ಮ್ಯಾರಥಾನ್ ಓಟದಲ್ಲಿ ರಾಜ್ಯ ರಾಷ್ಟ್ರ ಅಂತರಾಷ್ಟ್ರೀಯ ಮಟ್ಟದಲ್ಲಿ ದಾಖಲೆಗಳ ಮೇಲೆ ದಾಖಲೆ ಬರೆದಿರುವ ನವಿ ಮುಂಬಯಿ ಪರಿಸರದ ಹೋಟೆಲ್ ಉದ್ಯಮಿ, ಸಮಾಜ ಸೇವಕ ಗಿರೀಶ್ ಶೆಟ್ಟಿ ಹಾಗೂ ರೇಷ್ಮಾಜಿ. ಶೆಟ್ಟಿ ದಂಪತಿ ಕರ್ಮ ಭೂಮಿಯಿಂದ ಜನ್ಮಭೂಮಿಗೆ ಓಟದ ಮೂಲಕ ವಿಶ್ವ ದಾಖಲೆ ರಚನೆಗೆ ಸಜ್ಜಾಗಿ ಫೆಬ್ರವರಿ 14ರಂದು ಶುಕ್ರವಾರ ಬೆಳಗ್ಗೆ 5:30ಕ್ಕೆ ಮುಲುಂಡ್ ನಲ್ಲಿರುವ ಫೋರ್ಟಿಸ್ ಆಸ್ಪತ್ರೆ ಬಳಿಯಿಂದ ಓಟ ಪ್ರಾರಂಭಿಸಿದ್ದಾರೆ . 7:30 ಕ್ಕೆ ನೆರುಲ್ ಹೆದ್ದಾರಿಯಲ್ಲಿ ಸಾರ್ವಜನಿಕರಿಂದ ಅಭಿನಂದನೆಯನ್ನು ಸ್ವೀಕರಿಸಿದ್ದಾರೆ. ಮುಂಬಯಿನಿಂದ ಮಂಗಳೂರಿನವರೆಗೆ ಸುಮಾರು 950 ಕಿಲೋ ಮೀಟರ್ ಓಟವನ್ನು ಪೂರೈಸುವ ಪ್ರಪ್ರಥಮ ದಂಪತಿಗಳೆಂಬ ಹೆಗ್ಗಳಿಕೆಗೆ ಗಿರೀಶ್ ಶೆಟ್ಟಿ ಮತ್ತು ರೇಷ್ಮಾ ಶೆಟ್ಟಿ ದಂಪತಿ ಭಾಜನರಾಗಲಿದ್ದಾರೆ.ತಪಸ್ಯ ಫೌಂಡೇಶನ್ ಮಂಗಳೂರಿನಲ್ಲಿ ನಿರ್ಮಿಸುವ 16 ವರ್ಷದ ಕೆಳಗಿನ ಮಕ್ಕಳ ಕ್ಯಾನ್ಸರ್ ಆಸ್ಪತ್ರೆಗೆ ನಿಧಿ ಸಂಗ್ರಹದ ಸದುದ್ದೇಶದಿಂದ ಕರ್ಮ ಭೂಮಿಯಿಂದ ಜನ್ಮ ಭೂಮಿಗೆ ಓಟ ಎಂಬ ಶೀರ್ಷಿಕೆ ಅಡಿಯಲ್ಲಿ ಓಡುವ ಈ ಓಟದ ಪ್ರಾಯೋಜಕತ್ವವನ್ನು ಐಡಿಎಫ್ ಸಿ ಫಸ್ಟ್ ಬ್ಯಾಂಕ್ ವಹಿಸಿಕೊಂಡಿದ್ದು, ತುಳು ಕನ್ನಡ ಸಂಘ ಸಂಸ್ಥೆಗಳು ದಾರಿಯುದ್ದಕ್ಕೂ ಪ್ರೋತ್ಸಾಹಿಸುವರೆಂಬ ನಿರೀಕ್ಷೆಯನ್ನು ಗಿರೀಶ್ ಮತ್ತು ರೇಷ್ಮಾ ಶೆಟ್ಟಿ ದಂಪತಿ ಹೊಂದಿದ್ದಾರೆ. ಓಟದ ಸಂದರ್ಭದಲ್ಲಿ ಇವರೊಂದಿಗೆ ತರಬೇತುದಾರರಾದ ಕುಮಾರ್ ಅಜ್ವಾನಿ ಹಾಗೂ ಹರಿದಾಸನ್ ನಾಯರ್ ಜೊತೆಗಿರುತ್ತಾರೆ. ಪ್ರತಿದಿನ ಆರು ಗಂಟೆ ಓಡುವುದರ ಮೂಲಕ 23 ದಿನಗಳಲ್ಲಿ ಮಂಗಳೂರು ತಲುಪಲಿರುವ ಈ ಓಟಗಾರರನ್ನು ಮಂಗಳೂರು ಪುರಸಭಾ ಆವರಣದಲ್ಲಿ ಮಾರ್ಚ್ 8ರಂದು ಭರ್ಜರಿ ಸ್ವಾಗತದೊಂದಿಗೆ ಅಭಿನಂದಿಸಲಾಗುವುದು. ಗಿರೀಶ್ ಶೆಟ್ಟಿ ಮತ್ತು ರೇಷ್ಮಾ ಶೆಟ್ಟಿ ದಂಪತಿಯ ಈ ಸಾಮಾಜಿಕ ಕಳಕಳಿ ಎಲ್ಲರಿಗೂ ಮಾದರಿಯಾಗಲಿ, ನಿರ್ವಿಘ್ನವಾಗಿ ವಿಶ್ವದಾಖಲೆ ನಿರ್ಮಾಣವಾಗಲಿ. ಇವರ ಸಾಧನೆಯ ಕೀರ್ತಿ ಎಲ್ಲೆಡೆ ಪಸರಿಸಲಿ ಎಂದು ಹಾರೈಕೆ ನಮ್ಮೆಲ್ಲರದ್ದು ಇರಲಿ.