗದ ಕೋಶಾಧಿಕಾರಿ ಧನ್ಯಾಕ್ಷಿ ಡಿ. ಶೆಟ್ಟಿ ಉಪಸ್ಥಿತರಿದ್ದರು. ವಸಂತಿ ಎನ್. ಪೂಜಾರಿ ನಿರೂಪಿಸಿದರು. ಮಲ್ಲಿಕಾ ಶೆಟ್ಟಿ ವಂದಿಸಿದರು. ಜೊತೆ ಕಾರ್ಯದರ್ಶಿ ಇಂದಿರಾ ವಿ. ಪೂಜಾರಿ, ಜತೆ ಕೋಶಾಧಿಕಾರಿ ಉಷಾ ಎಚ್. ಶೆಟ್ಟಿ, ಆಡಳಿತ ಮಂಡಳಿಯ ಸದಸ್ಯರು, ಮಹಿಳಾ ವಿಭಾಗ, ಯುವ ವಿಭಾಗ ಸದಸ್ಯರು, ತುಳು- ಕನ್ನಡಿಗರು, ವಿವಿಧ ಸಂಘದ ಮಹಿಳಾ ಪದಾಧಿಕಾರಿಗಳು ಉಪಸ್ಥಿತರಿದ್ದರು. ಮಹಿಳೆಯರು ಪರಸ್ಪರ ಅರಶಿನ ಕುಂಕುಮ ಹಚ್ಚಿಕೊಂಡು ಶುಭ ಹಾರೈಸಿಕೊಂಡರು.
Previous Articleಆಹಾರ ಮತ್ತು ಆತ್ಮ ಸಂಬಂಧ