ಅಶೋಕ ಇದ್ದಲ್ಲಿ ಶೋಕವಿಲ್ಲ. ಈ ವ್ಯಕ್ತಿಯ ಹೆಸರಿನಲ್ಲೇ ಸಾಮರಸ್ಯ ಅಡಗಿದೆ ಅದಕ್ಕೆ ಇವರ ವ್ಯಕ್ತಿತ್ವವೂ ಪೂರಕವಾಗಿದೆ. ಲೆಕ್ಕ ಹಾಕಿದರೆ ನಾನಿವರನ್ನು ಮುಖತಃ ಭೇಟಿಯಾಗಿದ್ದು 4-5 ಸಲವಷ್ಟೇ. ಮೊದಲ ಬಾರಿಗೆ ನೋಡಿದಾಗಲೇ ಇವರ ವರ್ಚಸ್ಸಿಗೆ, ಕ್ಷಾತ್ರ ತೇಜಸ್ಸಿಗೆ, ನಿಷ್ಕಲ್ಮಶ ನಗುವಿಗೆ, ಎಲ್ಲಕ್ಕಿಂತ ಮಿಗಿಲಾಗಿ ಅಹಂಕಾರವೇ ಇಲ್ಲದ ಸರಳತೆಗೆ ಅಭಿಮಾನಿಯಾಗಿದ್ದೆ. ಅಂತಃಕರಣದಲ್ಲೊಂದು ಅಶೋಕಣ್ಣನ ಕುರಿತಾಗಿ ಅಪರಿಮಿತ ಆಸಕ್ತಿ ಪುಟಿದೆದ್ದಿತ್ತು. ಮೈರ್ಮಾಡಿ ಅಶೋಕ್ ಶೆಟ್ರು ಅಪರಂಜಿ ಅಂತಹ ವ್ಯಕ್ತಿ ಎಂದು ಅದೆಷ್ಟೋ ಜನರ ಬಾಯಲ್ಲಿ ಕೇಳಿದ ಮಾತು ಇವರ ಮನೆಯಲ್ಲಿ ಕುಳಿತು ಇವರೊಡನೆ ಮಾತನಾಡುವಾಗ ದಿಟವೆನಿಸಿತು. ಎಂಥವರಿಗೂ ಕೂಡ ಇವರನ್ನು ವಿರೋಧಿಸಬೇಕು ಇವರ ಅಮೂಲ್ಯವಾದ ಸ್ನೇಹವನ್ನು ಕೈಚೆಲ್ಲಬೇಕೆನ್ನುವ ಬಯಕೆ ಮೂಡುವುದಿಲ್ಲ, ಇಂತಹ ಒಬ್ಬ ವ್ಯಕ್ತಿ ನಮ್ಮ ಜೊತೆ ಇದ್ದರೆ ಸಾಕು ಎನ್ನುವ ಅನುರಾಗ ಅರಳುತ್ತೆ ಇವರನ್ನು ಅಪ್ಪಿ ಹಿಡಿಯಬೇಕೆನಿಸುತ್ತೆ.

ಮಾಸ್ಟ್ರೇ ನಿಮ್ಮೂರು ಯಾವುದು ಅಂತ ನಾನು ಕರ್ತವ್ಯ ನಿರ್ವಹಿಸುವ ಕಾರ್ಕಳ ತಾಲೂಕಿನಲ್ಲಿ ಅದೆಷ್ಟೋ ಜನ ಕೇಳಿದಾಗ ಬ್ರಹ್ಮಾವರ ಸಮೀಪ ನೀಲಾವರದ ಎಳ್ಳಂಪಳ್ಳಿ ಅಂದಾಗ ಮರುಕ್ಷಣ ಅವರು ಕೇಳುವ ಪ್ರಶ್ನೆ ಅಲ್ಲೇ ಹತ್ತಿರದ ಕರ್ಜೆ ಅಶೋಕ್ ಶೆಟ್ರು ಗೊತ್ತಾ ಅಂತ !!! ಅವರ ಕೈ ಕೆಳಗೆ ಕೆಲಸ ಮಾಡಿದ್ವಿ ತುಂಬಾ ಒಳ್ಳೆಯ ಮನುಷ್ಯ ಅಂತಹ ಸಾಹುಕಾರರು ಅಪರೂಪ ಅಂತ. ನನಗೆ ಆವಾಗ ನೆನಪಾಗಿದ್ದು ಪ್ರಜೆಗಳನ್ನು ತನ್ನ ಮಕ್ಕಳಿದ್ದಂತೆ ಅಂತ ಕರೆದ ಈ ದೇಶ ಕಂಡ ಏಕೈಕ ಸಾಮ್ರಾಟ ಅಶೋಕನಾದರೆ ಅದೇ ಹೆಸರಿನ ಈ ಅಶೋಕಣ್ಣನು ಕೂಡ ಅದೇ ವ್ಯಕ್ತಿತ್ವದವರು ಅಲ್ವಾ ಅಂತ. ಇವರ ಪರಿಚಯ ಬಹಳಷ್ಟು ನನಗಿದೆ ನನ್ನ ಹೆಸರಿನ ನೆನಪು ಕೂಡ ಇವರಿಗಿದೆ ಎನ್ನುವುದೇ ನನ್ನ ಜೀವನದ ಬಹುದೊಡ್ಡ ಹೆಗ್ಗಳಿಕೆ.
ರಾಜಕೀಯದ ವಿರೋಧಿಗಳು ಎಲ್ಲರಿಗೂ ಇರುತ್ತಾರೆ. ಆದರೆ ಯಾವ ಪಕ್ಷದವರು ಕೂಡ ಅಶೋಕಣ್ಣನನ್ನು ದೂಷಿಸುವುದನ್ನು ನಾನು ಕೇಳಿಲ್ಲ. ನೋಡಿಲ್ಲ. ಬುದ್ಧಮೆಟ್ಟಿದ ಮೆಚ್ಚಿದ ಪುಣ್ಯ ಭೂಮಿಯಲ್ಲಿ ಅಜಾತಶತ್ರು ಎನ್ನುವ ಅರಸೊತ್ತಿಗೆ ಮೈರ್ಮಾಡಿ ಅಶೋಕ್ ಶೆಟ್ರಿಗೆ ಸಂದಾಯವಾಗಲೇಬೇಕು. ಶ್ರೀಯುತರ ಸಂಪರ್ಕವೇ ನನ್ನಂತ ಅದೆಷ್ಟೋ ಜನರಿಗೆ ಸಂಭ್ರಮ ಅದಕ್ಕೆ ಪೂರಕವೆಂಬಂತೆ ಉಡುಪಿ ತಾಲೂಕು ವ್ಯವಸಾಯ ಉತ್ಪನ್ನ ಸಹಕಾರ ಮಾರಾಟ ಸಂಘ ನಿಯಮಿತ ಇದರ ಸತತ ಮೂರನೇ ಬಾರಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಅಶೋಕಣ್ಣನಿಗೆ ಮನದಾಳದ ಅಭಿನಂದನೆಗಳು ಅಭಿವಂದನೆಗಳು.
ಬರಹ : ಎಳ್ಳಂಪಳ್ಳಿ ಸಂತೋಷ್ ಶೆಟ್ಟಿ











































































































