ಉಳ್ಳಾಲ (ಮಂಗಳೂರು): ಮನುಷ್ಯನ ಅನೇಕ ದುರಾಸೆಯ ಫಲವೇ ಹವಾಮಾನ ವೈಪರೀತ್ಯಕ್ಕೆ ಮೂಲ ಕಾರಣ ಎಂದು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿನ ಮುಂದುವರಿದ ಅಧ್ಯಯನಗಳ ರಾಷ್ಟ್ರೀಯ ಸಂಸ್ಥೆ (ಎನ್ಐಎಎಸ್)ಯ ಇಸ್ರೋ ಮುಖ್ಯ ಪ್ರಾಧ್ಯಾಪಕ ಡಾ. ಪಿ. ಜಿ. ದಿವಾಕರ್ ಅಭಿಪ್ರಾಯಪಟ್ಟರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಮತ್ತು ಎನ್ಐಎಎಸ್ ಜಂಟಿ ಆಶ್ರಯದಲ್ಲಿ ಉಳ್ಳಾಲದ ಬಿಎಂ ಶಾಲೆಯಲ್ಲಿ ಹಮ್ಮಿಕೊಂಡ ‘ವಿದ್ಯಾರ್ಥಿ- ವಿಜ್ಞಾನಿ’ ಕಾರ್ಯಕ್ರಮದಲ್ಲಿ ಬುಧವಾರ ಅವರು ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಹವಾಮಾನ ಬದಲಾವಣೆಯು ತೀವ್ರ ಸಮಸ್ಯೆಯಾಗಿ ಬೆಳೆಯುತ್ತಿದೆ. ಅದರಲ್ಲೂ ,ಕರಾವಳಿ ಭಾಗದ ಜನರಿಗೆ ವಾತಾವರಣದಲ್ಲಾಗುವ ತೀವ್ರ ಮಾರ್ಪಾಡುಗಳು ಬಹುಬೇಗನೇ ತಿಳಿಯುವುದರಿಂದ, ಈ ಯೋಜನೆಯು ಇಲ್ಲಿನ ಜನರಿಗೆ ಅತಿಹೆಚ್ಚು ಪೂರಕವಾಗಲಿದೆ ಎಂದರು. ವಿದ್ಯಾರ್ಥಿಗಳಿಗೆ ವಿಜ್ಞಾನದ ಕಡೆಗೆ ಆಸಕ್ತಿ ಹೆಚ್ಚಿಸಿ , ಪರಿಣಾಮಕಾರಿ ವಿಜ್ಞಾನಿಗಳನ್ನಾಗಿ ಮಾಡಲು ಎನ್ಐಎಎಸ್ ಆಯೋಜಿಸಿರುವ ‘ಕರಾವಳಿ ಭಾಗದ ಹವಾಮಾನ ಬದಲಾವಣೆ’ಯ ಅಧ್ಯಯನ ಯೋಜನೆಯು ಸಹಕರಿಯಾಗಲಿದೆ ಎಂದು ಹೇಳಿದರು. ವೈಜ್ಞಾನಿಕ ಶಿಕ್ಷಣದ ಮೂಲಕ ಯುವ ಜನಾಂಗದಲ್ಲಿ ವಿಜ್ಞಾನ ಮತ್ತು ಅನ್ವೇಷಣೆಯತ್ತ ಒಲವು ಮೂಡಿಸುವುದು ಬಹಳ ಅವಶ್ಯಕ ಎಂದರು. ಇಸ್ರೋ ಜಿಯೋಎಐಯನ್ನು ಬಿಡುಗಡೆಗೊಳಿಸಲಿದ್ದು , ಇದರಲ್ಲಿ ಮುಂದಿನ 10 ವರ್ಷದದಲ್ಲಿ ವಿಶ್ವದ ವಾತಾವರಣ ಹೇಗಿರುತ್ತವೆ ಎಂಬ ದತ್ತಾಂಶವು ಲಭ್ಯವಾಗಲಿದೆ ಎಂದು ತಿಳಿಸಿದರು.
ಎನ್ಐಎಎಸ್ ಸಹ ಪ್ರಾಧ್ಯಾಪಕ ವಿ. ವಿ. ಬಿನೋಯ್ ಮಾತನಾಡಿ ,ಪ್ರಸ್ತುತ ಸ್ಥಿತಿಗತಿಯಲ್ಲಿ ವಿಜ್ಞಾನ ಎಂಬುದು ಪ್ರತಿ ಮೂಲೆ ಮೂಲೆಗೂ ತಲುಪುವುದು ಬಹಳ ಅನಿವಾರ್ಯ ಎಂದು ತಿಳಿಸಿದರು. ಇಂದಿನ ಶಾಲಾ ಕಾಲೇಜು ವಿದ್ಯಾರ್ಥಿಗಳು ವೈಜ್ಞಾನಿಕ ಅಧ್ಯಯನದಲ್ಲಿ ಹೆಚ್ಚು ತೊಡಗಿ,ಕ್ರಿಯಾತ್ಮಕವಾಗಿ ಪ್ರಶ್ನಿಸುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ , ವಿಜ್ಞಾನಿಗಳು ವಿದ್ಯಾರ್ಥಿಗಳ ನಿಜವಾದ ಪ್ರೇರಣಾ ಶಕ್ತಿಯಾಗಿರುತ್ತಾರೆ. ಎಲ್ಲಾ ಶಾಲಾ ವಿದ್ಯಾರ್ಥಿಗಳು ತಮ್ಮೊಳಗಿರುವ ಪ್ರತಿಭಾ ಶಕ್ತಿಯನ್ನು ಇನ್ನಷ್ಟೂ ಉತ್ತಮ ವೇದಿಕೆಯ ರೂಪದಲ್ಲಿ ಅನಾವರಣಗೊಳಿಸಲು ಮುಂಬರಬೇಕು ಎಂದು ಸಲಹೆ ನೀಡಿದರು. ಇಂದು, ಇಸ್ರೋ ಮತ್ತು ಎನ್ಐಎಎಸ್ ಸಂಸ್ಥೆಗಳು ದೇಶದ ಸುಸ್ಥಿರ ಭವಿಷ್ಯವನ್ನು ರೂಪಿಸುವಲ್ಲಿ ಅಭೂತಪೂರ್ವ ಕಾರ್ಯವನ್ನು ಮಾಡುತ್ತಿದೆ. ವಿದ್ಯಾರ್ಥಿಗಳು ವಿಜ್ಞಾನ ಮತ್ತು ತಂತ್ರಜ್ಞಾನದ ಬಗ್ಗೆ ಹೆಚ್ಚಾಗಿ ತಿಳಿದುಕೊಂಡು ಇಂತಹ ಅನೇಕ ಪ್ರಯೋಜನಕಾರಿ ಕಾರ್ಯಾಗಾರಗಳಲ್ಲಿ ಭಾಗವಹಿಸುವುದರಿಂದ ಉತ್ತಮ ಭವಿಷ್ಯವಿದೆ ಎಂದು ಹೇಳಿದರು.
ವಿದ್ಯಾರ್ಥಿ ವಿಜ್ಞಾನಿ ಪರಿಕಲ್ಪನೆ: ಕೇರಳ ಮತ್ತು ಕರ್ನಾಟಕದ ಕರಾವಳಿ ತೀರಗಳಲ್ಲಿ ಹವಾಮಾನ ಬದಲಾವಣೆ ಕುರಿತು ಅಧ್ಯಯನ ಮಾಡಲು ವಿದ್ಯಾರ್ಥಿಗಳನ್ನೇ ವಿಜ್ಞಾನಿಗಳಾಗಿ ಮಾಡುವ ಯೋಜನೆ ಇದಾಗಿದೆ. ವಿವಿಧ ಶಾಲಾ ವಿದ್ಯಾರ್ಥಿಗಳನ್ನು ತರಬೇತಿಗೊಳಿಸಲು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ 40 ವಿದ್ಯಾರ್ಥಿಗಳಿಗೆ ತರಬೇತಿ ಕಾರ್ಯಾಗಾರವನ್ನು ಎನ್ಐಎಎಸ್ ಹಮ್ಮಿಕೊಂಡಿತ್ತು. ಈ ಯೋಜನೆಯಲ್ಲಿ ಆಯ್ಕೆಗೊಂಡ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಎಂಜಿನಿಯರ್, ಪದವಿ ವಿಜ್ಞಾನ ಮತ್ತು ಸಮಾಜಕಾರ್ಯ ವಿದ್ಯಾರ್ಥಿಗಳು ಕೈಜೋಡಿಸಿದ್ದಾರೆ. ಮಣ್ಣು, ನೀರು, ಗಾಳಿ, ವಾತಾವರಣ, ಮಾಲಿನ್ಯ, ಪರಿಸರ, ಉಷ್ಣಾಂಶ, ಮಳೆ, ನೀರಿನ ಶುದ್ಧತೆ, ಗಾಳಿಯ ವೇಗ, ಸಾಂಕ್ರಾಮಿಕ ರೋಗಗಳ ಕುರಿತ ಅಧ್ಯಯನವನ್ನು ಈ ಯೋಜನೆಯು ಒಳಗೊಂಡಿದೆ. ಬಿಎಂ ಶಾಲೆಗೆ ಆಗಮಿಸಿದ ವಿವಿಧ ಶಾಲಾ ವಿದ್ಯಾರ್ಥಿಗಳಿಗೆ ಆಳ್ವಾಸ್ ನಲ್ಲಿ ತರಬೇತುಗೊಂಡ ವಿದ್ಯಾರ್ಥಿಗಳು ಮಾರ್ಗದರ್ಶನ ಹಾಗೂ ಅಧ್ಯಯನ ನಡೆಸಲು ಬೇಕಾದ ಸಲಕರಣೆಗಳ ನಿರ್ಮಾಣದಲ್ಲಿ ಸಹಕರಿಸಿದರು. ಗಾಳಿಯ ದಿಕ್ಕು, ಗಾಳಿಯ ವೇಗ, ಮಳೆಯ ಮಾಪಕವನ್ನು ಜನಸಾಮಾನ್ಯರು ಕೂಡ ಸುಲಭವಾಗಿ ಅಳತೆ ಮಾಡಬಹುದು ಎಂಬುದನ್ನು ನಿದರ್ಶಿಸಿ ತೋರಿಸಿದರು. ಬಿಎಂ ಶಾಲೆಯು,ಅಧ್ಯಯನಕ್ಕೆ ಪೂರಕವಾಗುವ ದತ್ತಾಂಶಗಳನ್ನು ಒದಗಿಸುವುದರ ಜೊತೆಗೆ ಮಾಹಿತಿಯನ್ನು ಕರ್ನಾಟಕದ ನೋಡಲ್ ಕೇಂದ್ರವಾದ ಆಳ್ವಾಸ್ ಸಂಸ್ಥೆಗೆ ಒದಗಿಸಲು ಮುಂದಾಗಿದೆ.ಇದೇ ರೀತಿ ಪ್ರತಿ 2ರಿಂದ 3 ತಿಂಗಳಿಗೊಮ್ಮೆ ವಿದ್ಯಾರ್ಥಿಗಳು ಅನ್ವೇಷಿಸಿದ ದತ್ತಾಂಶಗಳ ಪರಿಶೀಲನೆ ನಡೆಯಲಿರುವುದು. ಈ ಯೋಜನೆಯು ವಿದ್ಯಾರ್ಥಿಗಳಲ್ಲಿ ಅನ್ವೇಷಷಣೆಯ ಒಲವು ಮೂಡಿಸಲು ಸಹಕಾರಿಯಾಗಲಿದೆ.
ಉಳ್ಳಾಲ ಬಿಎಂ ಪ್ರೌಢ ಶಾಲೆಯ ಪ್ರಾಂಶುಪಾಲೆ ಜಯವಂತಿ ಸೋನ್ಸ್ , ಉಳ್ಳಾಲ ಬಿಎಂ ಪ್ರಾಥಮಿಕ ಶಾಲೆಯ ಪ್ರಾಂಶುಪಾಲೆ ಹೇರೋಸ್ ಹಿಲ್ಡಾ ಇದ್ದರು. ಬೈಂದೂರಿನಿಂದ ಹಿಡಿದು ಮಂಗಳೂರಿನ ವಿವಿಧ ಶಾಲಾ ಕಾಲೇಜುಗಳ ಆಯ್ಕೆಗೊಂಡ 6 ರಿಂದ 12 ನೇ ತರಗತಿಯ 112 ವಿದ್ಯಾರ್ಥಿಗಳು ಭಾಗಿಯಾಗಿದ್ದರು. ಕಾರ್ಯಕ್ರಮದ ಸಂಯೋಜಕ ಡಾ. ವಿನಯ್ಎಸ್. ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.