ಹುಟ್ಟೂರಿನಲ್ಲಿ ಸಮಾಜಕ್ಕೆ ಏನಾದರೂ ಕೊಡುಗೆ ನೀಡುವ ಉದ್ದೇಶದಿಂದ ಕಣ್ಣಿನ ಆಸ್ಪತ್ರೆಯನ್ನು ಆರಂಭಿಸಿದ್ದೇವೆ. ಶಂಕರನಾರಾಯಣ ಕನ್ಸ್ಟ್ರಕ್ಷನ್ ಪ್ರೈ.ಲಿ.(ಎಸ್ಎನ್ಸಿ) ಸಂಸ್ಥಾಪಕರಾದ ಸಿ. ನಾರಾಯಣ ಶೆಟ್ಟಿ ಅವರ ಹುಟ್ಟೂರಾದ ಇಲ್ಲಿ ಅವರ 100ನೇ ಜನ್ಮ ವಾರ್ಷಿಕೋತ್ಸವ ಅಂಗವಾಗಿ ಈ ಆಸ್ಪತ್ರೆಯನ್ನು ಜನತೆಯ ಸೇವೆಗಾಗಿ ಆರಂಭಿಸಲಾಗಿದೆ ಎಂದು ಎಸ್ಎನ್ಸಿ ಚೇರ್ಮನ್ ಡಾ| ಎನ್. ಸೀತಾರಾಮ ಶೆಟ್ಟಿ ಹೇಳಿದರು. ಅವರು ರವಿವಾರ ಶಂಕರನಾರಾಯಣದಲ್ಲಿ ವಿಶ್ವದರ್ಜೆಯ ಸೌಲಭ್ಯಗಳನ್ನು ಉಚಿತವಾಗಿ ಚಿಕಿತ್ಸೆ ನೀಡುವ ಉದ್ದೇಶದೊಂದಿಗೆ ಆರಂಭವಾದ 25 ಕೋ.ರೂ. ವೆಚ್ಚದ ಚಾರ್ಮಕ್ಕಿ ನಾರಾಯಣ ಶೆಟ್ಟಿ ಸ್ಮಾರಕ ಕಣ್ಣಿನ ಆಸ್ಪತ್ರೆ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದರು. ಆಸ್ಪತ್ರೆಯ ಕಲ್ಪನೆಯು ಹಿರಿಯ ಸಹೋದರ ನಾರಾಯಣ ನೇತ್ರಾಲಯ ಗ್ರೂಪ್ ಆಫ್ ಹಾಸ್ಪಿಟಲ್ಸ್ನ ಸಂಸ್ಥಾಪಕ ದಿ| ಡಾ| ಭುಜಂಗ ಶೆಟ್ಟಿ ಅವರದ್ದಾಗಿದೆ. ಈ ಆಸ್ಪತ್ರೆಯಲ್ಲಿ ವಿಶ್ವದರ್ಜೆಯ ಸೌಲಭ್ಯಗಳನ್ನು ಉಚಿತವಾಗಿ ಚಿಕಿತ್ಸೆ ನೀಡುವ ಉದ್ದೇಶ ಹೊಂದಿದ್ದೇವೆ. ಇಲ್ಲಿ ಉತ್ತಮ ಗುಣಮಟ್ಟದ ಆರೋಗ್ಯ ಸೇವೆ ನೀಡಲಾಗುವುದು ಎಂದರು. ಈ ಆಸ್ಪತ್ರೆಯಲ್ಲಿ ಬಿಲ್ಲಿಂಗ್ ಕೌಂಟರ್ ಇರುವುದಿಲ್ಲ. ವರ್ಷಕ್ಕೆ 70 ಸಾವಿರ ಉಚಿತ ಶಸ್ತ್ರಚಿಕಿತ್ಸೆ ಸಾಮರ್ಥ್ಯ ಹೊಂದಿದ ಅತ್ಯಾಧುನಿಕ ಸೌಕರ್ಯಗಳು ಇಲ್ಲಿವೆ. ಆಸ್ಪತ್ರೆ ಆವರಣದಲ್ಲಿ ಸುಮಾರು 20 ಎಕ್ರೆ ಸ್ಥಳಾವಕಾಶವಿದ್ದು, ಮುಂದೆ ಇಲ್ಲಿ ವೃತ್ತಿಪರ ತರಬೇತಿ ಸೆಂಟರ್ ಆರಂಭಿಸಿ ಉಚಿತ ತರಬೇತಿ ನೀಡುವ ಉದ್ದೇಶ ಇದೆ ಎಂದರು.
ಮಣಿಪಾಲ್ ಹಾಸ್ಪಿಟಲ್ಸ್ ಮುಖ್ಯಸ್ಥ ಡಾ| ಎಚ್. ಸುದರ್ಶನ್ ಬಲ್ಲಾಳ್ ಮಾತನಾಡಿ, ಜನಸಾಮಾನ್ಯರು ಮತ್ತು ಸಮುದಾಯದ ಆರೋಗ್ಯವನ್ನು ಕಾಪಾಡಲು ಇದೊಂದು ಉತ್ತಮ ಕೊಡುಗೆಯಾಗಿದೆ ಎಂದರು. ಬೆಂಗಳೂರು ನಾರಾಯಣ ಹೃದಯಾಲಯದ ಮುಖ್ಯಸ್ಥ ಡಾ| ದೇವಿಪ್ರಸಾದ ಶೆಟ್ಟಿ ಮಾತನಾಡಿ, ಡಾ| ಸೀತಾರಾಮ ಶೆಟ್ಟಿ ಅವರು ಸಮಾಜಕ್ಕೆ ಅನೇಕ ಕೊಡುಗೆ ನೀಡಿದ್ದಾರೆ. ಈಗ ಈ ನಿಸರ್ಗ ರಮಣೀಯ ತಾಣದಲ್ಲಿ ಬಹುಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ಆಸ್ಪತ್ರೆಯು ಆ ಸಾಲಿಗೆ ಮತ್ತೊಂದು ಸೇರ್ಪಡೆ ಎಂದು ಹೇಳಿದರು. ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ಮಾತನಾಡಿ, ಈ ಆಸ್ಪತ್ರೆಯು ಬೈಂದೂರು ಕ್ಷೇತ್ರಕ್ಕೆ ಹೆಮ್ಮೆಯ ಗರಿಯಾಗಿದೆ. ಇನ್ನಷ್ಟು ಇಂತಹ ಕೊಡುಗೆಗಳು ಬೈಂದೂರು ಕ್ಷೇತ್ರಕ್ಕೆ ಸಿಗಲಿ. ಬೈಂದೂರಿಗೆ ಮಣಿಪಾಲ ಸಂಸ್ಥೆಯವರು ಡಯಾಲಿಸಿಸ್ ಸೆಂಟರನ್ನು ಕೊಡುಗೆಯಾಗಿ ನೀಡಿದ್ದಾರೆ. ಬೆನ್ನುಹುರಿಗೆ ಚಿಕ್ಸಿತೆ ನೀಡುವ ಸೆಂಟರ್ ಬೈಂದೂರಿಗೆ ನೀಡಲು ಎನ್ಜಿಒ ಒಂದು ಮುಂದೆ ಬಂದಿದೆ ಎಂದರು. ಆಸ್ಪತ್ರೆಯ ಮುಂಭಾಗದಲ್ಲಿ ಎಸ್ಎನ್ಸಿ ಸಂಸ್ಥಾಪಕ ಚಾರ್ಮಕ್ಕಿ ನಾರಾಯಣ ಶೆಟ್ಟಿ ಅವರ ಪುತ್ಥಳಿಯನ್ನು ಅನಾವರಣಗೊಳಿಸಲಾಯಿತು.
ಹೆಬ್ಬಾಡಿ ರಾಘವೇಂದ್ರ ಶೆಟ್ಟಿ ಸ್ವಾಗತಿಸಿ, ನಿರ್ವಹಿಸಿದರು.