ಸಂಸ್ಕಾರವಿಲ್ಲದ ಶಿಕ್ಷಣ ಅಸಂಪೂರ್ಣ. ಮಕ್ಕಳು ಚಾರಿತ್ರ್ಯವಂತರಾಗಲು ಗುಣವಂತರಾಗಲು, ಸಂಸ್ಕಾರವಂತರಾಗಲು ಮನೆಯಲ್ಲಿನ ನಮ್ಮ ಧರ್ಮ ಸಂಸ್ಕ್ರತಿ ಏನಿದೆಯೋ ಅದರ ಅರಿವನ್ನು ತಿಳಿಸಿಕೊಡುವ ಜೊತೆಯಲ್ಲಿ ಧರ್ಮದ ಜ್ಞಾನ, ಪ್ರಜ್ಞೆಯನ್ನು ಮೂಡಿಸಬೇಕು. ದತ್ತಾತ್ರೇಯ ಅವತಾರ ಎಂದರೆ ಅದು ಜ್ಞಾನದ ಅವತಾರ. ಭಗವಂತನ ಪ್ರಾರ್ಥನೆ ದಿನನಿತ್ಯದ ನಿರಂತರ ಕಾರ್ಯವಾಗಬೇಕು. ನಿರಂತರ ಗುರುಸ್ಮರಣೆಯೊಂದಿಗೆ ಸೇವಾ ಕಾರ್ಯಗಳು ನಡೆಯಲಿ. ಜ್ಞಾನದಿಂದ ಆದರ್ಶ ಜೀವನ ಮೌಲ್ಯ ಸಂಸ್ಕಾರಯುತವಾದ ಜೀವನ ಸಾದ್ಯ. ಇಂದು ಸನಾತನ ಹಿಂದೂ ಧರ್ಮ ರಕ್ಷಣೆ ಮತ್ತು ದೇಶ ರಕ್ಷಣೆ ಆಗಬೇಕಾದ ಅನಿವಾರ್ಯತೆ ಇದೆ. ಜಾತೀಯತೆಯನ್ನು ಮರೆತು, ಧರ್ಮ ಪಾಲನೆ, ದೇಶಪ್ರೇಮ ಮೂಡಿಸುವ ಘನ ಕಾರ್ಯ ಆಗಲಿ. ಅಧ್ಯಾತ್ಮಕತೆಯಿಂದ ನಮ್ಮ ಜೀವನ ನೆಮ್ಮದಿ ಸಮತೋಲನ ಸಾದ್ಯ ಎಂದು ಒಡಿಯೂರು ಶ್ರೀ ಗುರುದೇವ ಸಂಸ್ಥಾನದ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಜಿಯವರು ಆಶೀರ್ವಚನ ನೀಡಿದರು.
ಡಿಸೆಂಬರ್ 1 ರಂದು ಪುಣೆಯ ಬಾಣೇರ್ ನಲ್ಲಿರುವ ಬಂಟರ ಭವನದ ಓಣಿಮಜಲು ಜಗನ್ನಾಥ್ ಶೆಟ್ಟಿ ಸಾಂಸ್ಕ್ರತಿಕ ಕೇಂದ್ರದಲ್ಲಿ ಜರಗಿದ ಪುಣೆ ಶ್ರೀ ಗುರುದೇವ ಸೇವಾ ಬಳಗ ಮತ್ತು ಶ್ರೀ ವಜ್ರಮಾತಾ ಮಹಿಳಾ ವಿಕಾಸ ಕೇಂದ್ರದ 21 ನೇ ವಾರ್ಷಿಕೋತ್ಸವವನ್ನು ಉದ್ಘಾಟಿಸಿ ಭಗವದ್ಭಕ್ತರನ್ನು ಉದ್ದೇಶಿಸಿ ಅಶೀರ್ವಚನ ನೀಡಿದ ಶ್ರೀಗಳು ಮೌಲ್ಯಯುತವಾದ ಉತ್ತಮ ವಿಚಾರಗಳು ನಮ್ಮಲ್ಲಿರಬೇಕು. ಜೀವನದಲ್ಲಿ ದಾರಿ ತಪ್ಪಿದರೆ ಮತ್ತು ಮಾತು ತಪ್ಪಿದರೆ ಕಷ್ಟ. ನಡೆ ನುಡಿಯಲ್ಲಿ ಧರ್ಮದ ಮಾರ್ಗ ಅಡಗಿದೆ. ಆತ್ಮಾವಲೋಕನ ಮಾಡಿಕೊಂಡಾಗ ಯಾವುದೇ ಧರ್ಮದ ಚೌಕಟ್ಟಿನಲ್ಲಿ ತನ್ನ ಆತ್ಮೋದ್ದಾರದ ಮೂಲ ಸಿಗಬಹುದು. ಶ್ರೀ ಗುರುದೇವ ಸೇವಾ ಬಳಗ ಮತ್ತು ಶ್ರೀ ವಜ್ರಮಾತ ಮಹಿಳಾ ವಿಕಾಸ ಕೇಂದ್ರದ ಸೇವೆ ನಿರಂತವಾಗಿದೆ. ಮಕ್ಕಳಿಗೆ ನಮ್ಮ ಸಂಸ್ಕ್ರತಿ, ಸಂಸ್ಕಾರ ಕಲಿಸುವ ಕಾರ್ಯ ಮುಂದುವರಿಯಲಿ ಹಾಗೂ ಭಕ್ತಿಯ ಮಾರ್ಗ ಮತ್ತು ಶ್ರದ್ದೆ ಮೂಡುವಂತೆ ಧಾರ್ಮಿಕ ಕಾರ್ಯಗಳು ಉತ್ತಮವಾಗಿ ನಡೆಯುತ್ತಿದೆ. ಅಂತೆಯೇ ಪುಣೆಯ ಸದ್ಭಕ್ತರ ಸೇವಾ ಸಹಕಾರ ಸಿಕ್ಕಿದೆ. ಸೇರಿದ ಎಲ್ಲಾ ಭಗವದ್ಭಕ್ತತರಿಗೆ ದತ್ತಾತ್ರೇಯ ಶ್ರೀ ಹನುಮಂತನ ಕೃಪೆ ಸದಾ ಇರಲಿ ಎಂದು ನುಡಿದರು.
ಶ್ರೀಗಳನ್ನು ವಾದ್ಯಘೋಷದೊಂದಿಗೆ ಬರಮಾಡಿಕೊಂಡು ಬಳಗದ ಅದ್ಯಕ್ಷರಾದ ಪ್ರಭಾಕರ ಶೆಟ್ಟಿ ದಂಪತಿಗಳು ಹೂ ಹಾರ ಹಾಕಿ ಹಾಗೂ ಸಾದ್ವಿ ಶ್ರೀ ಮಾತಾನಂದಮಯಿಯವರನ್ನು ಕೇಂದ್ರದ ಅಧ್ಯಕ್ಷೆ ಜಯಲಕ್ಷ್ಮಿ ಪಿ ಶೆಟ್ಟಿಯವರು ಹೂ ಹಾರ ಹಾಕಿ ಸ್ವಾಗತಿಸಿದರು. ಪಾದುಕಾ ಪೂಜೆಯನ್ನು ಭಕ್ತರ ಪರವಾಗಿ ಪುಣೆಯ ಖ್ಯಾತ ಉದ್ಯಮಿ ಕರುಣಾಕರ ಶೆಟ್ಟಿ ದಂಪತಿಗಳು ನೆರವೇರಿಸಿದರು. ಮುತ್ತೈದೆಯರು ಆರತಿ ಬೆಳಗಿದರು. ನಂತರ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದ ವೇದಿಕೆಯಲ್ಲಿ ಸಾದ್ವಿ ಶ್ರೀ ಮಾತಾನಂದಮಯೀಯವರು ಉಪಸ್ಥಿತರಿದ್ದರು. ಮುಖ್ಯ ಅತಿಥಿಗಳಾದ ರಾಷ್ಟ್ರೀಯ ಸ್ವಯಂ ಸಂಘದ ಹಿರಿಯ ಕಾರ್ಯಕರ್ತ ಬಾಲಕೃಷ್ಣ ಭಂಡಾರಿ, ಗೌರವ ಅತಿಥಿಗಳಾದ ಪುಣೆ ಕನ್ನಡ ಸಂಘದ ಅಧ್ಯಕ್ಷರಾದ ಕುಶಾಲ್ ಹೆಗ್ಡೆ, ಪುಣೆ ಕಾತ್ರಜ್ ಶ್ರೀ ಅಯ್ಯಪ್ಪ ಸ್ವಾಮೀ ದೇವಸ್ಥಾನ ಜೀರ್ಣೋದ್ದಾರ ಹಾಗೂ ಬ್ರಹ್ಮ ಕಲಶೋತ್ಸವ ಸಮಿತಿಯ ಗೌರವಾಧ್ಯಕ್ಷರಾದ ಸದಾನಂದ ಕೆ ಶೆಟ್ಟಿ, ಮುಂಬಯಿ ಶ್ರೀ ಗುರುದೇವ ಸೇವಾ ಬಳಗದ ರಜತ ಮಹೋತ್ಸವ ಸಮಿತಿಯ ಅಧ್ಯಕ್ಷರಾದ ನ್ಯಾಯವಾದಿ ಪ್ರಕಾಶ್ ಶೆಟ್ಟಿ ಕಡಂದಲೆ, ಪುಣೆ ಬಂಟರ ಸಂಘದ ಅಧ್ಯಕ್ಷರಾದ ಸಂತೋಷ್ ಶೆಟ್ಟಿ ಇನ್ನ ಕುರ್ಕಿಲ್ ಬೆಟ್ಟು ಬಾಳಿಕೆ, ಪುಣೆಯ ಹಿರಿಯ ಉದ್ಯಮಿ ಕರುಣಾಕರ ಶೆಟ್ಟಿ ಸಮುದ್ರ, ಪುಣೆ ತುಳುಕೂಟದ ಮಹಿಳಾ ಕಾರ್ಯಾಧ್ಯಕ್ಷೆ ಶ್ರೀಮತಿ ಪ್ರಿಯಾ ಎಚ್ ದೇವಾಡಿಗ, ಪುಣೆ ಗುರುದೇವಾ ಸೇವಾ ಬಳಗದ ಅಧ್ಯಕ್ಷರಾದ ಪ್ರಭಾಕರ ಶೆಟ್ಟಿ ಮತ್ತು ಶ್ರೀ ವಜ್ರಮಾತ ಮಹಿಳಾ ವಿಕಾಸ ಕೇಂದ್ರದ ಅಧ್ಯಕ್ಷೆ ಶ್ರೀಮತಿ ಜಯಲಕ್ಷ್ಮಿ ಪಿ ಶೆಟ್ಟಿಯವರು ಉಪಸ್ಥಿತರಿದ್ದರು.
ಪುಣೆ ಬಳಗದ ಪ್ರಧಾನ ಕಾರ್ಯದರ್ಶಿ ರೋಹಿತ್ ಶೆಟ್ಟಿ ನಗ್ರಿ ಗುತ್ತುರವರು ಸ್ವಾಗತಿಸಿದರು. ಅತಿಥಿ ಗಣ್ಯರನ್ನು ಬಳಗದ ಅಧ್ಯಕ್ಷರಾದ ಪ್ರಭಾಕರ ಶೆಟ್ಟಿ, ವಜ್ರಮಾತ ಮಹಿಳಾ ವಿಕಾಸ ಕೇಂದ್ರದ ಅಧ್ಯಕ್ಷೆ ಜಯಲಕ್ಷ್ಮಿ ಪಿ ಶೆಟ್ಟಿ, ಪ್ರಮುಖರಾದ ಉಷಾಕುಮಾರ್ ಶೆಟ್ಟಿ, ನಾರಾಯಣ ಶೆಟ್ಟಿ, ಪದ್ಮನಾಭ ಶೆಟ್ಟಿ, ಆನಂದ್ ಶೆಟ್ಟಿ ಮಿಯ್ಯಾರ್, ರಂಜಿತ್ ಶೆಟ್ಟಿ, ವೀಣಾ ಪಿ ಶೆಟ್ಟಿಯವರು ಫಲ ತಾಂಬೂಲ ಪುಸ್ತಕ ನೀಡಿ ಗೌರವಿಸಿದರು. ಪೂಜ್ಯ ಸ್ವಾಮೀಜಿಯವರು ಅತಿಥಿ ಗಣ್ಯರಿಗೆ ಫಲ ಮಂತ್ರಾಕ್ಷತೆ ನೀಡಿ ಹರಸಿದರು. ಪ್ರಭಾಕರ ಶೆಟ್ಟಿಯವರು ಪ್ರಾಸ್ತಾವಿಕವಾಗಿ ಮಾತಾನಾಡಿದರು. ಸಾದ್ವಿ ಮಾತಾನಂದಮಯಿ ಅಶೀರ್ವಚನ ನೀಡಿದರು. ವೇದಿಕೆಯಲ್ಲಿದ್ದ ಗಣ್ಯರು ಶುಭ ನುಡಿಗಳನ್ನಾಡಿದರು. ಈ ಸಂದರ್ಭದಲ್ಲಿ ಪುಣೆ ಬಂಟರ ಸಂಘದ ಅಧ್ಯಕ್ಷ ಬಂಟ ಸೇನಾಧಿಪತಿ, ಪೆರ್ಮೆದ ಬಂಟೆ, ತುಳುನಾಡ ರತ್ನ ಮಾಣಿಕ್ಯ ಬಿರುದಾಂಕಿತ ಸಂತೋಷ್ ಶೆಟ್ಟಿ ಇನ್ನ ಕುರ್ಕಿಲ್ ಬೆಟ್ಟು ಬಾಳಿಕೆಯವರನ್ನು ಒಡಿಯೂರು ಶ್ರೀಗಳ ಆಶೀರ್ವಾದದೊಂದಿಗೆ ಬಳಗದ ವತಿಯಿಂದ ಶಾಲು ಹಾರ, ಪಲಪುಷ್ಪ, ಸನ್ಮಾನ ಪತ್ರ, ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು. ಬಂಟರ ಸಂಘದ ವತಿಯಿಂದ ಬಳಗದ ಅಧ್ಯಕ್ಷರಾದ ಪ್ರಭಾಕರ ಶೆಟ್ಟಿ ಕೇಂದ್ರದ ಅಧ್ಯಕ್ಷೆ ಜಯಲಕ್ಷ್ಮಿ ಪಿ ಶೆಟ್ಟಿಯವರನ್ನು ಗೌರವಿಸಲಾಯಿತು. ಸಾಂಸ್ಕ್ರತಿಕ ಕಾರ್ಯಕ್ರಮದ ಅಂಗವಾಗಿ ಶ್ರೀ ಗುರುದೇವ ಸೇವಾ ಬಳಗ ಮತ್ತು ವಜ್ರಮಾತ ಮಹಿಳಾ ವಿಕಾಸ ಕೇಂದ್ರದ ಸದಸ್ಯೆಯರಿಂದ ಭಜನೆ ಮತ್ತು ಪುಣೆಯ ಕಲಾವಿದರ ಕೂಡುವಿಕೆಯಲ್ಲಿ ಶ್ರೀಮತಿ ಶ್ವೇತಾ ಎಚ್ ಮೂಡಬಿದ್ರಿ ನಿರ್ದೇಶನದಲ್ಲಿ ತುಳುನಾಡ ಭಕ್ತಿ ವೈಭವ ಎಂಬ ಧಾರ್ಮಿಕ ಕ್ಷೇತ್ರಗಳ ಬಣ್ಣನೆಯ ವಿಶೇಷ ಕಾರ್ಯಕ್ರಮ ನಡೆಯಿತು.
ಮುಂಬಯಿ, ನಾಸಿಕ್, ಔರಂಗಾಬಾದ್ ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ ಭಗವದ್ಭಕ್ತರು ಪ್ರಸಾದ ಸ್ವೀಕರಿಸಿದರು. ಈ ವಾರ್ಷಿಕೋತ್ಸವದ ಯಶಸ್ವಿಗೆ ಪುಣೆ ಬಳಗದ ಸದಸ್ಯರು ಹಾಗೂ ಮಹಿಳಾ ಕೇಂದ್ರದ ಸದಸ್ಯೆಯರು ಶ್ರಮಿಸಿದರು. ಶ್ರೀಮತಿ ಅಕ್ಷತಾ ಸುಜಿತ್ ಶೆಟ್ಟಿ ಮತ್ತು ತಾರನಾಥ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಚಿತ್ರ, ವರದಿ : ಹರೀಶ್ ಮೂಡಬಿದ್ರಿ ಪುಣೆ