ಕುಂದಾಪುರ ತಾಲೂಕು ಯುವ ಬಂಟರ ಸಂಘದ ವತಿಯಿಂದ ನೀಡಲಾಗುವ 2024-25 ನೇ ಶೈಕ್ಷಣಿಕ ವರ್ಷದ ‘ಆಸರೆ’ ಯೋಜನೆಗೆ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ತಂದೆ ಅಥವಾ ತಾಯಿಯನ್ನು ಇಲ್ಲವೇ ಇಬ್ಬರನ್ನೂ ಕಳೆದುಕೊಂಡ ಬಂಟ ಸಮುದಾಯದ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡುವ ನಿಟ್ಟಿನಲ್ಲಿ ಈ ಯೋಜನೆ ರೂಪಿಸಲಾಗಿದೆ. ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಪ್ರಾಥಮಿಕ ಶಿಕ್ಷಣ (ಐದನೇ ತರಗತಿಯಿಂದ) ಪ್ರೌಢ ಶಿಕ್ಷಣ, ಪದವಿಪೂರ್ವ, ಪದವಿ ಸ್ನಾತಕೋತ್ತರ ಪದವಿ ಅಥವಾ ಯಾವುದೇ ವೃತ್ತಿಪರ ಕೋರ್ಸ್ ನ ಯಾವುದೇ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
ಬಂಟ ಸಮುದಾಯವನ್ನು ಪ್ರತಿನಿಧಿಸುವ ಕುಂದಾಪುರ, ಬೈಂದೂರು ತಾಲೂಕಿನ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಕುಟುಂಬದ ವಾರ್ಷಿಕ ಆದಾಯ 1 ಲಕ್ಷ ರೂ. ಮೀರಿರಬಾರದು. ಅರ್ಜಿ ಸಲ್ಲಿಸಲು ಅಂಕ ಗಳಿಕೆಯ ಯಾವುದೇ ನಿರ್ದಿಷ್ಟ ಮಿತಿ ಇರುವುದಿಲ್ಲ. ಸಂಘದ ಅಧಿಕೃತ ಜಾಲತಾಣ www.youthbuntskundapur.com ಮೂಲಕ ಅರ್ಜಿ ನಮೂನೆಯೊಂದಿಗೆ ಪೂರಕ ದಾಖಲೆಗಳನ್ನು ಲಗತ್ತಿಸಿ youthbunts.aasare@gmail.com ಈಮೇಲ್ ಕಳುಹಿಸಿಕೊಡಬಹುದಾಗಿದೆ. ಇಲ್ಲವೇ ಅಧ್ಯಕ್ಷರು, ಕುಂದಾಪುರ ತಾಲೂಕು ಯುವ ಬಂಟರ ಯಾನೆ ನಾಡವರ ಸಂಕೀರ್ಣ, ಆರ್.ಎನ್. ಶೆಟ್ಟಿ ಸಭಾಭವನ, ಮುಖ್ಯ ರಸ್ತೆ ಕುಂದಾಪುರ -576201 ಈ ವಿಳಾಸಕ್ಕೆ ಅಂಚೆಯ ಮೂಲಕವೂ ಕಳುಹಿಸಿಕೊಡಬಹುದು.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜುಲೈ 26 ಎಂದು ಸಂಘದ ಗೌರವಾಧ್ಯಕ್ಷ ಬಿ. ಉದಯ್ ಕುಮಾರ್ ಶೆಟ್ಟಿ, ಅಧ್ಯಕ್ಷ ಡಾ. ಅಂಪಾರು ನಿತ್ಯಾನಂದ ಶೆಟ್ಟಿ ತಿಳಿಸಿದ್ದಾರೆ.