ತುಳುನಾಡು ಅದೆಷ್ಟೋ ಪವಿತ್ರ ದೈವ ದೇವಾಲಯಗಳ ಪುಣ್ಯಭೂಮಿ. ಅವುಗಳಲ್ಲಿ ಎರಡು ಅವಿಸ್ಮರಣೀಯ ದೇವಾಲಯಗಳನ್ನು ಇಲ್ಲಿ ಪ್ರಸ್ತಾವಿಸಲೇಬೇಕು. ಹಿರಿಯರ ನುಡಿಯಂತೆ ಹಿತ್ತಿಲಗಿಡ ಮದ್ದಲ್ಲ ಎಂಬಂತೆ, ಮೇಲೆ ಸೂಚಿಸಿದ ಪುಣ್ಯ ಸ್ಥಳಗಳನ್ನು ಯಾಕೋ ಜಾಣ ಮರೆವಿನಂತೆ ಮರೆತಂತಿದೆ.
ಪ್ರತಿನಿತ್ಯ ಭಕ್ತರ ಕೋಟಿಗಟ್ಟಲೆ ಕಾಣಿಕೆ ಹಣ ಹರಿದು ಬರುವ ಶ್ರೀಮಂತ ದೇವಾಲಯಗಳಿಗೆ ಪ್ರತಿವರ್ಷ ಹೋಗಿ ಹಣ ಸುರಿದು ಅಲ್ಲಿನ ಅನ್ನಪ್ರಸಾದಕ್ಕೆ ತಾಸುಗಟ್ಟಲೆ ಕ್ಯೂ ನಿಂತು ಉಂಡವರಾಗಿದ್ದೇವೆ. ಆದರೆ ಕುಂದಾಪುರ ತಾಲೂಕಿನ ಸಿದ್ದಾಪುರ ಸಮೀಪದಲ್ಲಿ ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರಿ ಕಮಲಶಿಲೆ ಎಂಬ ಪುರಾತನ ದೇವಾಲಯವಿದೆ. ಇಲ್ಲಿ ಪ್ರತಿದಿನ ಮಧ್ಯಾಹ್ನ 12.30 ರಿಂದ 3ರ ವರೆಗೆ ಹಾಗೂ ರಾತ್ರಿ 8ರಿಂದ 10 ಗಂಟೆಯ ವರೆಗೆ ಬರುವ ಭಕ್ತರೆಲ್ಲರಿಗೂ ಮೃಷ್ಟಾನ್ನ ಭೋಜನ ಬಡಿಸುತ್ತಾರೆ. ಮೃಷ್ಟಾನ್ನ ಭೋಜನ ಎನ್ನುವುದಕ್ಕಿಂತಲೂ ಷಡ್ರಸ ಭೋಜನ ಎನ್ನುವುದು ಉತ್ತಮ. ಆರೋಗ್ಯ ಶಾಸ್ತ್ರ ವಿಧಿಯಂತೆ ಊಟದಲ್ಲಿ ಉಪ್ಪು, ಹುಳಿ, ಖಾರ, ಸಿಹಿ, ಕಹಿ, ಚೊಗರುಗಳೆಂಬ ಆರು ಬಗೆಯೂ ಇಲ್ಲಿನ ಊಟದಲ್ಲಿದೆ. ಆ ಕಮಲಶಿಲೆಯ ತಾಯಿ ತನ್ನಲ್ಲಿಗೆ ಬರುವ ಭಕ್ತರೆಲ್ಲರೂ ತಾನು ಹೆತ್ತ ಮಕ್ಕಳೆಂದು ಹೊಟ್ಟೆ ತುಂಬಿಸಿ ತನು ಮನವನ್ನು ತಣಿಸುವುದರೊಂದಿಗೆ ದೀರ್ಘಾಯುಷ್ಯವನ್ನು ಬಯಸುತ್ತಾಳೆ ಎಂಬ ನಂಬಿಕೆ ಇಲ್ಲಿದೆ. ಚುಟುಕಾಗಿ ಹೇಳಬೇಕೆಂದರೆ ಇಲ್ಲಿ ಹೆತ್ತ ತಾಯಿಯಂತೆ ಸದಾ ನಗುಮುಖದಿಂದ ಉಣ ಬಡಿಸುವ ಮಾತೆಯರ ರೀತಿಯನ್ನು ಅನುಭವಿಸಿಯೇ ತೀರಬೇಕು. 3 ಸಾರಿ ಅನ್ನ, ಎರಡು ಬಗೆ ಪಾಯಸ, ಒಂದು ಸಿಹಿ, ಪಲ್ಯ, ಸಾಂಬಾರು ಹಲವು ಬಗೆಯಲ್ಲಿವೆ. ನಮಗೆ ಕೇರಳದ ಓಣಂ ಸದ್ಯ ಉಂಡ ಅನುಭವ. ಬಾಳೆ ಎಲೆ ಹಾಕಿ ಟೇಬಲ್ಲಿನ ಮೇಲೆ ಊಟ. ರಾತ್ರಿ ತಂಗುವವರಿಗೆ ಉತ್ತಮ ವಸತಿ ಗೃಹಗಳಿವೆ. ಹೊರಗೆ ವಿಶಾಲವಾದ ಶೌಚಾಲಯವಿದೆ.
ಶ್ರೀ ಕ್ಷೇತ್ರದ ಸಮೀಪದಲ್ಲಿ ಕುಬ್ಜಾ ನದಿ ಹರಿಯುತ್ತದೆ. ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರಿ ಇಲ್ಲಿ ಲಿಂಗರೂಪದಲ್ಲಿ ಅವತರಿಸಿರುವುದು ವಿಶೇಷ ಮಾತ್ರವಲ್ಲ, ತನ್ನ ಉಗ್ರರೂಪಕ್ಕೆ ಶಾಪಗೊಂಡ ನದಿ ಕುಬ್ಜೆಯಾಗಿ ಹರಿದು ಪ್ರತಿ ವರ್ಷಕೊಮ್ಮೆ ಶ್ರೀ ದುರ್ಗೆಯ ಗರ್ಭಗುಡಿ ಪ್ರವೇಶಿಸಿ ದೇವಿಯ ಪಾದ ತೊಳೆಯುತ್ತಾಳೆಂಬ ನಂಬಿಕೆ ಇದೆ. ಅದು ಸತ್ಯವೆಂಬಂತೆ ಕಳೆದ ಜುಲೈ 5 ರಂದು ನದಿ ಉಕ್ಕಿ ಹರಿದು ದೇವಿ ವಿಗ್ರಹದ ಪಾದ ತೊಳೆದುದು ಮಾಧ್ಯಮದಲ್ಲಿ ಸುದ್ದಿಯಾಗಿದೆ. ಕ್ಷೇತ್ರದಿಂದ ಒಂದೆರಡು ಕಿಲೋಮೀಟರ್ ದೂರದ ಎತ್ತರದ ಗುಡ್ಡದಲ್ಲಿ ಸುಪಾಶ್ರ್ವ ಮುನಿಯು ತಪಸ್ಸು ಮಾಡಿದ ಗುಹೆ ಇದೆ. ಅದರೊಳಗೆ ಅರ್ಧ ಕಿಲೋಮೀಟರ್ ಇಳಿದು ಹೋದರೆ ಅದರಲ್ಲಿ ವಿವಿಧ ದೈವ ದೇವರ ವಿಗ್ರಹಗಳಿವೆ. ಅಲ್ಲಿ ಕದಿರೆಯ ಜೋಗಿ (ಪುರುಷ) ವಂಶದವರು ಪೂಜೆ ಮಾಡುತ್ತಿರುವುದು ವಿಶೇಷ. ಇಲ್ಲಿ ಚಿಂತಿಸಬೇಕಾದ ಅಂಶವೆಂದರೆ, ಅಷ್ಟೇನೂ ಆದಾಯ ಹರಿದು ಬಾರದೆ, ಹಿಂದಿನ ದರಗಳಲ್ಲೇ ಹೆಚ್ಚಿನ ಸೇವೆಗಳನ್ನು ಮಾಡಿ ಇಷ್ಟೊಂದು ಉತ್ತಮ ರೀತಿಯಲ್ಲಿ ಬರುವ ಭಕ್ತರನ್ನು ಉಪಚರಿಸಿ ಕಳುಹಿಸುವುದು ಹೇಗೆ? ಅಲ್ಲಿನ ಹಿರಿಯರಲ್ಲಿ ವಿಚಾರಿಸಿದಾಗ, ಈ ತನಕ ತಾಯಿ ನಡೆಸಿದ್ದಾಳೆ. ಹೆಸರು, ಬಿರುದು ಬಯಸದ ನೈಜ ಭಕ್ತರ ಒಂದಷ್ಟು ಹಣವು ಗುಪ್ತಗಾಮಿನಿಯಂತೆ ಹರಿದು ಬರುತ್ತಿರುವುದೇ ಪವಾಡ ಸತ್ಯ. ಇದಲ್ಲವೇ ನಿಜವಾದ ಸತ್ಯ ಧರ್ಮದ ನೆಲೆ. ನಮ್ಮ ಶ್ರೀಮಂತ ದೇವಾಲಯಗಳ ಧರ್ಮದರ್ಶಿಗಳು ಇಲ್ಲಿಗೆ ಒಮ್ಮೆ ಭೇಟಿ ನೀಡಿದರೆ ತಮ್ಮಲ್ಲೂ ಬದಲಾವಣೆಯ ಪರ್ವ ಆರಂಭ ಆಗಬಹುದೇನೋ?
ನಾನಿಲ್ಲಿ ಸೂಚಿಸಿದ ಮತ್ತೊಂದು ದೇವಾಲಯ ತೌಳವ ಭೂಮಿಯ ಹೃದಯ ಭಾಗದಿಂದ ಹಿಮಗಿರಿಯಂತೆ ಎದ್ದು ನಿಂತ ಬಂಟ್ವಾಳ ತಾಲೂಕಿನಲ್ಲಿರುವ ಶ್ರೀ ಕಾರಿಂಜೇಶ್ವರ ದೇವಾಲಯ. ಗಿರಿ ಶಿಖರದ ಮೇಲೆ ಆಸೀನವಾಗಿ ಸುತ್ತಲೂ ತನ್ನ ತೌಳವ ನೆಲವನ್ನು ವೀಕ್ಷಿಸುತ್ತಿರುವ ಶ್ರೀ ಕಾರಿಂಜೇಶ್ವರನ ಪ್ರಕೃತಿ ನೋಟವನ್ನು ನೋಡಿಯೇ ಸವಿಯಬೇಕು. ಆಲಯದ ನಾಲ್ಕೂ ಬದಿಯೂ ದೊಡ್ಡ ಕಾಡು. ತುತ್ತ ತುದಿಯಲ್ಲಿ ಒಂದೆರಡು ಎಕ್ರೆ ಪ್ರದೇಶದ ಸಮತಟ್ಟಿನಲ್ಲಿ ಕಾರಿಂಜೇಶ್ವರ ದೇವಾಲಯವಿದೆ. ಗಿರಿ ಏರಲು ಪಶ್ಚಿಮ ಭಾಗದಿಂದ ಕಲ್ಲಿನ ಸಾವಿರಾರು ಮೆಟ್ಟಿಲುಗಳು. ಅದರ ಬದಿಯ ತಡೆ ಗೋಡೆಯಲ್ಲಿ ಹಕ್ಕಿಗಳ ಇಂಚರದೊಂದಿಗೆ ಅದೆಷ್ಟೋ ಕುಟುಂಬ ಸಮೇತರಾಗಿ ನಮ್ಮನ್ನು ಸ್ವಾಗತಿಸಲು ನಿಂತ ವಾನರಸೇನೆ. ಆದರೆ ಯಾರಿಗೂ ಕೇಡು ಮಾಡದೆ ನಾವು ಕೊಟ್ಟ ಆಹಾರವನ್ನು ಹಂಚಿ ತಿಂದು ನಮಗೆ ಶುಭ ಕೋರುವುದನ್ನು ಕಾಣಬಹುದು. ಗತಕಾಲದಲ್ಲಿ ಋಷಿ ಮುನಿಗಳು ತಪಸ್ಸು ಮಾಡಿದ ಸ್ಥಳಗಲೂ ಇವೆ. ದೇವಾಲಯದ ಸುತ್ತಲಿನ ಅಂಗಣದಲ್ಲಿ ನಿಂತು ನಾಲ್ಕು ದಿಕ್ಕುಗಳಲ್ಲಿ ತೌಳವ ತಾಯಿಯ ಹಚ್ಚ ಹಸುರಾದ ವಿಹಂಗಮ ನೋಟವನ್ನು ಸವಿಯುವುದೇ ಹಬ್ಬ.
ನಮ್ಮ ರಾಜ್ಯಗಳ, ದೇಶದ ಅದೆಷ್ಟೋ ಇಂಥಹ ಯಾತ್ರಾ ಸ್ಥಳವನ್ನು ಕೋಟಿಗಟ್ಟಲೆ ಖರ್ಚು ಮಾಡಿ ದೊಡ್ಡ ದೊಡ್ಡ ಪ್ರವಾಸಿ ತಾಣಗಳಾಗಿ ಪರಿವರ್ತನೆ ಮಾಡಿರುವುದನ್ನು ಕಾಣುತ್ತೇವೆ. ಆದರೆ ಯಾಕೋ ಏನೋ ಈ ನೆಲೆ ಅಭಿವೃದ್ಧಿ ವಂಚಿತವಾಗಿರುವುದು ಸ್ಪಷ್ಟ. ಆದರೆ ಒಂದು ಸಮಾಧಾನವೂ ಇಲ್ಲಿದೆ. ಕಾರಿಂಜೇಶ್ವರನಿಗೆ ದಾನ ಕೊಟ್ಟ ತೃಪ್ತಿ ಹೊರತು ದಾನ ಪಡೆದ ಋಣದಲ್ಲಿ ಇರುವುದನ್ನು ಇಷ್ಟಪಡುವುದಿಲ್ಲವಾದ್ದರಿಂದ ಪೂರ್ವ ನೆಲೆಯೇ ಪ್ರಕೃತಿಗೆ ಪೂರಕವಾಗಿರಬಹುದು. ತುಳುನಾಡಿನ ಪ್ರವಾಸಿ ಭಕ್ತರು ಚಾಮುಂಡಿ ಪರ್ವತ, ವೆಂಕಟಗಿರಿ, ಶಬರಿಗಿರಿ, ಬದರಿ, ಹೆಚ್ಚೇಕೆ ಅಮರನಾಥ ಶಿಖರ ತಾಣವನ್ನು ಏರಿದವರೂ ಸಮೇತ ಈ ಕ್ಷೇತ್ರಕ್ಕೆ ಹೋಗಿಲ್ಲ ಎಂದರೆ ಜಾಣ ಮರೆವೋ ಅಥವಾ ದೂರದ ಬೆಟ್ಟ ನುಣ್ಣಗೆ ಎಂಬ ಭಾವನೆಯೋ? ಅಂತಿಮವಾಗಿ ಎಲ್ಲರಲ್ಲೂ ವಿನಂತಿಸುವುದೇನೆಂದರೆ, ಒಮ್ಮೆಯಾದರೂ ಶ್ರೀ ಕಮಲಶಿಲೆಯ ಸವಿಯೂಟ ಹಾಗೂ ಶ್ರೀ ಕಾರಿಂಜೇಶ್ವರನ ಸವಿನೋಟವನ್ನು ಸವಿಯಲೇಬೇಕು.
ವಿಶ್ವನಾಥ ರೈ ಕಡಾರು