ಸಮಾಜವನ್ನು ಆರೋಗ್ಯ ಪೂರ್ಣವಾಗಿಸಲು ಆಟಿಡೊಂಜಿ ದಿನದ ಕಾರ್ಯಕ್ರಮ ಸಹಕಾರಿ. ಆ ನಿಟ್ಟಿನಲ್ಲಿ ಉಡುಪಿ ಗ್ರಾಮೀಣ ಬಂಟರ ಸಂಘವು ತುಳುನಾಡಿನ ಆಚಾರ, ವಿಚಾರ, ಸಂಪ್ರದಾಯಗಳ ಅರಿವು ಮೂಡಿಸುವಲ್ಲಿ ನಡೆಸಿದ ಆಟಿಡೊಂಜಿ ದಿನ ಅರ್ಥಪೂರ್ಣ ಎಂದು ಉಡುಪಿ ಶಾಸಕರಾದ ಯಶ್ ಪಾಲ್ ಎ. ಸುವರ್ಣ ಹೇಳಿದರು. ಅವರು ಕುಂತಳನಗರ ಆಶಾ ಪ್ರಕಾಶ್ ಶೆಟ್ಟಿ ಕನ್ವೆನ್ಷನ್ ಸಭಾಂಗಣದಲ್ಲಿ ಉಡುಪಿ ಗ್ರಾಮೀಣ ಬಂಟರ ಸಂಘದ ವತಿಯಿಂದ ನಡೆದ ಆಟಿಡೊಂಜಿ ದಿನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ, ನಮ್ಮ ಪೂರ್ವಜರ ಆರೋಗ್ಯಯುತ ಆಹಾರ ಪದ್ಧತಿಯ ಗುಟ್ಟು ಆಟಿ ಕೂಟದಲ್ಲಿ ಅಡಗಿದೆ. ಯುವ ಪೀಳಿಗೆಗೂ ನಮ್ಮ ತುಳುನಾಡಿನ ಆಚಾರ, ವಿಚಾರ, ಆಟಿಡೊಂಜಿ ದಿನದ ಮಹತ್ವದ ಬಗ್ಗೆ ತಿಳಿಸುವಲ್ಲಿ ಆಟಿಡೊಂಜಿ ದಿನ ಕಾರ್ಯಕ್ರಮ ಪರಿಣಾಮಕಾರಿ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು. ಉಡುಪಿ ಗ್ರಾಮೀಣ ಬಂಟರ ಸಂಘದ ಅಧ್ಯಕ್ಷ ಡಾ. ಎಚ್.ಬಿ. ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಜಾನಪದ ಚಿಂತಕ ಡಾ. ವೈ.ಎನ್. ಶೆಟ್ಟಿ ದಿಕ್ಸೂಚಿ ಭಾಷಣಗೈದು ಸಾಂಸ್ಕೃತಿಕ ಮತ್ತು ಮನೋರಂಜನೆ ಕಾರ್ಯಕ್ರಮ ನಡೆಯಿತು. ವಿವಿಧ ಸ್ವರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ವೇದಿಕೆಯಲ್ಲಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮಟ್ಟಾರು ರತ್ನಾಕರ್ ಹೆಗ್ಡೆ, ಉಡುಪಿ ಗ್ರಾಮೀಣ ಬಂಟರ ಸಂಘದ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ, ಕಾರ್ಯದರ್ಶಿ ಕಾರ್ತಿಕ್ ಶೆಟ್ಟಿ, ಉಡುಪಿ ಗ್ರಾಮೀಣ ಬಂಟರ ಸಂಘದ ಮಾಜಿ ಅಧ್ಯಕ್ಷ ಹೇಮಂತ್ ಶೆಟ್ಟಿ, ಕಾರ್ಯಾಧ್ಯಕ್ಷ ಪದ್ಮನಾಭ ಹೆಗ್ಡೆ, ಸಾಯಿರಾಧ ಡೆವಲಪರ್ಸ್ ಪ್ರವರ್ತಕ ಮನೋಹರ್ ಎಸ್. ಶೆಟ್ಟಿ, ನ್ಯಾಯವಾದಿ ಬೈಕಾಡಿ ಸುಪ್ರಸಾದ್ ಶೆಟ್ಟಿ ವೇದಿಕೆಯಲ್ಲಿದ್ದರು.
ಉಡುಪಿ ಗ್ರಾಮೀಣ ಬಂಟರ ಸಂಘದ ಕಾರ್ಯದರ್ಶಿ ವಿಜಿತ್ ಶೆಟ್ಟಿ ಸ್ವಾಗತಿಸಿದರು. ಖಜಾಂಚಿ ರಂಜಿನಿ ಹೆಗ್ಡೆ ವಂದಿಸಿದರು. ಪ್ರೊ. ಸುಧೀರ್ ರಾಜ್ ನಿರೂಪಿಸಿದರು. ಬಳಿಕ ಆಟಿದ ಊಟದ ಕೂಟ ನಡೆಯಿತು.