ಹತ್ತು ಹಲವು ಬಗೆಯ ಜಾತ್ರೆ, ಸಂಕ್ರಾಂತಿ, ಹಬ್ಬ ಹರಿದಿನಗಳು ನಮ್ಮ ನಾಡಿನ ನೆಲದ ಮಣ್ಣಿನಲ್ಲಿ ಘಮ ಘಮಿಸುತ್ತಿರುವುದು ಸತ್ಯ. ಹಬ್ಬಗಳ ನಾಡು ನಮ್ಮದು. ಭಾರತೀಯ ಪರಂಪರೆಯಲ್ಲಿ ಪ್ರತಿಯೊಂದು ಸಂವತ್ಸರಕ್ಕೂ, ಋತುಮಾಸಕ್ಕೂ, ಎಲ್ಲಾ ಹಬ್ಬಗಳಿಗೂ ಅದರದ್ದೇ ಆದ ಮಹತ್ವ, ಐತಿಹಾಸಿಕ ಹಿನ್ನಲೆ, ಧಾರ್ಮಿಕ ನಂಬಿಕೆ, ಸಾಮಾಜಿಕ ಕಾಳಜಿ ಹಾಗೂ ಆರೋಗ್ಯದ ವಿಚಾರಗಳು ಅಡಗಿರುತ್ತದೆ. ಅಂತಹದ್ದೇ ಒಂದು ವಿಶಿಷ್ಟತೆಗೆ ಪ್ರತೀಕವಾಗಿ ಸಿಂಹ ಸಂಕ್ರಮಣದಂದು ಉಡುಪಿ ಜಿಲ್ಲೆಯ ಪೆರ್ಡೂರಿನ ಕದಳೀ ಪ್ರಿಯ ಖ್ಯಾತಿಯ ಅನಂತ ಪದ್ಮನಾಭ ದೇವಸ್ಥಾನದಲ್ಲಿ ಜರುಗುವ “ಮದುಮಕ್ಕಳ ಜಾತ್ರೆ”ಯು ಜಗತ್ಪ್ರಸಿದ್ಧ. ಅಂದು ದೇವಸ್ಥಾನದ ಆವರಣದ ಸುತ್ತೆಲ್ಲಾ ನವ ದಂಪತಿಗಳು ತುಂಬಿರುತ್ತಾರೆ. ಸಿಂಹ ಸಂಕ್ರಮಣದ ಆಚರಣೆಗಳಲ್ಲಿ ಇಲ್ಲಿ “ಮದುಮಕ್ಕಳ ಜಾತ್ರೆ” ಎಂದೇ ಖ್ಯಾತಿ ಪಡೆದುದಾಗಿದೆ.
ನವ ವಧು ಆಷಾಢದಲ್ಲಿ ಅತ್ತೆಯ ಮನೆಯಿಂದ ತವರು ಮನೆಗೆ ತೆರಳಿದವಳು ಮಳೆಯ ಅಬ್ಬರ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿ ಆಷಾಢದ ವಿರಹ ತಪ್ಪಿ ಶ್ರಾವಣಕ್ಕೆ ಪುನಃ ಅತ್ತೆಯ ಮನೆಗೆ ಬರುವ ಕಾಲ. ಆಷಾಢ ಮಾಸದ ಬಳಿಕ ಬರುವ ಸಿಂಹ ಸಂಕ್ರಮಣದಂದು ಪತಿಯೊಂದಿಗೆ ಇಲ್ಲಿನ ದೇವರ ದರ್ಶನ ಪೂರೈಸಿ ಮರಳಿ ಗಂಡನ ಮನೆಗೆ ಹೋಗುವುದು ಸಂಪ್ರದಾಯ. ಮನೆಗೆ ಸೊಸೆ ಮರಳಿ ಬರುವ ಸಂಭ್ರಮವಿದ್ದರೆ ಮತ್ತೊಂದೆಡೆ ಹೊಸ ಮದು ಮಕ್ಕಳಿಗೆ ಇಲ್ಲಿನ ದೇವಸ್ಥಾನದಲ್ಲಿ ವಿಶೇಷ ದರ್ಶನದೊಂದಿಗೆ ಜಾತ್ರೋತ್ಸವ. ಮದುಮಕ್ಕಳು ದೇವರ ಸನ್ನಿಧಿಯಲ್ಲಿ ದಾಂಪತ್ಯದ ಪೂಜೆ ಸಲ್ಲಿಸುತ್ತಾರೆ. ಬೆಳಿಗ್ಗೆ 4 ಗಂಟೆಯಿಂದಲೇ ಸರತಿ ಸಾಲಿನಲ್ಲಿ ನೂತನ ದಂಪತಿಗಳು ತಮ್ಮ ಹಿರಿಯರೊಂದಿಗೆ ದೇವರ ಆರ್ಶಿವಾದ ಪಡೆದು ನಂತರ ಮದುಮಗಳು ಇಲ್ಲಿಂದಲೇ ಗಂಡನ ಮನೆಗೆ ತೆರಳುವ ಕ್ರಮ.
ಕಳೆದ ಸಿಂಹ ಸಂಕ್ರಮಣದ ನಂತರ ಮದುವೆಯಾದ ನವ ದಂಪತಿಗಳು ತಮ್ಮ ಬಾಳಿನ ಭವಿಷ್ಯಕ್ಕಾಗಿ ದೇವರಲ್ಲಿ ಮೊರೆಯಿಡುವ ಸಿಂಹ ಸಂಕ್ರಮಣ ಪೆರ್ಡೂರು ಅನಂತ ಪದ್ಮನಾಭ ದೇವಸ್ಥಾನದಲ್ಲಿ ವಿಶೇಷ ದಿನ. ನವ ವಧುವಿನಂತೆ ಶೃಂಗಾರಗೊಳ್ಳುತ್ತದೆ ದೇವಳ. ಇದು ಹಿಂದಿನಿಂದಲೂ ನಡೆದು ಬಂದ ಸಂಪ್ರದಾಯ ಹಾಗೂ ಪದ್ದತಿಯಂತೆ ಮದುಮಕ್ಕಳ ಜಾತ್ರೆ ಎಂದೇ ಪ್ರಸಿದ್ಧ. ಅನಂತ ಪದ್ಮನಾಭನೆಂದು ಕರೆಸಿಕೊಂಡು ಪ್ರಕೃತಿ ಹಾಗೂ ಎಲ್ಲಾ ಈಶ್ವರೀ ಶಕ್ತಿಯನ್ನು ಮೈಗೂಡಿಸಿಕೊಂಡ ಈ ದೇವಾಲಯದಲ್ಲಿ ಶ್ರಾವಣ ಸಂಭ್ರಮದಲ್ಲಿರುವ ನವಜೋಡಿಗಳು ಕೈ ಕೈ ಹಿಡಿದು ಬಂದು ಸನ್ನಿಧಿಯಲ್ಲಿ ಕೈಜೋಡಿಸಿ ಪ್ರಾರ್ಥನೆ ಸಲ್ಲಿಸುತ್ತಾರೆ. ಮದುಮಕ್ಕಳ ಈ ಜಾತ್ರೆಗೆ ಬರುವ ಸಾವಿರಾರು ಜೋಡಿಗಳನ್ನು ಏಕ ಕಾಲಕ್ಕೆ ನೋಡುವುದು ಒಂದು ಸೊಬಗೇ ಸೊಬಗು. ಸಂಕ್ರಮಣ ಖ್ಯಾತಿಯ ದೇವಾಲಯವಿದು. ಈ ಕ್ಷೇತ್ರಕ್ಕೆ ವರ್ಷದ 12 ಸಂಕ್ರಮಣಕ್ಕೂ ತಪ್ಪದೇ ಬಂದು ದರ್ಶನ ಪಡೆದರೆ ಮನದ ಆಶೆ ನೆರವೇರುತ್ತದೆ ಎಂಬ ನಂಬಿಕೆ ಇರುವುದರಿಂದ ಹರಕೆ ರೂಪದಲ್ಲಿ ವರ್ಷದ 12 ಸಂಕ್ರಮಣಕ್ಕೂ ಭಕ್ತರು ಇಲ್ಲಿಗೆ ಬರುತ್ತಾರೆ. ಎಲ್ಲಾ ಸಂಕ್ರಾಂತಿಗಳೂ ಎಲ್ಲಾ ಕಡೆ ವಿಶೇಷವಾಗಿದ್ದರೂ ಇಲ್ಲಿ ಮಾತ್ರ ಸಿಂಹ ಸಂಕ್ರಮಣಕ್ಕೆ ಅದರದ್ದೇ ಆದ ವಿಶೇಷತೆ ಇದೆ. ಹೊಸ ಜೋಡಿಗಳನ್ನು ನೋಡಲೆಂದೇ ಹಲವಾರು ಮಂದಿ ಆಗಮಿಸುತ್ತಾರೆ.
ಪೆರ್ಡೂರು ಶ್ರೀ ಅನಂತ ಪದ್ಮನಾಭ ದೇವಳಕ್ಕೆ ವರ್ಷದ ಯಾವುದೇ ದಿನಗಳಲ್ಲಿ ಹೋದರೂ ಹರಕೆ ರೂಪದಲ್ಲಿ ದೇವರಿಗೆ ಅರ್ಪಿಸಿದ ಬಾಳೆ ಹಣ್ಣಿನ ಸಿಬ್ಲು, ಹೆಡಗೆಯಲ್ಲಿದ್ದ ಹಣ್ಣುಗಳನ್ನು ಭಕ್ತರಿಗೆ ಹಂಚುವ ದೃಶ್ಯ ಕಾಣ ಸಿಗುತ್ತದೆ. ಬಾಳೆ ಹಣ್ಣಿನ ಸೇವೆಯು ಇಲ್ಲಿನ ಇನ್ನೊಂದು ವಿಶೇಷ. ಬಾಳೆಗೊಲಿದ ಭಗವಂತನೆಂಬ ಖ್ಯಾತಿಯೂ ಇದೆ. ತಮ್ಮ ಇಷ್ಟಾರ್ಥ ಸಿದ್ದಿ ಸಂಕಲ್ಪಗಳಿಗೆ ಬಾಳೆಹಣ್ಣು ಸೇವೆ ಸಲ್ಲಿಸಲಾಗುತ್ತದೆ. ಇಲ್ಲಿ ಸಾವಿರ ಬಾಳೆ ಹಣ್ಣು, 500 ಬಾಳೆ ಹಣ್ಣು, ಗೊನೆ ಹಣ್ಣು, ಸಿಬ್ಲ ಹಣ್ಣು ಹೀಗೇ ಬಾಳೆ ಹಣ್ಣಿನ ಹರಕೆ ಸೇವೆ ನಡೆಯುತ್ತದೆ. ಶ್ರೀ ಅನಂತ ಪದ್ಮನಾಭ ಕ್ಷೇತ್ರ ವಿಶೇಷ ಕಾರಣಿಕ ಸಾನಿಧ್ಯವಾಗಿದ್ದು, ಹುಲಿ ಮತ್ತು ಹಸು ತಮ್ಮ ಎಂದಿನ ದ್ವೇಷ ಮರೆತು ಜೊತೆಯಾಗಿದ್ದ ಏಕೈಕ ಸ್ಥಳವಿದು. ಮದುಮಕ್ಕಳು ಸೇರಿದಂತೆ ಸಹಸ್ರಾರು ಜನರು ಉಡುಪಿ, ದಕ್ಷಿಣ ಕನ್ನಡ, ಕೊಡಗು, ಶಿವಮೊಗ್ಗ, ಚಿಕ್ಕಮಗಳೂರು, ಕುಂದಾಪುರ, ಕಾಸರಗೊಡು, ಉತ್ತರ ಕನ್ನಡ ಜಿಲ್ಲೆಗಳಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಶ್ರೀ ಕ್ಷೇತ್ರಕ್ಕೆ ಆಗಮಿಸುತ್ತಾರೆ. ಸಂತಾನ ವೃದ್ಧಿ, ಆರೋಗ್ಯ ವೃದ್ಧಿಗಾಗಿ ಶ್ರೀ ದೇವರಿಗೆ ಎಳ್ಳೆಣ್ಣೆ ಸಮರ್ಪಿಸುವುದು ಹಿಂದಿನಿಂದಲೂ ಇಲ್ಲಿ ನಡೆದುಕೊಂಡು ಬಂದ ವಾಡಿಕೆ. ಈ ದೇವಳದಲ್ಲಿ ಸಂಕ್ರಮಣ ಉತ್ಸವದ ಜೊತೆಗೆ ಸಾಮೂಹಿಕ ಸತ್ಯ ನಾರಾಯಣ ಪೂಜೆ ವಿವಿಧ ಪೂಜೆಗಳು ನಡೆದು ಸಾರ್ವಜನಿಕ ಅನ್ನ ಸಂತರ್ಪಣೆಯು ಇರುತ್ತದೆ. ತಿರುಪತಿಗೆ ಹೋಗುವುದಕ್ಕೆ ಕಷ್ಟವಾದ ಭಕ್ತರು ಇಲ್ಲಿ ಹರಕೆ ಸಲ್ಲಿಸಿದರೆ ಅದು ತಿರುಪತಿ ವೆಂಕಟರಮಣನಿಗೆ ಸಲ್ಲುತ್ತದೆ ಎಂಬ ನಂಬಿಕೆ ಇದೆ. ಪ್ರಖ್ಯಾತ ಶ್ರೀ ಅನಂತ ಪದ್ಮನಾಭ ಯಕ್ಷಗಾನ ಮೇಳವು ಇದೆ.
ಬಹಳ ಪುರಾತನ ದೇವಾಲಯವಿದು. ಇಲ್ಲಿನ ಹಿರಿಯರು ಹೇಳುವಂತೆ ದನ ಕಾಯುವ ಮಕ್ಕಳು ದನ ಕರುಗಳನ್ನು ಮೇಯಿಸುವಾಗ ಕಪಿಲೆ ಎನ್ನುವ ಹಸುವು ಕಾಣೆಯಾಗುತ್ತದೆ. ದನವನ್ನು ಹುಡುಕಿಕೊಂಡು ಹೋದಾಗ ಅದು ಹುತ್ತಕ್ಕೆ ಹಾಲೆರೆಯುತ್ತಿರುತ್ತದೆ. ಅದನ್ನು ಕಂಡ ದನ ಕಾಯುವ ಮಕ್ಕಳು ಇಲ್ಲಿನ ಸ್ಥಳೀಯ ಭಾಷೆಯಾದ ತುಳುವಿನಲ್ಲಿ ಪೇರುಂಡು.. ಪೇರುಂಡು ಎಂದು ಹೇಳುತ್ತಾರೆ. ಪೇರುಂಡು ಅಂದರೆ ಹಾಲು ಇದೆ ಎಂದು ಅರ್ಥ. ಪೇರುಂಡು ಎಂಬ ಶಬ್ದ ಬಾಯಿಯಿಂದ ಬಾಯಿಗೆ ಹರಡಿ ಕ್ರಮೇಣ ಪೆರ್ಡೂರು ಆಗಿದೆ ಎನ್ನುತ್ತಾರೆ.
ಹುತ್ತವಿದ್ದ ಜಾಗದಲ್ಲಿಯೇ ಅನಂತ ಪದ್ಮನಾಭ ಸ್ವಾಮಿ ಪ್ರತಿಷ್ಠಾನವಾಗಿದೆ. ಈ ದೇವಾಲಯದ ಸುತ್ತಾ ಪೌಳಿ ಇದ್ದು, ದೇವಳದ ಒಳಗೆ ನಿಂತ ಭಂಗಿಯಲ್ಲಿ ಶ್ರೀ ಅನಂತ ಪದ್ಮನಾಭ ಸ್ವಾಮಿಯ ವಿಗ್ರಹವಿದ್ದು, ಕರಿ ಕಲ್ಲಿನಲ್ಲಿ ಕಟ್ಟಿದ ಸುಮಾರು ಎರಡೂವರೆ ಅಡಿ ಎತ್ತರದ ಆವರಣದೊಳಗೆ ಶಂಖ, ಚಕ್ರ ಮತ್ತು ಅಭಯ ಹಸ್ತವನ್ನು ಹೊಂದಿದ್ದ ವಿಗ್ರಹವು ಬಹಳ ಆಕರ್ಷಕವಾಗಿದೆ. ಶೃಂಗಾರಭರಿತ ಅನಂತ ಪದ್ಮನಾಭ ಮೂರ್ತಿಯನ್ನು ನೋಡುವುದೇ ಬಹು ಸೊಗಸು. ಇಲ್ಲಿನ ಇನ್ನೊಂದು ವಿಶೇಷವೆಂದರೆ ಮೂರ್ತಿ ಜನಾರ್ಧನ ರೂಪದಂತೆ ಕಾಣಿಸುತ್ತಿದೆ. ಶೇಷ ಪ್ರತಿಮೆಯ ಶಿರ ಭಾಗದಲ್ಲಿ ಹಾವಿನ ಹೆಡೆ ಇದೆ. ಪದ್ಮದ ಮೇಲೆ ನಿಂತ ಪದ್ಮನಾಭನ ಪ್ರತಿಮೆಯಲ್ಲಿ ಜನಿವಾರ ಹಾಗೂ ಮೂಗುತಿ ಇದೆ. ಹತ್ತಿರದಲ್ಲಿ ಪುಷ್ಕರಣಿ ಇದ್ದು, ಅದಕ್ಕೆ ಪದ್ಮತೀರ್ಥ ಎನ್ನುತ್ತಾರೆ. ಮದುಮಕ್ಕಳ ಜಾತ್ರೆಗೆ ಜನದಟ್ಟಣೆ ತುಂಬಿರುತ್ತದೆ.
ಲತಾ ಸಂತೋಷ್ ಶೆಟ್ಟಿ ಮುದ್ದುಮನೆ