ವಿದ್ಯಾರ್ಥಿಗಳು ಮಾನವೀಯ ಮತ್ತು ಜೀವನ ಮೌಲ್ಯಗಳನ್ನು ಅಳವಡಿಸಿಕೊಂಡು ಹೋಗಬೇಕು. ವಿದ್ಯಾರ್ಥಿ ಜೀವನ ವ್ಯಕ್ತಿತ್ವ ರೂಪಿಸುವ ಕಾಲವಾಗಿದೆ. ನಮ್ಮ ಯಶಸ್ವಿಗೆ ತ್ಯಾಗ, ಶ್ರದ್ದೆ, ಪರಿಶ್ರಮ, ಅವಶ್ಯವಾಗಿದೆ. ಶ್ರೇಷ್ಠ ವ್ಯಕ್ತಿಗಳಾಗಳು ಸ್ವಯಂ ಮೌಲ್ಯಮಾಪನ ಮಾಡುವ ಚಾಕಚಕ್ಯತೆ ನಮ್ಮಲ್ಲಿರಬೇಕು. ನಮ್ಮ ಜೀವನದ ಘಟ್ಟದಲ್ಲಿ ಕಷ್ಟ ಬಂದಾಗ ಕುಗ್ಗದೆ ಮರಳಿ ಯಶಸ್ಸು ಗಳಿಸುವ ಜ್ಞಾನ ಮತ್ತು ಪ್ರಯತ್ನ ನಮ್ಮಲ್ಲಿರಬೇಕು. ಪರ್ವತದಂತಹ ದೊಡ್ಡ ಸಮಸ್ಯೆಗಳು ಎದುರಾದಾಗ ಸಕರಾತ್ಮಕವಾಗಿ ಮನಸ್ಸಿನ ಹಿಡಿತ ಹಿಗ್ಗಿಸಿಕೊಂಡು ಯಾವುದೇ ಘನ ಕಾರ್ಯವು ಸಣ್ಣದಾಗಿ ತೆಗೆದುಕೊಂಡು ಯಶಸ್ಸನ್ನು ಸಾಧಿಸಬಹುದು. ಭಗವಂತನು ಅನುಗ್ರಹಿಸಿದ ಜೀವನವನ್ನು ಸದಚಾರದಿಂದ ಸಂಪನ್ನಗೊಳಿಸಬೇಕು. ಆಧ್ಯಾತ್ಮ ಕೂಡಾ ನಮ್ಮ ಜೀವನದ ಅವಿಭಾಜ್ಯ ಅಂಗ. ಸಂಸ್ಕಾರಯುತವಾದ ಜೀವನ, ಉದ್ಯಮ ನಡೆಸುವ ಜೊತೆಯಲ್ಲಿ ನಮ್ಮ ಧರ್ಮ ಸಂಸ್ಕ್ರತಿಯನ್ನು ಮರೆಯಬಾರದು. ಲೌಕಿಕ ಜಗತ್ತಿನಲ್ಲಿ ತಾನು ಗಳಿಸಿದ ಶ್ರೀಮಂತಿಕೆಯನ್ನು ನಾನು, ನನ್ನದು, ನನ್ನಿಂದ ಎನ್ನುವ ಅಜ್ಞಾನವನ್ನು ತೆಗೆದು ಹಾಕಿ ದಾನದ ಮೂಲಕ ಪರಿಶುದ್ದತೆಯಿಂದ ಬಳಸಿದಾಗ ಬದುಕಿನ ನಿಜಾರ್ಥವು ಬರುತ್ತದೆ ಎಂದು ಪುಣೆಯ ಖ್ಯಾತ ಕೈಗಾರಿಕೋದ್ಯಮಿ, ಸುಯಾಶ್ ಗ್ರೂಪ್ ಆಫ್ ಕಂಪನೀಸ್ ನ ಅಧ್ಯಕ್ಷ ಹಾಗೂ ಆಡಳಿತ ನಿರ್ದೇಶಕ ರವೀಂದ್ರ ಪಾಟೀಲ್ ನುಡಿದರು.
ಪುಣೆ ಬಂಟರ ಸಂಘದ ಕಲ್ಪವೃಕ್ಷ ಸಮಾಜ ಕಲ್ಯಾಣ ಯೋಜನೆಯ ಅಡಿಯಲ್ಲಿ ಬಂಟ ಸಮಾಜದ ವಿಧ್ಯಾರ್ಥಿಗಳಿಗೆ ಶೈಕ್ಷಣಿಕ ನೆರವು ಕಾರ್ಯಕ್ರಮವು ನವೆಂಬರ್ 30ರಂದು ಬಂಟರ ಭವನದ ಬ್ಯಾಂಕ್ವೇಟ್ ಹಾಲ್ ನಲ್ಲಿ ಸಂಘದ ಅಧ್ಯಕ್ಷರಾದ ಸಂತೋಷ ಶೆಟ್ಟಿ ಇನ್ನ ಕುರ್ಕಿಲ್ ಬೆಟ್ಟು ಬಾಳಿಕೆಯವರ ಅಧ್ಯಕ್ಷತೆಯಲ್ಲಿ ಜರಗಿತು. ವೇದಿಕೆಯಲ್ಲಿ ಮುಖ್ಯ ಅತಿಥಿಗಳಾದ ಕೈಗಾರಿಕೊಧ್ಯಮಿ ರವೀಂದ್ರ ಪಾಟೀಲ್, ಸಂಘದ ಉಪಾಧ್ಯಕ್ಷರಾದ ಎರ್ಮಾಲ್ ಚಂದ್ರಹಾಸ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಅಜಿತ್ ಹೆಗ್ಡೆ, ಕಲ್ಪವೃಕ್ಷ ಸಮಾಜ ಕಲ್ಯಾಣ ಸಮಿತಿಯ ಕಾರ್ಯಾಧ್ಯಕ್ಷ ಸತೀಶ್ ಶೆಟ್ಟಿ, ಕೋಶಾಧಿಕಾರಿ ಪ್ರಶಾಂತ್ ಶೆಟ್ಟಿ ಹೇರ್ಡೆ ಬೀಡು, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುಲತಾ ಎಸ್ ಶೆಟ್ಟಿ, ದಕ್ಷಿಣ ವಲಯ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಶೇಖರ್ ಶೆಟ್ಟಿಯವರು ಉಪಸ್ಥಿತರಿದ್ದರು. ವೇದಿಕೆಯಲ್ಲಿದ್ದ ಗಣ್ಯರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅಧ್ಯಕ್ಷರಾದ ಸಂತೋಷ್ ಶೆಟ್ಟಿಯವರು ಸ್ವಾಗತಿಸಿದರು. ರವೀಂದ್ರ ಪಾಟೀಲ್ ರವರನ್ನು ಶಾಲು ಪುಷ್ಪಗುಚ್ಚ ನೀಡಿ ಗೌರವಿಸಲಾಯಿತು.
ಪುಣೆ ಬಂಟರ ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ ಇನ್ನ ಕುರ್ಕಿಲ್ ಬೆಟ್ಟು ಬಾಳಿಕೆಯವರು ಮಾತನಾಡಿ, ಸಂಘದ ಕಲ್ಪವೃಕ್ಷ ವಿದ್ಯಾ ಯೋಜನೆಯ ಮೂಲಕ ಇಂದು ವಿದ್ಯಾರ್ಥಿಗಳಿಗೆ ಸಹಾಯಧನ ನೀಡುವ ಅರ್ಥಪೂರ್ಣವಾದ ಕಾರ್ಯಕ್ರಮದ ವೇದಿಕೆಯಲ್ಲಿದ್ದೇವೆ. ಹಾಗೆಯೇ ನಮ್ಮೊಂದಿಗೆ ಉಪನ್ಯಾಸ ನೀಡಲಿರುವ ಸಂಪನ್ಮೂಲ ವ್ಯಕ್ತಿ ರವೀಂದ್ರ ಪಾಟೀಲ್ ಇದ್ದಾರ. ಯಾವುದೇ ವ್ಯಕ್ತಿ ನಿರಾಸೆಯಲ್ಲಿದ್ದರೆ ಅಂತಹ ವ್ಯಕ್ತಿಯನ್ನು ಸರಿ ದಾರಿಗೆ ತಂದು ಭರವಸೆ ಮೂಡಿಸಿ ಹೊಸ ಚೈತನ್ಯ ನೀಡುವ ಕಲೆ ರವೀಂದ್ರ ಪಾಟೀಲ್ ರವರಿಗೆ ಇದೆ. ಇವರ ಜೀವನ ಅದರ್ಶನಗಳನ್ನು ತಿಳಿದುಕೊಳ್ಳೋಣ. ನಮ್ಮ ವಿದ್ಯಾದಾನ ಎಂಬುದು ವಿದ್ಯಾರ್ಥಿಗಳಿಗೆ ಪ್ರೋತ್ಸಾಹಕವಾಗಿ ನೀಡುವ ಬೆಂಬಲ, ಮಕ್ಕಳು ಮುಂದೆ ಕಲಿತು ಯಾವುದೇ ದೊಡ್ಡ ಹುದ್ದೆಯಲ್ಲಿದರೂ ಶಿಸ್ತು ಬದ್ಧವಾದ ಜೀವನ ನಡೆಸಿ, ನಮ್ಮನ್ನು ಸಾಕಿ ಸಲಹಿದ ಮಾತೃ ಪಿತರಿಗೆ ದೇವರ ಸಮನಾದ ಗೌರವ, ಸಮಾಜದ ಮೇಲಿನ ಪ್ರೀತಿಯಿಂದ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡು, ದೇಶ ಸೇವೆಯಲ್ಲಿ ಅಭಿವೃದ್ದಿಯಲ್ಲಿ ಕೈಜೋಡಿಸುವ ಮೂಲಕ ಸೇವಕರಾಗಿ ಗುರುತಿಸಿಕೊಳ್ಳಬೇಕು. ಮೂಲ ನಂಬಿಕೆಯ ಮೇಲೆ ಭರವಸೆಯಿತ್ತು, ದೈವ ದೇವರ ಮೇಲಿನ ನಂಬಿಕೆ, ಹಿಂದೂ ಧರ್ಮದ ಮೇಲಿನ ನಂಬಿಕೆ, ಹಿರಿಯರ ಮೇಲಿನ ಗೌರವ, ನಮ್ಮ ಸಂಸ್ಕಾರವನ್ನು ಮೈಗೂಡಿಕೊಂಡು ಸೌಜನ್ಯ ಪೂರಕವಾಗಿ ಜೀವನ ನಡೆಸಬೇಕು. ನಮ್ಮ ಬಂಟರ ಸಂಘದ ಸುವರ್ಣ ಮಹೋತ್ಸವ 2025 ಜನವರಿ 26ರಂದು ಸಮಾಜದ ಹಿರಿಯ ಗಣ್ಯರ ಸಮ್ಮುಖದಲ್ಲಿ ನಡೆಯಲಿದೆ. ಸಮಾಜ ಬಾಂಧವರ ಸಹಕಾರ ಇರಲಿ ಎಂದರು.
ಈ ಸಭೆಯಲ್ಲಿ ವಿವಿಧ ಸಂಘ ಸಂಸ್ಥೆಗಳ ಗಣ್ಯರು, ಬಂಟರ ಸಂಘದ ಪದಾಧಿಕಾರಿಗಳು, ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು, ಪಾಲಕರು ಪಾಲ್ಗೊಂಡಿದ್ದರು. ಶ್ರೀಮತಿ ಪದ್ಮಾಕ್ಷಿ ಸುರೇಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ವರದಿ: ಹರೀಶ್ ಮೂಡಬಿದ್ರಿ ಪುಣೆ