ಒಲವೇ ಜೀವನ ಲೆಕ್ಕಾಚಾರ ಅಲ್ಲ ಬದುಕೇ ಜೀವನದ ಲೆಕ್ಕಾಚಾರ ಆಗ್ಬಿಟ್ಟಿದೆ ನಮಗೆಲ್ಲ. ನಮ್ಮೆಲ್ಲರ ಜೀವನ ಲೆಕ್ಕಾಚಾರದ ಮೇಲೆನೆ ನಿಂತಿದೆ. ನಾನು ನನ್ನದು ಅನ್ನೊ ಕ್ಯಾಲ್ಕ್ಯುಲೇಷನ್ ನಲ್ಲಿ ಬದುಕು ನಮ್ಮೊಳಗಿನ ಪ್ರತಿಭೆಯನ್ನು ಹುಡುಕುವ ಕಲೆ, ಹೊಸತನ್ನು ಅನ್ವೇಶಿಸಿ, ಅನುಕರಿಸುವ ವಿಜ್ಞಾನವಾಗಿದೆ. ಆದ್ರೆ ನಾವೆಲ್ಲರೂ ಬದುಕನ್ನ ವಾಣಿಜ್ಯ ಮಾಡ್ಕೊಂಡಿದಿವಿ. ಕೊಟ್ಟು ತಗೊಳೊ ವ್ಯವಹಾರವಾಗಿದೆ. 2+2 = 4 ಅಂತ ಅಷ್ಟೇ ಯೋಚನೆ ಮಾಡ್ತಿವೇ ಹೊರತು 3+1= 4 ಹಿಂಗೂ ಆಗುತ್ತೆ ಅನ್ನೊದನ್ನ ಒಪ್ಕೊಳೊಕೆ ರೆಡಿ ಇರಲ್ಲ. ನಮ್ಮೆಲ್ಲರ ಆಯ್ಕೆ, ನಿರ್ಧಾರಗಳು ನಮ್ಮ ಮೂಗಿನ ನೇರಕ್ಕೆ ಇರತ್ತೆ. ಎಲ್ಲರಿಗೂ ಅವರು ಮಾಡಿದ್ದೆ ಸರಿ, ಅವರ ನಿರ್ಧಾರವೇ ನ್ಯಾಯಯುತವಾಗಿರತ್ತೆ.
ಇಟ್ಟಿಗೆಯಿಂದ ಗೋಡೆನೂ ಕಟ್ಟಬಹುದು, ಸೇತುವೆನೂ ಕಟ್ಟಬಹುದು, ಆದ್ರೆ ನಾವೆಲ್ಲಾ ಆಗಿರೊ ಸಣ್ಣ ಮನಸ್ಥಾಪಕ್ಕೆ ಆಡಿರೊ ಒಂದು ಮಾತನ್ನೆ ಇಟ್ಕೊಂಡು ಸಂಬಂಧಗಳ ನಡುವೆ ಗೋಡೆ ಕಟ್ತಿವಿ. ಅದೇ ಒಂದು ಸಾರೀ, ಕ್ಷಮಿಸಿ ಅನ್ನೊ ಒಂದು ಪದ ಹೇಳೊದಿಂದ್ರ ಆಗಿರೊ ಎಷ್ಟೊ ಮನಸ್ಥಾಪಗಳ ನಡುವೆ ಮನಸುಗಳ ಮದ್ಯೆ ಸೇತುವೆ ನಿರ್ಮಾಣವಾಗತ್ತೆ.
ಕ್ಷಮೆ ಕೇಳೊದ್ರಿಂದ ಯಾರೂ ಸೋಲಲ್ಲ. ಹಂಗೂ ಸೋಲ್ತಿವಿ ಅನ್ನೊದಾದ್ರೆ ಸೋಲೊದಾದ್ರು ಯಾರ ಮುಂದೆ? ನಮ್ಮನ್ನ ಅತಿಯಾಗಿ ಪ್ರೀತ್ಸೊರ ಮುಂದೆ ಅಲ್ವ. ಅವರ ಮುಂದೆ ಗೆದ್ದು ಪಡ್ಕೊಳೊದಾದ್ರು ಏನಿದೆ?.
ಇನ್ನೂ ಕೆಲವರು ಅನ್ಕೊತಿವಿ ಬ್ರಾಂಡೆಡ್ ಬಟ್ಟೆಗಳನ್ನ, ವಸ್ತುಗಳನ್ನ ತಗೊಂಡ್ರೆ ಜೀವನ ಬ್ರಾಂಡೆಡ್ ಆಗಿರತ್ತೆ, ಎಲ್ಲರೂ ನಮಗೆ ಬೆಲೆ ಕೊಡ್ತಾರೆ ಅಂತ. ಪಾಪಸ್ ಕಳ್ಳಿ ಹೂ ಬೆಟ್ಟದ ಮೇಲೆನೆ ಬಿಡತ್ತೆ ಆದ್ರೆ ಅದ್ನ ದೇವರಿಗೆ ಮುಡ್ಸಲ್ಲ, ಕಮಲ ಕೆಸರಲ್ಲೆ ಬಿಡತ್ತೆ ಆದ್ರೂ ದೇವರ ತಲೆ ಮೇಲಿಡ್ತಿವಿ. ನಾವು ಎಲ್ಲಿರ್ತಿವಿ, ಹೇಗೆ ಬದುಕ್ತಿದಿವಿ ಅನ್ನೊಕ್ಕಿಂತ ನಾವ್ ಎಲ್ಲಿದ್ರು ನಮ್ಮತನ ಉಳ್ಸ್ಕೊಂಡಿದ್ರೆ ಬೆಲೆ ತಂತಾನೆ ಬರತ್ತೆ. ದೀಪ ಸುಡತ್ತೆ ಕೈ ಕಾಹ್ಬೇಡಿ ಅಂದ್ರು ಹೇಗ್ ಸುಡತ್ತೆ ನೋಡೋಣ ಅನ್ನೊ ಕುತೂಹಲ ಎಲ್ಲರಿಗೂ, ಹಾಗೆ ಪ್ರೀತಿ ಕೂಡ. ಪ್ರೀತಿಲಿ ನೋವು, ಮೋಸ, ಕಣ್ಣೀರು ಎಲ್ಲಾ ಇದೆ ಅಂತ ಗೊತ್ತಿದ್ರು ಪ್ರೀತಿ ಮಾಡ್ತಿವಿ. ಯಾರಾದ್ರು ನಮ್ಮಿಂದ ದೂರ ಹೋಗ್ತಾರೆ ಅಂದ್ರೆ ನಮ್ಮಲ್ಲಿ ಅವರಿಗೆ ಇಷ್ಟ ಆಗದೆ ಇರೊ ಯಾವುದೋ ಒಂದು ಗುಣದಿಂದಾನೆ ಅಲ್ವ? ನಮ್ಮಲ್ಲೆ ತಪ್ಪು ಇಡ್ಕೊಂಡು ಬಿಟ್ಟು ಹೋದವರನ್ನ ಮಾತ್ರ ದೂರ್ತಿವಿ. ಹಾಳಾದ್ ಈ ಪ್ರೀತಿನೆ ಹಿಂಗೆ ಅನ್ಸತ್ತೆ. ಜಗತ್ತಲ್ಲಿ ಎಷ್ಟೇ ಜನ ಹುಡುಗ ಹುಡುಗಿ ಇದ್ರು ನಮ್ಗೆ ಮಾತ್ರ ಮತ್ತೆ ಮತ್ತೆ ಪ್ರೀತಿ ಹುಟ್ಟೋದು ನಮ್ಮನ್ನ ಬಿಟ್ಟು ಹೋದವರ ಮೇಲೆನೆ ಅಲ್ವ.
ಎಲ್ಲರೂ ತುಂಬಾ ಬ್ಯುಸಿಯಾಗಿರ್ತಿವಿ. ಯಾವುದ್ರಲ್ಲಿ? ಅಮ್ಮ ಸೀರಿಯಲ್ಗಳಲ್ಲಿ, ಅಪ್ಪ ಪಾರ್ಟಿ ಪಬ್ ಗಳಲ್ಲಿ, ಮಕ್ಕಳು ವಿಡಿಯೋ ಗೇಮಲ್ಲಿ, ಇನ್ನ 14-18 ವರ್ಷದ ಓದೊ ವಯಸ್ಸಿನ ಮಕ್ಳು ಲವ್ ಲಿ, 40-50 ವಯಸ್ಸಿನವರು ಮದುವೆ ಆಗಿ ಇವಾಗ್ಲೆ ಮಕ್ಳು ಮಾಡ್ಕೊಳೋದೊ ಬೇಡ್ವೊ ಅನ್ನೊ ಯೋಚ್ನೆಯಲ್ಲಿ, ಇದ್ನೆಲ್ಲ ಮಾಡ್ಬೆಕಾಗಿರೊ ಸರಿಯಾದ ವಯಸ್ಸಿನವರು ಅಂದ್ರೆ 23-30 ಅವರು ದುಡಿಮೆ, ದುಡ್ಡು ಮಾಡೋದ್ರಲ್ಲಿ. ಗೊನೆ ಬಿಟ್ಟ ಬಾಳೆನೂ ಬಗ್ಗತ್ತೆ, ತೆನೆ ಬಿಟ್ಟ ಪೈರು ಕೂಡ ಬಾಗತ್ತೆ, ಆದ್ರೆ ಈ ಮನುಷ್ಯ ಜೀವ ಮಾತ್ರ ನಾನು ನನ್ನದು ಅನ್ನೊ ಅಹಂನಲ್ಲಿ ಬೀಗ್ತಿದಾನೆ. ಪ್ರಪಂಚಾನೇ ಹುಚ್ಚು ಅದ್ರಲ್ಲಿ ನಮ್ಗೆ ಸ್ವಲ್ಪ ಹೆಚ್ಚು ಅನ್ನೊದ್ನೆ ಮರ್ತು ಇನ್ನೊಬ್ಬರ ತಪ್ಪುಗಳನ್ನ ಎತ್ತಿ ತೋರ್ಸೊದ್ರಲ್ಲೆ ಜೀವನ ಕಳಿತಿದಾನೆ. ಜಗತ್ತಿನಲ್ಲಿ ಬಿಟ್ಟಿಯಾಗಿ ಸಿಗೋದು ಅಂದ್ರೆ ಭೋದನೆ ಒಂದೇ ಅನ್ಸತ್ತೆ. ಸುಳ್ಳು ಅನ್ಸಿದ್ರೆ ನೀವು ಹತ್ತು ಜನರ ಹತ್ರ ಸಹಾಯ ಕೇಳಿ ಒಬ್ಬರು ಬರಲ್ಲ ಸಹಾಯಕ್ಕೆ, ಅದೇ ಒಬ್ಬರ ಹತ್ರ ಸಲಹೆ ಕೇಳಿ ಬೇಡ ಅಂದ್ರು ಹತ್ತು ಜನ ಬರ್ತಾನೆ ಬಿಟ್ಟಿ ಸಲಹೆ ಕೊಡೊಕೆ ನಂದೆಲ್ಲಿಡ್ಲಿ ಅಂತ.
ವಿದ್ಯೆ ಜೊತೆ ವಿನಯವೂ ಇದ್ದಾಗಲೇ ವಿದ್ಯಾರ್ಥಿಗೆ ಶೋಭೆ. ಆದ್ರೆ ನಾಲ್ಕಾರು ಊರು ಸುತ್ಕೊಂಡು, ಒಂದೆರಡು ಡಿಗ್ರಿ ತಗೊಂಡಿದ್ರೆ ಸಾಕು ಪ್ರಪಂಚವನ್ನೆ ಗೆದ್ದಿದ್ದೀವಿ ಅನ್ನೊ ಭ್ರಮೆಲಿ ಬದುಕ್ತಿರ್ತಿವಿ. ನಾವು ಎಷ್ಟು ಓದಿದ್ದೀವಿ ಅನ್ನೊಕ್ಕಿಂತ ನಾವು ಓದಿರೊ ವಿದ್ಯೆ ನಮಗೆಷ್ಟು ಸಂಸ್ಕಾರ ಕೊಟ್ಟಿದೆ ಅನ್ನೊದು ಮುಖ್ಯ. ಎಲ್ಲಾ ಕಡೆ ಬೀಗೋದಲ್ಲ ಸಂಸ್ಕಾರ, ಬಲಹೀನರ ಎದುರು ಕೂಡ ಬಾಗೋದೆ ಸಂಸ್ಕಾರ. ನಾವೇನಾದ್ರು ತಗೊಂಡ್ರೆ ಎಲ್ಲರೂ ನೋಡ್ಲಿ ಅಂತಾನೇ ಊರ್ ತುಂಬಾ ತೋರಿಸ್ಕೊಂಡು ಬರ್ತಿವಿ, ಅದೇ ಬೇರೆಯವರು ಏನಾದ್ರು ತಂದು ತೋರ್ಸಿದ್ರೆ ನೋಡಿ ಹೊಟ್ಟೆ ಕಿಚ್ಚು ಪಡ್ಕೊತಿವಿ. ಈವಾಗ್ ನೋಡಿ ನಾನ್ ಬರ್ದಿರೋದು ನನ್ ದೃಷ್ಟಿಕೋನದಿಂದ ಸರಿ ಇದೆ. ಎಲ್ಲರೂ ಅದನ್ನೆ ಒಪ್ಕೊಬೇಕು ಅಂತಿಲ್ಲ ಅಲ್ವ? ಅವರೆಲ್ಲ ಯಾಕಂಗೆ ಅಂತ ಯೋಚ್ಸೊ ಬದ್ಲು ನಾವ್ಯಾಕೆ ಹೀಗಿದಿವಿ ಅಂತ ಯಾವತ್ತೂ ಯೊಚ್ಸಲ್ಲ ಯಾಕ್ ಹೇಳಿ? ನಮ್ಗೆ ಗೊತ್ತು ನಾವು ಮಾಡ್ತಿರೊ ಕೆಲಸ, ನಮ್ಮ ನಿರ್ಧಾರ ಸರಿ ಇದೆ ಅಂತ. ಹಾಗೆ ಎಲ್ಲರಿಗೂ ಕೂಡ ಅವರು ಮಾಡಿದ್ದೆ ಸರಿ ಇರತ್ತೆ. ಇನ್ನೊಬ್ಬರ ನಿರ್ಧಾರವನ್ನ ನಮ್ಮ ದೃಷ್ಟಿ ಕೋನದಲ್ಲಿ ನಿಂತು ನಿರ್ಣಯಿಸೊ ಬದಲು ಬೇರೆಯವರ ನಿರ್ಧಾರವನ್ನು ಅವರ ಜಾಗದಲ್ಲಿ ನಿಂತು ನೋಡಿ.
ಆರ್ ವಿ ಶೆಟ್ಟಿ