ಕರಾವಳಿ ಕರ್ನಾಟಕದ ತುಳುನಾಡಿನ ಮಂಗಳೂರಿನ ಶ್ರೀ ವಿಶ್ವನಾಥ್ ಶೆಟ್ಟಿ ಮತ್ತು ಶ್ರೀಮತಿ ಉಷಾ ವಿಶ್ವನಾಥ್ ಶೆಟ್ಟಿ ದಂಪತಿಗಳ ಪುತ್ರಿ ಕು|| ಸನ್ನಿಧಿ ವಿಶ್ವನಾಥ್ ಶೆಟ್ಟಿ ಪ್ರಸ್ತುತ ದುಬಾಯಿಯಲ್ಲಿ ನೆಲೆಸಿದ್ದಾರೆ. ವೃತ್ತಿಯಲ್ಲಿ ವಿಶ್ವನಾಥ್ಶೆ ಟ್ಟಿಯವರು ಮಲ್ಟಿ ನ್ಯಾಶನಲ್ ಕಂಪನಿಯ ಬ್ರ್ಯಾಂಚ್ ಮ್ಯಾನೇಜರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಪ್ರವೃತ್ತಿಯಲ್ಲಿ ರಂಗಭೂಮಿ ನಟರು, ನಿರ್ದೇಶಕರು, ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡು ಕರ್ನಾಟಕ ಸಂಘ ಶಾರ್ಜಾದ ಉಪಾಧ್ಯಕ್ಷರಾಗಿದ್ದಾರೆ. ಜನ್ಮದಾತೆ ಶ್ರೀಮತಿ ಉಷಾ ಶೆಟ್ಟಿ ಯವರು ಸಹ ತನ್ನ ಗಾಯನ, ನೃತ್ಯಗಳಲ್ಲಿ ಪ್ರತಿಭೆಗಳ ಮೂಲಕ ಹಲವಾರು ವೇದಿಕೆಗಳಲ್ಲಿ ಕಾರ್ಯಕ್ರಮ ನೀಡಿದ್ದಾರೆ.
ಸನ್ನಿಧಿ ಶೆಟ್ಟಿ ಬಾಲ್ಯದಿಂದಲೇ ತನ್ನಲ್ಲಿರುವ ಪ್ರತಿಭೆಯನ್ನು ವಿವಿಧ ಸಾಂಸ್ಕೃತಿಕ ವೇದಿಕೆಯಲ್ಲಿ ಅನಾವರಣ ಗೊಳಿಸುತ್ತಾ ಹೆಜ್ಜೆ ಗುರುತನ್ನು ಮೂಡಿಸಿದ್ದಾಳೆ. ಒಂದೂವರೆ ವಯಸಿನಲ್ಲೇ ಕಿನ್ನಿ ಪಿಲಿ (ಮರಿ ಹುಲಿವೇಷಧಾರಿಣಿಯಾಗಿ) ವೇದಿಕೆಮೇಲೆ ಪ್ರಥಮ ಪ್ರದರ್ಶನ ನೀಡಿದ್ದಾಳೆ. ತನ್ನ ಮೂರನೇಯ ವಯಸ್ಸಿನಲ್ಲಿ ದುಬಾಯಿಯ ಶ್ರೀ ರಾಜರಾಜೇಶ್ವರಿ ಭಜನಾ ಮಂಡಳಿಯಲ್ಲಿ ತನ್ನ ಪುಟ್ಟ ಕಂಠಸಿರಿಯಲ್ಲಿ ಪ್ರಾರಂಭಿಸಿರುವ ಭಜನಾ ಸಂಗೀತ ಗಾಯನ ಇಂದಿಗೂ ಮುದುವರೆಸಿಕೊಂಡು ಬರುತ್ತಿದ್ದಾಳೆ. ನಾಲ್ಕನೆಯ ವಯಸ್ಸಿನಲ್ಲಿ ಪುಟ್ಟ ಪುಟ್ಟ ಹೆಜ್ಜೆಗಳನ್ನಿಡುತ್ತಾ ನೃತ್ಯಭ್ಯಾಸವನ್ನು ಗುರು ವಿಧೂಷಿ ರೋಹಿಣಿ ಅನಂತ್ ರವರ ಬಳಿ ಕ್ಲಾಸಿಕಲ್ ರಿದಂಸ್ ದುಬಾಯಿಯಲ್ಲಿ ಪ್ರಾರಂಭಿಸಿದ ಸನ್ನಿಧಿ ಶೆಟ್ಟಿ ಸಂಗೀತ ಅಭ್ಯಾಸವನ್ನು ವಿಧೂಷಿ ಸುಮಾ ನಾರಾಯಣ್ ಮತ್ತು ವಿಧೂಷಿ ಮಾದವೀ ಪ್ರಸಾದ್ ದುಬಾಯಿ ಇವರ ಬಳಿಯಲ್ಲಿ ಪ್ರಾರಂಭಿಸಿದಳು.
ಯು.ಎ.ಇಯ ವಿವಿಧ ಸಾಂಸ್ಕೃತಿಕ ವೇದಿಕೆಗಳಲ್ಲಿ ಗಾಯನ, ನೃತ್ಯ ಕಾರ್ಯಕ್ರಮಗಳನ್ನು ನೀಡುತ್ತಾ ತನ್ನಲ್ಲಿರುವ ಪ್ರತಿಭೆಯಲ್ಲಿ ಪ್ರೌಢಿಮೆಯನ್ನು ಹೆಚ್ಚಿಸಿಕೊಂಡಿರುವ ಸನ್ನಿದಿ ಶೆಟ್ಟಿ ಹಂತ ಹಂತವಾಗಿ ತನ್ನ ಗಾಯನವನ್ನು ಸ್ಪರ್ಧೆಗಳಲ್ಲಿ ತೊಡಗಿಸಿ ಕೊಂಡು ಹಲವಾರು ಪ್ರಥಮ ಬುಹುಮಾನಗಳನ್ನು ತನ್ನದಾಗಿಸಿ ಕೊಂಡಿದ್ದಾಳೆ. ತನ್ನ ಎಂಟನೆಯ ವಯಸ್ಸಿನಲ್ಲಿ ಕರ್ನಾಟಕ ಸಂಘ ಶಾರ್ಜಾದ ಆಶ್ರಯದಲ್ಲಿ ನಡೆದ ಯು.ಎ.ಇ. ರಾಷ್ಟ್ರ ಮಟ್ಟದ ಗಾಯನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ “ಮಯೂರ ಕುಮಾರಿ” ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾಳೆ. ಗಲ್ಫ್ ರಾಷ್ಟ್ರ ಮಟ್ಟದಲ್ಲಿ ಆಯೋಜಿಸಿದ ಬಂಟ್ಸ್ ಬಹರೆನ್ ಸಂಘದ ಬಂಟರ ಪ್ರತಿಭೆಗಳ ಗಾಯನ ಸ್ಪರ್ಧೆಯಲ್ಲಿ ಪ್ರಶಸ್ತಿಯನ್ನು ಪಡೆದಿದ್ದಾಳೆ. 2020-21 ಸಾಲಿನ್ ಗಲ್ಫ್ ರಾಷ್ಟ್ರದ “ಗಲ್ಫ್ ಗಾನ ಕೋಗಿಲೆ” ಸ್ಪರ್ಧೆಯಲ್ಲಿ ಪ್ರಶಸ್ತಿಯನ್ನು ತನ್ನದಾಗಿಸಿಕೊಡಿದ್ದಾಳೆ.
ಶ್ರೀ ವರಮಹಾಲಕ್ಷ್ಮೀ ಪೂಜಾ ಸಮಿತಿ ದುಬಾಯಿ ಆಶ್ರಯದಲ್ಲಿ ನಡೆದ ಹನುಮಾನ್ ಚಾಲಿಸ್ ಪಠಣ ಸ್ಪರ್ಧೆಯಲ್ಲಿ ಬಹುಮಾನ ಪಡೆದಿದ್ದಾಳೆ. ರಂಗಭೂಮಿ ನಟನೆಯಲ್ಲಿ ಹವ್ಯಾಸವಿರುವ ಸನ್ನಿಧಿ ಶೆಟ್ಟಿ ದುಬಾಯಿಯಲ್ಲಿ ಗಮ್ಮತ್ ಕಲಾವಿದೆರ್ ಯು.ಎ.ಇ. ಆಶ್ರಯದಲ್ಲಿ ರಂಗ ಸಾರಥಿ ವಿಶ್ವನಾಥ್ ಶೆಟ್ಟಿಯವರ ನಿರ್ದೇಶನದಲ್ಲಿ ಪ್ರದರ್ಶವಾಗಿರುವ ‘ನಂಕ್ ಮಾತೆರ್ಲಾ ಬೋಡು’, ‘ಬಯ್ಯ ಮಲ್ಲಿಗೆ’, ‘ವಾ ಗಳಿಗೆಡ್ ಪುಟ್ಟುದನಾ’ ತುಳು ನಾಟಕ ತನ್ನ ಅಭಿನಯ ಪ್ರತಿಬೆಗೆ ಮೆಚ್ಚುಗೆಯನ್ನು ಗಳಿಸಿದ್ದಾಳೆ. ಶಾಲಾ ಮಟ್ಟದಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ತನ್ನ ಪ್ರತಿಭೆಗೆ ಹಲವಾರು ಪುರಸ್ಕಾರಗಳನ್ನು ಪಡೆದಿದ್ದಾಳೆ. ವಾಧ್ಯಸಂಗೀತದಲ್ಲಿ ಆಸ್ಕ್ತಿ ಇರುವ ಸನ್ನಿಧಿ ಶೆಟ್ಟಿ ಗಿಟಾರ್ ನುಡಿಸುವುದನ್ನು ಅಭ್ಯಾಸ ಮಾಡುತ್ತಿದ್ದಾಳೆ. 2024ರಲ್ಲಿ ಯು.ಎ.ಇ.ಯಲ್ಲಿ ನಡೆದ ಸ್ಪರ್ಧೆಯಲ್ಲಿ “ಜೂನಿಯರ್ ಯು.ಎ.ಇ. ಐಡಲ್” ಪ್ರಶಸ್ತಿ ತನ್ನದಾಗಿಸಿಕೊಂಡಿದ್ದಾಳೆ. ಮುಂದಿನ ತನ್ನ ಜೀವನ ವೃತ್ತಿಯನ್ನು ವಕೀಲೆಯಾಗಿ ಆಯ್ಕೆ ಮಾಡಿಕೊಳ್ಳುವ ಹಂಬಲ ಇಟ್ಟು ಕೊಂಡಿರುವ ಸನ್ನಿಧಿ ಶೆಟ್ಟಿಯ ಪ್ರತಿಭೆ ಉಜ್ವಲವಾಗಿರಲಿ ಎಂದು ಬಂಟ್ಸ್ ನೌ ಮಾಧ್ಯಮ ಸಂಸ್ಥೆ ಹಾರೈಸುತ್ತದೆ.
ಬಿ. ಕೆ. ಗಣೇಶ್ ರೈ
ದುಬಾಯಿ