ತುಳು-ಕನ್ನಡಿಗರು ಮುಂಬಯಿ ಮಹಾನಗರಕ್ಕೆ ಕರ್ನಾಟಕದ ಮೂಲೆ ಮೂಲೆಗಳಿಂದ ವಲಸೆ ಬಂದು ತಮ್ಮ ನೆಲೆಯನ್ನು ಕಂಡುಕೊಂಡಿದ್ದಾರೆ. ಅವರು ತಮ್ಮ ಮೆಚ್ಚಿನ ತಾಣವಾಗಿರುವ ಮುಂಬಯಿಗೆ ಬೇರೆ ಬೇರೆ ಕಾರಣಗಳಿಂದ ಬಂದವರು. ಕೇವಲ ಹೊಟ್ಟೆಪಾಡಿಗಾಗಿ ದುಡಿಯುತ್ತಾ, ಹಣಗಳಿಕೆಯೊಂದೇ ತಮ್ಮ ಉದ್ದೇಶವೆಂದು ತಿಳಿಯದೆ ನಾಡು, ನುಡಿ ಸಂಸ್ಕೃತೀಯ ಉಳಿವಿಗಾಗಿ ಶ್ರಮಿಸಿದರು. ಈ ನಗರದಲ್ಲಿರುವ ತುಳು-ಕನ್ನಡಿಗರು ಅದಮ್ಯ ಜೀವನೋತ್ಸಾಹವನ್ನು ಹೊಂದಿದವರು. ಅವರ ಕ್ರಿಯಾಶೀಲತೆ, ಕಾರ್ಯಕ್ಷಮತೆ, ನಿಷ್ಠೆ, ಪರಸ್ಪರ ಸಹಕರಿಸುವ, ಪ್ರೋತ್ಸಾಹಿಸುವ ಗುಣಕ್ಕೆ ಬೆರಗಾಗಲೇ ಬೇಕು. ಇಲ್ಲಿ ನಮ್ಮವರು ಬೇರೆ ಬೇರೆ ಕ್ಷೇತ್ರದಲ್ಲಿ ಮಿಂಚಲು ಅವರ ಶ್ರಮ ಸಂಸ್ಕ್ರತಿಯೇ ಕಾರಣ. ಮುಂಬಯಿ ಮಹಾನಗರದಲ್ಲಿ ತುಳು ಕನ್ನಡಿಗರು ಸಾಂಘಕಿವಾಗಿ ಮಾಡಿದ ಸಾಧನೆ ಅಪಾರವಾದುದು.
ಸಮಾನ ಮನಸ್ಕರು ಸೇರಿ ಅಂದು ಹುಟ್ಟು ಹಾಕಿದ ಸಂಘ ಸಂಸ್ಥೆಗಳ ಮುಖ್ಯ ಉದ್ದೇಶ ಪರಿಚಯ, ಸ್ನೇಹ ಸೌಹಾರ್ದತೆಗಳು ಬೆಳೆಯುವುದೇ ಆಗಿತ್ತು. ಜಾತಿ ಮತಕ್ಕಿಂತ ಮೊದಲು ಭಾಷೆ, ನಮ್ಮ ನೆಲದ ಅಭಿಮಾನ ಮನುಷ್ಯರನ್ನು ಹತ್ತಿರ ತರಿಸುತ್ತದೆ. ನಂತರದ ದಿನಗಳಲ್ಲಿ ಈ ಸಂಸ್ಥೆಗಳ ಉದ್ದೇಶ, ವ್ಯಾಪ್ತಿ ವಿಸ್ತರಿಸುತ್ತಾ ಹೋಯಿತು. ಹೀಗೆ ತಲೆ ಎತ್ತಿದ ಗೋರೆಗಾಂವ್ ಕರ್ನಾಟಕ ಸಂಘ ಅನೇಕ ದೃಷ್ಟಿಯಿಂದ ನಮ್ಮ ಗಮನ ಸೆಳೆಯುತ್ತದೆ. ಗೋರೆಗಾಂವ್ ಕರ್ನಾಟಕ ಸಂಘ ನಡೆದು ಬಂದ ಹಾದಿಯ ಅವಲೋಕನವನ್ನು ಮುಂಬಯಿ ವಿಶ್ವವಿದ್ಯಾಲಯ, ಕನ್ನಡ ವಿಭಾಗದ ಸಂಶೋಧನ ವಿದ್ಯಾರ್ಥಿ ಸುರೇಖಾ ಹರಿಪ್ರಸಾದ್ ಶೆಟ್ಟಿ ಅವರು ತನ್ನ ಸ್ನಾತಕೋತ್ತರ ಅಧ್ಯಯನದ ಶೋಧ ಸಂಪ್ರಂಬಂಧವಾಗಿ ಅಧ್ಯಯನ ನಡೆಸಿದ್ದಾರೆ.
ಅವರು ಈ ಶೋಧ ಸಂಪ್ರಬಂಧವನ್ನು ಮುಂಬಯಿ ವಿಶ್ವವಿದ್ಯಾಲಯ, ಕನ್ನಡ ವಿಭಾಗದ ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರಾಗಿರುವ ಡಾ.ಜಿ.ಎನ್.ಉಪಾಧ್ಯ ಅವರ ಮಾರ್ಗದರ್ಶನದಲ್ಲಿ ಸಿದ್ಧಗೊಳಿಸಿದ್ದಾರೆ. ಅದು ಈಗ ಕೃತಿ ರೂಪದಲ್ಲಿ ಬೆಳಕು ಕಂಡಿರುವುದು ಸಂತೋಷದ ಸಂಗತಿ. ಆಗ ಗೋರೆಗಾಂವ್ ಕರ್ನಾಟಕ ಸಂಘದ ಅಧ್ಯಕ್ಷರಾಗಿದ್ದ ನಿತ್ಯಾನಂದ ಕೋಟ್ಯಾನ್ ಅವರ ಮುತುವರ್ಜಿಯಿಂದ ಈ ಕೃತಿ ಸುಂದರವಾಗಿ ಪ್ರಕಟಗೊಂಡಿದೆ. ಸುರೇಖಾ ಅವರು ಸುಮಾರು ಹತ್ತು ಅಧ್ಯಾಯಗಳಲ್ಲಿ ಶಿಸ್ತುಬದ್ದವಾಗಿ ಅಧ್ಯಯನವನ್ನು ನಡೆಸಿದ್ದು, ಈ ಸಂಸ್ಥೆಯ ಬಗ್ಗೆ ತಿಳಿದುಕೊಳ್ಳಬಯಸುವವರಿಗೆ ಮಾರ್ಗದರ್ಶಿ ಕೃತಿಯಾಗಿ ರೂಪುಗೊಂಡಿದೆ. ಡಾ.ಭರತ್ ಕುಮಾರ್ ಪೊಲಿಪು ಅವರ ಮೌಲಿಕವಾದ ಮುನ್ನುಡಿಯೊಂದಿಗೆ ಮಾರ್ಗದರ್ಶಕರಾದ ಡಾ.ಜಿ.ಎನ್.ಉಪಾಧ್ಯ ಅವರು ಬೆನ್ನುಡಿಯ ಮೂಲಕ ಬೆನ್ನು ತಟ್ಟಿ ಪ್ರೋತ್ಸಾಹಿಸಿದ್ದಾರೆ. ಸಂಘದ ಸುಮಾರು ಆರು ದಶಕಗಳ ಕಾರ್ಯಚಟುವಟಿಕೆಗಳ ಅವಲೋಕನವೇ ಈ ಕೃತಿಯಾಗಿದೆ. ಗೋರೆಗಾಂವ್ ಕರ್ನಾಟಕ ಸಂಘದ ಹುಟ್ಟು ಮತ್ತು ಬೆಳವಣಿಗೆಯ ಕುರಿತು ಮಾಹಿತಿಯನ್ನು ನೀಡುವ ಲೇಖಕರು ಆ ಸಂಸ್ಥೆಯ ಉಪ ವಿಭಾಗಗಳು, ಅವುಗಳ ಕೆಲಸ ಕಾರ್ಯಗಳು, ಸಾಧಿಸಿದ ಪ್ರಗತಿ ಎಲ್ಲವೂ ಇಲ್ಲಿ ದಾಖಲಿಸುವ ಪ್ರಯತ್ನವನ್ನು ಮಾಡಿದ್ದಾರೆ. ೧೯೫೮ರಲ್ಲಿ ದಿ.ಮೂರೂರು ಸಂಜೀವ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಗೋರೆಗಾಂವ್ ಕರ್ನಾಟಕ ಸಂಘದ ಸ್ಥಾಪನೆಯಾಯಿತು.
ಮುಂಬಯಿಯ ಮರಾಠಿ ಮಣ್ಣಿನಲ್ಲಿ ಕನ್ನಡ ಭಾಷೆಯನ್ನು ಅರಳಿಸಬೇಕು. ಓದಿನ ಆಸೆ ಇರುವವರಿಗೆ ಅವಕಾಶವನ್ನು ಒದಗಿಸಬೇಕು ಎನ್ನುವ ಉದ್ದೇಶದಿಂದ ಈ ಸಂಘವು ಕನ್ನಡ ಶಾಲೆಯನ್ನು ತೆರೆದಿರುವುದು ಗಮನೀಯ ಸಂಗತಿ. ಆ ಪರಿಸರದಲ್ಲಿ ಮೂರು ಕನ್ನಡ ಮಾಧ್ಯಮಿಕ ಶಾಲೆಗಳನ್ನು ಮಹಾನಗರ ಪಾಲಿಕೆಯ ಆಶ್ರಯದಲ್ಲಿ ಪ್ರಾರಂಭಿಸಿದ್ದು ಈ ಸಂಸ್ಥೆಯ ಹಿರಿಯರ ಕನ್ನಡಾಭಿಮಾನಕ್ಕೆ ಸಾಕ್ಷಿಯಾಗಿದೆ. ಅದೇ ರೀತಿ ಓದುಗರ ಓದಿನ ವಾಂಛೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ವಾಚನಾಲಯದ ಸ್ಥಾಪನೆ, ಮುಂಬಯಿ ಮಹಾನಗರದಲ್ಲಿ ಕನ್ನಡ ನಾಡಿನ ಸಂಸ್ಕೃತಿ, ಸಂಸ್ಕಾರ, ಆಚಾರ ವಿಚಾರಗಳನ್ನು ಉಳಿಸಿ ಬೆಳೆಸಬೇಕು ಎನ್ನುವ ಇಚ್ಛೆಯಿಂದ ನಾಡಹಬ್ಬ, ವಿಚಾರ ವಿಮರ್ಶೆಗಳಿಗೆ ಆದ್ಯತೆ ನೀಡುವ ವಿಚಾರ ಭಾರತಿ ಇಂತಹ ಉತ್ತಮ ಕಾರ್ಯಕ್ರಮಗಳ ಮೂಲಕ ಗಮನ ಸೆಳೆಯುತ್ತಿರುವ ಸಂಸ್ಥೆ ಗೋರೆಗಾಂವ್ ಕರ್ನಾಟಕ ಸಂಘ. ಈ ಸಂಘವು ಗ್ರಂಥಾಯನ ಎಂಬ ಉಪವಿಭಾಗದ ಮೂಲಕ ಕೆಲವು ಪುಸ್ತಕಗಳನ್ನು ಹೊರತಂದಿದ್ದು ಆ ಕೃತಿಗಳ ಸಮೀಕ್ಷೆಯೂ ಇಲ್ಲಿದೆ. ಸಾಹಿತಿ, ಚಿಂತಕ ರವಿ.ರಾ.ಅಂಚನ್ ಅವರ ಪರಿಕಲ್ಪನೆಯಲ್ಲಿ ಮೂಡಿ ಬಂದ ವಿಚಾರ ಸಮ್ಮೇಳನದ ಭಾಷಣಗಳನ್ನು ಕ್ರೋಢೀಕರಿಸಿ ಕೃತಿ ರೂಪದಲ್ಲಿ ತಂದಿರುವುದು ಶ್ಲಾಘನೀಯ ಸಂಗತಿ. ಗೋರೆಗಾಂವ್ ಕರ್ನಾಟಕ ಸಂಘದ ಇತಿಹಾಸದಲ್ಲಿಯೇ ಅಚ್ಚ ಅಳಿಯದೆ ಉಳಿಯಬಲ್ಲ ಕಾರ್ಯಕ್ರಮಗಳಲ್ಲಿ ಈ ವಿಚಾರ ಸಮ್ಮೇಳನ ಪ್ರಮುಖವಾಗಿದೆ. ಈ ವಿಚಾರ ಸಂಕಿರಣದಲ್ಲಿ ಘಟಾನುಘಟಿ ಸಾಹಿತಿಗಳು ಉಪನ್ಯಾಸವನ್ನು ನೀಡಿರುವುದು ಅಭಿಮಾನದ ಸಂಗತಿ.
“ಕನ್ನಡ ಸಂಸ್ಕೃತಿ ಎಂದಾಗ ಕೇವಲ ಮನೋರಂಜನೆ ಮಾತ್ರವಲ್ಲ, ಕನ್ನಡ ನಾಡಿನ ಜೀವನ ವಿಧಾನ, ಸಾಮಾಜಿಕ ಚಳುವಳಿಗಳು, ಸಾಹಿತ್ಯಕ ನೆಲೆಗಳು, ಪ್ರಾದೇಶಿಕವಾಗಿ ಭಾಷೆ ಸಂಸ್ಕೃತೀಯ ವೈವಿಧ್ಯತೆಗಳು, ಶರಣ, ಸಂತರ ಚಿಂತನಾಧಾರೆಗಳು ಹೀಗೆ ಸಮಗ್ರತೆಯ ಪರಿಕಲ್ಪನೆಯಲ್ಲಿ ಸಂಸ್ಕೃತಿ ದರ್ಶನವನ್ನು ರೂಪಿಸಬೇಕಾಗುತ್ತದೆ. ಗೋರೆಗಾಂವ್ ಕರ್ನಾಟಕ ಸಂಘವು ತನ್ನ ವಿಚಾರ ಭಾರತಿ ಸಮ್ಮೇಳನಗಳ ಮೂಲಕ ಇದನ್ನು ಸಾಧ್ಯವಾಗಿಸುವಲ್ಲಿ ನಿರಂತರ ಪ್ರಯತ್ನಿಸುತ್ತಿದೆ” ಎಂದು ಈ ಕೃತಿಗೆ ಮುನ್ನುಡಿ ಬರೆದಿರುವ ರಂಗತಜ್ಞ ಡಾ.ಭರತ್ ಕುಮಾರ್ ಪೊಲಿಪು ಅವರು ಹೇಳಿರುವ ಮಾತು ಸಂಘದ ಶ್ರದ್ಧೆಯ ಕಾರ್ಯಗಳಿಗೆ ನಿದರ್ಶನವಾಗಿದೆ. ಈ ಕುರಿತು ಲೇಖಕರು ವಿಸ್ತಾರವಾಗಿ ವಿಶ್ಲೇಷಿಸಿ, ತಮ್ಮ ಅಧ್ಯಯನದಲ್ಲಿ ಕಂಡುಕೊಂಡ ಸಾರಸತ್ವವನ್ನು ಸೊಗಸಾಗಿ ನಿರೂಪಿಸಿದ್ದಾರೆ.
ನಿರಂತರವಾಗಿ ಶೈಕ್ಷಣಿಕ ಪ್ರವಾಸವನ್ನು ಮಾಡುತ್ತ ಬಂದಿರುವ ಅಪರೂಪದ ಸಂಸ್ಥೆ ಎಂದರೆ ಅದು ಗೋರೆಗಾಂವ್ ಕರ್ನಾಟಕ ಸಂಘ. ನಮ್ಮ ದೇಶದ ವಿಶಾಲ ಸಂಸ್ಕೃತೀಯ ದರ್ಶನ ದೇಶದ ಉದ್ದಗಲಕ್ಕೆ ಪ್ರವಾಸ ಮಾಡುವುದರಿಂದ ಸಾಧ್ಯವಾಗುತ್ತದೆ. ಪ್ರವಾಸ ನಮ್ಮ ಮನವನ್ನು ವಿಶಾಲಗೊಳಿಸಿ, ಹೃದಯದ ವಿಕಾಸಕ್ಕೆ ರಹದಾರಿಯನ್ನು ನಿರ್ಮಿಸುವ ಸಾಧನವೂ ಹೌದು. ಪ್ರವಾಸದ ಮೂಲಕ ನಾವು ಇನ್ನೊಂದು ದೇಶದ ಇಲ್ಲವೇ ರಾಜ್ಯಗಳ ಸಾಂಸ್ಕೃತಿಕ ವೈಭವ, ಪೌರಾಣಿಕ, ಇತಿಹಾಸ, ಜ್ಞಾನವನ್ನು ಸಂಪಾದಿಸಿಕೊಳ್ಳಬಹುದು. ಈ ನಿಟ್ಟಿನಲ್ಲಿ ಈ ಸಂಘ ೧೯೯೭ರಿಂದ ಪ್ರತೀ ವರ್ಷ ದೇಶ ವಿದೇಶಗಳಿಗೆ ಶೈಕ್ಷಣಿಕ ಪ್ರವಾಸವನ್ನು ಹಮ್ಮಿಕೊಳ್ಳುತ್ತಾ ಬಂದಿರುವುದು ಅರ್ಥಪೂರ್ಣ ಎಂದು ಲೇಖಕರು ಹೇಳಿರುವ ಮಾತು ನಿಜವೇ ಆಗಿದೆ. ಅದನ್ನು ಇಂದಿನವರೆಗೂ ನಡೆಸಿಕೊಂಡು ಬರುತ್ತಿರುವ ಸಂಘದ ಬದ್ಧತೆಯೂ ಮೆಚ್ಚುವಂತದ್ದು. ಗೋರೆಗಾಂವ್ ಕರ್ನಾಟಕ ಸಂಘದ ದತ್ತಿನಿಧಿ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಾ ಬರುತ್ತಿದೆ.
ಸುಮಾರು ಇಪ್ಪತ್ತು ದತ್ತಿನಿಧಿಗಳ ಕಾರ್ಯವೈಖರಿಗಳ ಬಗ್ಗೆಯೂ ಸುರೇಖಾ ಶೆಟ್ಟಿ ಅವರು ಅಧ್ಯಯನ ನಡೆಸಿ ದಾಖಲಿಸಿದ್ದಾರೆ. ಸಂಘದೊಂದಿಗೆ ನಿಕಟ ಸಂಪರ್ಕವಿದ್ದವರು, ಜೊತೆಯಾಗಿದ್ದುಕೊಂಡು ಕೆಲಸ ಮಾಡಿದವರು, ಸಂಸ್ಥೆಯ ಏಳು ಬೀಳುಗಳನ್ನು ಕಂಡವರು ಈ ಸಂಸ್ಥೆಯ ಕುರಿತು ನೀಡಿರುವ ಕೆಲವರ ಅಭಿಪ್ರಾಯಗಳು ಇಲ್ಲಿವೆ. ಸುಮಾರು ೬೫ ವರ್ಷದ ಇತಿಹಾಸದಲ್ಲಿ ಸಂಸ್ಥೆಯೊಂದಿಗೆ ಬೆಸೆದುಕೊಂಡು ಇದ್ದವರು, ಇರುವವರು ಬಹಳಷ್ಟು ಜನರು. ಎಲ್ಲರ ಅಭಿಪ್ರಾಯಗಳನ್ನು ದಾಖಲಿಸುವುದು ಕಷ್ಟವೂ ಹೌದು. ಲೇಖಕರು ಸಂಗ್ರಹಿಸಿರುವ ಕೆಲವರ ನುಡಿಗಳು ಓದುಗರಿಗೆ ಈ ಸಂಸ್ಥೆಯ ಕುರಿತು ಮತ್ತಷ್ಟು ತಿಳಿದುಕೊಳ್ಳಲು ಸಹಕಾರಿಯಾಗುತ್ತದೆ. ಇದರಿಂದ ನಾವು ತಿಳಿಯಬಹುದಾದ ಒಂದು ಅಂಶವೆಂದರೆ ಈ ಸಂಘವನ್ನು ನಮ್ಮ ಹಿರಿಯರು ಯಾವ ಉದ್ದೇಶದಿಂದ ಹುಟ್ಟು ಹಾಕಿದರೋ ಅದರಂತೆ ಮುನ್ನಡೆಯುತ್ತಿದೆ. ಒಂದು ಸಂಸ್ಥೆಯನ್ನು ಹುಟ್ಟು ಹಾಕುವುದು ಸುಲಭ.
ಆದರೆ ಅದನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಹೋಗುವುದು ಹರಸಾಹಸದ ಕೆಲಸ. ಹಿರಿಯರ ಹೆಜ್ಜೆಯನ್ನು ಮತ್ತಷ್ಟು ಭದ್ರವಾಗಿಸುತ್ತಾ ಮುಂದೆ ಸಾಗುತ್ತಿರುವುದೇ ದೊಡ್ಡ ಕೆಲಸ. ಕನ್ನಡ ನಾಡು, ನುಡಿ, ಸಾಹಿತ್ಯ, ರಂಗಭೂಮಿ ಎಲ್ಲವುಗಳ ಸಮ್ಮಿಳಿತದೊಂದಿಗೆ ತಲೆ ಎತ್ತಿ ನಿಂತಿರುವ ಈ ಸಂಸ್ಥೆ ಉಜ್ವಲವಾಗಿ ಬೆಳಗಲಿ ಎಂಬ ಆಶಯ ನಮ್ಮದು. ಒಟ್ಟಿನಲ್ಲಿ ಗೋರೆಗಾಂವ್ ಕರ್ನಾಟಕ ಸಂಘದ ಹುಟ್ಟು ಮತ್ತು ಬೆಳವಣಿಗೆಯನ್ನು ಈ ಕೃತಿಯಲ್ಲಿ ಅಚ್ಚುಕಟ್ಟಾಗಿ ದಾಖಲಿಸಿರುವ ಹೆಗ್ಗಳಿಕೆ ಸುರೇಖಾ ಹರಿಪ್ರಸಾದ ಶೆಟ್ಟಿ ಅವರದು. ಅವರು ತಮ್ಮ ಸತತ ಪ್ರಯತ್ನ, ನಿಷ್ಠೆ, ಶ್ರದ್ಧೆ, ಶಿಸ್ತುಬದ್ದ ಅಧ್ಯಯನದಿಂದ ಈ ಸಂಸ್ಥೆಗೆ ಸುಂದರವಾದ ಪುಸ್ತಕದ ಗರಿಯನ್ನು ಮುಡಿಸಿದ್ದಾರೆ. ಅವರಿಗೆ ಪ್ರೀತಿಯಿಂದ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದೇನೆ.
ಡಾ.ಪೂರ್ಣಿಮಾ ಸುಧಾಕರ ಶೆಟ್ಟಿ