ಧೋ ಧೋ ಮಳೆಯ ಆರ್ಭಟ! ಅಲ್ಲಲ್ಲಿ ಹೆಂಚಿನ ಮಾಡಿನಿಂದ ಸೋರುವ ಹನಿಗಳು. ಅದರಡಿ ಬಂದು ಕುಳಿತ ವಿಧವಿಧ ಗಾತ್ರದ ಪಾತ್ರೆಗಳು. ದಲಿಯಿಂದ ರಾಚುವ ಮಳೆ ನೀರು. ಧಾರೆ ನೀರಿಗೆ ಅಂಗಳದಲ್ಲಿ ಬಂದು ಕುಳಿತ ಬಾಲ್ಡಿ, ಕೊಡಪಾನಗಳು, ಮನೆಯೊಳಗಿದ್ದ ಕಬ್ಬಿಣದ ಕತ್ತಿಗಳು ಅಂಗಳಕ್ಕೆ ಎಸೆಯಲ್ಪಟ್ಟಿವೆ. ಅಲ್ಲೆಲ್ಲೋ ಜಗಲಿಯಲ್ಲಿ ಮಲಗಿದ್ದ ತೆಂಗಿನ ಗರಿಯ ಪೊರಕೆಗಳು ಒಳಗಡೆ ಅವಿತು ಕುಳಿತುಕೊಳ್ಳುತ್ತಿವೆ . ಮನೆಯ ಟಾಮಿ, ಬಚ್ಚಲಿನ ಒಲೆಯ ಬೂದಿ ಎಳೆದು ಮಲಗಿದೆ. ಮನೆಯ ಅಡುಗೆ ಕೋಣೆಯಲ್ಲಿ, ಒಲೆಯ ಬಿಸಿಗೆ ಬೆಕ್ಕು ಮೈಕಾಸಿಕೊಳ್ಳುತ್ತಿದೆ. ಅಂಗಳದಿಂದ ಹರಿದು ಹೋಗುವ ನೀರಿನಲ್ಲಿ ಗುಳ್ಳೆಗಳು ಎದ್ದೆದ್ದು ಕುಣಿಯುತ್ತಾ, ಅಷ್ಟು ದೂರ ಸಾಗುತ್ತಾ ಹೋಗಿ ಅಲ್ಲಲ್ಲೇ ಒಡೆಯುತ್ತಿವೆ. ಕಸಕಡ್ಡಿ ನೀರಿಗೆ ದಾರಿಬಿಟ್ಟು ಉದ್ದಕ್ಕೆ ಮಲಗಿವೆ. ಗೋಂಕುರು ಕಪ್ಪೆಯ ವಟರ್ ವಟರ್ ಮಳೆಯ ಸದ್ದಿನೊಂದಿಗೆ ಪೈಪೋಟಿ ನಡೆಸುತ್ತಿವೆ. ಅಲ್ಲೆಲ್ಲೋ ಸಳಸಳ ಮಿಂಚು ಛಟೀಲೆಂದು ಹೊಡೆದ ಬೆನ್ನಲ್ಲೇ ಗಡಗಡ ಗುಡುಂಮೆಂದು ಗುಡುಗುವ ಗುಡುಗಿಗೆ ಮನೆಯೊಳಗೇ ಅಮ್ಮನಿಗೆ ಒತ್ತಿ ಕುಳಿತ ಮಕ್ಕಳ ಕಣ್ಣುಗಳು ಭಯದಿಂದ ಅರಳುತ್ತಿವೆ.
ಮಳೆಯೆಂದರೆ ನನಗೋ ಬಾಲ್ಯದ ನೆನಪು ಒತ್ತರಿಸಿ ಒತ್ತರಿಸಿ ಬರುವುದು. ಎಂಥಾ ಮಳೆ ! ಅಂತಹ ಮಳೆಯ ಸಂಭ್ರಮವನ್ನು ಈ ದೂರದ ಊರಲ್ಲಿ ಮತ್ತೆ ಆನಂದಿಸಲುಂಟೇ? ಒಂದು ಸಣ್ಣ ಹಾಡಿಯ ಪಕ್ಕದಲ್ಲೇ ನಮ್ಮ ಮನೆ. ಗುಡ್ಡೆಯಿಂದ ಇಳಿದ ನೀರು ಅಂಗಳ ದಾಟಿ ನಮ್ಮ ಮನೆಯ ಪಕ್ಕದಲ್ಲಿ ಹರಿಯುವ ಸಣ್ಣ ತೋಡಿನಲ್ಲಿ ಹರಿದು ಜಲಪಾತದಂತೆ, ಇನ್ನೂ ಕೆಳಗಿರುವ ನಮ್ಮ ‘ತಿರ್ತಪಾಡಿ’ಗೆ ಧುಮುಕುವುದು.ಅದು ನಮ್ಮ ಪ್ರೈವೇಟ್ ಜಲಪಾತ! ಬಾಕಿ ಸಮಯದಲ್ಲಿ ಅಲ್ಲಿ ಬೇಡದ ವಸ್ತುಗಳನ್ನು ಎಸೆಯುವುದೇ ಜಾಸ್ತಿ. ಆ ತೋಡು ಗದ್ದೆಗಳ ಬದಿಯಲ್ಲೇ ಸಾಗಿ ಇತರ ತೋಡು, ತೊರೆಗಳನ್ನೆಲ್ಲಾ ಸೇರಿಕೊಂಡು, ಬೈಲುಗದ್ದೆಗಳನ್ನೆಲ್ಲ ದಾಟಿ, ಮುಂದೆ ಶಾಂಭವಿ ನದಿಯನ್ನು ಸೇರುವುದು.
ಶಾಲೆಗೆ ಹೋಗುವಾಗ ಮಳೆ ಬಂದರೆ ಖುಷಿಯೋ ಖುಷಿ!ಪಚಕ್ಕೆಂದು ತಗ್ಗಿನಲ್ಲಿ ನಿಂತ ನೀರ ಮೇಲೆ ಜಿಗಿದು ಕೆಸರು ನೀರನ್ನು ಲಂಗಗಳಿಗೆ ಎರಚಿಕೊಂಡು ಮುಂದೆ ಸಾಗದ ದಿನಗಳಿಲ್ಲ. ಕೊಡೆಯಿದ್ದರೂ ಕೊಡೆಯ ಇಡೆಯಲ್ಲೇ ಒದ್ದೆಯಾಗಿ, ರಜೆ ಕೊಡುತ್ತಾರೇನೋ ಅಂತ ಆಸೆಯಿಂದ ಕಾಯುವುದು ಜಾಸ್ತಿ ಒದ್ದೆಯಾದ ಮಕ್ಕಳನ್ನು ಬೇಕೆಂದೇ ಟೀಚರ್ ಎದುರು ನಿಲ್ಲಿಸುವುದು. ಶಾಲೆಗೆ ಹೋಗುವಾಗಲೂ, ಬರುವಾಗಲೂ ಮಳೆ ಬರಲೇಬೇಕು, ಬಂದೇ ಬರುತ್ತದೆ ಅದು ಕೂಡಾ, ಎಂಥಾ ಮಳೆ! ನಮ್ಮನ್ನೆಲ್ಲಾ ಪೂರ್ತಿ ಚಂಡಿ ಮಾಡದಿದ್ದರೆ ಅದಕ್ಕೆ ಸಮಾಧಾನ ಆಗುವುದಾದರೂ ಹೇಗೆ? ಮಕ್ಕಳ ದೋಸ್ತಿಯಲ್ಲವೇ ಮಳೆ ಮಳೆ ಎಂದರೆ ಖುಷಿ ಪಡದ ಮಕ್ಕಳೇನಾದರೂ ಇದ್ದಾರೆಯೇ? ಶಾಲೆಯಿಂದ ಬರುವಾಗಲಂತೂ ಕೊಡೆಯನ್ನು ಬ್ಯಾಲೆನ್ಸ್ ಮಾಡಿಕೊಂಡೇ ಪೊದೆ ಪೊದೆಗೆ ಹೋಗಿ ಕುಂಟಲ ಹಣ್ಣನ್ನು ಹೆಕ್ಕಲೇಬೇಕು! ಬಾಯೆಲ್ಲಾ ನೀಲಿ ನೀಲಿಯಾಗಲೇಬೇಕು. ಜೊತೆಗೆ ಬರುವ ಸ್ನೇಹಿತರಿಗೆಲ್ಲಾ ತೋರಿಸಿ ಯಾರ ನಾಲಗೆ ಹೆಚ್ಚು ನೀಲಿಯಾಗಿದೆ ತೋರಿಸಿ ಗೆಲ್ಲಬೇಕು ಮನೆ ಮುಟ್ಟುವಾಗ ತಡ ಆದರೂ ಚಿಂತೆಯಿಲ್ಲ. ಮಳೆಯಲ್ಲವನಾ, ಮಕ್ಕಳು ಬೀಸ ಬೀಸ ಕಾಲು ಹಾಕುವುದಾದರೂ ಹೇಗೆ ಅಂತ ಹಿರಿಯರಿಗೆ ಗೊತ್ತುಂಟು .
ಮತ್ತೆ ಮೊದಲ ಮಳೆಯಿಂದ ತೊಯ್ದ ಇಳೆಯ ಮಣ್ಣಿನ ಕಂಪು, ಆಹಾ! ಮರೆಯಲುಂಟೇ? ಮಳೆ ನಿಂತ ಮೇಲೆ ತೋಯ್ದು ನಿಂತ ಮರಗಿಡಗಳಿಂದ ತೊಟ್ಟಿಕ್ಕುವ ಹನಿ, ಶುಭ್ರಗೊಂಡು ಕಂಗೊಳಿಸುವ ತರುಲತೆಗಳು ತರುತ್ತಿದ್ದ ಮನೋಲ್ಲಾಸ ಪದಗಳಲ್ಲಿ ಕಟ್ಟಿಕೊಡಲಾದೀತೇ? ರೈತಾಪಿ ವರ್ಗಕ್ಕೆ ಮಳೆಯೆಂದರೆ ಬದುಕು! ವರ್ಷಕ್ಕೆ ಬೇಕಾಗುವ ಆಹಾರ ತಯಾರಿಕೆಗೆ ಮುನ್ನುಡಿ ಬರೆವ ಕಾಲ. ಮಳೆಗಾಲದಲ್ಲಷ್ಟೇ ಗದ್ದೆಯ ಫುಣಿಗಳಲ್ಲಿ ತಿಳಿ ಗುಲಾಬಿ ಬಣ್ಣದ ಚಿಟ್ಟೆ, ಹೂಗಳು, ಶಾಲೆಗೆ ಹೋಗುವಾಗ ಹಸಿರು ಹುಲ್ಲಿನ ಪನಿ ತೆಗೆದು ಕಣ್ಣಿಗೆ ಬಿಟ್ಟುಕೊಳ್ಳುತ್ತಿದ್ದ ಆ ಹಸಿ ಹಸಿ ನೆನಪು. ನೀರು ತುಂಬಿದಂತಿದ್ದ ಪುಟ್ಟ ಗಿಡಗಳನ್ನೇ ನೀರ್ಕಡ್ಡಿ ಅಂತ ಸ್ಲೇಟು ಒರೆಸಲು ಶಾಲೆಗೂ ತೆಗೆದುಕೊಂಡು ಹೋಗುತ್ತಿದ್ದ ದಿನಗಳು. ಮಳೆ, ಮಳೆಗಾಲ, ಶಾಲೆ, ಹೊಸ ಕ್ಲಾಸು, ಸ್ನೇಹಿತರು, ಹೊಸ ಪುಸ್ತಕಗಳು, ಅವುಗಳ ಸುವಾಸನೆ, ಬರೆಯುತ್ತಾ ಹೋದರೆ ಮುಗಿಯುವುದುಂಟೇ? ನೆನಪುಗಳ ಮೆರವಣಿಗೆ ಮುಗಿಯುವುದೇ ಇಲ್ಲ.
ಮಳೆ ಬಂತು ಮಾರಾಯಾ
ಕೊಡೆ ಇಲ್ಲ ಸುಬ್ರಾಯಾ
ಸವಿತಾ ಅರುಣ್ ಶೆಟ್ಟಿ