ವಿದ್ಯಾಗಿರಿ: ಜಗತ್ತಿನಲ್ಲಿ ಅತಿಹೆಚ್ಚು ಬಳಕೆಯಾದ ಸಮೂಹ ಸಂವಹನ ಮಾಧ್ಯಮಗಳಲ್ಲಿ ರೇಡಿಯೋ ಸಹ ಒಂದು. ೨೦ನೇ ಶತಮಾನದಲ್ಲಿ ಪ್ರಮುಖ ಮಾಧ್ಯಮವಾಗಿ ಉದಯಿಸಿ, ಇಂದಿಗೂ ತನ್ನ ಪ್ರಸ್ತುತತೆಯನ್ನು ಕಾಪಾಡಿಕೊಂಡು ಬಂದಿದೆ ಎಂದು ಮಂಗಳೂರು ಆಕಾಶವಾಣಿಯ ಪ್ರಸರಣ ಕಾರ್ಯನಿರ್ವಾಹಕ ಲತೀಶ್ ಪಾಲ್ದಾನೆ ನುಡಿದರು. ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗದ ವತಿಯಿಂದ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಬುಧವಾರ ಆಳ್ವಾಸ್ನ ಜೆಎಂಸಿ ಹಾಲ್ನಲ್ಲಿ ನಡೆದ ‘ಡಿಜಿಟಲ್ ಯುಗದಲ್ಲಿ ರೇಡಿಯೋ ಅವಕಾಶಗಳು ಹಾಗೂ ಸವಾಲುಗಳು’ ಎಂಬ ವಿಷಯದ ಕುರಿತು ಅವರು ಮಾತನಾಡಿದರು. ರೇಡಿಯೋವು ಗ್ರಾಮೀಣ ಪ್ರದೇಶದಲ್ಲಿ ಶಿಕ್ಷಣ, ಆರೋಗ್ಯ, ಕೃಷಿ, ಮತ್ತು ಮಹಿಳಾ ಸಬಲೀಕರಣದ ಕುರಿತ ಮಾಹಿತಿಗೆ ಪ್ರಮುಖ ಸಾಧನವಾಗಿದೆ. ಸರಳ ಭಾಷೆಯಲ್ಲಿ ಪರಿಚಾರಕರಿಂದ ಪ್ರಸಾರಮಾಡುವ ಮಾಹಿತಿ, ಸಾರ್ವಜನಿಕರಿಗೆ ನೇರವಾಗಿ ತಲುಪುತ್ತಿದೆ.ಸರ್ಕಾರದ ಅನೇಕ ಯೋಜನೆಗಳು, ಶಿಕ್ಷಣ ಮತ್ತು ಮನರಂಜನೆ ಪಡೆಯಲು ವ್ಯಾಪಕವಾಗಿ ಬಳಸಲ್ಪಡುವ ಮಾಧ್ಯಮವಾಗಿ ಬಳಕೆಯಾಗುತ್ತಿದೆ. ಪ್ರಸ್ತುತ ಭಾರತದಲ್ಲಿ ೪೦೦ ಕ್ಕೂ ಹೆಚ್ಚು ಆಕಾಶವಾಣಿ ರೇಡಿಯೋ ಸ್ಟೇಷನ್ ಗಳು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿವೆ. ಸಾಮಾಜಿಕ ನೆಲೆಯಲ್ಲಿ ವಿಭಿನ್ನ ಮತ್ತು ವಿನೂತನ ಕಾರ್ಯಕ್ರಮಗಳಿಂದ ಆಕಾಶವಾಣಿ ಜನರಿಗೆ ಮಾಹಿತಿ ತಲುಪಿಸುವ ಪ್ರಬಲ ಮಾಧ್ಯಮವಾಗಿ ಮುಂದುವರೆಯುತ್ತಿದೆ. ರೇಡಿಯೋ ಸ್ಥಳೀಯ ಸಮುದಾಯದ ಅರ್ಥಪೂರ್ಣ ಅಗತ್ಯಗಳಿಗೆ ಸ್ಪಂದಿಸಿ, ಸ್ಥಳೀಯ ವಿಷಯ, ಭಾಷೆ, ಮತ್ತು ಸಂಸ್ಕೃತಿಯ ಪ್ರಾತಿನಿಧ್ಯ ನೀಡುತ್ತಿದೆ. ರೇಡಿಯೋ ಪ್ರಸ್ತುತಿಗಳು ಶ್ರೋತೃ ಮತ್ತು ನಿರೂಪಕರ ನಡುವೆ ನೇರ ಸಂಭಾಷಣೆಯ ಅನುಭವವನ್ನು ನೀಡಬೇಕಾಗುತ್ತದೆ. ಆದ್ದರಿಂದ, ಸ್ಕ್ರಿಪ್ಟ್ ಸರಳ, ಸುಲಭವಾಗಿ ಅರ್ಥಮಾಡಿಕೊಳ್ಳುವ ಹಾಗೆಯೂ, ಸ್ಪಷ್ಟವಾಗಿಯೂ ಇರಬೇಕು.ರೇಡಿಯೋದಲ್ಲಿ ಅದರಲ್ಲೂ ಆಕಾಶವಾಣಿಯಂತಹ ಸರ್ಕಾರಿ ಸಂಸ್ಥೆಗಳಲ್ಲಿ ನ್ಯೂಸ್ ಎಡಿಟರ್, ಸುದ್ದಿ ನಿರೂಪಕ, ಉದ್ಘೋಷಕ, ಕ್ಯಾಶುಯಲ್ ಎನೌನ್ಸರ್ ಮುಖೇನ ವಿವಿಧ ಹುದ್ದೆಗಳಲ್ಲಿ ಗುರುತಿಸಿಕೊಳ್ಳಲು ಅವಕಾಶವಿದೆ. ರೇಡಿಯೋ ಮೂಲಕ ಅನೇಕ ಹೊಸ ಪ್ರತಿಭೆಗಳ ಅನಾವರಣಗೊಂಡಿವೆ. ಆಕಾಶವಾಣಿಯಲ್ಲಿ ವೃತ್ತಿ ಆರಂಭಿಸಿ, ನಂತರ ವಿವಿಧ ಮಾಧ್ಯಮಗಳಲ್ಲಿ ಪ್ರಸಿದ್ಧಿ ಪಡೆದವರು ಸಾಕಷ್ಟು ಜನರಿದ್ದಾರೆ.ಮೊದಲು ವಿದ್ಯಾರ್ಥಿಗಳು ವಿದ್ಯಾರ್ಥಿಗಳು ರೇಡಿಯೋವನ್ನು ಆಲಿಸುವ ಅಭ್ಯಾಸ ಬೆಳೆಸಿಕೊಳ್ಳಬೇಕು ಎಂದರು . ವಿದ್ಯಾರ್ಥಿಗಳಿಗೆ ರೇಡಿಯೋ ಸಂದರ್ಶನಕ್ಕೆ ಪ್ರಶ್ನಾವಳಿ ರಚಿಸುವ ಚಟುವಟಿಕೆ ನೀಡಿ, ಪರಿಣಾಮಕಾರಿ ಪ್ರಶ್ನಾವಳಿ ತಯಾರಿಸುವ ಕುರಿತು ತಿಳಿಸಿದರು. ರೇಡಿಯೋದಲ್ಲಿ ಪ್ರಸಾರವಾಗುವ ಡ್ರಾಮಾ , ಡಾಕ್ಯೂಮೆಂಟರಿಯ ತುಣುಕನ್ನು ವಿದ್ಯಾರ್ಥಿಗಳಿಗೆ ಆಲಿಸಿದರು. ಕಾರ್ಯಕ್ರಮದಲ್ಲಿ ವಿಭಾಗದ ಮುಖ್ಯಸ್ಥ ಪ್ರಸಾದ್ ಶೆಟ್ಟಿ, ಕಾರ್ಯಕ್ರಮ ಸಂಯೋಜಕಿ ಸುಶ್ಮಿತಾ ಜೆ ಇದ್ದರು. ವಿದ್ಯಾರ್ಥಿ ಸಂಯೋಜಕಿ ವೀಕ್ಷಿತಾ ವಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.