ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದಲ್ಲಿ ಸುಮಾರು 1500 ಕೆ.ಜಿ. ಭಾರದ ಹಾಗೂ ಐದು ಅಡಿ ಎತ್ತರದ ಕಂಚಿನ ಗಂಟೆ ಸ್ಥಾಪನೆಯಾಗಲಿದೆ. ದೇಶದಲ್ಲೇ ದ್ವಿತೀಯ ಅತ್ಯಂತ ದೊಡ್ಡ ಗಂಟೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಸದ್ಯ ಅಯೋದ್ಯೆ ಶ್ರೀರಾಮ ಮಂದಿರದಲ್ಲಿ ಇರುವ 2200 ಕೆ.ಜಿ. ಗಂಟೆ ದೇಶದಲ್ಲೇ ಅತ್ಯಂತ ದೊಡ್ಡ ಗಂಟೆಯಾಗಿದೆ. ಕಾಪುವಿನಲ್ಲಿ ಸ್ಥಾಪಿಸಲಾಗುವ ಈ ಗಂಟೆ ಕರ್ನಾಟಕ ರಾಜ್ಯದಲ್ಲೇ ಅತ್ಯಂತ ದೊಡ್ಡ ಗಂಟೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.
ಫೆಬ್ರವರಿ 9ರಂದು ನಡೆಯಲಿರುವ ಕಾಪು ಹೊಸ ಮಾರಿಗುಡಿಯ ನೂತನ ಸ್ವರ್ಣ ಗದ್ದುಗೆ, ಬೆಳ್ಳಿರಥ ಮತ್ತಿತರ ಕೊಡುಗೆಗಳನ್ನು ಬರಮಾಡಿಕೊಳ್ಳಲು ವೈಭವದ ಶೋಭಾ ಯಾತ್ರೆ ಹಮ್ಮಿಕೊಳ್ಳಲಾಗಿದ್ದು, ಆ ಸಂದರ್ಭದಲ್ಲಿ ಈ ಗಂಟೆಯನ್ನು ಅದ್ದೂರಿ ಮೆರವಣಿಗೆಯಲ್ಲಿ ಕ್ಷೇತ್ರಕ್ಕೆ ಬರಮಾಡಿಕೊಳ್ಳಲಾಗುವುದು.ಮುಂಬೈಯ ಮಿರಾರೋಡ್ ನಲ್ಲಿ ಅಲಯನ್ಸ್ ಇನ್ಫ್ರಾಸ್ಟ್ರಕ್ಟರ್ ಆಂಡ್ ರಿಯಲ್ಟರ್ಸ್ ಪ್ರೈವೇಟ್ ಲಿಮಿಟೆಡ್ ಎಂಬ ಉದ್ಯಮ ಸಂಸ್ಥೆ ಹೊಂದಿರುವ ಅರವಿಂದ ಶೆಟ್ಟಿ ಮತ್ತು ಪಲ್ಲವಿ ಶೆಟ್ಟಿ ದಂಪತಿ ಮಾರಿಯಮ್ಮನ ನೂತನ ದೇಗುಲಕ್ಕೆ ಇದನ್ನು ಕೊಡುಗೆಯಾಗಿ ನೀಡಲಿದ್ದಾರೆ. ಆಂಧ್ರಪ್ರದೇಶದ ಬಿ.ಎಸ್.ಎಂ ಫೌಂಡ್ರಿ ಎಂಬ ಸಂಸ್ಥೆ ಇದನ್ನು ನಿರ್ಮಿಸಿದೆ. ಮಾರಿಯಮ್ಮನ ನೂತನ ದೇಗುಲದ ಮುಂಭಾಗದಲ್ಲಿ ಈ ಗಂಟೆ ಸ್ಥಾಪಿಸಲಾಗುತ್ತಿದ್ದು ಅದಕ್ಕೆ ಅಗತ್ಯವಿರುವ ವ್ಯವಸ್ಥೆಯನ್ನು ಮಾಡಿಕೊಳ್ಳಲಾಗುತ್ತಿದೆ.