ಬೆಂಗಳೂರು ಬಂಟರ ಸಂಘದ ಅಧಿದೇವತೆ ಶ್ರೀ ವರಸಿದ್ಧಿ ವಿನಾಯಕ ಪ್ರಾರ್ಥನಾ ಮಂದಿರ ಜನವರಿ 19, 2000ರಲ್ಲಿ ಪ್ರತಿಷ್ಠಾಪನೆಗೊಂಡಿದ್ದು, ಇದೇ ಬರುವ 19, 2025 ರಂದು 25 ವರ್ಷವಾಗುತ್ತದೆ. ಇದರ ರಜತ ಮಹೋತ್ಸವವನ್ನು 19 ರಂದು ವಿಜೃಂಭಣೆಯಿಂದ ಆಚರಿಸಲು ತಯಾರಿ ನಡೆಯುತ್ತಿದೆ.
ರಾಜ್ಯಗಳ ಪುನರ್ ವಿಂಗಡಣೆಯೊಂದಿಗೆ ಮೈಸೂರು ರಾಜ್ಯ 1956ರಲ್ಲಿ ಉದಯವಾಯಿತು. ಇದರೊಂದಿಗೆ ದಕ್ಷಿಣ ಕನ್ನಡ ಜಿಲ್ಲೆ, ಮದ್ರಾಸ್ ಹಾಗೂ ಹೈದರಾಬಾದ್ ನಿಂದ ಬೆಂಗಳೂರಿಗೆ ಹೆಚ್ಚು ಹೆಚ್ಚು ಜನರು ಬರುವಂತಾಯಿತು. ಇದರಲ್ಲಿ ಅಧಿಕಾರಿಗಳು, ನ್ಯಾಯವಾದಿಗಳು ಹಾಗೂ ವಿವಿಧ ಕೈಗಾರಿಕೆಗಳನ್ನು ಪ್ರಾರಂಭಿಸಲು ಬರುವವರು ಸೇರಿದ್ದರು. ಇಂತಹ ಜನರಿಗೆ ಸಹಾಯ, ಸಲಹೆ ನೀಡುವ ಸದುದ್ದೇಶದಿಂದ ಬಂಟರ ಸಂಘವನ್ನು ಪ್ರಾರಂಭಿಸಬೇಕೆಂದು ಇಲ್ಲಿ ಮೊದಲೇ ನೆಲೆಸಿದ್ದ ಡಾ. ಕೆ.ಕೆ. ಹೆಗ್ಡೆ, ಸಿ.ಎಲ್ ನಾಯಕ್, ಡಾ. ನಾಗಪ್ಪ ಆಳ್ವ ಮೊದಲಾದ ಮುಖಂಡರು ಬಂಟರ ಸಂಘವನ್ನು 1957- 58 ರಲ್ಲಿ 31 ಸದಸ್ಯರ ನೋಂದಾಣಿಯೊಂದಿಗೆ ಸಂಘ ಪ್ರಾರಂಭಿಸಿದರು. ಇದಾದ ನಂತರ ಸಂಘ ಬೆಳೆದು ಸದಸ್ಯರ ಸಂಖ್ಯೆ ಹೆಚ್ಚಾಗುತ್ತಾ, ಸಂಘಕ್ಕೆ ತನ್ನದೇ ಸ್ವಂತ ಕಟ್ಟಡ ನಿರ್ಮಾಣಕ್ಕೆ ಜಾಗ ಹುಡುಕಲಾಯಿತು. ಇಂತಹ ಸನ್ನಿವೇಶದಲ್ಲಿ ಪ್ರಸ್ತಕ ಜಾಗವನ್ನು ಮುಂಬಯಿ ಉದ್ಯಮಿ ಶ್ರೀ ತಿಮ್ಮಪ್ಪ ಭಂಡಾರಿಯವರು ಖರೀದಿಸಿದ್ದು, ಇಲ್ಲಿ ಅವರ ಉದ್ದಿಮೆಯನ್ನು ನಡೆಸಲು ಉದ್ದೇಶಿಸಿದ್ದರು. ಈ ಜಾಗ ಅವರ ಉದ್ದಿಮೆಗೆ ಸರಿಯಾಗಲಾರದೆಂದು ಅವರು ಬೇರೆ ಜಾಗ ಹುಡುಕುತ್ತಿದ್ದರು. ಇದನ್ನು ತಿಳಿದ ಕೆ.ಎಸ್ ಹೆಗ್ಡೆ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಾಧೀಶರು, ಎಂ. ಸುಂದರರಾಮ ಶೆಟ್ಟಿ ಅಧ್ಯಕ್ಷರು ವಿಜಯಬ್ಯಾಂಕ್ ಹಾಗೂ ಕೆದಂಬಾಡಿ ಜಗನ್ನಾಥ ಶೆಟ್ಟಿ ಅಂದಿನ ನ್ಯಾಯವಾದಿ ಮಾನ್ಯ ತಿಮ್ಮಪ್ಪ ಭಂಡಾರಿಯವರನ್ನು ಭೇಟಿ ಮಾಡಿ ವಿಜಯನಗರದ ಈ ಜಾಗವನ್ನು ಬೆಂಗಳೂರು ಬಂಟರ ಸಂಘಕ್ಕೆ ದಾನವಾಗಿ ನೀಡಬೇಕೆಂದು ವಿನಂತಿಸಿಕೊಂಡರು. ಇದಕ್ಕೆ ತಿಮ್ಮಪ್ಪ ಭಂಡಾರಿಯವರು ಬಂಟರ ಸಂಘ ನಿರ್ಮಿಸಲಿರುವ ಸಭಾಭವನಕ್ಕೆ ಅವರ ಮಡದಿ ಶ್ರೀಮತಿ ರಾಧಾಬಾಯಿಯವರ ಹೆಸರಿಡಬೇಕೆಂದು ಷರತ್ತಿನೊಂದಿಗೆ ಒಪ್ಪಿ ಗಿಫ್ಟ್ ಡೀಡನ್ನು 29-03-1975 ರಲ್ಲಿ ಅಂದಿನ ಅಧ್ಯಕ್ಷರಾಗಿದ್ದ ಇರ್ಮಾಡಿ ಆನಂದ ಶೆಟ್ಟಿಯವರಿಗೆ ನೀಡಿದ್ದರು. ಶ್ರೀ ಶ್ರೀನಿವಾಸ ಆಳ್ವರವರು ಮತ್ತು ಸಂಗಡಿಗರ ಮಹತ್ಸಾಧನೆಯಿಂದ ರಾಧಾಬಾಯಿ ತಿಮ್ಮಪ್ಪ ಭಂಡಾರಿ ಸಭಾಭವನ 26-01-1993 ರಲ್ಲಿ ಉದ್ಘಾಟನೆಗೊಂಡಿತು.ಬಂಟರ ಸಂಘ ರಾಧಾಬಾಯಿ ತಿಮ್ಮಪ್ಪ ಭಂಡಾರಿ ಸಭಾಭವನ ಸುಸಜ್ಜಿತ, ಹವಾನಿಯಂತ್ರಿತ ಕನ್ವೆನ್ಶನ್ ಹಾಲ್ ಆಗಿದ್ದು ಜನಮನ್ನಣೆ ಗಳಿಸಿದೆ. ಈ ಹಾಲ್ ನಲ್ಲಿ ಮದುವೆ ಇತರ ಅನೇಕ ಕಾರ್ಯಕ್ರಮಗಳು ನಡೆಯುತ್ತಿವೆ. ಇಲ್ಲಿ ಅಕ್ಕ ಪಕ್ಕದ ಮನೆಗಳಲ್ಲಿ ಅಂದು ವಾಸಿಸುತ್ತಿದ್ದ ಸಂಘದ ಸದಸ್ಯರು ಸಾಯಂಕಾಲದಲ್ಲಿ ಪ್ರಾರ್ಥನೆ ಭಜನೆ ಮಾಡಲು ಬರುತ್ತಿದ್ದರು. ಶ್ರೀಮತಿ ವೇದಾವತಿ ಎಸ್. ಶೆಟ್ಟಿ, ಶ್ರೀಮತಿ ಹೇಮಲತಾ ವಿ. ಶೆಟ್ಟಿ, ಶ್ರೀಮತಿ ಸುಜಯ ಜೆ. ಶೆಟ್ಟಿ, ಶ್ರೀಮತಿ ಸರ್ವಾಣಿ ಜಿ. ರೈ, ಶ್ರೀಮತಿ ಮೀರಾ ಕೆ. ಶೆಟ್ಟಿ, ಶ್ರೀಮತಿ ವಿನೋದ, ಶಾಂತಕ್ಕ ಮತ್ತಿತರರು ಇದರಲ್ಲಿ ಭಾಗವಹಿಸುತ್ತಿದ್ದರು. ಭಜನೆಯಲ್ಲಿ ಪುಟ್ಟ ಮಕ್ಕಳು ಸಹ ಪಾಲ್ಗೊಳ್ಳುತ್ತಿದ್ದರು. ಇಲ್ಲಿ ಮುಂದೊಂದು ದಿನ ದೇವಸ್ಥಾನ ಪ್ರತಿಷ್ಠಾಪನೆಯಾಗಲಿದೆ ಎಂದು ಅವರೆಲ್ಲರೂ ಆಶಿಸುತ್ತಿದ್ದರು. ಸಂಘದ ಈ ಭವನದಲ್ಲಿ ಮದುವೆಗಳು ನೆರವೇರುತ್ತಿದ್ದು, ಇಲ್ಲಿ ಒಂದು ಮಂದಿರದ ಅಗತ್ಯವಿತ್ತು. ಇಂತಹ ಸನ್ನಿವೇಶದಲ್ಲಿ ಡಾ. ಎಂ. ತಿಮ್ಮಪ್ಪ ರೈಯವರು ಅಧ್ಯಕ್ಷರಾಗಿದ್ದ 1997-99 ರ ಅವಧಿಯಲ್ಲಿ ಕಾರ್ಯಕಾರಿ ಸಮಿತಿಯ ಸದಸ್ಯರಾಗಿದ್ದ ದಿ. ಹರಿಪ್ರಸಾದ್ ಶೆಟ್ಟಿ, ಕೆ. ಟಿ. ಸುಧಾಕರ್ ರೈ ಮತ್ತು ಡಿ. ಚಂದ್ರಹಾಸ ರೈಯವರು ಮಂಗಳೂರಿನ ಮಾತೃ ಸಂಸ್ಥೆಯಲ್ಲಿ ನಡೆದಿದ್ದ ಒಂದು ಕಾರ್ಯಕ್ರಮವನ್ನು ಮುಗಿಸಿ ಮರಳಿ ಬರುತ್ತಿರುವಾಗ ಈ ಅವಧಿಯಲ್ಲೇ ಮಂದಿರ ಕಟ್ಟಬೇಕೆಂದು, ಅದಕ್ಕೆ ಅಗತ್ಯವಿರುವ ಸಹಾಯಧನ ಸಂಗ್ರಹಿಸಬೇಕೆಂದೂ ತಮ್ಮ ದೇಣಿಗೆಯಾಗಿ ನೀಡಲಿರುವ ಮೊತ್ತವನ್ನು ತೆರೆದಿಟ್ಟಿದ್ದರು. ಈ ಮಂದಿರದ ಕಟ್ಟಡ ಕೆಲಸವನ್ನು ಸದಸ್ಯರಾಗಿ ಜಯಕರ ಶೆಟ್ಟಿಯವರಿಗೆ ಒಪ್ಪಿಸಲಾಗಿತ್ತು. ಸ್ಥಳವಕಾಶದ ಕಾರಣ ಇದಕ್ಕೆ ಇಂಜಿನಿಯರ್ ವಿಶಿಷ್ಟ ರೀತಿಯ ನಕ್ಷೆಯನ್ನು ಆರ್ಕಿಟೆಕ್ ಅನೂಪ್ ನಾಯಕ್ ರವರು ಮಾಡಿಕೊಟ್ಟಿದ್ದರು. ನಾನು ತಿಳಿದಂತೆ ಸಂಘದ ಅಧಿಕ ಸದಸ್ಯರು ಈ ಕಾರ್ಯಕ್ಕೆ ತಮ್ಮ ಶಕ್ತಿಯಾನುಸಾರ ಸಹಕಾರ ನೀಡಿದ್ದರು.
ಶ್ರೀ ವರಸಿದ್ಧಿ ವಿನಾಯಕ ಪ್ರಾರ್ಥನಾ ಮಂದಿರ ನಿರ್ಮಾಣದ ಕಾರ್ಯ ಮುಂದುವರಿಯುತ್ತಿದ್ದಂತೆ ಮಾಜಿ ಅಧ್ಯಕ್ಷರಾದ ದಿ. ಡಿ.ಕೆ ಚೌಟ, ದಿ. ಐ.ಎಂ ಜಯರಾಮ ಶೆಟ್ಟಿ, ಭಗವಾನ್ ದಾಸ್ ರೈ ಮತ್ತು ಹರೀಶ್ ಕುಮಾರ್ ಶೆಟ್ಟಿಯವರೆಲ್ಲರೂ ದೊಡ್ಡ ಮೊತ್ತ ನೀಡಿದ್ದರು. ಅಂತೆಯೇ ದಿ. ಬಿ. ಸಂಜೀವ ಶೆಟ್ಟಿ ಇತರರು ಮಂದಿರಕ್ಕೆ ಅಗತ್ಯವಿರುವ ಇತರ ಪರಿಕರಗಳನ್ನು ನೀಡಿದ್ದರು. ಕುಣಿಗಲ್ ಸಮೀಪದ ಹೆಬ್ಬೂರು ಕೋದಂಡಾಶ್ರಮದ ಶ್ರೀ ಶ್ರೀ ಶ್ರೀ ನಾರಾಯಣಾಶ್ರಮ ಗುರುಗಳು ಹೋಮ ಹವನ ಮಾಡಿ ಪಾಣಿಪೀಠ ಇಡುವ ಹೊತ್ತಿನಲ್ಲೇ ಗುರುಗಳನ್ನು ಹುಡುಕಿಕೊಂಡು ಕೊಳ್ಳೆಗಾಲ -ಕೋಲಾರ ಸಮೀಪ ಕೆಲವರು ಒಂದು ಶ್ರೀ ಚಕ್ರವನ್ನು ತಂದಿದ್ದು, ಅದನ್ನು ಹೆಬ್ಬೂರು ಮಠಕ್ಕೆ ನೀಡಲಿದ್ದರು. ಶ್ರೀ ಗುರುಗಳು ಬಂಟರ ಸಂಘಕ್ಕೆ ಪ್ರತಿಷ್ಠಾಪನೆಗೆ ತೆರಳಿದ್ದಾರೆಂದು ಮಠದಲ್ಲಿ ತಿಳಿಸಿದ ಕಾರಣ ಬಂದಿದ್ದರು. ಇದು ಇಲ್ಲಿಗೆ ಪರಮಾತ್ಮನ ಇಚ್ಛೆ ದೇವರು ಎಣಿಸಿದಂತೆಯೇ ಆಗಲಿ ಎಂದು ನುಡಿದ ಸ್ವಾಮಿಗಳು ಶ್ರೀ ಶಕ್ತಿಯುತ ಶ್ರೀ ಚಕ್ರ ಪಾಣಿಪೀಠದ ಅಡಿಯಲ್ಲಿ ಇಡಲಾಯಿತು. ಈ ಶ್ರೀಚಕ್ರ ಅತ್ಯಂತ ಶಕ್ತಿಶಾಲಿಯಾಗಿದೆ ಎಂದು ಗುರುಗಳು ಅಭಿಪ್ರಾಯ ಪಟ್ಟಿದ್ದರು.ದಿನಾಂಕ 29-01-2000 ರಂದು ಶುಭ ಘಳಿಗೆಯಲ್ಲಿ ಗುರುಗಳು ಶ್ರೀ ವರಸಿದ್ಧಿ ವಿನಾಯಕ ಪ್ರಾರ್ಥನಾ ಮಂದಿರ ಪ್ರತಿಷ್ಠಾಪನೆಯನ್ನು ವಿಧಿವತ್ತಾಗಿ ನೆರವೇರಿಸಿದರು. ಶ್ರೀ ಸತೀಶ ಅಡಿಗರವರು ಮಂದಿರ ಪ್ರತಿಷ್ಠಾಪನೆಯಾದ ಪ್ರಾರಂಭದಿಂದ ಸುಮಾರು ಎಂಟು ವರ್ಷ ಒಂಬತ್ತು ತಿಂಗಳು ಮಂದಿರದ ಅರ್ಚಕರಾಗಿ ಸೇವೆ ಸಲ್ಲಿಸಿದರು. ಮುಂಡಾಲಗುತ್ತು ಡಾ. ತಿಮ್ಮಪ್ಪ ರೈಯವರ ಅಧ್ಯಕ್ಷತೆಯಲ್ಲಿ ಈ ಪ್ರಾರ್ಥನಾ ಮಂದಿರದ ಪ್ರತಿಷ್ಠಾಪನೆ ನೆರವೇರಿದ್ದು ಒಂದು ಸಾಧನೆ. ಜನವರಿ 2000 ದಿಂದ ಈ ತನಕ ಕಾರ್ಯವೆಸಗಿರುವ ಎಲ್ಲಾ ಅಧ್ಯಕ್ಷರು, ಉಪಾಧ್ಯಕ್ಷರು, ಗೌರವ ಕಾರ್ಯದರ್ಶಿಗಳು ಇತರ ಪದಾಧಿಕಾರಿಗಳು ಹಾಗೂ ಪ್ರಾರ್ಥನಾ ಮಂದಿರದ ಚೇರ್ ಪರ್ಸನ್ ಎಲ್ಲರೂ ಅತ್ಯಂತ ಶ್ರದ್ಧಾ ಭಕ್ತಿ ಮತ್ತು ಸೇವಾ ಮನೋಭಾವದಿಂದ ಕೆಲಸ ನಿರ್ವಹಿಸಿದ್ದಾರೆ. ಇಂದಿನ ಅವಧಿಯ ಚೇರ್ ಪರ್ಸನ್ ಶ್ರೀಮತಿ ಶೋಭಾ ಎನ್. ಶೇಖರರವರು ಅವರ ತಂಡ ಆಸಕ್ತಿ ವಹಿಸಿ ಸಮಾರಂಭವನ್ನು ಆಯೋಜಿಸಿದ್ದಾರೆ. ಸಂಘದ ಪ್ರತೀ ಸದಸ್ಯರ ಶಾಶ್ವತ ಪೂಜೆ ಮಾಡುವಂತೆ ಎಲ್ಲಾ ಸದಸ್ಯರನ್ನು ಪ್ರೇರೇಪಿಸಿದ್ದಾರೆ ಹಾಗೂ ಪ್ರಾರ್ಥನಾ ಮಂದಿರ ಸಮಿತಿಯ ವತಿಯಿಂದ ಸಂಘದ ಆವರಣದಲ್ಲಿ ಉಚಿತ ಭಜನಾ ತರಗತಿಯನ್ನು ಪ್ರಾರಂಭಿಸಿದ್ದು, ಸುಮಾರು ನೂರಕ್ಕೂ ಅಧಿಕ ಮಕ್ಕಳು ತರಬೇತಿ ಪಡೆಯುತ್ತಿದ್ದಾರೆ. ಶ್ರೀ ವರಸಿದ್ಧಿ ವಿನಾಯಕನ ಕೃಪೆ ಎಲ್ಲಾ ಸದಸ್ಯರು ಮತ್ತು ಕುಟುಂಬದವರ ಮೇಲಿರಲಿ ಎಂದು ಪ್ರಾರ್ಥನೆ ಸಂಘದ ಸದಸ್ಯರೆಲ್ಲರೂ ಈ ಅಪೂರ್ವದ ರಜತ ಮಹೋತ್ಸವ ಸಮಾರಂಭದಲ್ಲಿ ಭಾಗವಹಿಸಬೇಕೆಂದು ವಿನಮ್ರ ಮನವಿ.
ಲೇಖನ : ಎ ಗಿರೀಶ್ ರೈ