ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಯೂನಿಯನ್ ಮಂಗಳೂರು ಇದರ ಆಡಳಿತ ಮಂಡಳಿಯ 13 ನಿರ್ದೇಶಕರ ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದ್ದು, ಪುತ್ತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಕ್ಷೇತ್ರದಿಂದ ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟುರವರು ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ. ಚುನಾವಣಾ ಅಧಿಕಾರಿ ಸುಧೀರ್ ಕುಮಾರ್ ಕೆ. ರವರು ಆಯ್ಕೆ ಪ್ರಕ್ರಿಯೆ ನಡೆಸಿ ನಿರ್ದೇಶಕರ ಹೆಸರನ್ನು ಘೋಷಣೆ ಮಾಡಿದ್ದಾರೆ.
ಶಶಿಕುಮಾರ್ ರೈ ಬಾಲ್ಯೊಟ್ಟುರವರು ಇರ್ದೆ ಗ್ರಾಮದ ಬಾಲ್ಯೊಟ್ಟು ನಿವಾಸಿಯಾಗಿದ್ದು, ಪುತ್ತೂರು ಭೂ ಅಭಿವೃದ್ಧಿ ಬ್ಯಾಂಕಿನ ನಿರ್ದೇಶಕರಾಗಿ, ಉಪಾಧ್ಯಕ್ಷರಾಗಿ, 8 ವರ್ಷ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜನ ಜಾಗೃತಿ ವೇದಿಕೆಯ ಪುತ್ತೂರು ತಾಲೂಕು ಸಮಿತಿ ಅಧ್ಯಕ್ಷರಾಗಿ, ಇರ್ದೆ ಹಾಗೂ ಬೆಟ್ಟಂಪಾಡಿ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾಗಿ, ಬೆಂದ್ರತೀರ್ಥ ಅಭಿವೃದ್ಧಿ ಸಮಿತಿಯ ಸಂಚಾಲಕರಾಗಿ, ಪೇರ್ಲತ್ತಡ್ಕ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾಗಿ, ಇರ್ದೆ ವಿಷ್ಣುಮೂರ್ತಿ ದೇವಸ್ಥಾನದ ಮೊಕ್ತೇಸರರಾಗಿ, ನಿಡ್ಪಳ್ಳಿ ಶ್ರೀ ಶಾಂತಾದುರ್ಗಾ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿ ಸಂಚಾಲಕರಾಗಿ, ಸಾರ್ವಜನಿಕ ಶಾರದೋತ್ಸವ ಸಮಿತಿಯಲ್ಲಿ 23 ವರ್ಷ ಅಧ್ಯಕ್ಷರಾಗಿ, ಪುತ್ತೂರು ಸಂತ ಫಿಲೋಮಿನಾ ಕಾಲೇಜಿನ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾಗಿ, ಉಪ್ಪಿನಂಗಡಿ ವಿಜಯ-ವಿಕ್ರಮ ಜೋಡು ಕರೆ ಕಂಬಳ ಸಮಿತಿಯ ಸಂಚಾಲಕರಾಗಿ, ಪುತ್ತೂರು ತಾಲೂಕು ಯುವ ಬಂಟರ ಸಂಘದ ಸ್ಥಾಪನಾ ಸಮಿತಿ ಕೋಶಾಧಿಕಾರಿಯಾಗಿ, ಪುತ್ತೂರು ತಾಲೂಕು ಬಂಟರ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಪ್ರಸ್ತುತ ಪುತ್ತೂರು ಸೌಹಾರ್ದ ಸಹಕಾರಿಯ ಉಪಾಧ್ಯಕ್ಷರಾಗಿ, ಪುತ್ತೂರು ಟಿ.ಪಿ.ಎಂ.ಎಸ್ ನ ನಿರ್ದೇಶಕರಾಗಿ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಲ್ಲಿ ಮೂರನೇ ಬಾರಿಗೆ ನಿರ್ದೇಶಕರಾಗಿದ್ದಾರೆ.