ವಿದ್ಯಾಗಿರಿ: ಶಿಕ್ಷಣ ಕ್ಷೇತ್ರದಲ್ಲಿ ನಾಟಕ ಮತ್ತು ಕಲೆ ಕೇವಲ ಪಠ್ಯೇತರ ಚಟುವಟಿಕೆಗಳಲ್ಲ. ಬದಲಾಗಿ ಅವು ಸೃಜನಶೀಲತೆ, ಬೌದ್ಧಿಕ ಬೆಳವಣಿಗೆಯನ್ನು ಅಭಿವೃದ್ಧಿ ಪಡಿಸಲಿರುವ ಪ್ರಬಲ ಸಾಧನಗಳಾಗಿವೆ ಎಂದು ಆಳ್ವಾಸ್ ರಂಗ ಅಧ್ಯಯನ ಕೇಂದ್ರದ ನಿರ್ದೇಶಕ ಜೀವನ್ರಾಮ್ ಸುಳ್ಯ ತಿಳಿಸಿದರು. ಆಳ್ವಾಸ್ ಶಿಕ್ಷಣ ಮಹಾವಿದ್ಯಾಲಯ ಶಿವರಾಮ ಕಾರಂತ ಸಭಾಭವನದಲ್ಲಿ ಹಮ್ಮಿಕೊಂಡ ‘ಶಿಕ್ಷಣದಲ್ಲಿ ಕಲೆ ಹಾಗೂ ನಾಟಕದ ಪಾತ್ರ’ ದ ಕುರಿತು ಕರ್ಯಗಾರದಲ್ಲಿ ಮಾತನಾಡಿದರು.
ಶಿಕ್ಷಣದಲ್ಲಿ ಕಲೆಯನ್ನು ರೂಢಿಸಿಕೊಳ್ಳುವುದರಿಂದ ವಿದ್ಯಾರ್ಥಿಗಳನ್ನು ಸೃಜನಶೀಲರನ್ನಾಗಿ ಮಾಡಲು ಸಾಧ್ಯವಾಗುತ್ತದೆ. ಇದರಿಂದ ವಿದ್ಯಾರ್ಥಿಗಳಲ್ಲಿ ಸ್ವಯಂ ಅಭಿವ್ಯಕ್ತಿ ಮತ್ತು ಸಂವಹನಕ್ಕಾಗಿ ಮೌಲ್ಯಯುತವಾದ ಕೌಶಲ್ಯಗಳನ್ನು ಬೆಳೆಸಿಕೊಳ್ಳಲು ಸಾಧ್ಯವಾಗುತ್ತದೆ. ಶಿಕ್ಷಣದಲ್ಲಿ ನೃತ್ಯ, ಸಂಗೀತ, ನಾಟಕ, ಸೃಜನಶೀಲ ಬರವಣಿಗೆ, ರಂಗಭೂಮಿ ಇತ್ಯಾದಿಗಳನ್ನು ಒಳಗೊಂಡಿರಬೇಕು. ನಾಟಕಗಳು ನಮ್ಮ ಸುತ್ತಮುತ್ತಲಿನ ಸುಂದರ ದೃಶ್ಯಗಳನ್ನು ನಮ್ಮ ಕಣ್ಣ ಮುಂದೆ ಸೃಷ್ಟಿಸುವುದರಿಂದ ವಿದ್ಯಾರ್ಥಿಗಳಿಗೆ ಬಹುಬೇಗನೆ ಅರ್ಥೈಸಿಕೊಳ್ಳಲು ಸಾಧ್ಯವಾಗುತ್ತದೆ.
ಕಲೆಗಳು ವಿದ್ಯಾರ್ಥಿಗಳ ಬೌದ್ಧಿಕ ಮಟ್ಟವನ್ನು ಸುಧಾರಿಸಲು ಸಹಾಯಕ. ಪ್ರದರ್ಶನದ ಕಲೆಗಳು ಮಕ್ಕಳಲ್ಲಿ ತಮ್ಮ ಭಾವನೆ ಮತ್ತು ಕಲ್ಪನೆಗಳನ್ನು ಹಾಗೂ ತಮ್ಮದೇ ಆದ ವಿಶಿಷ್ಟ ಧ್ವನಿಗಳನ್ನು ಅಭಿವೃದ್ಧಿ ಪಡಿಸಲು ಸಹಾಯ ಮಾಡುತ್ತವೆ. ನಾಟಕ ಮತ್ತು ಕಲೆ ವಿದ್ಯಾರ್ಥಿಗಳ ಆತ್ಮವಿಶ್ವಾಸ, ಸ್ವಯಂ ಅಭಿವ್ಯಕ್ತಿ, ಸಂತೋಷವನ್ನು ಕಂಡುಕೊಳ್ಳಲು ವಿಭಿನ್ನ ರೀತಿಯಲ್ಲಿ ಸಹಕರಿಸುತ್ತವೆ. ನಾಟಕ ಮತ್ತು ಕಲೆಯ ಮೂಲಕ ನಾವು ಕಲಿಯುವವರಿಗೆ ಇತರ ವಿಷಯಗಳನ್ನು ಹೆಚ್ಚು ಆಸಕ್ತಿಕರಗೊಳಿಸಬಹುದು. ಬೋಧನೆಯಲ್ಲಿ ವಿವಿಧ ವಿಷಯಗಳಲ್ಲಿ ಕಲೆ ಮತ್ತು ನಾಟಕಗಳನ್ನು ಬಳಸಬಹುದು. ಇದು ತರಗತಿಯಲ್ಲಿ ಸಕಾರಾತ್ಮಕ ಕಲಿಕೆಗೆ ದಾರಿ ಮಾಡಿಕೊಡುತ್ತದೆ.
ನಮ್ಮ ಜೀವನದಲ್ಲಿ ಎಷ್ಟೇ ಪ್ರಶಂಸೆ, ಹೊಗಳಿಕೆಯನ್ನು ಗಳಿಸಿದರು ಕೂಡ ಎತ್ತರದ ಸ್ಥಾನದಲ್ಲಿದ್ದರೂ ಕೂಡ ನಾವು ವಿದ್ಯಾರ್ಥಿಗಳಾಗಿಯೇ ಇದ್ದು, ಹೊಸ ಹೊಸ ವಿಷಯಗಳನ್ನು, ಅನುಭವಗಳನ್ನು ಪಡೆದುಕೊಳ್ಳುತ್ತಾ ಹೋಗಬೇಕು. ಶಿಕ್ಷಕರಾದವರು ಉತ್ಸಾಹಿಯಾಗಿರಬೇಕು. ವಿದ್ಯಾರ್ಥಿಗಳಿಗೆ ಹೊಸ ವಿಚಾರಗಳನ್ನು ನೀಡುವವರಾಗಿರಬೇಕು. ಶಿಕ್ಷಕನಾದವನು ಉತ್ಸಾಹದ ಚಿಲುಮೆಯಾಗಿರಬೇಕು, ಸದಾ ಏನೋ ಹೊಸತನ್ನು ಕಲಿಯಲು ಹಾತೊರೆಯುತ್ತಿರಬೇಕು ಎಂದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, ಶಿಕ್ಷಕರಾದವರು ಕಲೆಗಾರರು, ನಾಟಕಗಾರರು ಆಗಿರಬೇಕು. ಯಾವುದೇ ವಿಷಯವನ್ನು ಕಲೆ ಮತ್ತು ನಾಟಕದ ಮೂಲಕ ಕಲಿಸುವುದರಿಂದ ವಿದ್ಯಾರ್ಥಿಗಳಿಗೆ ಬಹುಬೇಗನೆ ವಿಷಯವನ್ನು ಮನ ಮುಟ್ಟವಂತೆ ತಿಳಿಸಲು ಸಾಧ್ಯ ಎಂದರು. ಕಾರ್ಯಕ್ರಮದಲ್ಲಿ ಆಳ್ವಾಸ್ ಕಾಲೇಜಿನ (ಸ್ವಾಯತ್ತ) ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ, ಬಿ.ಎಡ್ ಕಾಲೇಜಿನ ಪ್ರಾಂಶುಪಾಲ ಡಾ. ಶಂಕರಮೂರ್ತಿ ಹೆಚ್. ಕೆ ಮತ್ತು ಉಪನ್ಯಾಸಕ ವೃಂದದವರು ಉಪಸ್ಥಿತರಿದ್ದರು. ಜಾನೆಟ್ ಸ್ವಾಗತಿಸಿ, ಅಪೂರ್ವ ವಂದಿಸಿ, ಕಾವ್ಯ ಕೆ ಕಾರ್ಯಕ್ರಮ ನಿರೂಪಿಸಿದರು.