ರೋಟರಿ ಸಂಸ್ಥೆ ಒಂದು ವಿಶ್ವವಿದ್ಯಾನಿಲಯವಿದ್ದಂತೆ ಎಂದು ಹುಣಸೂರು ರೋಟರಿ ಪದಗ್ರಹಣ ಅಧಿಕಾರಿ ರೋ ಎಂಪಿಎಫ್ ಬಿ.ಶೇಖರ್ ಶೆಟ್ಟಿ ಬಣ್ಣಿಸಿದರು. ಹುಣಸೂರು ರೋಟರಿ ಸಂಸ್ಥೆಯ 2024-25 ನೇ ಸಾಲಿನ ನೂತನ ಅಧ್ಯಕ್ಷ, ಕೆ.ಪಿ. ಪ್ರಸನ್ನ, ಕಾರ್ಯದರ್ಶಿ ಹೆಚ್.ಆರ್. ಕೃಷ್ಣ ಕುಮಾರ್ ಹಾಗೂ ಪದಾಧಿಕಾರಿಗಳ ಪದಗ್ರಹಣ ನೆರವೇರಿಸಿ ಮಾತನಾಡಿ, ರೋಟರಿ ಸಂಸ್ಥೆ ಎಂದರೆ ಸೇವೆ, ಒಡನಾಟ, ಪ್ರೀತಿ, ಸ್ನೇಹ, ತ್ಯಾಗ, ಸಮಗ್ರತೆ, ಏಕತೆ, ನಾಯಕತ್ವಕ್ಕೆ ಮತ್ತೊಂದು ಹೆಸರು. ಕಟ್ಟ ಕಡ್ಡೆಯ ಹಾಗೂ ಮುಂದಿನ ಪೀಳಿಗೆಯವರೆಗೂ ಸೇವೆ ಸಲ್ಲಿಸುವ ಅವಕಾಶ ನೀಡುವುದು ರೋಟರಿ ಸಂಸ್ಥೆಯ ಧ್ಯೇಯವಾಗಿದೆ.
ವಿಶ್ವ ಬಾತೃತ್ವ ಸಮಗ್ರತೆ, ಏಕತೆ, ವೈವಿಧ್ಯತೆ ರೋಟರಿ ಸಂಸ್ಥೆಯ ವಿಶೇಷ. ಪ್ರಪಂಚದಾದ್ಯಂತ 1.2 ಮಿಲಿಯನ್, ಭಾರತದಲ್ಲಿ 1.40 ಲಕ್ಷ ಸದಸ್ಯರಿರುವ ವಿಶ್ವದ ದೊಡ್ಡ ಸಂಸ್ಥೆ ಇದಾಗಿದೆ. ಇಂತಹ ಸಂಸ್ಥೆಯ ಸದಸ್ಯರಾಗಿರುವುದು ಹೆಮ್ಮೆಯ ವಿಷಯ, ಹಾಗೂ ಸಂಸ್ಥೆಯು ತನ್ನ ಅತ್ಯುತ್ತಮ ಕಾರ್ಯಗಳಿಂದ ಪ್ಲಾಟಿನಂ ಪ್ರಶಸ್ತಿ ಪಡೆದಿರುವುದು ಅದ್ಭುತ ಸಾಧನೆ ಎಂದು ಕೊಂಡಾಡಿದರು. ಅಧಿಕಾರ ಸ್ವೀಕರಿಸಿದ ರೋಟರಿ ಕೆ.ಪಿ. ಪ್ರಸನ್ನ ಮಾತನಾಡಿ, ನಾನು ಸರಕಾರಿ ಅಧಿಕಾರಿಯಾಗಿದ್ದರೂ ರೋಟರಿ ಸೇವೆ, ಸ್ನೇಹ ಬಂಧನಕ್ಕೆ ಮನಸೋತು ಅಳಿಲು ಸೇವೆ ಮಾಡಲು ರೋಟರಿಗೆ ಬಂದಿದ್ದೇನೆ. ಜೀವನದ ಅಂತ್ಯದವರೆಗೂ ರೋಟರಿ ಸೇವೆಗೆ ಮುಡುಪಾಗಿರುವೆ ಎಂದು ಹೇಳಿದರು. ರೋಟರಿ ಕಾರ್ಯದರ್ಶಿ ಹೆಚ್. ಆರ್. ಕೃಷ್ಣಕುಮಾರ್ ಮಾತನಾಡಿ, ರೋಟರಿ ಸಂಸ್ಥೆಯು ತಾಲೂಕು ಕೇಂದ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಶಿಕ್ಷಣ, ಆರೋಗ್ಯ, ಹಸಿವು ನಿರ್ಮೂಲನೆಗಾಗಿ ಸೇವೆ ಎಂಬ ಧ್ಯೇಯದೊಂದಿಗೆ ಇಡೀ ವಿಶ್ವದಲ್ಲಿ ನಿಸ್ವಾರ್ಥ ಸೇವೆ ಮಾಡುತ್ತಿರುವ ಏಕೈಕ ಸಂಸ್ಥೆ ರೋಟರಿಯಾಗಿದೆ ಎಂದರು.
ನಿಕಟಪೂರ್ವ ಅಧ್ಯಕ್ಷ ಚೆನ್ನಕೇಶವ, ಕಾರ್ಯದರ್ಶಿ ಪ್ರಸನ್ನ 2023-24 ನೇ ಸಾಲಿನ ವರದಿ ಮಂಡಿಸಿದರು. ಸಹಾಯಕ ಗವರ್ನರ್ ಆರ್. ಆನಂದ್, ವಲಯ 6 ರ ಸೇನಾನಿ ಮೀನುಮನೆ ಪಾಂಡುಕುಮಾರ್, ಪಿ. ರೋ. ಸತ್ಯ ನಾರಾಯಣ್, ಹಿರಿಯ ಸಹಾಯಕ ಗವರ್ನರ್ ಡಾ. ಹರಿ ಶೆಟ್ಟಿ, ಇನ್ನರ್ ವೀಲ್ ಅಧ್ಯಕ್ಷೆ ಸ್ಮಿತಾ, ಸದಸ್ಯರಾದ ಡಾ. ಸರೋಜಿನಿ ವಿಕ್ರಮ್, ಡಾ. ರವಿಕುಮಾರ್, ಡಾ.ವೃಷಬೇಂದ್ರ ಸ್ವಾಮಿ, ರೊ. ರಾಜಶೇಖರ್, ಡಾ. ರಘು, ಹಾಗೂ ನಾರಾಯಣ್ ತಂಗ ಮರಿಯಪ್ಪನ್, ಜಿ.ವಿ. ಶ್ರೀನಾಥ್, ಶ್ಯಾಮ್, ರವೀಶ್ ಸೇರಿದಂತೆ ರೋಟರಿ ಕುಟುಂಬದ ಮಂದಿ ಭಾಗವಹಿಸಿದರು.