ವಿದ್ಯಾಗಿರಿ : ‘ಸಿನಿಮಾ ಕ್ಷೇತ್ರದಲ್ಲಿ ಬರವಣಿಗೆ ಬಹುಮುಖ್ಯವಾಗಿದ್ದು, ಬರಹಗಾರರಿಗೆ ಹೆಚ್ಚಿನ ಬೇಡಿಕೆ ಇದೆ. ಸಿನಿಮಾ ಕ್ಷೇತ್ರ ಪ್ರವೇಶಿಸಲು ಇಚ್ಛಿಸುವ ವಿದ್ಯಾರ್ಥಿಗಳು ಬರವಣಿಗೆಯನ್ನು ಉನ್ನತೀಕರಿಸಿಕೊಳ್ಳಬೇಕು’ ಎಂದು ಆಳ್ವಾಸ್ (ಸ್ವಾಯತ್ತ) ಕಾಲೇಜಿನ ವಾಣಿಜ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕ ರಮಾನಂದ ನಾಯಕ್ (ಪರಮ್ ಭಾರಧ್ವಜ್) ಹೇಳಿದರು. ಆಳ್ವಾಸ್ (ಸ್ವಾಯತ್ತ) ಕಾಲೇಜಿನ ಸ್ನಾತಕೋತ್ತರ ಪತ್ರೀಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಲ್ಲಿ ಸೋಮವಾರ ಆಳ್ವಾಸ್ ಫಿಲಂ ಸೊಸೈಟಿ ಹಮ್ಮಿಕೊಂಡ ‘ಸ್ಕ್ರಿಪ್ಟಿಂಗ್ ಸಿನಿಮಾ’ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು. ‘ಸಿನಿಮಾ ನಿರ್ಮಾಣದಲ್ಲಿ ಕಲ್ಪನೆ, ಬರವಣಿಗೆ, ಸಂಕಲನ, ಚಿತ್ರೀಕರಣ ಸೇರಿದಂತೆ ಎಲ್ಲ ವಿಭಾಗಗಳೂ ಮುಖ್ಯ.
ಅವುಗಳ ನಡುವೆ ಉತ್ತಮ ಹೊಂದಾಣಿಕೆ ಹಾಗೂ ಸಮತೋಲನ ಇದ್ದಾಗ ಮಾತ್ರ ಒಳ್ಳೆಯ ಸಿನಿಮಾ ಬರಲು ಸಾಧ್ಯ’ ಎಂದರು. ಕಲಿಕೆಯಲ್ಲಿ ಮೇಲು-ಕೀಳು ಎಂಬುದು ಇಲ್ಲ. ಸಣ್ಣವರು, ದೊಡ್ಡವರು, ಸಮಾನ ಮನಸ್ಕರು ಸೇರಿದಂತೆ ಎಲ್ಲರಿಂದಲೂ ಕಲಿಯಬೇಕು ಎಂದರು. ತಾವು ಬರೆದು ನಿರ್ಮಿಸಿದ ಆಲ್ಪಂ ಹಾಡುಗಳನ್ನು ಪ್ರದರ್ಶಿಸಿದ ಅವರು, ಕಿರುಚಿತ್ರ, ಆಲ್ಪಂ ಹಾಡು, ಸಿನಿಮಾ ಹಾಡು, ಸಂಭಾಷಣೆ ಇತ್ಯಾದಿಗಳ ರಚನೆ ಬಗ್ಗೆ ತರಬೇತಿ ನೀಡಿದರು. ವಿಭಾಗದ ಮುಖ್ಯಸ್ಥ ಪ್ರಸಾದ್ ಶೆಟ್ಟಿ, ಆಳ್ವಾಸ್ ಫಿಲಂ ಸೊಸೈಟಿ ಸಂಯೋಜಕ ಹರ್ಷವರ್ಧನ ಪಿ.ಆರ್., ಸಹಾಯಕ ಪ್ರಾಧ್ಯಾಪಕರಾದ ಸುಶ್ಮಿತಾ ಜೆ., ನಿಶಾನ್ ಕೋಟ್ಯಾನ್, ಹನ್ನಾ, ಅರುಣ್ ಮತ್ತು ಶಂಕರ್ ಕಾಮತ್ ಇದ್ದರು.