ಇದು ‘ಕಾಂತಾರ’ ಅಲ್ಲ. ಆದರೆ ಅದಕ್ಕಿಂತಲೂ ಏನೋ ಒಂದು ವಿಭಿನ್ನತೆ ಇದರಲ್ಲಿದೆ. ಕಾಂತಾರ ಸಿನಿಮಾ ಬರುವ ಮೊದಲೇ ನಿತಿನ್ ರೈ ಕುಕ್ಕುವಳ್ಳಿ ನಿರ್ದೇಶನದ ‘ಧರ್ಮ ದೈವ’ ಕಿರುಚಿತ್ರ ಬಿಡುಗಡೆಯಾಗಿತ್ತು ಹಾಗೂ ಕಿರುತೆರೆಯಲ್ಲಿ ಬಹಳಷ್ಟು ಸದ್ದು ಮಾಡಿತ್ತು. ಇದೇ ಕಿರುಚಿತ್ರದ ಹೆಸರನ್ನೇ ಇಟ್ಟುಕೊಂಡು ಬೆಳ್ಳಿತೆರೆಯ ಮೇಲೆ ತರಲು ಹೊರಟ ‘ಧರ್ಮ ದೈವ’ ಮಾಯೋದ ಬೊಲ್ಪು ಸಿನಿ ಪ್ರೇಕ್ಷಕರ ಮನಸ್ಸು ಗೆದ್ದಿದೆ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ಇಡೀ ಚಿತ್ರವನ್ನು ಗಮನಿಸುತ್ತಾ ಹೋದರೆ ನಮಗೆ ಎಲ್ಲಿಯೂ ದೈವದ ಪಾತ್ರದ ದರ್ಶನ ಆಗುವುದಿಲ್ಲ. ಅರ್ಥಾತ್ ದೈವವನ್ನು ತೆರೆಯ ಮೇಲೆ ಕಾಣಿಸುವ, ಕುಣಿಸುವ ಪ್ರಯತ್ನವನ್ನು ಇಲ್ಲಿ ನಿರ್ದೇಶಕರು ಮಾಡಿಲ್ಲ. ಅದರ ಬದಲಾಗಿ ಬಹಳ ಸೊಗಸಾಗಿ ದೈವ ದರ್ಶನ ಮಾಡಿಸಿದ್ದಾರೆ. ಅದು ಹೇಗೆ ಸಾಧ್ಯವಾಗಿದೆ ಎಂಬುದನ್ನು ನೋಡಬೇಕಾದರೆ ನೀವು ಸಿನೆಮಾ ನೋಡಲೇಬೇಕು.
ಸಿನಿಮಾದ ಮೊದಲರ್ಧ ಕೊಂಚ ಬೋರ್ ಹೊಡೆಸಿದರೂ ಇಂಟರ್ ವಲ್ ಬಳಿಕ ನಮ್ಮಲ್ಲಿ ಏನೋ ಕಾತುರತೆ ಮೂಡಿಸುತ್ತದೆ. ಮುಂದೇನಾಗಬಹುದು ಎಂಬ ಕುತೂಹಲವನ್ನು ಸಿನಿಮಾ ಉಳಿಸಿಕೊಂಡು ಹೋಗುತ್ತದೆ. ತುಳುನಾಡಿನ ಜನರು ಆರಾಧನೆ ಮಾಡುವ ಧರ್ಮದೈವ ಜುಮಾದಿ ಹಾಗೂ ಅದರ ಬಂಟ ದೈವದ ಕಾರ್ಣಿಕ ಎಂತಹುದು ಎಂಬುದನ್ನು ತಿಳಿಸುವ ಪ್ರಯತ್ನವನ್ನು ನಿರ್ದೇಶಕರು ಹಾಗೂ ಇಡೀ ಚಿತ್ರ ತಂಡ ಬಹಳ ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಇಲ್ಲಿ ದೈವಕ್ಕೆ ಅಪಚಾರವಾಗುವ ಯಾವುದೇ ದೃಶ್ಯಗಳಿಲ್ಲ. ಆರಂಭದಿಂದ ಕೊನೆಯವರೆಗೂ ಸಿನಿ ರಸಿಕರನ್ನು ಈ ಸಿನಿಮಾ ಹೇಗೆ ಹಿಡಿದಿಟ್ಟುಕೊಂಡಿದೆ. ಇವೆಲ್ಲವನ್ನು ತಿಳಿಯಬೇಕಾದರೆ ನೀವೆಲ್ಲರೂ ಸಿನಿಮಾ ನೋಡಬೇಕು.
ಮನೆಯ ಯಜಮಾನ ರಾಮಣ್ಣನ ತರವಾಡು ಮನೆಯೊಳಗೆ ನಡೆಯುವ ಒಂದು ಪುಟ್ಟ ಕಥೆ. ಕಥೆಯ ಬಗ್ಗೆ ಹೇಳಬೇಕಾದರೆ ಕೂಡು ಕುಟುಂಬದೊಳಗೆ ನಡೆಯುವ ತಲ್ಲಣ. ಅಲ್ಲಲ್ಲಿ ಕಥೆ ತಿರುವು ಪಡೆದುಕೊಳ್ಳುತ್ತಾ ಸಾಗುತ್ತದೆ. ರಾಮಣ್ಣನನ್ನು ಮುಗಿಸಿ ಆತನ ಆಸ್ತಿ, ಹಣವನ್ನು ಪಡೆಯಬೇಕು ಎಂದು ಕಾತರಿಸುವ ಆತನ ತಮ್ಮ ಒಂದು ಕಡೆಯಾದರೆ, ಇಡೀ ಆಸ್ತಿ ನನಗೆ ಸೇರಬೇಕು ನನ್ನ ಮಗನೇ ಈ ತರವಾಡು ಮನೆಗೆ ವಾರೀಸುದಾರನಾಗಬೇಕು ಎಂದು ಕಾತರಿಸುವ ರಾಮಣ್ಣನ ತಮ್ಮನ ಹೆಂಡತಿ ಮತ್ತು ಮಗ ಇನ್ನೊಂದು ಕಡೆ. ಇದು ಒಂದು ಮನೆಯೊಳಗೆ ನಡೆಯುವ ಕಥೆಯಾದರೆ ಹೊರಗಿನಿಂದ ರಾಮಣ್ಣ, ಆತನ ತಮ್ಮನನ್ನು ಮುಗಿಸಿ ಇಡೀ ಆಸ್ತಿಯನ್ನು ಕಬಳಿಸಬೇಕೆನ್ನುವ ದುಗ್ಗಪ್ಪಣ್ಣ. ಈ ನಡುವೆ ರಾಮಣ್ಣನ ಹೆಂಡತಿಯ ತಮ್ಮನದ್ದು ಇನ್ನೊಂದು ಸೇಡು. ಈ ಎಲ್ಲದರ ನಡುವೆ ರಾಮಣ್ಣನ ತಮ್ಮ ಕೊಗ್ಗಪ್ಪಣ್ಣನ ಕೊಲೆಯಾಗುತ್ತದೆ. ಇಲ್ಲೇ ಕಥೆ ತಿರುವು ಪಡೆದುಕೊಳ್ಳುತ್ತದೆ. ಈ ಕೊಲೆ ಮಾಡಿದವರು ಯಾರು? ಎನ್ನುವುದು ಇಲ್ಲಿ ಯಕ್ಷ ಪ್ರಶ್ನೆಯಾಗುತ್ತದೆ. ಪೊಲೀಸರಿಗೂ ಈ ಕೊಲೆ ಒಂದು ಸವಾಲು ಆಗುತ್ತದೆ. ಕೊನೆಯಲ್ಲಿ ರಾಮಣ್ಣ ನಂಬಿದ ಧರ್ಮದೈವವೇ ಈ ಕೊಲೆಗೆ ನ್ಯಾಯ ಕೊಡಿಸುತ್ತದೆ. ಅದು ಹೇಗೆ ಸಾಧ್ಯವಾಗುತ್ತದೆ ಎಂಬುದನ್ನು ತಿಳಿಯಬೇಕಾದರೆ ನೀವು ಚಿತ್ರ ನೋಡಲೇಬೇಕು.
ಧರ್ಮದೈವದಲ್ಲಿ ಬಣ್ಣ ಹಚ್ಚಿದ ಎಲ್ಲಾ ಕಲಾವಿದರು ತಮ್ಮ ಪಾತ್ರಕ್ಕೆ ನ್ಯಾಯ ಕೊಡಿಸಿದ್ದಾರೆ. ಮುಖ್ಯವಾಗಿ ಮನೆಯ ಯಜಮಾನ ರಾಮಣ್ಣನ ಪಾತ್ರ ನಿರ್ವಹಿಸಿದ ರಮೇಶ್ ರೈ ಕುಕ್ಕುವಳ್ಳಿ, ದುಗ್ಗಪ್ಪಣ್ಣನ ಪಾತ್ರ ಮಾಡಿದ ಚೇತನ್ ರೈ ಮಾಣಿ, ರಾಮಣ್ಣನ ತೋಟದ ಕೆಲಸದಾಳುವಾಗಿ ದಯಾನಂದ ರೈ ಬೆಟ್ಟಂಪಾಡಿ, ರಾಮಣ್ಣನ ಮಗಳು ಪೂಜಾಳ ಪಾತ್ರ ಮಾಡಿದ ದೀಕ್ಷಾ ಡಿ ರೈ, ತಮ್ಮ ಕೊಗ್ಗಪ್ಪಣ್ಣನಾಗಿ ದೀಪಕ್ ರೈ ಪಾಣಾಜೆ, ಭೋಜನಾಗಿ ಕೌಶಿಕ್ ರೈ ಕುಂಜಾಡಿ, ಧನುವಾಗಿ ಸಂದೀಪ್ ಪೂಜಾರಿ, ಪೊಲೀಸ್ ಅಧಿಕಾರಿಯಾಗಿ ಆಗಿ ಭರತ್ ಶೆಟ್ಟಿ, ಸಂಜು ಆಗಿ ರವಿ ಸಾಲಿಯಾನ್, ಮೀನಾಕ್ಷಿಯಮ್ಮನಾಗಿ ರೂಪ ವರ್ಕಾಡಿ ಇವರೆಲ್ಲರೂ ತಮ್ಮ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಹಾಗೇ ಬಂದು ಹೋಗುವ ಕೊಡಗಿನ ಗ್ರೇಷಿಯಲ್ ಕಲಿಯಂಡ, ಹಾಸ್ಯ ಪಾತ್ರಗಳಲ್ಲಿ ಮಿಂಚಿದ ರಂಜನ್ ಬೋಳೂರ್, ಪುಷ್ಪರಾಜ್ ಬೊಳ್ಳಾರ್ ನೆನಪಲ್ಲಿ ಉಳಿಯುತ್ತಾರೆ.